ಚುನಾವಣಾ ಆಯುಕ್ತರ ಪದಚ್ಯುತಿ ಅಸಾಧ್ಯ!

“..ಚುನಾವಣಾ ಆಯುಕ್ತರು ಅಧಿಕಾರದಲ್ಲಿರುವಾಗಷ್ಟೇ ಅಲ್ಲಾ, ಅವರ ಜೀವನ ಪರ್ಯಂತ ಯಾವುದೇ ತನಿಖೆ ವಿಚಾರಣೆ ಮಾಡುವಂತಿಲ್ಲ, ಯಾವ ಮೊಕದ್ದಮೆಯನ್ನೂ ಹೂಡುವಂತಿಲ್ಲಾ ಎಂದು ಇದೇ ಬಿಜೆಪಿ ಸರಕಾರ 2023 ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದಿದೆ..” ಚಿಂತಕರಾದ ಶಶಿಕಾಂತ ಯಡಹಳ್ಳಿ ಅವರ ಬರಹದಲ್ಲಿ

ಮುಖ್ಯ ಚುನಾವಣಾ ಆಯುಕ್ತರಾದ ಜ್ಞಾನೇಶ ಕುಮಾರರವರಿಂದಾದ ಸಂವಿಧಾನ ವಿರೋಧಿ ಕೃತ್ಯಗಳಿಗಾಗಿ ಕೂಡಲೇ ರಾಜೀನಾಮೆ ಕೊಡಬೇಕೆಂಬ ಆಕ್ರೋಶ ದೇಶಾದ್ಯಂತ ವ್ಯಕ್ತವಾಗುತ್ತಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು, ಕಕ್ರೋಚ್ ಜನತಾ ಪಾರ್ಟಿ ವಕ್ತಾರರು, ಬಿಜೆಪಿಯೇತರ ಪಕ್ಷದ ನೇತಾರರು ಮುಖ್ಯ ಆಯುಕ್ತರ ರಾಜಿನಾಮೆಗೆ ಒತ್ತಾಯಿಸುತ್ತಿದ್ದಾರೆ. ಅವರನ್ನು ವಜಾ ಮಾಡಬೇಕು ಎನ್ನುವ ಆಕ್ರೋಶ ಹೆಚ್ಚುತ್ತಿದೆ.

ಆದರೆ ವಜಾ ಮಾಡುವವರು ಯಾರು? ಯಾಕೆಂದರೆ ಈ ಆಯುಕ್ತರು ಅಧಿಕಾರದಲ್ಲಿರುವಾಗಷ್ಟೇ ಅಲ್ಲಾ ಅವರ ಜೀವನ ಪರ್ಯಂತ ಯಾವುದೇ ತನಿಖೆ ವಿಚಾರಣೆ ಮಾಡದಂತೆ ಇದೇ ಬಿಜೆಪಿ ಸರಕಾರ 2023 ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದಿದೆ. ಯಾವ ನ್ಯಾಯಾಲಯದಲ್ಲೂ ಚುನಾವಣಾ ಆಯುಕ್ತರ ವಿರುದ್ದ ಯಾವ ಮೊಕದ್ದಮೆಯನ್ನೂ ಹೂಡುವಂತಿಲ್ಲಾ ಎಂದು ಕಾನುನಾತ್ಮಕ ರಕ್ಷಣೆಯನ್ನೂ ಕೊಟ್ಟಿದೆ. ಹೀಗಿರುವಾಗ ಆಯುಕ್ತರನ್ನು ವಜಾ ಮಾಡಲು, ಅವರ ಅಕ್ರಮಗಳ ವಿರುದ್ಧ ತನಿಖೆ ಮಾಡಲು ಕಾನೂನಿನಲ್ಲಿ ಅವಕಾಶವೇ ಇಲ್ಲವಾಗಿದೆ. ಆದರೂ ಮುಖ್ಯ ಆಯುಕ್ತರನ್ನು ವಜಾ ಮಾಡಿ ಎಂಬ ಕೂಗು ದೇಶಾದ್ಯಂತ ಮಾರ್ಧನಿಸುತ್ತಿದೆ.

ಈಗಾಗಲೇ ಇದೇ ಮುಖ್ಯ ಚುನಾವಣಾ ಆಯುಕ್ತರ ವಿರುದ್ದ ಲೋಕಸಭೆಯಲ್ಲಿ 2026. ಮಾರ್ಚ್ 12 ರಂದು ಭಾರತದ ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ಮಹಾಭಿಯಾನಕ್ಕೆ ವಿರೋಧ ಪಕ್ಷಗಳು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಹಾಭಿಯೋಗ (Impeachment) ನೋಟೀಸ್ ಸಲ್ಲಿಸಿದ್ದವು. ಈ ನೊಟೀಸಿಗೆ ಲೋಕಸಭೆಯಲ್ಲಿ 130 ಸಂಸದರು ಹಾಗೂ ರಾಜ್ಯಸಭೆಯಲ್ಲಿ 63 ಸಂಸದರು ಸಹಿ ಮಾಡಿದ್ದರು. ಮುಖ್ಯ ಚನಾವಣಾ ಆಯುಕ್ತರ ಮೇಲೆ ಏಳು ಪ್ರಮುಖ ಆರೋಪಗಳನ್ನು ಮಾಡಲಾಗಿತ್ತು. ಸಂವಿಧಾನದ ಆರ್ಟಿಕಲ್ 324 (5) ಮತ್ತು 124 (4) ಪ್ರಕಾರ ಚುನಾವಣಾ ಆಯುಕ್ತರನ್ನು ಸುಪ್ರಿಂ ಕೋರ್ಟ್ ನ್ಯಾಯಮೂರ್ತಿಗಳಂತೆ ತೆಗೆದು ಹಾಕಬಹುದಾಗಿತ್ತು. ಆದರೆ ಅಂತಹ ಮಹಾಭಿಯಾನ ಮಾಡಲು ಸಂಸತ್ತಿನಲ್ಲಿ ಮೂರನೇ ಎರಡು ಭಾಗ ಸಂಸದರ ಬೆಂಬಲ ಬೇಕಾಗುತ್ತದೆ. ಅದಿಲ್ಲದೇ ಇರುವುದರಿಂದ ಜ್ಞಾನೇಶರವರನ್ನು ಅಧಿಕಾರದಿಂದ ಅಲ್ಲಾಡಿಸಲೂ ಆಗಲಿಲ್ಲ. ಈಗ ಮತ್ತೆ ಅದೇ ಮುಖ್ಯ ಚುನಾವಣಾಧಿಕಾರಿಯ ವಿರುದ್ಧ ಮಹಾಭಿಯಾನ ನೋಟೀಸ್ ಜಾರಿ ಮಾಡಲು ವಿರೋಧ ಪಕ್ಷಗಳು ಮುಂದಾಗಿವೆಯಾದರೂ ಸಂಸತ್ತಿನಲ್ಲಿ ಮೂರನೇ ಎರಡು ಭಾಗ ಸಂಸದರು ಪ್ರತಿಪಕ್ಷದಲ್ಲಿಲ್ಲ. ಹೀಗಾಗಿ ಮತ್ತೆ ಮಹಾಭಿಯಾನಕ್ಕೆ ಸೋಲಾಗುವುದು ಶತಸಿದ್ದ.

ಪ್ರಧಾನ ಮಂತ್ರಿ ಅಷ್ಟೇ ಯಾಕೆ ರಾಷ್ಟ್ರಪತಿಗಳೂ ಕೂಡಾ ಚುನಾವಣಾ ಆಯುಕ್ತರನ್ನು ನೇರವಾಗಿ ವಜಾ ಮಾಡಲು ಸಾಧ್ಯವಿಲ್ಲ. ಲೋಕಸಭಾ ಮತ್ತು ರಾಜ್ಯಸಭೆಯಲ್ಲಿ 2/3 rd ಬಹುಮತ ಮಾತ್ರ ವಜಾ ಮಾಡಲು ಸಾಧ್ಯ. ಆರ್ಟಿಕಲ್ 324 ರ ಅಡಿಯಲ್ಲಿ ಸುಪ್ರಿಂ ಕೋರ್ಟ್ ನ್ಯಾಯಾಧೀಶರಿಗೆ ವದಗಿಸಲಾದ ಕಾನೂನಾತ್ಮಕ ರಕ್ಷಣೆಯನ್ನು ಸಂವಿಧಾನದ ತಿದ್ದುಪಡಿ ಮೂಲಕ ಚುನಾವಣಾ ಆಯುಕ್ತರಿಗೂ ಮೋದಿ ಸರಕಾರ ವದಗಿಸಿದೆ. ಹೀಗಾಗಿ ಯಾರು ಏನೇ ಮಾಡಿದರೂ ಜ್ಞಾನೇಶ ಕುಮಾರರನ್ನು ವಜಾ ಮಾಡುವುದು ಅಸಾಧ್ಯ.

ಆದರೆ ದೇಶಾದ್ಯಂತ ಜನಾಂದೋಲನ ಮಾಡುವ ಮೂಲಕ ಮೋದಿ ಸರಕಾರದ ಮೇಲೆ ಒತ್ತಡವನ್ನು ಹೇರಿ ಜ್ಞಾನೇಶರವರೇ ರಾಜೀನಾಮೆ ಕೊಡುವಂತೆ ಮಾಡಬಹುದಾಗಿದೆ. ಕಕ್ರೋಚ್ ಜನತಾ ಪಾರ್ಟಿಯ ಜೆನ್ ಜೀ ಯುವಜನತೆ ಹೋರಾಟದ ಮೂಲಕ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ ರಾಜೀನಾಮೆ ಕೊಡುವಂತೆ ಮಾಡಿದರು. ಈಗ ಅದೇ ಕಕ್ರೋಚ್ ಜನತಾ ಪಾರ್ಟಿಯು ಮುಖ್ಯ ಚುನಾವಣಾಧಿಕಾರಿಯ ರಾಜೀನಾಮೆಗೆ 48 ಗಂಟೆಯ ಸಮಯಾವಕಾಶ ನೀಡಿದೆ. ಕೊಡದೇ ಹೋದರೆ ದೇಶಾದ್ಯಂತ ಜನ್ ಜೀ ಹೋರಾಟ ಮಾಡುವುದಾಗಿ ನಿರ್ಧರಿಸಲಾಗಿದೆ. ದೇಶಾದ್ಯಂತ ಜನರ ಹೋರಾಟ ತೀವ್ರವಾದರೆ ಮಾತ್ರ ಜ್ಞಾನೇಶ ಕುಮಾರರ ರಾಜೀನಾಮೆ ಪಡೆಯಲು ಸಾಧ್ಯ?

ಈ ಸಾಧ್ಯತೆಯೇ ಈಗ ಗೋಚರಿಸುತ್ತಿದೆ. ಮೋದಿ ಶಾ ಜೋಡಿಗೆ ಈಗ ಜ್ಞಾನೇಶ ಕುಮಾರರ ಅಗತ್ಯ ಇಲ್ಲವಾಗಿದೆ. ಚುನಾವಣಾ ಆಯುಕ್ತರನ್ನು ಬಳಸಿಕೊಂಡು SIR ಮೂಲಕ ಹಲವಾರು ರಾಜ್ಯಗಳಲ್ಲಿ ಬಿಜೆಪಿ ಪಕ್ಷ ಆಡಳಿತದ ಚುಕ್ಕಾಣಿ ಹಿಡಿದಾಗಿದೆ. ಈಗ ಜನಾಕ್ರೋಶ ಹೆಚ್ಚಾದರೆ ಜ್ಞಾನೇಶರವರ ರಾಜೀನಾಮೆಯನ್ನೂ ಮೋದಿ ಪಡೆಯಬಹುದು. ಯುವ ಜನರ ಆಕ್ರೋಶಕ್ಕೆ ಹೆದರಿ ನೀಟ್ ಹಗರಣದಲ್ಲಿ ಧರ್ಮೇಂದ್ರ ಪ್ರಧಾನರವರ ರಾಜೀನಾಮೆ ಪಡೆದು ಆ ಜಾಗಕ್ಕೆ ಪ್ರಹ್ಲಾದ ಜ್ಯೋಶಿಯಂತಹ ಸಂಘಿಯನ್ನು ಮಂತ್ರಿಯನ್ನಾಗಿಸಿದ ಹಾಗೆ, ಜ್ಞಾನೇಶ ಕುಮಾರರ ಬದಲಾಗಿ ಮತ್ತೊಬ್ಬ ತಮ್ಮ ಆಜ್ಞಾವರ್ತಿಯನ್ನು ಮುಖ್ಯ ಚುನಾವಣಾ ಆಯುಕ್ತರನ್ನಾಗಿ ಮೋದಿ ನೇಮಕ ಮಾಡುವ ಮೂಲಕ ಈಗ ನಡೆಯುತ್ತಿರುವ SIR ಅನ್ನು ಪೂರ್ಣ ಗೊಳಿಸಬಹುದಾಗಿದೆ. ಅರ್ಹ ಮತದಾರರನ್ನು ಯಾವುಯಾವುದೊ ನೆಪದಲ್ಲಿ ಅನರ್ಹಗೊಳಿಸಬಹುದಾಗಿದೆ. ಕೇವಲ ಮುಖ್ಯ ಚುನಾವಣಾಧಿಕಾರಿ ಬದಲಾಗುತ್ತಾರೆಯೇ ಹೊರತು SIR ಪ್ರಕ್ರಿಯೆ ಅಲ್ಲಾ. ದೇಶಾದ್ಯಂತ ಅಧಿಕಾರ ದಕ್ಕಿಸಿಕೊಳ್ಳಲು ಬಿಜೆಪಿಯ ಓಟ್ ಚೋರಿ ಮುಂದುವರೆಯುತ್ತದೆ. ಸಂವಿಧಾನದ ಆಶಯಕ್ಕೆ ಹಿನ್ನೆಡೆಯಾಗುತ್ತದೆ.

Related Articles

ಇತ್ತೀಚಿನ ಸುದ್ದಿಗಳು