ನಾವು ದಸರಾ, ದೀಪಾವಳಿ, ಹೋಳಿ-ಹುಣ್ಣಿಮೆಗೆ ಹೋಳಿಗೆ ಉಂಡು ರಂಜಾನ್, ಮೊಹರಂ ನಲ್ಲಿ ಸುರಕುಂಬಿ (ಖೀರು), ಗುಲ್ ಗುಲಿ (ಸಿಹಿ ಬೋಂಡಾ), ಬಿರಂಜಿಬಾನ (ಬಿರಿಯಾನಿ), ಮಾಲದಿ ಉಂಡು ಬೆಳೆದವರು. ನಮ್ಮೊಳಗೆ ಎಂದೂ ಕೋಮು ಭಾವನೆಗಳು ಹುಟ್ಟಲಿಲ್ಲ. ನಾವು ಇಂದಿಗೂ ಬಂಧುತ್ವದ ಬದುಕು ಬದುಕುತ್ತಿದ್ದೇವೆ! ಕಾಶಿನಾಥ ಮುದ್ದಗೋಳ ಅವರ ಸೌಹಾರ್ದತೆ ಬೆಸೆಯುವ ರಂಜಾನ್ ಹಬ್ಬದ ಪ್ರಯುಕ್ತದ ಈ ಲೇಖನದ ಮೂಲಕ ಸಮಸ್ತ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯಗಳು.
ನಾನು ಜಗಪತಿ. ನಂದು ಉತ್ತರ ಕರ್ನಾಟಕದ ಕಲ್ಬುರ್ಗಿಯ ನಾಗೂರ ಗ್ರಾಮ. ರಂಜಾನ್ ಹಬ್ಬ ಮುಂದಿಟ್ಟುಕೊಂಡು ನಾನು ನನ್ನ ಬಾಲ್ಯವನ್ನು ನೆನೆಯುತ್ತೇನೆ.
ನಮ್ಮೂರಿನಲ್ಲಿ ಹಿಂದುಗಳ ಸಮಾನವಾಗಿಯೇ ಮುಸ್ಲಿಂರ ಕುಟುಂಬಗಳು ಇವೆ. ನಮ್ಮೂರು ಒಂದು ಲೆಕ್ಕದಲ್ಲಿ ದೊಡ್ಡದೆ ಅನ್ನಬಹುದು. 2005-06ರ ಸಂದರ್ಭದಲ್ಲಿ ಬೆಣ್ಣೆ ತೊರೆ ಅಣೆಕಟ್ಟು ತುಂಬಿದ ಕಾರಣ ಊರು-ಮನೆಗಳು ಒಡೆದು ಹೋದವು. ನಾನಾಗ ಐದಾರು ವರ್ಷದ ಹುಡುಗ. ಹೊಸ ಜಾಗದಲ್ಲಿ ನಮ್ಮ ಮುತ್ಯ- ಅಪ್ಪ ಸೇರಿ ಸಣ್ಣದೊಂದು ಮನೆ ಕಟ್ಟಿಸಿದರು. ನಮ್ಮ ಮನಿ ಮುಂದ ಒಂದ್ ಮನಿ ಬಿಟ್ಟು ಇನ್ನೊಂದು ಮನಿ ಇತ್ತು. ಅದು ನಮ್ ದೋಸ್ತ ಇಸ್ಮಾಯಿಲ್ ಅವರ ಮನೆ. ನಮ್ಮನ್ಯಾಗ ಅವಾಗ ಎಂಟು ಜನ ಇದ್ದೆವು. ಅವರ ಮನೆಯಲ್ಲಿ ಎಂಟು ಜನ ಇದ್ದರು. ಗೆಳೆತನಕ್ಕೆ ಊರು ಮೀರಿಸುವ ಮನೆಗಳು ನಮ್ಮವು. ನಾವು ನಮ್ಮ ಮನೆಯಲ್ಲಿ ಚಿಕ್ಕ ವಯಸ್ಸಿನ ಮೂರು ಜನ ಗಂಡು ಮಕ್ಕಳು, ಅವರ ಮನೆಯಲ್ಲಿ ಮೂರು ಜನ ಗಂಡು ಮಕ್ಕಳು ಮತ್ತು ದೊಡ್ಡ ವಯಸಿನ ರೇಷ್ಮಾ ಅಕ್ಕ ಇದ್ದಳು, ಆ ಅಕ್ಕ ಮನೆ ಕೆಲಸ, ಹೊಲದ ಕೆಲಸ ಮಾಡಿಕೊಂಡಿರುತ್ತಿದ್ದಳು. ನಾವು ಮೂರು ಜನ ಅವರು ಮೂರು ಜನ ಯಾವಾಗಲೂ ಆಟ, ಹಸಿವಾದಾಗ ಊಟ ಮಾಡಿ ಹಗಲು ಕಳೆಯುತ್ತಿದ್ದೆವು. ರಾತ್ರಿ ಕರೆಂಟ್ ಇದ್ದರೆ ಬ್ಲಾಕ್ ಅಂಡ್ ವೈಟ್ ಟಿವಿ ದರ್ಶನ ಮಾಡುತ್ತಿದ್ದೆವು. ಇಲ್ಲ ಅಂದ್ರೆ ಹಾಡು, ಹರಟೆ, ತರಲೆ ಅಂಗಳದ ತುಂಬೆಲ್ಲ ಚೆಲ್ಲಿಕೊಂಡು ಗಮ್ಮತ್ತಲಿರುತ್ತಿದ್ದೆವು. ನಾನು ನನ್ ತಮ್ಮಂದಿರು, ಬಾಬು ಅಣ್ಣ, ಇಸ್ಮಾಯಿಲ್ ಮತ್ತು ಮಸ್ತಾನ ಯಾವಾಗಲು ಕೂಡಿ ಆಡುವವರು, ಜೊತೆಗೆ ತಿನ್ನುವವರು. ನನ್ನ ಕಿರಿಯ ತಮ್ಮ ಮೈಲಾರಿ ಮತ್ತು ಮಸ್ತಾನ ಯಾವಾಗಲು ಕಿತಾಪತಿ ಮಾಡುವವರು. ಅವರ ಕಿತಾಪತಿಗಳಿಗೆ ತ್ಯಾಪೆ ಹಚ್ಚುವುದೇ ನಮ್ಮ ಕೆಲಸ.

ನಮಗಾಗ ಈ ಜಾತಿ, ಧರ್ಮ ಯಾವುದು ಗೊತ್ತಿರಲಿಲ್ಲ! ನಾವು ಅವಾಗ ಬರೀ ಮನುಷ್ಯರಾಗಿದ್ವಿ. ಹಂಚಿಕೆ, ಪ್ರೀತಿ-ಬಾಂಧವ್ಯ, ಆಗಾಗ ಸಣ್ಣದಾಗಿ ಕೋಳಿ ಜಗಳ ಇವೆಲ್ಲ ಇರುತ್ತಿದ್ದವು. ಮತ್ತೆ ಒಂದಾಗಿ ಊರು ಸುತ್ತುತ್ತಿದ್ದೆವು. ಈಗಿನ ಈ ವೀಡಿಯೊ ಗೇಮ್ಗಳ ಕಾಲದಲ್ಲಿ ನಾವಾಡಿರುವ ನಮ್ಮ ಆಟದ ಬಗ್ಗೆ ಹೇಳಬೇಕೆನಿಸುತ್ತದೆ. ಗೋಟಿ (ಗೋಲಿ), ಭಗೋರಿ, ಚಿಣಿ-ದಾಂಡ, ಲಗೋರಿ, ಮುಟ್ಟಾಟ ಮತ್ತು ಚಕಾರವಚ್ಚಿ ಇವುಗಳ ಜೊತೆಗೆ ನಮ್ಮ ಬದುಕಿನ ಭಾಗವಾದ ಹಬ್ಬ- ಹರಿದಿನಗಳನ್ನು ಆಟಕ್ಕೆ ಬಳಸಿಕೊಂಡು ಮೊಹರಂ, ರಂಜಾನ್, ದಸರಾ, ಹೋಳಿ ಹುಣ್ಣಿಮೆ, ಕಾರು ಹುಣ್ಣಿಮೆ ಎಂತಹ ಎಲ್ಲಾ ಆಟಗಳನ್ನು ಆಡುತ್ತಿದ್ದೆವು. ಉದ್ದನೆಯ ಕಟ್ಟಿಗೆಗೆ ಅರಬಿ (ಬಟ್ಟೆ) ಕಟ್ಟಿ ಕುಣಿಯುವುದು, ಮನೆಯಲ್ಲಿನ ಹಾಲಿಗೆ ಸಕ್ಕರೆ ಬೆರೆಸಿ ಕುಡಿದು ಪರಸ್ಪರರನ್ನು ಅಪ್ಪಿಕೊಳ್ಳುವುದು, ಗಿಡದ ಕಂಠಿ ತಪ್ಪಲು (ಎಲೆ) ಹರೆದು ಒಬ್ಬರಿಗೊಬ್ಬರು ಹಂಚಿಕೊಳ್ಳುವುದು, ಒಬ್ಬರಿಗೊಬ್ಬರು ಕೈಗಳಿಗೆ ಹಗ್ಗ ಕಟ್ಟಿಕೊಂಡು ಜೋಡೆತ್ತಿನಂತೆ ಓಡುವುದು, ಮನೆಯಲ್ಲಿನ ತಿನಿಸುಗಳ ಹಂಚಿಕೊಂಡು ತಿಂದು ದೀಪಾವಳಿ, ಹೋಳಿ ಹೀಗೆ ಎಲ್ಲಾ ಹಬ್ಬಗಳನ್ನು ಮಾಡುತ್ತಿದ್ದೆವು. ನಾವು ದಸರಾ, ದೀಪಾವಳಿ, ಹೋಳಿ-ಹುಣ್ಣಿಮೆಗೆ ಹೋಳಿಗೆ ಉಂಡು ರಂಜಾನ್, ಮೊಹರಂ ನಲ್ಲಿ ಸುರಕುಂಬಿ (ಖೀರು), ಗುಲ್ ಗುಲಿ (ಸಿಹಿ ಬೋಂಡಾ), ಬಿರಂಜಿಬಾನ (ಬಿರಿಯಾನಿ), ಮಾಲದಿ ಉಂಡು ಬೆಳೆದವರು. ನಮ್ಮೊಳಗೆ ಎಂದೂ ಕೋಮು ಭಾವನೆಗಳು ಹುಟ್ಟಲಿಲ್ಲ. ಶ್ರೇಷ್ಠ, ಕನಿಷ್ಠ ಎಂಬ ವ್ಯಸನಗಳಿರಲಿಲ್ಲ. ನಾವು ಇಂದಿಗೂ ಬಂಧುತ್ವದ ಬದುಕು ಬದುಕುತ್ತಿದ್ದೇವೆ!
ನಮ್ಮ ಹಿಂದಿನ ದಿನಗಳನ್ನು ಮತ್ತೊಮ್ಮೆ ನೆನೆಯೋಣ ಈಗಿನ ಈ ಕೋಮು ರಾಜಕಾರಣಗಳ ಬೀಜಕ್ಕೆ ನಮ್ಮ ಫಲವತ್ತಾದ ಪ್ರೀತಿಯ ಎದೆ ಮಾರಿಕೊಳ್ಳದೆ ಒಂದಾಗಿ ಬದುಕೋಣ.
ಎಲ್ಲರಿಗೂ ಪವಿತ್ರ ರಂಜಾನ್ ಹಬ್ಬದ ಶುಭಾಶಯಗಳು.
ಕಾಶಿನಾಥ ಮುದ್ದಾಗೋಳ
ನಾಗೂರು, ಕಲಬುರ್ಗಿ
ಇದನ್ನೂ ಓದಿ–http://ಮುಸ್ಲಿಮರನ್ನು ಅನ್ಯರಾಗಿಸುವ ಪ್ರಯತ್ನವೇ ಮೀಸಲಾತಿ ರದ್ದತಿ!