ಮುಂಬೈ, ಅಕ್ಟೋಬರ್ 9: ಉದ್ಯಮಿ ಹಾಗೂ ಟಾಟಾ ಸನ್ಸ್ ನ ಗೌರವಾಧ್ಯಕ್ಷ ರತನ್ ಟಾಟಾ (86) ವಿಧಿವಶರಾಗಿದ್ದಾರೆ. ಬಿಪಿ ಮಟ್ಟ ಕುಸಿದಿದ್ದರಿಂದ ಅವರನ್ನು ಸೋಮವಾರ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಯೋಸಹಜ ಸಮಸ್ಯೆಯಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬುಧವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಸೋಮವಾರ ರತನ್ ಟಾಟಾ ಅವರು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಆರೋಗ್ಯ ಚೆನ್ನಾಗಿದ್ದು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದರು. ಆದರೆ ಎರಡು ದಿನಗಳಲ್ಲಿ ಆರೋಗ್ಯ ಹದಗೆಟ್ಟು ಅವರು ಕೊನೆಯುಸಿರೆಳೆದರು. ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ರತನ್ ಟಾಟಾ ಅವರ ನಿಧನವನ್ನು ಘೋಷಿಸಿದರು.
ರತನ್ ಟಾಟಾ ಅವರು 20 ವರ್ಷಗಳ ಕಾಲ ಟಾಟಾ ಕಂಪನಿಗಳನ್ನು ಯಶಸ್ವಿಯಾಗಿ ಮುನ್ನಡೆಸಿದರು. ಅವರು ವ್ಯವಹಾರವನ್ನು ಮೀರಿದ ಪರೋಪಕಾರಕ್ಕೆ ಹೆಸರುವಾಸಿಯಾಗಿದ್ದರು. ರತನ್ ಟಾಟಾ ಅವರು 1991ರಲ್ಲಿ ಬಹು-ಉದ್ಯಮ ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು ಮತ್ತು 2012ರವರೆಗೆ ಮುಂದುವರೆದರು. ಅವರು ಟಾಟಾ ಸನ್ಸ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರೂ, ಸೇವಾ ಕಂಪನಿಯಾದ ಟಾಟಾ ಟ್ರಸ್ಟ್‌ನ ಅಧ್ಯಕ್ಷರಾಗಿ ಮುಂದುವರಿದಿದ್ದರು. ರತನ್ ಟಾಟಾ ಅವರಿಗೆ 2000ರಲ್ಲಿ ಪದ್ಮಭೂಷಣ ಮತ್ತು 2008ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಲಾಯಿತು.
ವಿಷಾದ ವ್ಯಕ್ತಪಡಿಸಿದ ಗಣ್ಯರು
ರತನ್ ಟಾಟಾ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ರತನ್ ಟಾಟಾ ಅವರು ದೂರದೃಷ್ಟಿಯ ವ್ಯಾಪಾರ ನಾಯಕ ಮತ್ತು ಸಹಾನುಭೂತಿ ಹೊಂದಿರುವ ಅಸಾಧಾರಣ ಮನುಷ್ಯ ಎಂದು ಪ್ರಧಾನಿ ಹೊಗಳಿದ್ದಾರೆ.
ರತನ್ ಟಾಟಾ ಅವರು ವ್ಯಾಪಾರ ಹಾಗೂ ಪರೋಪಕಾರದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ರತನ್ ಟಾಟಾ ಅವರು 1937ರಲ್ಲಿ ಜನಿಸಿದರು. 1948ರಲ್ಲಿ ಅವರ ಪೋಷಕರು ಬೇರ್ಪಟ್ಟ ನಂತರ, ರತನ್ ಟಾಟಾ ಅವರು ತಮ್ಮ ಅಜ್ಜಿ ನವಜ್‌ಭಾಯ್ ಟಾಟಾ ಅವರೊಂದಿಗೆ ಬೆಳೆದರು. ಕಾರ್ನೆಲ್ ವಿಶ್ವವಿದ್ಯಾನಿಲಯದಿಂದ ವಾಸ್ತುಶಿಲ್ಪದಲ್ಲಿ ಪದವಿ ಪಡೆದ ನಂತರ, ಅವರು ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಮ್ಯಾನೇಜ್ಮೆಂಟ್ ಕೋರ್ಸ್ ಪೂರ್ಣಗೊಳಿಸಿದರು.
ರತನ್ ಟಾಟಾ ಕೊನೆಯವರೆಗೂ ಏಕಾಂಗಿಯಾಗಿ ಉಳಿದರು. ಅವರು ಲಾಸ್ ಏಂಜಲೀಸ್ ನಗರದಲ್ಲಿದ್ದಾಗ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದರು. ಆಗ 1962ರ ಭಾರತ-ಚೀನಾ ಯುದ್ಧ ನಡೆಯುತ್ತಿದ್ದು, ರತನ್ ಟಾಟಾ ಜೊತೆ ಹುಡುಗಿಯನ್ನು ಭಾರತಕ್ಕೆ ಕಳುಹಿಸಲು ಆಕೆಯ ಪೋಷಕರು ಒಪ್ಪಲಿಲ್ಲ. ಹೀಗಾಗಿ ಅವರಿಗೆ ಅವರು ಪ್ರೀತಿಸಿದ ಹುಡುಗಿ ಸಿಗಲಿಲ್ಲ.
ಹೆಸರು : ರತನ್ ಟಾಟಾ
ಜನನ: 28 ಡಿಸೆಂಬರ್ 1937
ಮರಣ: 2024 ಅಕ್ಟೋಬರ್ 9
ವಿದ್ಯಾರ್ಹತೆ: ಆರ್ಕಿಟೆಕ್ಚರ್‌ನಲ್ಲಿ ಪದವಿ
ಟಾಟಾ ಸಮೂಹದ ಮುಖ್ಯಸ್ಥರು: 1991-2012, 2016-2017
ಪ್ರಶಸ್ತಿಗಳು: ಪದ್ಮಭೂಷಣ, ಪದ್ಮವಿ ಭೂಷಣ, ಮಹಾರಾಷ್ಟ್ರ ಭೂಷಣ, ಅಸ್ಸಾಂ ಬೈಭವ್, ಆರ್ಡರ್ ಆಫ್ ಆಸ್ಟ್ರೇಲಿಯಾ, ಹಾನರರಿ ನೈಟ್ ಗ್ರ್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್