ಹಾಸನ: ಸಂವಿಧಾನದ ಮೌಲ್ಯಗಳನ್ನು ಅರ್ಥಮಾಡಿಕೊಂಡರೆ ಭಾರತ ವಿಶ್ವಕ್ಕೆ ದಾರಿ ತೋರಿಸುತ್ತದೆ. ಆದರೇ ಸಂವಿಧಾನದ ಭಾವನಾತ್ಮಕ ಅರ್ಥವನ್ನು ಅಳವಡಿಸಿಕೊಳ್ಳುವಲ್ಲಿ ದೇಶ ಹಾಗೂ ರಾಜ್ಯದ ರಾಜಕಾರಣಿಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲವೆಂದು ಶಾಸಕ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಅವರು ಬೇಸರ ವ್ಯಕ್ತಪಡಿಸಿದರು.
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ವಾಭಿಮಾನಿ ಪ್ರೊ. ಬಿ. ಕೃಷ್ಣಪ್ಪ ಬಣ, ರಾಜ್ಯ ಸಮಿತಿ ಬೆಂಗಳೂರು ವತಿಯಿಂದ ಶುಕ್ರವಾರದಂದು ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ವಿಚಾರಸಂಕಿರಣವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಶೋಷಿತ ವರ್ಗಗಳ ಪರವಾಗಿ ಹೋರಾಟ ನಡೆಸುವ ಮೂಲಕ ಇತಿಹಾಸದ ಹೊಸ ಅಧ್ಯಾಯವನ್ನು ರಚಿಸುತ್ತಿರುವವರು ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಜಸ್ಟಿಸ್ ನಾಗಮೋಹನ್ ದಾಸ್ ಎಂದು ಶ್ಲಾಘಿಸಿದರು. ಶತಶತಮಾನಗಳಿಂದ ಸಮಾಜದಲ್ಲಿ ನಡೆಯುತ್ತಿರುವ ಶೋಷಣೆ ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲಿಯೂ ಮುಂದುವರಿದಿರುವುದು ಅತ್ಯಂತ ದುಃಖಕರ ಸಂಗತಿ ಎಂದರು. ಸಮಾಜವು ಅಭಿವೃದ್ಧಿಯ ಶಿಖರ ತಲುಪುತ್ತಿದ್ದರೂ “ನಾವು ಇನ್ನೂ ಶೋಷಿತರಾಗಿದ್ದೇವೆ” ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡುತ್ತಿರುವುದು ಗಂಭೀರ ಚಿಂತನೆಯ ವಿಷಯವಾಗಿದೆ ಎಂದರು. ಇದು ಕೇವಲ ದಲಿತ ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ಜಾತಿ ವ್ಯವಸ್ಥೆಯೊಳಗೆ ಇರುವ ಹಲವಾರು ವರ್ಗಗಳು ಒಂದಿಲ್ಲೊಂದು ರೀತಿಯಲ್ಲಿ ಅನ್ಯಾಯ ಮತ್ತು ಸಂಕಷ್ಟ ಅನುಭವಿಸುತ್ತಿವೆ. ಇಂತಹ ಅಸಮಾನತೆಯನ್ನು ನಿವಾರಿಸಲು ಬಸವಣ್ಣನವರು ತಮ್ಮ ಕಾಲದಲ್ಲೇ ಸಾಮಾಜಿಕ ಕ್ರಾಂತಿಯ ಬೀಜ ಬಿತ್ತಿದರು. ಅದೇ ರೀತಿಯಾಗಿ ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಭಾರತದ ಸಂವಿಧಾನವು ಜಾತ್ಯಾತೀತ, ಸಮಾನತೆ ಆಧಾರಿತ ರಾಷ್ಟ್ರದ ಭವ್ಯ ಕನಸಿಗೆ ಸ್ಪಷ್ಟ ದಾರಿದೀಪವಾಗಿದೆ. ಆದರೆ ಸಂವಿಧಾನದ ಭಾವನಾತ್ಮಕ ಅರ್ಥವನ್ನು ಅಳವಡಿಸಿಕೊಳ್ಳುವಲ್ಲಿ ದೇಶ ಹಾಗೂ ರಾಜ್ಯದ ರಾಜಕಾರಣಿಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲವೆಂದು ಅವರು ಬೇಸರ ವ್ಯಕ್ತಪಡಿಸಿದರು. ಶೋಷಿತ ಸಮುದಾಯಗಳಿಗೆ ನಿಜವಾದ ಸಮಾನತೆ ದೊರಕಿಸುವಲ್ಲಿ ತೇಪೆ ಹಾಕುವ ರಾಜಕಾರಣ ನಡೆಯುತ್ತಿದೆ. ಭಗವಂತ ನೀಡಿರುವ ಮಾನವ ಸಂಪತ್ತನ್ನು ಹೇಗೆ ಸದ್ಬಳಕೆ ಮಾಡಬೇಕು ಎಂಬುದರ ಬಗ್ಗೆ ಸರಕಾರಗಳು ಗಂಭೀರವಾಗಿ ಯೋಚಿಸಬೇಕಾಗಿದೆ. ಶೋಷಿತ ವರ್ಗಗಳನ್ನು ಮೇಲಕ್ಕೆತ್ತುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಮಾತ್ರ ಸಮಾಜದ ಸಮಗ್ರ ಸುಧಾರಣೆ ಸಾಧ್ಯ ಎಂದು ಅವರು ಸಲಹೆ ನೀಡಿದರು. ಅಂಬೇಡ್ಕರ್ ಬರೆದ ಸಂವಿಧಾನದ ತಿರುಳನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಭಾರತ ಇಡೀ ವಿಶ್ವದಲ್ಲಿ ಎದೆತಟ್ಟಿ ಮಾತನಾಡುವ ಸ್ಥಿತಿಗೆ ಬರಬಹುದು. ಅಂಥ ಸುಭದ್ರ ಮತ್ತು ಸಮೃದ್ಧ ಭಾರತ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಹೇಳಿದರು.
ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಜಸ್ಟಿಸ್ ನಾಗಮೋಹನ್ ದಾಸ್ ಅವರು ವಿಚಾರ ಮಂಡನೆಯಲ್ಲಿ ಮಾತನಾಡಿ, ಇಂದಿಗೂ ಮೀಸಲಾತಿ ವಿಚಾರದಲ್ಲಿ ಗೊಂದಲಗಳು ಮುಂದುವರಿದಿವೆ ಎಂದು ತಿಳಿಸಿದರು. ಜಾತಿ ಅಸಮಾನತೆ ಇರುವವರೆಗೆ ಮೀಸಲಾತಿ ಅನಿವಾರ್ಯವಾಗಿದ್ದು, ಅಸಮಾನತೆ ಸಂಪೂರ್ಣವಾಗಿ ತೊಲಗಿದ ದಿನವೇ ಮೀಸಲಾತಿ ಅಗತ್ಯವಿಲ್ಲ ಎಂದು ಹೇಳಿದರು. ಕರ್ನಾಟಕದಲ್ಲಿ ಒಳಮೀಸಲಾತಿ ಜಾರಿಗೆ ತಂದಿರುವುದನ್ನು ಸ್ವಾಗತಿಸಿದ ಅವರು, ಕೇಂದ್ರ ಸರ್ಕಾರದಲ್ಲಿ ಈ ವಿಷಯದಲ್ಲಿ ನ್ಯಾಯ ದೊರಕಿಲ್ಲವೆಂದು ಅಭಿಪ್ರಾಯಪಟ್ಟರು. ಜೊತೆಗೆ ಅಲೆಮಾರಿ ಸಮುದಾಯಗಳ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿ, ಅವರಿಗೆ ಕೂಡ ಸಮಾನ ಅವಕಾಶ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು. ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿ ಮತ್ತು ಸಮಾನ ಅನುಷ್ಠಾನದ ಪ್ರಶ್ನೆ ದೊಡ್ಡ ಚರ್ಚೆಯ ವಿಷಯವಾಗಿದೆ. ಅನೇಕ ದೊಡ್ಡ ಖಾಸಗಿ ಕಂಪನಿಗಳಲ್ಲಿ ನಿರ್ದಿಷ್ಟ ಜಾತಿಯವರೇ ಹೆಚ್ಚಾಗಿ ನೇಮಕವಾಗುತ್ತಿರುವುದು ಸಮಾನತೆಗೆ ವಿರುದ್ಧವಾಗಿದೆ ಎಂದು ಅವರು ಹೇಳಿದರು. ಸರ್ಕಾರದಿಂದ ಎಲ್ಲಾ ಸೌಲಭ್ಯಗಳನ್ನು ಪಡೆಯುವ ಖಾಸಗಿ ವಲಯಕ್ಕೂ ಸಂವಿಧಾನದ ಮೌಲ್ಯಗಳನ್ನು ಪಾಲಿಸುವ ಜವಾಬ್ದಾರಿ ಇದೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಈ ಕಾಲದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಉದ್ಯೋಗ ಕ್ಷೇತ್ರದಲ್ಲಿ ಹೊಸ ಸವಾಲುಗಳನ್ನು ಸೃಷ್ಟಿಸುತ್ತಿದೆ. ಇಂತಹ ಸಂದರ್ಭದಲ್ಲಿ ಯುವಜನತೆಗೆ ಒಳ್ಳೆಯ ಗುರಿ, ಶಿಸ್ತು ಹಾಗೂ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸಬೇಕಾಗಿದೆ. ನಮ್ಮ ಅನುಭವ ಹಾಗೂ ತಿಳುವಳಿಕೆಯನ್ನು ಮುಂದಿನ ಪೀಳಿಗೆಗೆ ಹಂಚುವ ಮೂಲಕ ಮಕ್ಕಳನ್ನು ಭವಿಷ್ಯಕ್ಕೆ ಸಿದ್ಧಪಡಿಸಬೇಕೆಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಎಂ. ಸೋಮಶೇಖರ್, ರಾಜ್ಯ ಸಂಘಟನಾ ಸಂಚಾಲಕ ಅಂದಾನಿ ಸೋಮನಹಳ್ಳಿ, ದಾವಣಗೆರೆಯ ಹೆಗ್ಗೆರೆ ರಂಗಪ್ಪ, ಜಿಲ್ಲಾ ಸಂಚಾಲಕ ವಳಲಹಳ್ಳಿ ವೀರೇಶ್, ಮಂಗಳೂರು ರಾಜ್ಯ ಸಂಚಾಲಕ ಎಂ. ದೇವದಾಸ್, ಮಾದಿಗ ದಂಡೋರ ರಾಜ್ಯ ಸಮಿತಿಯ ಟಿ.ಆರ್. ವಿಜಯ್ ಕುಮಾರ್, ಹುಡಾ ಮಾಜಿ ಅಧ್ಯಕ್ಷ ಹೆಚ್.ಆರ್. ಕೃಷ್ಣಕುಮಾರ್, ಕೋಲಾರ ರಾಜ್ಯ ಸಂಚಾಲಕ ವಿ. ನಾರಾಯಣಸ್ವಾಮಿ, ರಾಜ್ಯ ಸಂಚಾಲಕಿ ಭಾಗ್ಯಮ್ಮ ನಾರಾಯಣಸ್ವಾಮಿ, ದಲಿತ ಹಿರಿಯ ಮುಖಂಡ ಹೆಚ್.ಕೆ. ಸಂದೇಶ್, ಆನೆಕಲ್ ಕೃಷ್ಣಪ್ಪ, ಬಿ.ಸಿ. ರಾಜೇಶ್, ಕಬ್ಬಳ್ಳಿ ಮೈಲಪ್ಪ ರಾಜಶೇಖರ್ ಹುಲಿಕಲ್, ಗೊರೂರು ರಾಜು, ದೇವಮ್ಮ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಮುಖಂಡರು, ಸಾಮಾಜಿಕ ಹೋರಾಟಗಾರರು ಮತ್ತು ಗಣ್ಯರು ಭಾಗವಹಿಸಿದ್ದರು. ಹೋಋಆಟದ ಹಾಡನ್ನು ಗಾಯಕ ಕುಮಾರ್ ಮತ್ತು ಅಚಿಜಲಿ ನಡೆಸಿಕೊಟ್ಟರು. ಸಾಮಾಜಿಕ ನ್ಯಾಯ, ಸಂವಿಧಾನ ಮೌಲ್ಯಗಳು, ಮೀಸಲಾತಿ ಹಾಗೂ ಭವಿಷ್ಯದ ಸವಾಲುಗಳ ಕುರಿತು ಗಂಭೀರ ಚರ್ಚೆ ನಡೆದಿದ್ದು, ಕಾರ್ಯಕ್ರಮವು ಹೆಚ್ಚಿನ ಸ್ಪಂದನೆ ಪಡೆದುಕೊಂಡಿತು.
