Friday, June 14, 2024

ಸತ್ಯ | ನ್ಯಾಯ |ಧರ್ಮ

ರಾಜೀವ್ ಗಾಂಧಿ ಹಂತಕರ ಬಿಡುಗಡೆ: ಶಿಕ್ಷೆಯಿಂದ ಮುಕ್ತಗೊಳಿಸಿರುವ ಸುಪ್ರೀಂ ಕೋರ್ಟ್‌ನ ಕ್ರಮ ‘ಸ್ವೀಕಾರಾರ್ಹವಲ್ಲ’ಎಂದ ಕಾಂಗ್ರೆಸ್

ಹೊಸದಿಲ್ಲಿ: ಮಾಜಿ ಪ್ರಧಾನಿ ಮತ್ತು ಕಾಂಗ್ರೆಸ್ ನಾಯಕ ರಾಜೀವ್ ಗಾಂಧಿ ಅವರ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಆರು ಜನ ಹಂತಕರನ್ನು ಬಿಡುಗಡೆ ಮಾಡುವ ತನ್ನ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಇಂದು ಪ್ರಕಟಿಸುತ್ತಿದ್ದಂತೆ, ಕಾಂಗ್ರೆಸ್ ಪಕ್ಷವು ಇದನ್ನು ʼದುರದೃಷ್ಟಕರʼ ಮತ್ತು ʼಸ್ವೀಕಾರಾರ್ಹವಲ್ಲʼ ಎಂದು ಅಸಮಧಾನ ವ್ಯಕ್ತಪಡಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್‌ ಸಂಸದ ಮತ್ತು ಸಂವಹನ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ರವರು, ʼಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಕೊಂದ ಹಂತಕರನ್ನು ಬಿಡುಗಡೆ ಮಾಡುವ ಸುಪ್ರೀಂ ಕೋರ್ಟ್‌ ನಿರ್ಧಾರವು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಹಾಗಾಗಿ ಕಾಂಗ್ರೆಸ್ ಪಕ್ಷವು ಇದನ್ನು ಸ್ಪಷ್ಟವಾಗಿ ಟೀಕಿಸುತ್ತದೆ ಮತ್ತು ಅದನ್ನು ಸಂಪೂರ್ಣವಾಗಿ ಅಸಮರ್ಥನೀಯವೆಂದು ಪರಿಗಣಿಸುತ್ತದೆʼಎಂದು ಹೇಳಿದರು.

ʼಸರ್ವೋಚ್ಚ ನ್ಯಾಯಾಲಯವು ಈ ವಿಷಯದಲ್ಲಿ ಭಾರತದ ಮನೋಭಾವಕ್ಕೆ ಅನುಗುಣವಾಗಿ ವರ್ತಿಸದಿರುವುದು ಅತ್ಯಂತ ದುರದೃಷ್ಟಕರ ಸಂಗತಿ ಎಂದು ಜೈರಾಮ್ ರಮೇಶ್ ಹೇಳಿದರು.

1991ರ ಮೇ 21ರಂದು ತಮಿಳುನಾಡಿನ ಶ್ರೀಪೆರಂಬುದೂರಿನಲ್ಲಿ, ನೆರೆಯ ಶ್ರೀಲಂಕಾದ ಲಿಬರೇಷನ್ ಟೈಗರ್ಸ್ ಆಫ್ ತಮಿಳ್ ಈಳಂ (ಎಲ್ಟಿಟಿಇ) ಗುಂಪಿನ ಮಹಿಳಾ ಆತ್ಮಹತ್ಯಾ ಬಾಂಬರ್ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಿದ್ದರು.

ನಳಿನಿ ಶ್ರೀಹರನ್ ಮತ್ತು ಇತರ ಐವರು ಅಪರಾಧಿಗಳನ್ನು ಸುಪ್ರೀಂ ಕೋರ್ಟ್ 33 ವರ್ಷಗಳ ಜೈಲುವಾಸದ ನಂತರ ಬಿಡುಗಡೆ ಮಾಡಿದೆ. ಇಂದು ಬಿಡುಗಡೆಯಾದ ಆರು ಮಂದಿಯಲ್ಲಿ ರಾಬರ್ಟ್ ಪಾಯಸ್, ಜಯಕುಮಾರ್ ಮತ್ತು ಮುರುಗನ್ ಶ್ರೀಲಂಕಾದ ಪ್ರಜೆಗಳು ಎಂದು ತಿಳಿದುಬಂದಿದೆ.

ಮೇ ತಿಂಗಳಲ್ಲಿ, ಸರ್ವೋಚ್ಚ ನ್ಯಾಯಾಲಯವು ತನ್ನ ಅಸಾಧಾರಣ ಅಧಿಕಾರಗಳನ್ನು ಬಳಸಿಕೊಂಡು ಪೆರಾರಿವಾಲನ್ ಎಂಬ ಏಳನೇ ಅಪರಾಧಿಯನ್ನು ಬಿಡುಗಡೆ ಮಾಡಿತು. ಇದೇ ಆದೇಶವು ಉಳಿದ ಅಪರಾಧಿಗಳಿಗೆ ಅನ್ವಯಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

2000ನೇ ಇಸವಿಯಲ್ಲಿ ರಾಜೀವ್ ಗಾಂಧಿ ಅವರ ಪತ್ನಿ ಹಾಗೂ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮಧ್ಯಪ್ರವೇಶದಿಂದ ನಳಿನಿ ಶ್ರೀಹರನ್ ಅವರ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಲಾಗಿತ್ತು. 2008 ರಲ್ಲಿ, ರಾಜೀವ್ ಗಾಂಧಿ ಅವರ ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ವೆಲ್ಲೂರು ಜೈಲಿನಲ್ಲಿ ಭೇಟಿಯಾದರು. ನಂತರ 2014ರಲ್ಲಿ ಇನ್ನೂ ಆರು ಅಪರಾಧಿಗಳ ಶಿಕ್ಷೆಯನ್ನು ಸಹ ಕಡಿತಗೊಳಿಸಲಾಯಿತು.

Related Articles

ಇತ್ತೀಚಿನ ಸುದ್ದಿಗಳು