Saturday, July 12, 2025

ಸತ್ಯ | ನ್ಯಾಯ |ಧರ್ಮ

ಪವಿತ್ರಾ ಗೌಡಗೆ 200 ಕ್ಕೂ ಹೆಚ್ಚು ಅಸಭ್ಯ, ಅಶ್ಲೀಲ ಮೆಸೇಜ್ ಕಳಿಸಿದ್ದ ರೇಣುಕಾಸ್ವಾಮಿ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಈಗಾಗಲೇ ಸುಮಾರು 17 ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಕರಣದ ತನಿಖೆ ಬಹುತೇಕ ಪೂರ್ಣವಾಗುವ ಹಂತದಲ್ಲಿದ್ದು ಈ ನಡುವೆ ಕೊಲೆಯಾದ ರೇಣುಕಾಸ್ವಾಮಿ ವಿಚಾರವಾಗಿ ನಡೆದ ತನಿಖೆಯಲ್ಲಿ ಹಲವು ಉಲ್ಲೇಖಾರ್ಹ ಮತ್ತು ಆಶ್ಚರ್ಯಕರ ಅಂಶಗಳು ಹೊರಬಿದ್ದಿವೆ.

ಸುಮಾರು ಸಮಯದಿಂದ ಪವಿತ್ರಾ ಗೌಡರನ್ನು ಇನ್ಸ್ಟಾಗ್ರಾಮ್ (Instagram) ಮೂಲಕ ಫಾಲೋ ಮಾಡುತ್ತಿದ್ದ ರೇಣುಕಾಸ್ವಾಮಿ, ಕಳೆದ 5 ತಿಂಗಳಿನಿಂದ ನಿರಂತರ ಅಶ್ಲೀಲ ಮತ್ತು ಅಸಭ್ಯ ಸಂದೇಶಗಳನ್ನು ಕಳಿಸುತ್ತಿದ್ದ ಎಂದು ತನಿಖೆಯ ಮೂಲಕ ತಿಳಿದು ಬಂದಿದೆ. ಈವರೆಗೆ ಸುಮಾರು 200 ಕ್ಕೂ ಹೆಚ್ಚು ಇಂತಹ ಸಂದೇಶಗಳನ್ನು ರೇಣುಕಾಸ್ವಾಮಿ ಕಳಿಸಿದ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಈ ನಡುವೆ ಕೊಲೆಯಾದ ರೇಣುಕಾಸ್ವಾಮಿ ಕಡೆಯ ಎಲ್ಲಾ ಸಾಕ್ಷ್ಯ ಸಾಕ್ಷ್ಯನಾಶಪಡಿಸುವ ಉದ್ದೇಶದಿಂದ ಆರೋಪಿಗಳು, ರೇಣುಕಾಸ್ವಾಮಿಗೆ ಸೇರಿದ ಮೊಬೈಲ್ ಅನ್ನು ಸುಮನಹಳ್ಳಿಯ ಸತ್ವ ಅನುಗ್ರಹ ಅಪಾರ್ಟ್‌ಮೆಂಟ್ ಬಳಿಯ ರಾಜಕಾಲುವೆಗೆ ಎಸೆದಿದ್ದರು. ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದ ವೇಳೆ ಪೌರ ಕಾರ್ಮಿಕರನ್ನು ಬಳಸಿ ಮೊಬೈಲ್‌ಗಾಗಿ ಶೋಧ ನಡೆಸಲಾಗಿತ್ತು. ಅಲ್ಲದೇ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ನಡೆಸಿದ್ದರು. ಆದರೂ ಮೊಬೈಲ್ ಇನ್ನೂ ಪತ್ತೆಯಾಗಿಲ್ಲ.

‘ನ್ಯಾಯಾಲಯದ ಅನುಮತಿ ಪಡೆದು ಕೊಲೆಯಾದ ರೇಣುಕಾಸ್ವಾಮಿ ಬಳಸುತ್ತಿದ್ದ ನಂಬರ್‌ನಲ್ಲಿ ಮತ್ತೊಂದು ಸಿಮ್ ಖರೀದಿಸಿ ತನಿಖೆ ನಡೆಸಲಾಗುತ್ತಿದೆ. ಕೊಲೆಯಾದ ವ್ಯಕ್ತಿ ಯಾವ್ಯಾವ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದರು ಎಂಬುದನ್ನೂ ಪತ್ತೆ ಹಚ್ಚಲಾಗುತ್ತಿದೆ. ಇದೊಂದು ಸೂಕ್ಷ್ಮ ಪ್ರಕರಣವಾಗಿದ್ದು, ಎಲ್ಲ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಆರಂಭದಲ್ಲಿ ರೇಣುಕಸ್ವಾಮಿ ಅವರು ಸಾಮಾನ್ಯ ಚಾಟಿಂಗ್ ನಡೆಸಿದ್ದಾರೆ. ನಂತರ, ಕೆಲವು ಅಶ್ಲೀಲ ಸಂದೇಶ ಕಳುಹಿಸಿದ್ದಾರೆ. ಇದಕ್ಕೆ ಪವಿತ್ರಾಗೌಡ ಪ್ರತಿಕ್ರಿಯಿಸಿರಲಿಲ್ಲ. ನಂತರ, 200ಕ್ಕೂ ಹೆಚ್ಚು ಸಂದೇಶ ಕಳುಹಿಸಿದ್ದರು. ಜತೆಗೆ ಅಶ್ಲೀಲ ಚಿತ್ರಗಳನ್ನೂ ಕಳುಹಿಸಿದ್ದರು. ಆಗ ಪವಿತ್ರಾಗೌಡ ಅವರು ಆ ಅಕೌಂಟ್ ಬ್ಲಾಕ್ ಮಾಡಿದ ನಂತರವೂ ಬೇರೊಂದು ಅಕೌಂಟ್ ನಿಂದಲೂ ಇದೇ ಮುಂದುವರೆದಿದೆ.’ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಆ ನಂತರವೇ ಪವಿತ್ರಾ ಗೌಡ ಈ ವಿಚಾರವನ್ನು ತಮ್ಮ ವ್ಯವಸ್ಥಾಪಕ ಪವನ್‌ಗೆ ತಿಳಿಸಿದ್ದರು. ಪವನ್ ಅವರು ದರ್ಶನ್‌ಗೆ ಹೇಳಿದ್ದರು’ ಎಂದು ತನಿಖಾಧಿಕಾರಿ ಒಬ್ಬರು ಮಾಹಿತಿ ನೀಡಿದ್ದಾರೆ. ಕೆಲವೇ ದಿನಗಳ ಬಳಿಕ ಪವನ್ ಅವರು ನಟ ದರ್ಶನ್ ಗೆ ಈ ಮಾಹಿತಿ ತಿಳಿಸಿದ ನಂತರ ರೇಣುಕಾಸ್ವಾಮಿ ಅವರನ್ನು ಕರೆತರಲು ಜಾಲ ಹೆಣೆದಿದ್ದಾರೆ ಎಂದು ಸಧ್ಯದ ಮಾಹಿತಿ ಲಭ್ಯವಾಗಿದೆ.

‘ಪವಿತ್ರಾಗೌಡ ಅವರು ಖಾತೆಯನ್ನು ಬ್ಲಾಕ್ ಮಾಡಿದ ಬಳಿಕ ಕೊಲೆಯಾದ ವ್ಯಕ್ತಿ ನಕಲಿ ಖಾತೆ ತೆರೆದು ಸಂದೇಶ ಕಳುಹಿಸಿರುವುದು ಪತ್ತೆಯಾಗಿದೆ. ಪವಿತ್ರಾ ಅವರ ಮೊಬೈಲ್ ಅನ್ನು ಜಪ್ತಿ ಮಾಡಿಕೊಂಡು ತನಿಖೆ ನಡೆಸಲಾಗುತ್ತಿದ್ದು, ಪ್ರಕರಣ ಸಂಬಂಧ ಕೆಲವು ಮಹತ್ವದ ಮಾಹಿತಿ ಸಂಗ.ಹಿಸಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಧ್ಯ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡ ಬಹುತೇಕ ತನಿಖೆ ಪೂರ್ಣಗೊಳಿಸುವ ಹಂತದಲ್ಲಿದೆ ಎಂದು ತಿಳಿದು ಬಂದಿದೆ. ಕೆಲವು ಅಗತ್ಯ ಸಾಕ್ಷ್ಯಗಳನ್ನು ಕಲೆ ಹಾಕಿದ ನಂತರ ಎಲ್ಲಾ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page