Friday, January 23, 2026

ಸತ್ಯ | ನ್ಯಾಯ |ಧರ್ಮ

ಡಿಜಿಪಿ ಡಾ.ರಾಮಚಂದ್ರ ರಾವ್ ರಾಸಲೀಲೆ ವಿಡಿಯೋ ವೈರಲ್; ಗೃಹ ಇಲಾಖೆ ಮೇಲೆ ಅಗೌರವದ ಕಪ್ಪುಚುಕ್ಕೆ

ಬೆಂಗಳೂರು: ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ರಾಮಚಂದ್ರ ರಾವ್ ಅವರಿಗೆ ಸಂಬಂಧಿಸಿದಂತೆ ಎಂದು ಹೇಳಲಾಗುತ್ತಿರುವ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜ್ಯ ರಾಜಕೀಯ ಹಾಗೂ ಆಡಳಿತ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಸಮವಸ್ತ್ರದಲ್ಲೇ ಕಚೇರಿ ಆವರಣದಲ್ಲಿ ಅಸಭ್ಯ ವರ್ತನೆ ತೋರಿರುವ ದೃಶ್ಯಗಳಿವೆ ಎನ್ನಲಾಗಿರುವ ಈ ವಿಡಿಯೋ ಸರ್ಕಾರದ ಗಮನಕ್ಕೆ ಬಂದಿದೆ ಎಂದು ತಿಳಿದುಬಂದಿದೆ.

ಸಂಬಂಧಿತ ವಿಡಿಯೋ ಸುಮಾರು 4–5 ತಿಂಗಳ ಹಿಂದಿನದ್ದು ಎನ್ನಲಾಗುತ್ತಿದ್ದು, ರಾಮಚಂದ್ರ ರಾವ್ ಅವರು ನಿವೃತ್ತಿಗೆ ಇನ್ನೂ ಕೆಲ ತಿಂಗಳು ಬಾಕಿ ಇರುವ ಹಂತದಲ್ಲೇ ಈ ವಿವಾದ ಎದುರಾಗಿದೆ. ವಿಡಿಯೋ ರಹಸ್ಯ ಕ್ಯಾಮೆರಾದಲ್ಲಿ ದಾಖಲಾಗಿರಬಹುದು ಎಂಬ ಅನುಮಾನವೂ ವ್ಯಕ್ತವಾಗಿದೆ. ಆದರೆ, ವಿಡಿಯೋ ಸತ್ಯಾಸತ್ಯತೆ ಹಾಗೂ ಅದರ ಹಿನ್ನೆಲೆ ಕುರಿತು ಸರ್ಕಾರ ಅಥವಾ ಪೊಲೀಸ್ ಇಲಾಖೆಯಿಂದ ಇನ್ನೂ ಅಧಿಕೃತ ಸ್ಪಷ್ಟನೆ ಹೊರಬಿದ್ದಿಲ್ಲ.

ಈ ವಿಷಯದ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉನ್ನತ ಹುದ್ದೆಯಲ್ಲಿರುವ ಅಧಿಕಾರಿಯೊಬ್ಬರಿಂದ ಇಂಥ ವರ್ತನೆ ಅಸಹ್ಯಕರ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. “ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ ಕಚೇರಿಯಲ್ಲಿ, ಅದೂ ಸಮವಸ್ತ್ರದಲ್ಲೇ ಈ ರೀತಿಯ ವರ್ತನೆ ತೋರಿರುವುದು ತಪ್ಪು. ವೈಯಕ್ತಿಕ ವಿಷಯಗಳಿದ್ದರೆ ಖಾಸಗಿ ಸ್ಥಳಕ್ಕೆ ಸೀಮಿತವಾಗಿರಬೇಕು” ಎಂದು ಅವರು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನು ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಕೂಡ ಈ ಪ್ರಕರಣದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಾನು ಕೂಡ ಈ ವಿಡಿಯೋ ಕುರಿತು ಸುದ್ದಿಯಲ್ಲಿ ನೋಡಿದ್ದೇನೆ. ಐಪಿಎಸ್‌ ಅಧಿಕಾರಿಯಾಗಿ ದೀರ್ಘ ಸೇವೆ ಸಲ್ಲಿಸಿರುವ ವ್ಯಕ್ತಿಯೇ ಇಂತಹ ವರ್ತನೆ ತೋರಿದ್ದರೆ ಹೇಗೆ? ಇದು ನಾಚಿಕೆಗೇಡಿನ ಸಂಗತಿ. ಇಂತಹ ಕೃತ್ಯಗಳಿಂದ ಇಡೀ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ” ಎಂದು ಅವರು ಹೇಳಿದ್ದಾರೆ. ಮಹಿಳೆಯರ ರಕ್ಷಣೆಗೆ ಹೊಣೆಗಾರವಾದ ಶಿಸ್ತಿನ ಇಲಾಖೆಯ ಗೌರವಕ್ಕೆ ಧಕ್ಕೆ ತರುವಂತಹ ನಡೆ ಇದಾಗಿದೆ ಎಂದು ಅವರು ಟೀಕಿಸಿದ್ದಾರೆ.

ರಾಮಚಂದ್ರ ರಾವ್ ಅವರು ಈ ಹಿಂದೆ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ತಮ್ಮ ಪುತ್ರಿಗೆ ವಿಮಾನ ನಿಲ್ದಾಣದಲ್ಲಿ ವಿಐಪಿ ಸೌಲಭ್ಯ ಒದಗಿಸಿದ್ದ ಆರೋಪದ ಹಿನ್ನೆಲೆಯಲ್ಲಿ ಸುದ್ದಿಯಾಗಿದ್ದರು. ಆ ಪ್ರಕರಣದಲ್ಲಿಯೂ ಶಿಷ್ಟಾಚಾರ ಉಲ್ಲಂಘನೆ ಆರೋಪ ಕೇಳಿಬಂದಿತ್ತು.

ಪ್ರಸ್ತುತ ವೈರಲ್ ಆಗಿರುವ ವಿಡಿಯೋ ಕುರಿತು ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದ್ದು, ಸತ್ಯಾಸತ್ಯತೆ ಪರಿಶೀಲನೆ ಹಾಗೂ ಕಾನೂನು ಕ್ರಮದ ಬಗ್ಗೆ ಮುಂದಿನ ದಿನಗಳಲ್ಲಿ ಸ್ಪಷ್ಟ ಚಿತ್ರಣ ಹೊರಬರುವ ನಿರೀಕ್ಷೆಯಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page