Wednesday, June 19, 2024

ಸತ್ಯ | ನ್ಯಾಯ |ಧರ್ಮ

ದೆಹಲಿ, ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳ ನಂತರ ಇಲಿಗಳನ್ನು ಕೊಲ್ಲಲು ಬಳಸುವ ಗ್ಲ್ಯೂ ಪೇಪರ್‌ ಬೋರ್ಡ್‌ ನಿಷೇಧಿಸಿದ ಪಂಜಾಬ್ ಸರ್ಕಾರ

ದೆಹಲಿ, ಮಹಾರಾಷ್ಟ್ರ ಮತ್ತು ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳ ನಂತರ, ಈಗ ಪಂಜಾಬ್ ಸರ್ಕಾರವು ಇಲಿಗಳನ್ನು ಬಲೆಗೆ ಬೀಳಿಸುವ ಗ್ಲ್ಯೂ ಪೇಪರ್‌ ಬೋರ್ಡುಗಳನ್ನು (Rat glue board) ನಿಷೇಧಿಸಲು ನಿರ್ಧರಿಸಿದೆ.

ಪಂಜಾಬ್‌ನಲ್ಲಿ ಇದರ ತಯಾರಿಕೆ, ಮಾರಾಟ ಮತ್ತು ಸೇವನೆಯನ್ನು ನಿಷೇಧಿಸಲಾಗಿದೆ. ಈ ಗ್ಲ್ಯೂ ಬೋರ್ಡ್‌ ಸಾಮಾನ್ಯವಾಗಿ ಅಂಟು ಹಚ್ಚಿದ ರಟ್ಟಿನ ರೂಪದಲ್ಲಿರುತ್ತದೆ. ಅದನ್ನು ಮನೆಯ ಮೂಲೆಯೊಂದರಲ್ಲಿಟ್ಟಾಗ ಅದರ ಮೇಲೆ ಹರಿದಾಡುವ ಇಲಿ ಅದಕ್ಕೆ ಅಂಟಿಕೊಂಡು ವಿಲವಿಲ ಒದ್ದಾಡತೊಡಗುತ್ತದೆ. ಆ ಕಾರ್ಡಿನ ಸಮೇತ ಇಲಿಯನ್ನು ಎಸೆಯಲಾಗುತ್ತದೆ.

ಪಂಜಾಬ್‌ ಈಗ ಬೋರ್ಡನ್ನು ನಿಷೇಧಿಸುವುದರೊಂದಿಗೆ ಈ ರೀತಿಯ ಬೋರ್ಡುಗಳನ್ನು ನಿಷೇಧಿಸಿದ ರಾಜ್ಯಗಳ ಸಾಲಿಗೆ ಹದಿನೇಳನೇ ರಾಜ್ಯವಾಗಿ ಸೇರ್ಪಡೆಗೊಂಡಿದೆ. ಹಾಗಿದ್ದರೆ ಇಷ್ಟೊಂದು ರಾಜ್ಯಗಳು ಈ ಬೋರ್ಡನ್ನು ನಿಷೇಧಿಸಲು ಕಾರಣವೇನು?

ಸಾಮಾನ್ಯವಾಗಿ ಇಲಿಗಳು, ಅಳಿಲುಗಳು ಮತ್ತು ಪಕ್ಷಿಗಳನ್ನು ಕೊಲ್ಲಲು ಜನರು ಇದನ್ನು ಬಳಸುತ್ತಾರೆ. ಈ ರೀತಿಯಾಗಿ ಇಲಿಗಳನ್ನು ಕೊಲ್ಲುವ ಬಗ್ಗೆ ಪ್ರಶ್ನೆಗಳು ಬಹಳ ಹಿಂದಿನಿಂದಲೂ ಎದ್ದಿವೆ. ಇಲಿಗಳು ಹೀನಾಯವಾಗಿ ಸಾಯುತ್ತಿದ್ದು, ಇದನ್ನು ನಿಷೇಧಿಸಬೇಕು ಎಂದು ವಿವಿಧ ರಾಜ್ಯಗಳ ಸಾಮಾಜಿಕ ಕಾರ್ಯಕರ್ತರು ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವೂ ನಡೆದಿದೆ. ಇದರೊಂದಿಗೆ ಪ್ರಾಣಿ ದಯಾ ಸಂಘಟನೆ ಪೆಟಾ ಕೂಡ ಇದನ್ನು ನಿಷೇಧಿಸುವಂತೆ ಒತ್ತಾಯಿಸಿದೆ.

ಇದನ್ನು ನಿಷೇಧಿಸಬೇಕು ಎಂದು ಪೇಟಾ ಇಂಡಿಯಾ ನಿರಂತರವಾಗಿ ಒತ್ತಾಯಿಸುತ್ತಿದೆ. ಮಹಾರಾಷ್ಟ್ರಕ್ಕೆ ಸಂಬಂಧಿಸಿದಂತೆ, ಪಶುಪಾಲನಾ ಕಮಿಷನರೇಟ್ ಪತ್ರವನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಸೊಸೈಟಿ ಫಾರ್ ಪ್ರಿವೆನ್ಶನ್ ಆಫ್ ಕ್ರ್ಯೂಯಲ್ಟಿ ಅಡಿಯಲ್ಲಿ ಬರುವ ಉತ್ಪನ್ನಗಳ ಮಾರಾಟವನ್ನು ನಿಲ್ಲಿಸುವಂತೆ ಎಲ್ಲಾ ಜಿಲ್ಲೆಗಳ ಉಪ ಪಶುಪಾಲನಾ ಆಯುಕ್ತರು ಮತ್ತು ಸದಸ್ಯ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ. 1960ರ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಸೆಕ್ಷನ್ 11ರ ಉಲ್ಲಂಘನೆಯಾಗಿ ಈ ಅಂಟು ಬೋರ್ಡ್‌ಗಳ ಬಳಕೆಯ ವಿರುದ್ಧ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ (AWBI) ಸಲಹೆಯನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಇದು ಕೇವಲ ಇಲಿಗಳ ಕ್ರೂರ ಸಾವಿಗೆ ಸಂಬಂಧಿಸಿದ ವಿಷಯವಲ್ಲ, ಕೆಲವೊಮ್ಮೆ ಈ ಗಮ್ ಬೋರ್ಡ್ ಬಳಕೆಯಿಂದ ಇತರ ಜೀವಿಗಳು ಸಿಕ್ಕಿಬಿದ್ದ ಪ್ರಕರಣಗಳು ದೇಶದ ಹಲವು ರಾಜ್ಯಗಳಲ್ಲಿ ವರದಿಯಾಗಿವೆ. ಮನೆಯಲ್ಲಿ ಗಮ್‌ ಬೋರ್ಡುಗಳನ್ನು ಇಟ್ಟಾಗ, ಪಕ್ಷಿಗಳು, ಅಳಿಲುಗಳು ಮತ್ತು ಸಣ್ಣ ಬೆಕ್ಕುಗಳು ಸಿಕ್ಕಿಬೀಳುತ್ತವೆ. ಬೆಂಗಳೂರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪ್ರತಿ ತಿಂಗಳು ಇಂತಹ 20ರಿಂದ 25 ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಇದನ್ನು ನಿಷೇಧ ಮಾಡುವಂತೆ ಅವರು ಒತ್ತಾಯಿಸಿದರು. ಈ ವಿಚಾರ ಚರ್ಚೆಗೆ ಬಂದ ನಂತರ ಒಂದೊಂದು ರಾಜ್ಯಗಳು ಅದನ್ನು ನಿಷೇಧಿಸಿದವು.

ಈ ರೀತಿ ಮಾಡುವವರ ವಿರುದ್ಧ ಪ್ರಾಣಿಗಳ ಮೇಲಿನ ಕ್ರೌರ್ಯ ಕಾಯ್ದೆ 1960ರ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತರು ಆಗ್ರಹಿಸುತ್ತಿದ್ದಾರೆ. ಕರ್ನಾಟಕ, ಮಧ್ಯಪ್ರದೇಶ, ಛತ್ತೀಸ್‌ಗಢ, ಅರುಣಾಚಲ ಪ್ರದೇಶ, ಗೋವಾ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಲಕ್ಷದ್ವೀಪ, ಮೇಘಾಲಯ, ಮಿಜೋರಾಂ, ಸಿಕ್ಕಿಂ, ತಮಿಳುನಾಡು, ತೆಲಂಗಾಣ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ಇದನ್ನು ನಿಷೇಧಿಸಿವೆ. ದೆಹಲಿಯಲ್ಲಿಯೂ ಇದನ್ನು ನಿಷೇಧಿಸಿದ ನಂತರ, ಪೇಟಾ ಇಂಡಿಯಾ ದೆಹಲಿ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಿದೆ.

Related Articles

ಇತ್ತೀಚಿನ ಸುದ್ದಿಗಳು