Saturday, June 15, 2024

ಸತ್ಯ | ನ್ಯಾಯ |ಧರ್ಮ

ನಿಜವಾದ ಕಾಶ್ಮೀರಿ ಫೈಲ್ಸ್! : ಭಟ್, ಪಂಡಿತ್ ಎಂಬ ಮುಸ್ಲಿಮರೂ, ಮೀರ್, ವಲಿ ಎಂಬ ಹಿಂದೂಗಳೂ… ಬೊಗಸೆಗೆ ದಕ್ಕಿದ್ದು – 20

ಇಂದು ಕೋಮುವಾದಿ ಕೇಂದ್ರ ಸರಕಾರವು ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಕಿತ್ತುಕೊಂಡು, ವಿಭಜಿಸಿ, ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿಕೊಂಡಿದೆ. ಆರೆಸ್ಸೆಸ್ ಕಲ್ಪನೆಯ “ಹಿಂದೂ ರಾಷ್ಟ್ರ”ದಲ್ಲಿ ಅದೊಂದೇ ಮುಸ್ಲಿಂ ಬಹುಸಂಖ್ಯಾತ ರಾಜ್ಯವಾಗಿದ್ದುದೇ ಇದಕ್ಕೆ ಮೂಲಕಾರಣ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಪ್ರತ್ಯೇಕತಾವಾದ, ಭಯೋತ್ಪಾದನೆ ಇತ್ಯಾದಿ ನೆಗೆಟಿವ್ ವಿಚಾರಕ್ಕೆ ಹೆಚ್ಚಿನ ಪ್ರಚಾರ ನೀಡಲಾಗುತ್ತಿದ್ದು, ಇದಕ್ಕೆ ಒಂದು ಉದಾಹರಣೆ ಎಂದರೆ, “ಕಾಶ್ಮೀರ್ ಫೈಲ್ಸ್” ಎಂಬ ಸರಕಾರಿ ಬೆಂಬಲದ ವಿಷಚಿತ್ರ. ಕಾಶ್ಮೀರಿ ಮುಸ್ಲಿಮರನ್ನು ಯಾವುದೇ ಮಾನವೀಯ ಸಂವೇದನೆ ಇಲ್ಲದ ಪ್ರಾಣಿಗಳೇನೋ ಎಂಬಂತೆ ಸುಳ್ಳಾಗಿ ಚಿತ್ರಿಸಿ, ದೇಶದ ಉಳಿದ ಭಾಗಗಳ “ಹಿಂದೂ”ಗಳ ರೊಚ್ಚನ್ನು ಕೆರಳಿಸಿ ಮತಗಳಾಗಿ ಪರಿವರ್ತನೆ ಮಾಡುವುದೇ ಈ ಚಿತ್ರದ ಮತ್ತು ಸರಕಾರದ ಉದ್ದೇಶವಾಗಿದೆ.

ಅದೇನೇ ಇದ್ದರೂ, ಸಾಟಿಯಿಲ್ಲದ ಪ್ರಾಕೃತಿಕ ಸೌಂದರ್ಯ, ಸೇಬು, ಕೇಸರಿಗೆ ಹೆಸರಾಗಿರುವಂತೆ ಕಾಶ್ಮೀರವು ಮೂಲತಃ ಸೌಹಾರ್ದಕ್ಕೂ ಹೆಸರಾಗಿದೆ. ಇಲ್ಲಿನ ಹಿಂದೂಗಳು ಮತ್ತು ಮುಸ್ಲಿಮರು ಸಮಾನ ಕೌಟುಂಬಿಕ ಹೆಸರುಗಳನ್ನು ಹೊಂದಿರುವುದು ಈ ಸಾಮರಸ್ಯದ ಕುತೂಹಲಕಾರಿ ಬೇರುಗಳನ್ನು ಸೂಚಿಸುತ್ತದೆ. ಅಂದಹಾಗೆ, ಮೋದಿ, ಶಾ ಎಂಬ ಸರ್‌ನೇಮ್ ಅಂದರೆ ಪಿತೃ ಹೆಸರು ಮುಸ್ಲಿಮರಲ್ಲಿಯೂ ಇದೆ ಎಂಬುದನ್ನು ಇದನ್ನು ಓದುವಾಗ ಮನಸ್ಸಿನ ಮೂಲೆಯಲ್ಲಿ ಇಟ್ಟುಕೊಂಡಿರೋಣ.

ಬಿಜೆಪಿಯ ಕೋಮುವಿಭಜನೆಯ ಅಂಜೆಂಡಾಕ್ಕೆ ಅನುಗುಣವಾಗಿಯೇ ನಿರ್ಮಿಸಲಾಗಿರುವ ಅಪಪ್ರಚಾರ ಚಿತ್ರ “ಕಾಶ್ಮೀರ್ ಫೈಲ್ಸ್”ನಿಂದಾಗಿ “ಕಾಶ್ಮೀರಿ ಪಂಡಿತ”ರ ಹೆಸರು ಮತ್ತೊಮ್ಮೆ ಜನರ ಬಾಯಲ್ಲಿ ಆಡುತ್ತಿದೆ. ಪಂಡಿತರು ಎಂದರೆ ಬ್ರಾಹ್ಮಣರು ಮಾತ್ರ; ಅವರನ್ನು ಮುಸ್ಲಿಮರು ಹಣಿದು ಕ್ರೂರ ದೌರ್ಜನ್ಯ ನಡೆಸಿದ್ದಾರೆ ಎಂಬ ತಿರುಚಿದ ಚಿತ್ರಣವನ್ನು ಏಕಪಕ್ಷೀಯವಾಗಿ ಈ ಚಿತ್ರ ನೀಡುತ್ತದೆ. ಮತಾಂಧ ಭಯೋತ್ಪಾದಕ ಕೃತ್ಯಗಳನ್ನು ಕಾಶ್ಮೀರದ ಎಲ್ಲಾ ಮುಸ್ಲಿಮರ ತಲೆಗೆ ಕಟ್ಟುವ ಈ ಪ್ರಯತ್ನದಲ್ಲಿ, ಭಯೋತ್ಪಾದಕರನ್ನು ಎದುರು ಹಾಕಿಕೊಂಡು ಹಿಂದೂಗಳನ್ನು ರಕ್ಷಿಸಿದ ಸಾಮಾನ್ಯ ಮುಸ್ಲಿಮರು, ಉಗ್ರರೇ ಕೊಂದ ಸಾವಿರಾರು ಮುಸ್ಲಿಮರ ಫೈಲುಗಳನ್ನು ಯಾರೂ ತೆರೆದಿಲ್ಲ.

ಕೆಲವು ದಶಕಗಳ ಹಿಂದೆ ಪ್ರತ್ಯೇಕತಾವಾದ ಮತ್ತು ಭಯೋತ್ಪಾದನೆ ಹುಟ್ಟಿಕೊಳ್ಳುವುದಕ್ಕೆ ಮೊದಲು ಕಾಶ್ಮೀರ ಎಂದ ಕೂಡಲೇ ನೆನಪಿಗೆ ಬರುತ್ತಿದ್ದುದು ಸೇಬು, ತಾವರೆ, ಕೇಸರಿ, ಹಿಮ, ಭೂಲೋಕದ ಸ್ವರ್ಗ ಎಂದು ಕರೆಯಲಾಗುತ್ತಿದ್ದ ಸುಂದರ ಪ್ರಕೃತಿ, ಮುಸ್ಲಿಮರು ಬಹುಸಂಖ್ಯಾತರಾಗಿರುವ ಭಾರತದ ಏಕೈಕ ರಾಜ್ಯದ ಸುಂದರ ರೂಪದ ಜನರು. ಅದಕ್ಕಿಂತಲೂ ಹೆಚ್ಚಾಗಿ ಅಲ್ಲಿನ ಕೋಮು ಸೌಹಾರ್ದ.

ಮಧ್ಯಕಾಲೀನ ಇತಿಹಾಸದಲ್ಲಿ ತುರ್ಕ್ಮೇನಿಸ್ತಾನದಿಂದ ಬಂದ ಆಕ್ರಮಣಕಾರರು ಇಲ್ಲಿ ನಡೆಸಿದ ಲೂಟಿ, ಅತ್ಯಾಚಾರ, ಅನಾಚಾರಗಳ ವಿವರಗಳು ಸಿಗುತ್ತವಾದರೂ, ಆಧುನಿಕ ಕಾಲದ ನಾಲ್ನೂರು ವರ್ಷಗಳ ಇತಿಹಾಸದಲ್ಲಿ ಇತ್ತೀಚಿನ ದಶಕಗಳನ್ನು ಬಿಟ್ಟರೆ, ಕೋಮುಸೌಹಾರ್ದ ಎಂಬುದು ಕಾಶ್ಮೀರದ ಮೂಲ ಸೆಲೆಯಾಗಿತ್ತು. ಇಲ್ಲಿ ಎರಡೂ ಕೋಮುಗಳ ರಾಜಕೀಯ ವ್ಯಕ್ತಿಗಳು ನಡೆಸಿದ ರಾಜಕೀಯದಾಟಗಳ, ಆದ ಸಾವು-ನೋವುಗಳು ಮತ್ತು ಅಶಾಂತಿಯ ಬಗ್ಗೆ ಇಲ್ಲಿ ಉಲ್ಲೇಖಿಸುವುದಿಲ್ಲ. ಅನುಕೂಲಕ್ಕೆ ತಕ್ಕಂತೆ ಒಂದು ದೇಶ, ರಾಜ್ಯ, ಧರ್ಮ, ಜಾತಿಗೆ ಸೇರಿದ ಎಲ್ಲಾ ಜನರನ್ನು ಒಂದೇ ಬುಟ್ಟಿಯಲ್ಲಿ ಇಟ್ಟು ತೂಗಿ ಆವರ ಗುಣಸ್ವಭಾವಗಳನ್ನು ನಿರ್ಧರಿಸಿ ದ್ವೇಷಿಸುವ ರೋಗಕ್ಕೆ ಉತ್ತಮ ಮದ್ದೆಂದರೆ, ಆ ಜನರ ಬಗ್ಗೆ ಹೆಚ್ಚುಹೆಚ್ಚು ತಿಳಿದುಕೊಳ್ಳುವುದು. ಹಾಗಾಗಿ, ಕಾಶ್ಮೀರದ ಸೌಹಾರ್ದದ ಬೇರುಗಳನ್ನು ಅಲ್ಲಿನ ಹೆಸರುಗಳಲ್ಲಿ ಹುಡುಕುವ ಚಿಕ್ಕ ಪ್ರಯತ್ನವನ್ನು ಇಲ್ಲಿ ವಿವಿಧ ಮೂಲಗಳಲ್ಲಿ ಓದಿದ್ದ ವಿಷಯಗಳ ಆಧಾರದಲ್ಲಿ ಮಾಡಿದ್ದೇನೆ.

ಕಾಶ್ಮೀರದ ಭಯೋತ್ಪಾದನೆಯ ಆರಂಭದಲ್ಲಿ ಮಕ್ಬೂಲ್ ಭಟ್ ಎಂಬ ಜಮ್ಮು-ಕಾಶ್ಮೀರ್ ಲಿಬರೇಷನ್ ಫ್ರಂಟ್ (ಜೆಕೆಎಲ್ಎಫ್) ಸಂಘಟನೆಯ ನಾಯಕನನ್ನು ಗಲ್ಲಿಗೇರಿಸಿದಾಗ, ಅಲ್ಲಿ ಆತನ ಪರ ವಿರೋಧ ವಾದಗಳು ಹುಟ್ಟಿಕೊಂಡವು. ಭಯೋತ್ಪಾದನೆಯೂ ಹೆಚ್ಚಾಯಿತು. ಆದರೆ, ದೇಶದ ಉಳಿದ ಕಡೆಗಳಲ್ಲಿ ಆತನ ಹೆಸರಿನಲ್ಲಿದ್ದ ಭಟ್ ಎಂಬ ಪದವೇ ಭಾರೀ ಕುತೂಹಲ ಹುಟ್ಟಿಸಿತ್ತು. ಕೆಲವು ಪತ್ರಿಕೆಗಳೂ ಅದು ‘ಭಟ್’ ಇರಬಹುದು ಎಂದು ನಂಬಲಾರದೆ, ಬೇಕೆಂದೇ ‘ಬಟ್’ ಎಂದು ಬರೆದಿದ್ದವು. ನಂತರ ಕೆಲವರು ಆತ ಮತಾಂತರಗೊಂಡ ಬ್ರಾಹ್ಮಣ ಎಂದು ವಾದಿಸಿದ್ದರು. ಹಾಗಿದ್ದರೆ, ಹಿಂದೂಗಳಿಗೆ ಮುಸ್ಲಿಂ ಕೌಟುಂಬಿಕ ಹೆಸರು ಇರುವುದೇಕೆ ಎಂಬುದನ್ನು ಅವರು ವಿವರಿಸಲಿಲ್ಲ. ನಾನದನ್ನು ಇಲ್ಲಿ ವಿವರಿಸಲು ಬಯಸುತ್ತೇನೆ.

ಅಲ್ಲಿ ಭಟ್ ರೀತಿಯಲ್ಲಿಯೇ ಋಷಿ, ವಲಿ, ಮಿರ್ಜಾ, ಧಾರ್, ಅಥವಾ ಧರ್, ಪೀರ್, ಖೂನ್, ಚಕೂ, ದುರಾನಿ, ಕಚ್ರೂ, ದ್ರಬೂ, ಕಲೂ, ಕನ್ನ, ಕಾವ್, ಕಲೂ, ಖರ್, ಖುದಾ, ಕಿಚ್ಲೂ, ರೈನಾ ಇತ್ಯಾದಿ ನೂರಾರು ಸಾಮಾನ್ಯ ಕೌಟುಂಬಿಕ ಹೆಸರುಗಳನ್ನು ಹಿಂದೂಗಳೂ, ಮುಸ್ಲಿಯರೂ ಹೊಂದಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ, ಮುಸ್ಲಿಮರಿಗೆ ಋಷಿ, ಪಂಡಿತ್ ಹೆಸರುಗಳಿರುವುದು ನಂಬಲಾಗದ ನಿಜ. ವಲಿ ಎಂದರೆ ಅರೇಬಿಕ್‌ನಲ್ಲಿ ಸ್ನೇಹಿತ, ರಕ್ಷಕ ಎಂಬ ಅರ್ಥವಿದೆ. ಈ ಹೆಸರನ್ನು  ಅಲ್ಲಾಹ್ ಎದುರು ಸೇರಿಸುತ್ತಾರೆ. ಆದರೆ, ಕಾಶ್ಮೀರದಲ್ಲಿ ಮುಸ್ಲಿಮರಿಗಿಂತ ಹಿಂದೂ ವಲಿಗಳು ಹೆಚ್ಚಿದ್ದಾರೆ!

ಕಾಶ್ಮೀರದ ಪದ್ಮಶ್ರೀ ವಿಜೇತ ಹೃದಯ ತಜ್ಞ ಡಾ. (ಪ್ರೊಫೆಸರ್) ಉಪೇಂದ್ರ ಕೌಲ್ ಅವರು ಒಂದು ಲೇಖನದಲ್ಲಿ ತಮ್ಮ ಮೂಲ ಕೌಟುಂಬಿಕ ಹೆಸರು ಖಾನ್ ಎಂದು ಬರೆದಿದ್ದಾರೆ. ಅವರ ಹಿರಿಯರು 1752ರಿಂದ 1819ರ ತನಕ ಅಫ್ಘಾನಿಸ್ತಾನದ ರಾಜರ ಆಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಖಾನ್ ಪದವಿ ಅಥವಾ ಹುದ್ದೆ ಹೊಂದಿದ್ದರಂತೆ. ಅವರ ತಂದೆ ಮೆಟ್ರಿಕ್ ಕಲಿಯುತ್ತಿದ್ದ ವೇಳೆ ಇರಿಸುಮುರುಸು ತಪ್ಪಿಸಲು ಕೌಲ್ ಎಂದು ಬದಲಿಸಿದ್ದರಂತೆ. ಜೊತೆಗೆ ಈ ವೈದ್ಯರು ಕೆಲವು ದೊಡ್ಡ ಜನರ ಉದಾಹರಣೆಗಳನ್ನೂ ಕೊಟ್ಟಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ನಾಗರಿಕ ಸೇವಾ ಆಯೋಗದ ಮಾಜಿ ಅಧ್ಯಕ್ಷ ಶಫಿ ಪಂಡಿತ್, ಮಾಜಿ ಡಿಜಿಪಿ ಗುಲಾಂ ಜೀಲಾನಿ ಪಂಡಿತ್ ಅಪ್ಪಟ ಮುಸ್ಲಿಮರು. ಪ್ರಸಿದ್ಧ ವೈದ್ಯ ಡಾ. ಮಹಾರಾಜ್ ಕಿಷನ್ ಪೀರ್, ಪ್ರಸಿದ್ಧ ವಕೀಲ ಬನ್ಸಿಲಾಲ್ ವಲಿ ಹಿಂದೂಗಳು. ಅಲ್ಲಿ ಇಂತಾ ಹೆಸರುಗಳು ಹಿಂದೂ ಮತ್ತು ಮುಸ್ಲಿಂ ಕೌಟುಂಬಿಕ, ಧಾರ್ಮಿಕ ಹಿನ್ನೆಲೆಯನ್ನು ಸೂಚಿಸುವುದಿಲ್ಲ. ಕಾಶ್ಮೀರದಲ್ಲಿ ಸೂಫಿ ಪಂಥವು ಹಿಂದೆಯೇ ಬಲವಾಗಿ ಬೇರೂರಿದ್ದು, ಅಲ್ಲಿ ಕೋಮುಸೌಹಾರ್ದಕ್ಕೆ ಕಾರಣವಾಯಿತು. ಉದಾರಣೆಗೆ 1637ರಲ್ಲಿ ಶ್ರೀನಗರದಲ್ಲಿ ಹುಟ್ಟಿದ ಕೇಶವ್ ಗೋಬಿಂದ್ ಕೌಲ್ ಎಂಬವರು ಬಾಲ್ಯದಲ್ಲೇ ಸೂಫೀ ಪಂಥ ಆನುಸರಿಸಿ ಹಿಂದೂಗಳಿಗೂ ಮುಸ್ಲಿಮರಿಗೂ ಋಷಿ ಪೀರ್ ಆದರು. ಭಾರತದಲ್ಲಿ ಭಕ್ತಿಪಂಥದ ಕಬೀರ್, ಶಿರಡಿ ಬಾಬಾ ಮುಂತಾದವರಂತೆ ಅವರ ಸಾವಿನ ಸುತ್ತಲೂ “ಹಿಂದು, ಮುಸ್ಲಿಮರು ಶವಸಂಸ್ಕಾರ ತಮ್ಮ ಧರ್ಮದ ಪ್ರಕಾರ ಆಗಬೇಕು ಎಂದು ಹಟ ಹಿಡಿದಾಗ ಶವವು ಹೂವಾಯಿತು. ಎರಡೂ ಕೋಮಿನವರು ತಮ್ಮತಮ್ಮ ಪದ್ಧತಿಯಂತೆ ಆಂತ್ಯ ಸಂಸ್ಕಾರ ಮಾಡಿದರು” ಎಂಬಂತ ದಂತಕತೆ ಇವರ ಸುತ್ತಲೂ ಇದೆ. ಅವರನ್ನು “ಪೀರ್ ಪಂಡಿತ್ ಪದ್‌ಶಾ ಹರ್ದು ಮುಶ್ಕಿಲ್ ಆಸಾನ್” ಎಂದರೆ, ಕಷ್ಟ ಸುಲಭಗೊಳಿಸುವ ಪೀರ್ ಪಂಡಿತ್  ಎಂದು ಇಂದಿಗೂ ಎರಡು ಕಡೆ ಆರಾಧಿಸಲಾಗುತ್ತಿದೆ.

ಕಾಶ್ಮೀರದ ಹಲವಾರು ಕೌಟುಂಬಿಕ ಹೆಸರುಗಳು ಧರ್ಮಕ್ಕೆ ಸಂಬಂಧಿಸಿದವುಗಳೇ ಅಲ್ಲ. ಆವು ಹುದ್ದೆ ಮತ್ತು ವೃತ್ತಿಗೆ ಸಂಬಂಧಿಸಿದವುಗಳು. ಭಾರತದ ಉಳಿದ ಭಾಗಗಳಲ್ಲೂ ಮೋದಿ (ಗಾಣಿಗ), ಶಾ, ಪಟೇಲ್, ಕೊತ್ವಾಲ್, ಜಮಾದಾರ್, ನಾಯ್ಕ್ ಇತ್ಯಾದಿಯಾಗಿ- ಕುಟುಂಬದ ಹೆಸರುಗಳು ಹಿಂದೂ ಮತ್ತು ಮುಸ್ಲಿಂ ಇಬ್ಬರಲ್ಲಿ ಇದ್ದರೂ, ಅವು ಕಾಶ್ಮೀರದಷ್ಟು ವ್ಯಾಪಕ, ವರ್ಣರಂಜಿತ ಮತ್ತು ತಮಾಷೆಯದ್ದೂ ಆಗಿಲ್ಲ.

ಅರಂ (ತರಕಾರಿ ಬೆಳೆಯುವ ರೈತ), ಕ್ರಾಲ್ (ಕುಂಬಾರ), ಗೋರು (ಗೌಳಿಗ), ವಝ (ಬಾಣಸಿಗ), ಬಝಾಝ್ (ಬಟ್ಟೆ ವ್ಯಾಪಾರಿ) ಈ ರೀತಿಯ ಕೌಟುಂಬಿಕ ಹೆಸರುಗಳು ಹಿಂದೂಗಳಲ್ಲೂ ಮುಸ್ಲಿಮರಲ್ಲೂ ಇವೆ. ಇಂತಹ ಸಮಾನ ಹೆಸರುಗಳನ್ನು ಪ್ರಾಣಿ, ಪಕ್ಷಿ, ಹಣ್ಣು, ತರಕಾರಿ, ಸ್ವಭಾವ, ಇತ್ಯಾದಿಗಳ ಹೋಲಿಕೆಯ ಕಾರಣದಿಂದಲೋ ಬಂದ ಕೌಟುಂಬಿಕ ಹೆಸರುಗಳು ಮಾತ್ರವಲ್ಲದೆ, ಯಾರಿಗೋ ಇರಿಸಲಾಗಿರಬಹುದಾದ ಅಡ್ಡ ಹೆಸರುಗಳೂ ತಲೆತಲಾಂತರದಿಂದ ಹರಿದುಬಂದಿವೆ. ಎರಡೂ ಕೋಮುಗಳಲ್ಲಿ ಇರುವ ಕೆಲವು ತಮಾಷೆಯ ಕೌಟುಂಬಿಕ ಹೆಸರುಗಳನ್ನು ನೋಡಬೇಕೆಂದರೆ: ಹಂಗ್ಲೂ (ಜಿಂಕೆ), ಖರ್ (ಕತ್ತೆ), ಬ್ರಕು (ಬೆಕ್ಕು), ಕಂಟ್ರೂ (ಗುಬ್ಬಚ್ಚಿ), ಕಕ್ರೂ (ಕೋಳಿ), ಕಾವ್ (ಕಾಗೆ), ಬ್ರಂಬ್ರೂ (ಭ್ರಮರ), ಕೊಟ್ರೂ (ಪಾರಿವಾಳ), ದಂಡ್ (ಹೋರಿ), ಹೂನ್ (ನಾಯಿ), ಯೆಚ್ (ಯೇತಿ), ಕೋಕಿಲೂ (ಕೋಗಿಲೆ)… ಹಿರಿಯ ಅಧಿಕಾರಿ ಎಂ.ಕೆ. ಕಾವ್, ಹಿರಿಯ ಪತ್ರಕರ್ತ ಎಂ.ಎಲ್. ಕೊಟ್ರೂ ಅವರ ಹೆಸರು ಕೇಳಿ ಅವರು ಹಿಂದೂಗಳೇ ಮುಸ್ಲಿಮರೇ ಎಂದು ಹೇಳುವುದು ಕಷ್ಟ. ಈ ಮಟ್ಟಿನ ಸೌಹಾರ್ದ, ಸಾಮರಸ್ಯ ಕಾಶ್ಮೀರದ್ದು!

ಪ್ರಾಣಿ, ಪಕ್ಷಿ ಬಿಡಿ, ಹಣ್ಣು, ತರಕಾರಿಗಳ ಹೆಸರುಗಳನ್ನು ಹೊಂದಿರುವ ಹಿಂದೂ, ಮುಸ್ಲಿಮರ ಸಂಖ್ಯೆಯೂ ಕಡಿಮೆಯಿಲ್ಲ. (ಮಹಾರಾಷ್ಟ್ರ, ಉತ್ತರ ಕರ್ನಾಟಕದಲ್ಲೂ ವಾಘ್ (ಹುಲಿ), ಪಡುವಳ್ (ಪಡುವಲ), ಉಳ್ಳಾಗಡ್ಡಿ (ಈರುಳ್ಳಿ) ಇತ್ಯಾದಿ ಹೆಸರುಗಳು ಇವೆಯಾದರೂ, ಕಾಶ್ಮೀರದಷ್ಟು ವ್ಯಾಪಕವಾಗಿಲ್ಲ. ಕೆಲವು ಉದಾರಣೆಗಳು: ಮುಜೂಸ್ (ಬೀಟ್ರೂಟ್), ಬಮ್‌ಚೂಟ್ಸ್ (ಕ್ವಿಂನ್ಸ್ ಆಪಲ್), ಕಖ್ (ಹರಿವೆ), ವಾಂಗೂ (ಬದನೆ), ನದ್ರೂಸ್ (ತಾವರೆ ದಂಡು)… ಇದು ಇಲ್ಲಿಗೆ ಮುಗಿಯುವುದಿಲ್ಲ. ಯಾರದ್ದೋ ಗುಣ ಸ್ವಭಾವದ ಕಾರಣದಿಂದ ತಲೆತಲಾಂತರಕ್ಕೆ ಅಂಟಿಕೊಂಡ ಹೆಸರುಗಳೂ ಇವೆ. ಇವೂ ಎರಡೂ ಧರ್ಮದವರಿಗೆ ಸೇರಿವೆ: ಹಕೂ (ಒಣ, ಸಪ್ಪೆ ಮನುಷ್ಯ) ಟ್ರಕ್ರೂ (ಹಟಮಾರಿ)…

ಅಡ್ಡ ಹೆಸರುಗಳನ್ನು ಇಡುವುದರಲ್ಲಿ ಹಿಂದೂ, ಮುಸ್ಲಿಂ ಕಾಶ್ಮೀರಿಗಳು ಎಷ್ಟು ಹಾಸ್ಯಪ್ರಜ್ಞೆಯ ಚುರುಕು ಜನರೆಂದರೆ, ಉದಾರಣೆಗಾಗಿ ಪ್ರಸಿದ್ಧ ಇತಿಹಾಸಕಾರ ಪಂಡಿತ್ ಆನಂದ ಕೌಲ್ ಆವರು ಹೇಳಿರುವ ‘ತೆಂಗ್’ ಕುಟುಂಬನಾಮದವರ ಕುರಿತ ತಮಾಷೆಯ ದಂತಕತೆಯನ್ನು ನೋಡೋಣ. ವಾಸದೇವ ಎಂಬ ವ್ಯಕ್ತಿಯೊಬ್ಬ ಇದ್ದ. ಅವನ ಅಂಗಳದಲ್ಲಿ ಒಂದು ದೊಡ್ಡ ನೇರಳೆ ಮರವಿತ್ತು. ಅದಕ್ಕಾಗಿ ಅವನಿಗೆ ವಾಸದೇವ ತುಲ್ (ನೇರಳೆ) ಎಂಬ ಅಡ್ಡ ಹೆಸರಿಟ್ಟರು. ಅದು ಅವನಿಗೆ ಕಿರಿಕಿರಿಯಾಗಿ ಮರವನ್ನು ಕಡಿಸಿದ. ಮರದ ಬೊಡ್ಡೆ ಉಳಿಯಿತು. ಜನರು ಅವನಿಗೆ ವಾಸದೇವ ಮೌಂಡ್ (ಬೊಡ್ಡೆ) ಎಂದು ಹೆಸರಿಟ್ಟರು. ಅವನು ಬೊಡ್ಡೆ ಅಗೆಸಿ ಕಿತ್ತೆಸೆದ. ಆದರೆ, ಒಂದು ತಗ್ಗಿನ ಗುಂಡಿ ಉಳಿಯಿತು. ಜನರು ಅವನಿಗೆ ವಾಸದೇವ ಖಡ್ (ಗುಂಡಿ) ಎಂದು ಹೆಸರಿಟ್ಟರು. ಅವನು ಗುಂಡಿಯನ್ನು ಮುಚ್ಚಿಸಿದ. ಆದರೆ ಒಂದು ದಿಣ್ಣೆ ಉಳಿಯಿತು. ಜನರು ಅವನಿಗೆ ವಾಸದೇವ ತೆಂಗ್ (ದಿಣ್ಣೆ) ಎಂದು ಹೆಸರಿಟ್ಟರು. ಬೇಸತ್ತ ಅವನು ಸಾಯಲಿ ಎಂದು ಬಿಟ್ಟುಬಿಟ್ಟ. ತೆಂಗ್ ಕುಟುಂಬನಾಮ ಇಂದಿಗೂ ಉಳಿದಿದೆ.

ಈ ಕಾಶ್ಮೀರಿ ಹೆಸರುಗಳ ಪುರಾಣವು ಅಲ್ಲಿನ ಜನರ ಸಾಮಾಜಿಕ, ಸಾಂಸ್ಕೃತಿಕ ಮಿಳಿತ ಮತ್ತು ಸೌಹಾರ್ದ, ಸಹಬಾಳ್ವೆಯ ತಲೆತಲಾಂತರಗಳ ಸಮಾನ ಮೂಲ ಸ್ವಭಾವವನ್ನು ಸೂಚಿಸುತ್ತದೆ. ಆದರೆ, ಹಳೆಯ ಗಾಯಗಳನ್ನು ತುರಿಸಿ ತುರಿಸಿ ರಕ್ತ ಹರಿಯುವ ವೃಣವಾಗಿ ಇರಿಸಿಕೊಳ್ಳಲು ಬಯಸಿದವರಿಗೆ ಇವೆಲ್ಲವೂ ಕಾಣುವುದು ಕಷ್ಟ.

ಕೊನೆಯ ಮಾತು:
ಇಲ್ಲಿ ಒಂದನ್ನು ಬರೆಯಬೇಕೇ ಬೇಡವೆ ಎಂದು ಯೋಚಿಸುತ್ತೇನೆ. ಬರೆಯಬೇಕು. ದಾಖಲಿಸಬೇಕು. ಅದು ಪತ್ರಕರ್ತರ ಕೆಲಸ- ಎಷ್ಟು ಅಪ್ರಿಯವಾದರೂ ಸರಿ. “ಕಾಡು”, “ಭುಜಂಗಯ್ಯನ ದಶಾವತಾರಗಳು”, “ಸುಟ್ಟ ತಿಕದ ದೇವರು” ಬರೆದ ಶ್ರೀಕೃಷ್ಣ ಆಲನಹಳ್ಳಿ 40ನೇ ವಯಸ್ಸಲ್ಲಿ ತೀರಿಕೊಂಡರು. ನಾನು ಸ್ವತಃ ಕತೆಗಳ ಮನುಷ್ಯ. ಕಾವ್ಯಗಳ ಮನುಷ್ಯನಲ್ಲ. ಕೆಲವು ಸಲ ನನಗೇ ಇದು ಚೆನ್ನಾಗಿದೆ ಅನಿಸುವ ಒಂದೆರಡು ಕವನಗಳು ನನ್ನ ಎದೆಯಲ್ಲಿ ಹುಟ್ಟಿವೆ. ಆದರೆ, ಒಂದು ಕವನ ಅಥವಾ ಒಂದು ಸಾಲು ನನ್ನ ಎದೆಯ ಗೋಡೆಗೆ ಹಳೆಯ ಗಡಿಯಾದಂತೆ ಮೊಳೆ ಹೊಡೆದು ಕೂತುಬಿಟ್ಟು ಕಾಡಿಸುತ್ತದೆ. ಅದುವೇ: “ಪಾಪಿಯ ಹೂವಿಗೆ ಪಾಪದ ನೆರಳಿಲ್ಲ.”
ಇದು “ಲಂಕೇಶ್ ಪತ್ರಿಕೆ”ಯಲ್ಲಿ ಪ್ರಕಟವಾಯಿತೋ, ಬೇರೆಲ್ಲೋ ನನಗೆ ನೆನಪಿಲ್ಲ. ಇಲ್ಲಿ ಪಾಪಿಯ ಹೂವು ಯಾವುದು? ಪಾಪಿ ಯಾರು‌? ಬಹುಶಃ ನಾವೇ. ಇಲ್ಲಿ ಆಲನಹಳ್ಳಿ ಪಾಪಿಯ ಹೂ ಎಂದಿದ್ದೇ ಒಂದು ನಿಗೂಢ ವಿಷಯವಾಗಿತ್ತು. ಆ ಕವನವನ್ನು ಇಲ್ಲಿ ಉಲ್ಲೇಖಿಸಲು ಕಾರಣವೆಂದರೆ, ಅದು- ಅವರೇ ಬರೆದಿದ್ದಂತೆ ಕಾಶ್ಮೀರದ ಭೇಟಿಯ ನಂತರವಾಗಿತ್ತು  ಮೂರು ದಶಕಗಳ ನಂತರ ನನಗೆ ಅಚಾನಕ್ಕಾಗಿ ಒಂದು ಜ್ಞಾನೋದಯವಾಯಿತು. ಇವರು ಬರೆದ ಪಾಪಿ ಎಂಬುದು poppy- ಒಂದು ಮಾದಕ ಗಿಡ. ನಾವಿರುವ ಸಮಾಜದಲ್ಲಿ ಘಾತಕ ಗಿಡ. ಸುಂದರ ಕೆಂಪು ಹೂಗಳನ್ನು ಬಿಡುತ್ತದೆ. ಅದರಲ್ಲಾಗುವ ಕಾಯಿಯಿಂದ ಹೆರಾಯಿನ್ ಮುಂತಾದ ಹಲವು ಚಿನ್ನಕ್ಕಿಂತ ಹೆಚ್ಚು ಬೆಲೆ ಬಾಳುವ ಬಿಳಿ ವಸ್ತು ಹುಟ್ಟುತ್ತದೆ. ಎಳೆಯ ಜೀವನಗಳನ್ನು ನಾಶಪಡಿಸುತ್ತದೆ. ಅದರಿಂದ ಬರುವ ಹಣ ವಿಶ್ವದಲ್ಲೇ ಮೂರನೇ ಅತ್ಯಂತ ದೊಡ್ಡ ಬಿಸಿನೆಸ್ಸು. ಭಯೋತ್ಪಾದನೆಯ, ಭ್ರಷ್ಟಾಚಾರದ ಇಂಧನ.

ಆಲನಹಳ್ಳಿ ಬರೆದಿರುವುದು ಅದೇ. ಪಾಪಿ (poppy) ಗಿಡದ ವಿಷಯ. ನಿಮ್ಮ ಪಾಪದಲ್ಲಿ ಆ ಸುಂದರ ಕೆಂಪು ಹೂವಿನ ಪಾಲಿಲ್ಲ. ಹೂವಿಗೆ ಮುಗ್ಧತೆ, ಹುಟ್ಟುವ ಮಕ್ಕಳ ಘಾತಕತನ. ಇದನ್ನು ನಾನು ಆಲನಹಳ್ಳಿ ಗೌರವಾರ್ಥ ಬರೆದಾಗ ಅವರ ತೀರಾ ಹತ್ತಿರದ ಸಂಬಂಧಿ ನನ್ನ ಫೇಸ್ಬುಕ್ ಪೋಸ್ಟನ್ನು ಎತ್ತಿ ಹಾಕಿದ್ದರು. ನಾನು ಬರೆದದ್ದನ್ನು ಅವರೇ ಬರೆದಂತೆ ತೋರಿಸಿಕೊಂಡಿದ್ದರು. ಅಭಿಮಾನಿಗಳು ಹೊಗಳಿದಾಗಲೂ, ನಾನು ಬರೆದದ್ದಲ್ಲ; ಅವರು ಬರೆದದ್ದು ಎಂದು ಹೇಳಲಿಲ್ಲ. ನಾನೀಗ ಇಷ್ಟು ಹೇಳುತ್ತೇನೆ: ನಾನು ಪಾಪಿಯ ಹೂ. ನನಗೆ ಪಾಪದ ನೆರಳಿಲ್ಲ! ನೀವು!?

Related Articles

ಇತ್ತೀಚಿನ ಸುದ್ದಿಗಳು