ದೆಹಲಿ: ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದುವರಿದವರು ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದ್ದರೂ, ಕೆಳಹಂತದ ಸ್ಥಳೀಯ ಸಂಸ್ಥೆಗಳಲ್ಲಿ ಕಡಿಮೆ ಪ್ರಾತಿನಿಧ್ಯ ಹೊಂದಿರುವ ಬ್ರಾಹ್ಮಣರನ್ನು ‘ರಾಜಕೀಯವಾಗಿ ಹಿಂದುಳಿದ ವರ್ಗಗಳು’ (ಪಿಬಿಸಿ) ಎಂದು ವರ್ಗೀಕರಿಸಿ, ಪಂಚಾಯತ್ ಕ್ಷೇತ್ರಗಳಲ್ಲಿ ಮೀಸಲಾತಿ ನೀಡಬೇಕೇ ಎಂಬುವುದರ ಕುರಿತು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.
ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರ ಮೂಲಕ ‘ಯೂತ್ ಫಾರ್ ಈಕ್ವಾಲಿಟಿ ಫೌಂಡೇಶನ್’ ಎಂಬ ಸ್ವಯಂ ಸೇವಾ ಸಂಸ್ಥೆ ಸಲ್ಲಿಸಿದ ಅರ್ಜಿಯ ಮೇರೆಗೆ, ಸಿಜೆಐ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಸ್ಟಿಸ್ ಆರ್. ಮಹದೇವನ್ ಮತ್ತು ಜಸ್ಟಿಸ್ ಜೋಯ್‌ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಈ ಪ್ರಶ್ನೆಯನ್ನು ಅಧ್ಯಯನ ಮಾಡಲು ಒಪ್ಪಿಕೊಂಡಿದೆ.
‘ಮೀಸಲಾತಿಗಾಗಿ ಮತಾಂತರವೇ?’
ದೆಹಲಿ: ಹಿಂದೂ ಮೇಲ್ಜಾತಿಯ ವ್ಯಕ್ತಿಯೊಬ್ಬರು ಬೌದ್ಧ ಧರ್ಮಕ್ಕೆ ಮತಾಂತರಗೊಂಡು ತಮಗೆ ಅಲ್ಪಸಂಖ್ಯಾತ ಮೀಸಲಾತಿ ನೀಡಬೇಕೆಂದು ಕೋರಿರುವುದಕ್ಕೆ ಸುಪ್ರೀಂ ಕೋರ್ಟ್ ಬುಧವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇದೊಂದು ಹೊಸ ಬಗೆಯ ವಂಚನೆ (ಮೋಸ) ಎಂದು ಸಿಜೆಐ ನೇತೃತ್ವದ ಪೀಠ ಟೀಕಿಸಿದೆ.
ಅಲ್ಪಸಂಖ್ಯಾತ ಅಭ್ಯರ್ಥಿಯಾಗಿರುವ ತಮಗೆ ಪ್ರವೇಶ (ಅಡ್ಮಿಷನ್) ನೀಡಬೇಕೆಂದು ಕೋರಿ ನಿಖಿಲ್ ಕುಮಾರ್ ಪುನಿಯಾ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸಿತು. ‘ಪುನಿಯಾ’ ಎಂಬ ಹೆಸರಿಟ್ಟುಕೊಂಡಿರುವ ನೀವು ಅಲ್ಪಸಂಖ್ಯಾತರು ಹೇಗಾಗುತ್ತೀರಿ? ಎಂದು ಪೀಠ ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಪುನಿಯಾ ಪರ ವಕೀಲರು, ತಾನು ಜಾಟ್ ಪುನಿಯಾ ಆಗಿದ್ದು, ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದೇನೆ ಮತ್ತು ಅದು ತನ್ನ ಹಕ್ಕು ಎಂದು ವಾದಿಸಿದರು. ಇದೊಂದು ಹೊಸ ಬಗೆಯ ವಂಚನೆ ಎಂದು ಸಿಜೆಐ ಸೂರ್ಯಕಾಂತ್ ವ್ಯಾಖ್ಯಾನಿಸಿದರು.
