ಹೊಸದಿಲ್ಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕ್ಷಮೆಯಾಚಿಸುವಂತೆ ಒತ್ತಾಯಿಸಿ ಪ್ರತಿಪಕ್ಷಗಳ ಸದಸ್ಯರು ನಡೆಸಿದ ಪ್ರತಿಭಟನೆಯಿಂದ ಬುಧವಾರ ರಾಜ್ಯಸಭೆಯಲ್ಲಿ ಗದ್ದಲ ಏರ್ಪಟ್ಟಿತು. ಒಂದು ದಿನದ ಹಿಂದೆ ಸದನದಲ್ಲಿ ಅವರು ನೀಡಿದ ಹೇಳಿಕೆಗಳು ಭಾರತದ ಸಂವಿಧಾನ ಶಿಲ್ಪಿ ಬಿಆರ್ ಅಂಬೇಡ್ಕರ್ ಅವರಿಗೆ ಮಾಡಿದ “ಅವಮಾನ” ಎಂದು ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿವೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು “ರಾಜ್ಯಸಭೆಯಲ್ಲಿ ಮಾಡಿದ ಷಾ ಹೇಳಿಕೆಗಳ ಒಂದು ಭಾಗವನ್ನು ಬಳಸಿಕೊಂಡು ಕಾಂಗ್ರೆಸ್ ದೇಶವನ್ನು ದಾರಿ ತಪ್ಪಿಸುತ್ತಿದೆ,” ಎಂದು ಆರೋಪಿಸಿದರು ಮತ್ತು ಕಾಂಗ್ರೆಸ್ ಪಕ್ಷವು ಅಂಬೇಡ್ಕರ್ ಅವರನ್ನು ಹೇಗೆ ಅವಮಾನಿಸಿದೆ ಎಂಬುದನ್ನು ಗೃಹ ಸಚಿವರು ಸ್ಪಷ್ಟವಾದ ಮಾತುಗಳಲ್ಲಿ ಉಲ್ಲೇಖಿಸಿದ್ದಾರೆ ಎಂದು ಪ್ರತಿಪಾದಿಸಿದರು.
“ನೀವು (ಕಾಂಗ್ರೆಸ್) ಷಾ ಅವರ ಸಂಪೂರ್ಣ ಭಾಷಣದ 11-12 ಸೆಕೆಂಡುಗಳ ಕ್ಲಿಪ್ ಅನ್ನು ಬಳಸಿ ರಾಷ್ಟ್ರದ ಹಾದಿ ತಪ್ಪಿಸಲು ಸಾಧ್ಯವಿಲ್ಲ,” ಎಂದು ಹೇಳಿದ ರಿಜಿಜು, ಬಿಜೆಪಿಗೆ ಅಂಬೇಡ್ಕರ್ ದೇವರಿಗೆ ಸಮಾನ ಎಂದು ಪ್ರತಿಪಾದಿಸಿದರು.