Thursday, September 18, 2025

ಸತ್ಯ | ನ್ಯಾಯ |ಧರ್ಮ

ಕುರುಬ ಸಮುದಾಯವನ್ನು ಮತ್ತೆ ಎಸ್‌ಟಿ ಪಟ್ಟಿಗೆ ಸೇರಿಸಲು ಶಿಫಾರಸು: ಸಿಎಂ ಸಿದ್ದರಾಮಯ್ಯ ಘೋಷಣೆ

ಕಲಬುರಗಿ: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್ಟಿ) ಸೇರಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಈ ಹಿಂದೆ ತಮ್ಮ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೇಂದ್ರಕ್ಕೆ ಶಿಫಾರಸು ಮಾಡಲಾಗಿತ್ತು, ಆದರೆ ತಾಂತ್ರಿಕ ತೊಡಕುಗಳ ಕಾರಣದಿಂದ ಕಡತವು ಹಿಂದಕ್ಕೆ ಬಂದಿತ್ತು. ಈಗ ಕೇಂದ್ರ ಸರ್ಕಾರ ಕೇಳಿರುವ ಕೆಲವು ಸ್ಪಷ್ಟೀಕರಣಗಳನ್ನು ಸರಿಪಡಿಸಿ, ಪುನಃ ಕಡತವನ್ನು ಕಳುಹಿಸಲಾಗುವುದು ಎಂದು ಅವರು ತಿಳಿಸಿದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆ ಮಾಡುವ ಅಧಿಕಾರ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಇದೆ ಎಂದು ಪುನರುಚ್ಚರಿಸಿದರು.

ಶಿಕ್ಷಣದಿಂದ ಮಾತ್ರ ಸ್ವಾಭಿಮಾನ

ರಾಜ್ಯದಲ್ಲಿ ಶೇ. 7ರಷ್ಟಿರುವ ಕುರುಬ ಸಮುದಾಯವು ಅಕ್ಷರಸ್ಥರಾಗಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು. 1992ರಲ್ಲಿ ತಾವು ಚುನಾವಣೆಯಲ್ಲಿ ಸೋತ ನಂತರ ರಾಜ್ಯಾದ್ಯಂತ ಸುತ್ತಿ ಗುರುಪೀಠ ಮಠವನ್ನು ಕಟ್ಟಿದ್ದರ ಉದ್ದೇಶವೇನು ಎಂಬುದನ್ನು ಅವರು ವಿವರಿಸಿದರು. ಮಠಗಳಿಂದ ಶಿಕ್ಷಣ ಸಂಸ್ಥೆಗಳು ಪ್ರಾರಂಭವಾಗಿ ತಮ್ಮ ಜನಾಂಗವು ಶಿಕ್ಷಣವಂತರಾಗಲಿ ಎಂಬುದೇ ಮುಖ್ಯ ಗುರಿಯಾಗಿತ್ತು ಎಂದರು.

ಈ ಸಂದರ್ಭದಲ್ಲಿ ಕೆಲವು ಟೀಕಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು, “ಈಗ ಯಾರೋ ನಾವು ಮಠ ಕಟ್ಟಿದ್ದೇವೆ ಎಂದು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಅವರೆಲ್ಲ ಡೋಂಗಿಗಳು. ಅವರ ಮಾತನ್ನು ಕಿವಿಗೆ ಹಾಕಿಕೊಳ್ಳಬೇಡಿ. ನಾನು ನಿಮ್ಮ ಜತೆಯಲ್ಲಿ ಸದಾ ಇರುತ್ತೇನೆ,” ಎಂದು ಭರವಸೆ ನೀಡಿದರು.

“ನಾನು ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದೇನೆ. ಶಿಕ್ಷಣ ಪಡೆಯುವುದರಿಂದ ಸ್ವತಂತ್ರರಾಗುತ್ತೀರಿ, ಸ್ವಾಭಿಮಾನಿಗಳಾಗುತ್ತೀರಿ, ಮತ್ತು ನಿಮ್ಮ ಮೇಲೆ ನಡೆಯುವ ದೌರ್ಜನ್ಯವನ್ನು ಎದುರಿಸುವ ತಿಳುವಳಿಕೆ ಬರುತ್ತದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page