Monday, September 15, 2025

ಸತ್ಯ | ನ್ಯಾಯ |ಧರ್ಮ

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತರು ಮತ್ತು ದೇವದಾಸಿ ಮಹಿಳೆಯರ ಮರು ಸಮೀಕ್ಷೆ

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತರ ಮೂಲ ಹಂತದ ಸಮೀಕ್ಷೆ ಹಾಗೂ 15 ಜಿಲ್ಲೆಗಳಲ್ಲಿ ಮಾಜಿ ದೇವದಾಸಿ ಮಹಿಳೆಯರ ಮರು ಸಮೀಕ್ಷೆಗೆ ಸರ್ಕಾರ ಹೆಜ್ಜೆ ಇಟ್ಟಿದೆ. ಇದಕ್ಕಾಗಿ KARMANI ವೆಬ್​ ಅಪ್ಲಿಕೇಶನ್ ಸಿದ್ಧಪಡಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ತಿಳಿಸಿದೆ.

ಸೆಪ್ಟಂಬರ್ ‌15ರಿಂದ ಪ್ರಾರಂಭವಾಗುವ ಈ ಸಮೀಕ್ಷೆ, 45 ಕಚೇರಿ ಕೆಲಸದ ದಿನಗಳಲ್ಲಿ ಮುಕ್ತಾಯಗೊಳಿಸಲಾಗುತ್ತದೆ. ಸಮೀಕ್ಷೆ ಕೈಗೊಳ್ಳಲು ಈಗಾಗಲೇ ಪೂರ್ವ ತಯಾರಿ ಮಾಡಿಕೊಂಡಿದ್ದು, ಮೊಬೈಲ್​ ಆಯಪ್​ ಮೂಲಕ ಟ್ರಾನ್ಸ್​ಜೆಂಡರ್ಸ್ ಸಮೀಕ್ಷೆ ನಡೆಯಲಿದೆ.

ಮಾಜಿ ದೇವದಾಸಿ ಮಹಿಳೆಯರ ಮರುಸಮೀಕ್ಷೆಗೆ ಸೇವಾ ಸಿಂಧು ಮೂಲಕ ಮಾಜಿ ದೇವದಾಸಿ ಮಹಿಳೆಯರ ಮರುಸಮೀಕ್ಷೆ ವೆಬ್​ ಅಪ್ಲಿಕೇಶನ್ ರೆಡಿ ಮಾಡಲಾಗಿದೆ. ಈ ಮೂಲಕ ಪ್ರತ್ಯೇಕವಾಗಿ ಎರಡು ಸಮೀಕ್ಷೆ ಕೈಗೊಳ್ಳಲಾಗುತ್ತದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು ವಿವರಿಸಿದ್ದಾರೆ.

ಬೆಳಗಾವಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಧಾರವಾಡ, ಹಾವೇರಿ, ಗದಗ, ಕಲಬುರಗಿ, ಯಾದಗಿರಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಈ ಸಮೀಕ್ಷೆ ನಡೆಯಲಿದೆ. ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಕುರಿತಂತೆ ನಿಖರ ಮಾಹಿತಿ ಸಂಗ್ರಹಿಸಿ, ಪುನರ್ವಸತಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ವ್ಯವಸ್ಥೆ ಕಲ್ಪಿಸುವ ಸಂಬಂಧ ಎರಡೂ ಸಮೀಕ್ಷೆಗಳನ್ನು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಲಿಂಗತ್ವ ಅಲ್ಪಸಂಖ್ಯಾತರ ಮೂಲಹಂತದ ಸಮೀಕ್ಷಾ ಕಾರ್ಯನಿರ್ವಹಣೆಗಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ಹಾಗೂ ಸಮುದಾಯ ಆಧಾರಿತ ಸಂಸ್ಥೆಗಳನ್ನು ಒಳಗೊಂಡ ಜಿಲ್ಲಾಮಟ್ಟದ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಸಮಿತಿಗಳನ್ನು ರಚಿಸಲಾಗುತ್ತದೆ. ಹಾಗೆಯೇ, ಮಾಜಿ ದೇವದಾಸಿ ಮಹಿಳೆಯರ ಮರುಸಮೀಕ್ಷಾ ಕಾರ್ಯನಿರ್ವಹಣೆಗಾಗಿ ವಿವಿಧ ಹಂತಗಳಲ್ಲಿ ಆಂತರಿಕ ಸಮಿತಿ, ಜಿಲ್ಲಾ ಮತ್ತು ರಾಜ್ಯಮಟ್ಟದ ಸಮಿತಿ (ಮೇಲ್ವಿಚಾರಣೆ ಹಾಗೂ ಮೌಲ್ಯಮಾಪನ ಸಮಿತಿ) ಗಳನ್ನು ಮಾಜಿ ದೇವದಾಸಿ ಮಹಿಳೆಯರ ಸಂಘಟನೆಗಳ ಪ್ರತಿನಿಧಿಗಳನ್ನು ಒಳಗೊಂಡಂತೆ ರಚನೆ ಮಾಡಲಾಗಿರುತ್ತದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page