ದೆಹಲಿ: ಸಂವಿಧಾನದ 15(5) ನೇ ವಿಧಿಯ ಅಡಿಯಲ್ಲಿ ಖಾಸಗಿ ಮತ್ತು ಅಲ್ಪಸಂಖ್ಯಾತೇತರ ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ (ಒಬಿಸಿ) ವಿದ್ಯಾರ್ಥಿಗಳಿಗೆ ಮೀಸಲಾತಿ ಒದಗಿಸಬೇಕೆಂದು ಕಾಂಗ್ರೆಸ್ ಪಕ್ಷ ಸೋಮವಾರ ಒತ್ತಾಯಿಸಿದೆ.
ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಹೊರತುಪಡಿಸಿ, ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಈ ಸಮುದಾಯಗಳಿಗೆ ಮೀಸಲಾತಿ ಒದಗಿಸಲು ಸರ್ಕಾರವು ಕಾನೂನನ್ನು ಜಾರಿಗೆ ತರಬಹುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ವಿವರಿಸಿದರು.
2005 ರ 93 ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆಯ ಮೂಲಕ ಸೇರಿಸಲಾದ ಸಂವಿಧಾನದ 15(5) ನೇ ವಿಧಿಯು ಸರ್ಕಾರಕ್ಕೆ ಈ ಅಧಿಕಾರವನ್ನು ನೀಡಿದೆ ಎಂದು ಅವರು ಹೇಳಿದರು. ಸಂಬಂಧಿತ ಸಂಸದೀಯ ಸ್ಥಾಯಿ ಸಮಿತಿಯು ಸದರಿ ವಿಧಿಯ ಅಡಿಯಲ್ಲಿ ಹೊಸ ಕಾನೂನನ್ನು ತರಲು ಶಿಫಾರಸು ಮಾಡಿದೆ ಎಂದು ಅವರು ಹೇಳಿದರು.