Home ಇನ್ನಷ್ಟು ಕೋರ್ಟು - ಕಾನೂನು ವಿಶೇಷ ತನಿಖಾ ತಂಡದಲ್ಲಿ ಫೊರೆನ್ಸಿಕ್ ಆಡಿಟರ್ ಅವರನ್ನು ಸೇರಿಸಿ: ರಾಮಮಂದಿರ ದೇಣಿಗೆ ಕಳವು ಪ್ರಕರಣದಲ್ಲಿ ಸುಪ್ರೀಂ...

ವಿಶೇಷ ತನಿಖಾ ತಂಡದಲ್ಲಿ ಫೊರೆನ್ಸಿಕ್ ಆಡಿಟರ್ ಅವರನ್ನು ಸೇರಿಸಿ: ರಾಮಮಂದಿರ ದೇಣಿಗೆ ಕಳವು ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನ

0

ರಾಮಮಂದಿರ ದೇಣಿಗೆ ಕಳವು ಪ್ರಕರಣದ ವಿಚಾರಣೆಯು ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದ್ದು, ಸೋಮವಾರ ಪ್ರಕರಣದ ತನಿಖೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡದಲ್ಲಿ (SIT) ಫೊರೆನ್ಸಿಕ್ ಆಡಿಟರ್ ಒಬ್ಬರನ್ನು ಸೇರ್ಪಡೆಗೊಳಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಜೊತೆಗೆ ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದಂತೆ 2 ವಾರಗಳಲ್ಲಿ ಸ್ಥಿತಿ ವರದಿ (Status Report) ಸಲ್ಲಿಸುವಂತೆ ಎಸ್‌ಐಟಿಗೆ ಕೋರ್ಟ್ ಸೂಚಿಸಿದೆ.

ಸಿಬಿಐ ತನಿಖೆಗೆ ಆಗ್ರಹ

ಅಯೋಧ್ಯೆ ರಾಮಮಂದಿರದ ದೇಣಿಗೆ ಕಳವು ಆರೋಪದ ಕುರಿತು ಕೇಂದ್ರೀಯ ತನಿಖಾ ದಳ (CBI) ತನಿಖೆ ನಡೆಸಬೇಕು ಹಾಗೂ ಮಂದಿರ ಟ್ರಸ್ಟ್‌ನ ಹಣಕಾಸಿನ ಆಡಿಟ್ ಮಾಡಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್‌ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರಿದ್ದ ಪೀಠವು ನಡೆಸುತ್ತಿತ್ತು.

ಉತ್ತರ ಪ್ರದೇಶ ಸರ್ಕಾರದ ಪರವಾಗಿ ಹಾಜರಿದ್ದ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಲಖನೌ ಐಜಿ ಎಸ್‌ಆರ್ ಐಪಿಎಸ್ ಅಧಿಕಾರಿ ಎಸ್. ಕಿರಣ್ ಅವರ ಅಧ್ಯಕ್ಷತೆಯಲ್ಲಿ ಎಸ್‌ಐಟಿ ರಚಿಸಲಾಗಿದ್ದು, ಇದರಲ್ಲಿ ಒಬ್ಬರು ಡಿಐಜಿ ಹಾಗೂ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ಸೇರಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಎಸ್‌ಐಟಿ ಜೊತೆ ಫೊರೆನ್ಸಿಕ್ ಆಡಿಟರ್ ಸೇರಿಸಲು ಸೂಚನೆ

ತನಿಖಾ ತಂಡಕ್ಕೆ ಫೊರೆನ್ಸಿಕ್ ಆಡಿಟರ್ ಒಬ್ಬರನ್ನು ಸೇರ್ಪಡೆಗೊಳಿಸಬೇಕು ಎಂಬ ಸುಪ್ರೀಂ ಪೀಠದ ಸಲಹೆಯನ್ನು ತುಷಾರ್ ಮೆಹ್ತಾ ಒಪ್ಪಿಕೊಂಡರು. ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ದೇವದತ್ತ ಕಾಮತ್, ರಾಮಮಂದಿರ ನಿರ್ಮಾಣಕ್ಕಾಗಿ ದೇಶದಾದ್ಯಂತ ಸಂಗ್ರಹಿಸಲಾದ ದೇಣಿಗೆಯ ರಶೀದಿಗಳನ್ನು ಎಸ್‌ಐಟಿ ಪರಿಶೀಲಿಸಬೇಕು ಎಂದು ಮನವಿ ಮಾಡಿದರು. “ಸಾಮಾನ್ಯ ಜನರು 500 ಅಥವಾ 1000 ರೂಪಾಯಿಗಳನ್ನು ನೀಡಿದ್ದಾರೆ. ಆದರೆ ಈ ಹಣ ಟ್ರಸ್ಟ್‌ಗೆ ತಲುಪಿಲ್ಲ ಎಂಬ ವರದಿಗಳಿವೆ. ಟ್ರಸ್ಟ್‌ಗೆ ಬಂದಿರುವ ಎಲ್ಲಾ ಹಣದ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು, ಇದರಿಂದ ಜನರಿಗೆ ತಮ್ಮ ಹಣ ತಲುಪಿದೆಯೇ ಎಂದು ತಿಳಿಯುತ್ತದೆ” ಎಂದು ಅವರು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, “ಎಸ್‌ಐಟಿಗೆ ಎಲ್ಲಾ ದಾಖಲೆಗಳನ್ನು ಪರಿಶೀಲಿಸುವ ಅಧಿಕಾರವಿರುತ್ತದೆ. ಮೊದಲು ಎಸ್‌ಐಟಿ ತನ್ನ ವರದಿ ಸಲ್ಲಿಸಲಿ, ನಾವು ಪ್ರಕರಣವನ್ನು ಮುಕ್ತಾಯಗೊಳಿಸುತ್ತಿಲ್ಲ. ತನಿಖೆಯಲ್ಲಿ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಪಾರದರ್ಶಕತೆ ಕಾಯ್ದುಕೊಳ್ಳಲು ಹಿರಿಯ ಅಧಿಕಾರಿಗಳು ಮತ್ತು ಫೊರೆನ್ಸಿಕ್ ಆಡಿಟರ್ ತನಿಖೆಯ ಭಾಗವಾಗಿರುತ್ತಾರೆ” ಎಂದು ತಿಳಿಸಿದರು. ಇದೇ ವೇಳೆ ತನಿಖೆಯ ಮೇಲ್ವಿಚಾರಣೆಗೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರನ್ನು ನೇಮಿಸಬೇಕೆಂದು ದೇವದತ್ತ ಕಾಮತ್ ಸಲಹೆ ನೀಡಿದಾಗ, ಮೂವರು ನ್ಯಾಯಮೂರ್ತಿಗಳ ಈ ಪೀಠವೇ ತನಿಖೆಯ ಮೇಲ್ವಿಚಾರಣೆ ನಡೆಸುತ್ತಿರುವುದರಿಂದ ಮತ್ತೊಬ್ಬರ ನೇಮಕದ ಅಗತ್ಯವಿಲ್ಲ ಎಂದು ಸಾಲಿಸಿಟರ್ ಜನರಲ್ ಸ್ಪಷ್ಟಪಡಿಸಿದರು.

‘ತನಿಖೆಯ ಮೇಲಷ್ಟೇ ನಮ್ಮ ಗಮನ’

ಪ್ರಸ್ತುತ ತನಿಖೆಯ ಮೇಲಷ್ಟೇ ತಮ್ಮ ಸಂಪೂರ್ಣ ಗಮನವಿದೆ ಎಂದ ಸಿಜೆಐ, “ಈಗಲೇ ಎಲ್ಲಾ ವಿಷಯಗಳನ್ನು ಟಿಪ್ಪಣಿ ಮಾಡಿಕೊಳ್ಳಿ. ತಕ್ಷಣವೇ ಹಾಗೂ ನಿಖರವಾಗಿ ತನಿಖೆ ನಡೆಯಬೇಕಾಗಿದೆ. ಹೀಗಾಗಿ ವರದಿ ಸಲ್ಲಿಸುವಂತೆ ಕೋರಿದ್ದೇವೆ, ಉಳಿದ ವಿಷಯಗಳ ಬಗ್ಗೆ ನಂತರ ತೀರ್ಮಾನಿಸಲಾಗುವುದು” ಎಂದರು.

You cannot copy content of this page

Exit mobile version