ರಸ್ತೆ ಗುಂಡಿಯಿಂದ ಅಪಘಾತ : ಮಹಿಳೆ ಸಾವು  

ಬೆಂಗಳೂರು : ಸೋಮವಾರದಂದು ರಸ್ತೆ ಗುಂಡಿ ತಪ್ಪಿಸಲು ಹೋಗಿ ಕೆಎಸ್‌ಆರ್‌ಟಿಸಿ ಬಸ್‌ ಕೆಳಗೆ ಸಿಲುಕಿದ್ದ ಮಹಿಳೆ ಚಿಕಿತ್ಸೆ ಫಲಿಸದೇ ಇಂದು  ಸಾವನ್ನಪ್ಪಿರುವ ಘಟನೆ ನಗರದ ಮಾಗಡಿ ರಸ್ತೆಯ ಸುಜಾತ ಥಿಯೇಟರ್‌ ಬಳಿ ನಡೆದಿದೆ.

ನೆನ್ನೆ ಮಾಗಡಿ ರಸ್ತೆಯ ಸುಜಾತ ಥಿಯೇಟರ್‌ ಬಳಿ ಗುಂಡಿ ತಪ್ಪಿಸಲು ಹೋಗಿ ಕೆಎಸ್‌ಆರ್‌ಟಿಸಿ ಬಸ್‌ ಕೆಳಗೆ ತಾಯಿ ಮತ್ತು ಮಗಳು ಸಿಕ್ಕಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ನಂತರ ಇಬ್ಬರನ್ನೂ ರಾಜಾಜಿನಗರದ ಇಎಸ್‌ಐ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಉಮಾ ಅವರ ಸ್ಥಿತಿ ಚಿಂತಾಜನಕವಾಗಿದ್ದರಿಂದ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ 10 ಗಂಟೆಗೆ ಮೃತದೇಹವನ್ನು ವೈದ್ಯರು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ.

ಈ ಹಿನ್ನಲೆಯಲ್ಲಿ ಉಮಾ ಅವರ ಪುತ್ರಿ ವನಿತಾ ಮಲ್ಲೇಶ್ವರಂ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತದನಂತರ ಅಲ್ಲಿನ ಪೊಲೀಸರು ಪ್ರಕರಣ ಸಂಬಂಧಪಟ್ಟ ಕೆಎಸ್‌ಆರ್‌ಟಿಸಿ ಬಸ್‌ ಚಾಲಕ ಮಾರುತಿ ರಾವ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಘಟನೆ ಕುರಿತು ಮಾತನಾಡಿದ ಬಿಬಿಎಂಪಿ ಆಯುಕ್ತರು, ʼರಸ್ತೆಯಲ್ಲಿ ಗುಂಡಿಗಳಿದ್ದಿದ್ದು ನಿಜ. ಗುಂಡಿಗಳನ್ನು ಮುಚ್ಚಲು ವ್ಯವಸ್ಥೆ ಮಾಡ್ತಾ ಇದ್ದೇವೆ. ಬಸ್‌ ಚಾಲಕ ಹೆಚ್ಚಿನ ವೇಗ ಎಲ್ಲವನ್ನೂ ಪೊಲೀಸರು ತನಿಖೆ ನಡೆಸಿ ಮಾಹಿತಿ ನೀಡಿದ ಆಧಾರವಾಗಿ ನಾವು ಮಹಿಳೆಗೆ ಪರಿಹಾರ ಧನ ನೀಡುತ್ತೇವೆʼ ಎಂದು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು