ಸಂವಿಧಾನ ರಕ್ಷಣೆಗಾಗಿ ಪ್ರಾಣ ತ್ಯಾಗಕ್ಕೂ ಸಿದ್ಧ: ರಾಹುಲ್ ಗಾಂಧಿ

ಭಾರತದ ಸಂವಿಧಾನದ ರಕ್ಷಣೆಗಾಗಿ ಪ್ರಾಣ ತ್ಯಾಗಕ್ಕೂ ಸಿದ್ಧ ಎಂದು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಸಂವಿಧಾನ ರಕ್ಷಣೆಗೆ ಕಾಂಗ್ರೆಸ್ ಪಕ್ಷ ಬದ್ಧವಾಗಿದೆ ಎಂದರು. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ನಾದುರ್‌ಬಾರ್‌ನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯನ್ನು ಟೀಕಿಸಿದರು. ತಮ್ಮ ಕೈಯಲ್ಲಿರುವ ಕೆಂಪು ಪುಸ್ತಕವನ್ನು (ಸಂವಿಧಾನದ ಪ್ರತಿ) ನಗರ ನಕ್ಸಲಿಸಂ ಪುಸ್ತಕ ಎಂದು ಕರೆಯುವ ಬಿಜೆಪಿ ನಾಯಕರ ಟೀಕೆಗಳನ್ನು ಅವರು ಎತ್ತಿ ಹಿಡಿದರು.

ಪ್ರಧಾನಿ ಮೋದಿಯವರು ಸಂವಿಧಾನವನ್ನು ಒಮ್ಮೆಯೂ ಓದದ ಕಾರಣ ಕೆಂಪು ಪುಸ್ತಕ ಖಾಲಿಯಿದೆ ಎಂದು ಹೇಳುತ್ತಾರೆ ಎಂದು ರಾಹುಲ್ ದೂರಿದರು. ಸಂವಿಧಾನವೇ ಭಾರತದ ಆತ್ಮ ಎಂದು ಅವರು ಮೋದಿಯವರಿಗೆ ಪಾಠ ಮಾಡಿದರು. ಬಿರ್ಸಾ ಮುಂಡಾ, ಮಹಾತ್ಮ ಫುಲೆ, ಡಾ.ಬಿ.ಆರ್.ಅಂಬೇಡ್ಕರ್, ಮಹಾತ್ಮ ಗಾಂಧಿ ಮತ್ತಿತರರ ಪ್ರೇರಣೆ ಸಂವಿಧಾನದಲ್ಲಿದೆ ಎಂದರು. ಸಂವಿಧಾನದಲ್ಲಿ ಏನೂ ಇಲ್ಲ ಎಂದಿರುವುದು ಆ ಮಹನೀಯರಿಗೆ ಮಾಡಿದ ಅವಮಾನ ಎಂದರು.

ಆದಿವಾಸಿಗಳನ್ನು ವನವಾಸಿ ಎಂದು ಕರೆಯುವ ಮೂಲಕ ಬಿಜೆಪಿ ಮತ್ತು ಆರೆಸ್ಸೆಸ್ ಆದಿವಾಸಿಗಳನ್ನು ಅವಮಾನಿಸುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು. ಆದಿವಾಸಿಗಳನ್ನು ಕಾಡಿಗೆ ಸೀಮಿತಗೊಳಿಸಬೇಕು ಎಂಬುದು ಬಿಜೆಪಿಯ ಚಿಂತನೆ ಎಂದು ಟೀಕಿಸಿದರು. ದೇಶದಲ್ಲಿ ಎಷ್ಟು ಆದಿವಾಸಿಗಳು, ದಲಿತರು ಮತ್ತು ಒಬಿಸಿಗಳು ಇದ್ದಾರೆ ಎಂಬುದನ್ನು ತಿಳಿಯಲು ಜಾತಿ ಗಣತಿ ನಡೆಯಬೇಕು ಎಂದು ಪುನರುಚ್ಚರಿಸಿದರು. ಆದಿವಾಸಿಗಳು, ದಲಿತರು ಮತ್ತು ಒಬಿಸಿಗಳಿಗೆ ರಾಜ್ಯಾಧಿಕಾರ ನೀಡುವುದು ತಮ್ಮ ಗುರಿ ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು