Wednesday, August 20, 2025

ಸತ್ಯ | ನ್ಯಾಯ |ಧರ್ಮ

ಬಿಜೆಪಿಗೆ ಹೀನಾಯ ಸೋಲು: ರಂಗಾಯಣ ನಿರ್ದೇಶಕ ಸ್ಥಾನಕ್ಕೆ ಅಡ್ಡಂಡ ಕಾರ್ಯಪ್ಪ ರಾಜಿನಾಮೆ

ಸದಾ ಒಂದಿಲ್ಲೊಂದು ವಿವಾದಗಳಿಂದ ಸುದ್ದಿಯಲ್ಲಿರುವ ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಬಿಜೆಪಿ ವಕ್ತಾರರಂತೆ ಮಾತನಾಡುತ್ತಿದ್ದ ರಂಗಾಯಣ ನಿರ್ದೇಶಕರಾಗಿದ್ದ ಅಡ್ಡಂಡ ಕಾರ್ಯಪ್ಪ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ರಾಜಿನಾಮೆ ಪತ್ರ ಬರೆದಿರುವ ಅವರು, ‘ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಕಳೆದುಕೊಂಡಿದೆ. ಇದು ಜನಾದೇಶ, ಇದನ್ನು ಗೌರವಿಸುತ್ತೇನೆ. ಈ ಕಾರಣದಿಂದ ನೈತಿಕ ಜವಾಬ್ದಾರಿಯಿಂದ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನನ್ನೊಂದಿಗೆ ಈ ಅವಧಿಯಲ್ಲಿ ಸಹಕರಿಸಿದ ರಂಗಾಯಣದ ಎಲ್ಲಾ ಸಿಬ್ಬಂದಿ, ಕಲಾವಿದರು, ಅಧಿಕಾರಿ ವರ್ಗ, ಸಹೃದಯಿ ಪ್ರೇಕ್ಷಕರು, ಮಾಧ್ಯಮದ ಸ್ನೇಹಿತರು, ಕಷ್ಟ ಕಾಲದಲ್ಲಿ ಕೈಜೋಡಿಸಿದ ಎಲ್ಲರಿಗೆ ನನ್ನ ಹೃದಯಪೂರ್ವಕ ವಂದನೆಗಳನ್ನು ಸಲ್ಲಿಸುತ್ತೇನೆ’ ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸಾಮಾಜಿಕ ಜಾಗೃತಿ ಮೂಡಿಸಬೇಕಾದ ರಂಗಾಯಣದಲ್ಲಿ ಸಾಮಾಜಿಕ ಒಡಕು ಮೂಡಿಸುವಂತಹ ಪ್ರಯೋಗಗಳು ಖುದ್ದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪನವರ ಮೂಲಕವೇ ಆಗಿದೆ. ಟಿಪ್ಪು ನಿಜ ಕನಸುಗಳು ನಾಟಕ ಕೃತಿ ರಚಿಸಿ ಅದರಲ್ಲಿ ಒಕ್ಕಲಿಗ ಸಮುದಾಯದ ಉರಿಗೌಡ ಮತ್ತು ನಂಜೇಗೌಡ ಎಂಬುವವರು ಟಿಪ್ಪುವನ್ನು ಹತ್ಯೆ ಮಾಡಿದರು ಎಂದು ರಚಿಸಿ , ನಾಟಕವನ್ನು ಅಡ್ಡಂಡ ಕಾರ್ಯಪ್ಪ ನಿರ್ದೇಶನ ಮಾಡಿದ್ದರು. ಇದು ರಾಜ್ಯದೆಲ್ಲೆಡೆ ಸಾಕಷ್ಟು ವಿವಾದ ಉಂಟುಮಾಡಿತ್ತು.

ಮೈಸೂರಿನ ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಚುಂಚನಗಿರಿ ಶ್ರೀಗಳಾದ ನಿರ್ಮಲಾನಂದ ಸ್ವಾಮೀಜಿಯವರ ಬಗ್ಗೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಲಘುವಾಗಿ ಮಾತನಾಡಿದ್ದರು. ತದನಂತರ ಸ್ವಾಮೀಜಿಗಳಿಗೆ ಕ್ಷಮೆಯಾಚಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page