Saturday, June 22, 2024

ಸತ್ಯ | ನ್ಯಾಯ |ಧರ್ಮ

ಅನುಮತಿ ಇಲ್ಲದ ಕಾಲ್‌ ರೆಕಾರ್ಡ್‌ ‘ಖಾಸಗಿತನದ ಹಕ್ಕಿನʼ ಉಲ್ಲಂಘನೆ: ಛತ್ತೀಸ್‌ಗಢ ಹೈಕೋರ್ಟ್

ಬೆಂಗಳೂರು,ಅಕ್ಟೋಬರ್.‌14: ಇನ್ನೊಬ್ಬರ ಅನುಮತಿ ಇಲ್ಲದೆ ಫೋನ್‌ ಕರೆಯನ್ನು ರೆಕಾರ್ಡ್‌ ಮಾಡುವುದು ಸಂವಿಧಾನದ ಆರ್ಟಿಕಲ್‌ 21 ರ ಅಡಿಯಲ್ಲಿ ‘ಖಾಸಗಿತನದ ಹಕ್ಕಿನʼ ಉಲ್ಲಂಘನೆಯಾಗುತ್ತದೆ ಎಂದು ಛತ್ತೀಸ್‌ಗಢ ಹೈಕೋರ್ಟ್ ತೀರ್ಪು ನೀಡಿದೆ. ಫೋನ್‌ ರೆಕಾರ್ಡಿಂಗ್‌ ಒಂದನ್ನು ಸಾಕ್ಷಿಯಾಗಿ ಬಳಸಲು ಅನುಮತಿಯನ್ನು ನಿರಾಕರಿಸಿ ನ್ಯಾಯಾಲಯ ಈ ಅಭಿಪ್ರಾಯವನ್ನು ಪಟ್ಟಿದೆ. ಇದು ಅರ್ಜಿದಾರರ ಹಕ್ಕಿನ ಉಲ್ಲಂಘನೆಯಾಗಿದೆ ಎಂದಿದೆ.

CrPC ಯ ಸೆಕ್ಷನ್ 125 ರ ಅಡಿಯಲ್ಲಿ ಅರ್ಜಿದಾರರೊಬ್ಬರು (ಪತ್ನಿ) ಜೀವನಾಂಶಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಇದು 2019 ರಿಂದ ಮಹಾಸಮುಂದ್‌ನ ಕುಟುಂಬ ನ್ಯಾಯಾಲಯದಲ್ಲಿ ಬಾಕಿ ಉಳಿದಿತ್ತು.

ಪ್ರತಿವಾದಿ (ಪತಿ)CrPC ಸೆಕ್ಷನ್ 311 ರ ಅಡಿಯಲ್ಲಿ ಮತ್ತೆ ಅರ್ಜಿಯನ್ನು ಸಲ್ಲಿಸಿದ್ದರು. ಭಾರತೀಯ ಸಾಕ್ಷ್ಯ ಕಾಯ್ದೆಯ (Indian Evidence Act) ಸೆಕ್ಷನ್ 65-ಬಿ ಅಡಿಯಲ್ಲಿ ಫೋನ್‌ ರೆಕಾರ್ಡ್‌ ಜೊತೆಗೆ ಅರ್ಜಿದಾರರನ್ನು ಕ್ರಾಸ್‌ ಎಕ್ಸಾಮಿನೇಷನ್‌ ಮಾಡಲು ಅರ್ಜಿ ಹಾಕಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಪುರಸ್ಕರಿಸಿತ್ತು.

ಇದರಿಂದ ಅಸಮಧಾನಗೊಂಡ ಅರ್ಜಿದಾರರು ತನ್ನ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅಲ್ಲದೇ, ಅವರ ಪರ ವಕೀಲರು ಆರೋಪಗಳನ್ನು ಸಾಬೀತುಪಡಿಸುವುದಕ್ಕಾಗಿ ಸಾಕ್ಷ್ಯಗಳನ್ನು ಸೃಷ್ಟಿಸಲು ಈ ರೀತಿ ಅನುಮತಿ ಇಲ್ಲದೆ ಕಾಲ್‌ ರೆಕಾರ್ಡ್‌ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕೆಳ ನ್ಯಾಯಾಲಯದ ಆದೇಶದ ಕಾನೂನುಬದ್ಧತೆಯನ್ನು ತೀರ್ಮಾನಿಸಲು ಉಚ್ಚ ನ್ಯಾಯಾಲಯವು, People’s Union for Civil Liberties vs Union of India ಸೇರಿದಂತೆ ಸುಪ್ರೀಂ ಕೋರ್ಟ್ ನೀಡಿದ ಹಲವಾರು ತೀರ್ಪುಗಳನ್ನು ಗಮನಿಸಿದೆ.

ಈ ತೀರ್ಪಿನಲ್ಲಿ  “ದೂರವಾಣಿ ಸಂಭಾಷಣೆಯು ಮನುಷ್ಯನ ಖಾಸಗಿ ಜೀವನದ ಒಂದು ಪ್ರಮುಖ ಭಾಗ. ಖಾಸಗಿತನದ ಹಕ್ಕಿನಲ್ಲಿ ಒಬ್ಬರ ಮನೆ ಅಥವಾ ಕಚೇರಿಯ ದೂರವಾಣಿ ಸಂಭಾಷಣೆಗಳೂ ಬರುತ್ತವೆ. ಅನುಮತಿ ಇಲ್ಲದೆ ಫೋನ್-ಟ್ಯಾಪಿಂಗ್‌ ಮಾಡುವುದು ಭಾರತದ ಸಂವಿಧಾನದ 21 ನೇ ವಿಧಿಯ ಉಲ್ಲಂಘನೆ” ಎನ್ನಲಾಗಿದೆ.

ನ್ಯಾಯಾಲಯವು ಅಪೆಕ್ಸ್‌ ಕೋರ್ಟ್‌ನ  R.M. Malkani v. State of Maharashtra and Mr. ‘X’ vs Hospital ‘Z’ನ ತೀರ್ಪಿನಲ್ಲಿ ಬರುವ ಖಾಸಗಿತನದ ಹಕ್ಕಿನ ಬೇರೆ ಬೇರೆ ಅಂಶಗಳ ಚರ್ಚೆಗಳನ್ನೂ ಗಮನಿಸಿದೆ.

ಇಂತಹ ಮಧ್ಯಪ್ರದೇಶ ಹೈಕೋರ್ಟ್‌ನ  Arunima alias Abha Mehta vs Sunil Mehta ಆದೇಶವನ್ನೂ ಹೈಕೋರ್ಟ್‌ ಉಲ್ಲೇಖಿಸಿದೆ. “ಪತ್ನಿಗೆ ತಿಳಿಯದಂತೆ ಸಂಭಾಷಣೆಯನ್ನು ರೆಕಾರ್ಡ್ ಮಾಡಲಾಗಿದೆ. ಇದು ಆಕೆಯ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗಿದೆ. ಜೊತೆಗೆ, ಇದು ಭಾರತದ ಸಂವಿಧಾನದ 19 ಮತ್ತು 21ನೇ ವಿಧಿಯ ಉಲ್ಲಂಘನೆಯಾಗಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 72 ರ ಅಡಿಯಲ್ಲಿಯೂ ಇದು ಅಪರಾಧವಾಗಿದ್ದು, ಈ ರೀತಿ ಸಾಕ್ಷ್ಯಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ” ಎಂಬ ಮ.ಪ್ರ ಹೈಕೋರ್ಟ್‌ನ ಆದೇಶವನ್ನು ಕೋರ್ಟ್‌ ಉಲ್ಲೇಖಿಸಿದೆ.

ಹೀಗಾಗಿ ಪ್ರತಿವಾದಿ ಗಂಡನು ತನ್ನ ಪತ್ನಿಯ ಅನುಮತಿ ಇಲ್ಲದೇ ಫೋನ್‌ ಕಾಲ್‌ ರೆಕಾರ್ಡಿಂಗ್‌ ಮಾಡಿದ್ದಾನೆ. ಇದು ಆರ್ಟಿಕಲ್ 21 ರ ಅಡಿಯಲ್ಲಿ ಆಕೆಯ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗಿದೆ.

“ಇದಲ್ಲದೆ, ಖಾಸಗಿತನದ ಹಕ್ಕು ಸಂವಿಧಾನದ 21 ನೇ ವಿಧಿಯ ಜೀವಿಸುವ ಹಕ್ಕಿನ ಅತ್ಯಗತ್ಯ ಅಂಶವಾಗಿದೆ, ಆದ್ದರಿಂದ, ಈ ನ್ಯಾಯಾಲಯದ (ಹೈ ಕೋರ್ಟ್) ಅಭಿಪ್ರಾಯದಲ್ಲಿ, ಕುಟುಂಬ ನ್ಯಾಯಾಲಯವು CrPC ಸೆಕ್ಷನ್ 311, ಜೊತೆಗೆ ಭಾರತೀಯ ಸಾಕ್ಷಿ ಕಾಯಿದೆಯ ಸೆಕ್ಷನ್‌ 65ರ ಅಡಿಯಲ್ಲಿ ಅರ್ಜಿಯನ್ನು ಪರಿಗಣಿಸಿ ಕಾನೂನಿನ ದೋಷವನ್ನುಂಟು ಮಾಡಿದೆ” ಎಂದು ಛತ್ತೀಸ್‌ಗಢ ಹೈಕೋರ್ಟ್ ತೀರ್ಪು ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು