ಮಾಗಡಿ (ಬೆಂಗಳೂರು ದಕ್ಷಿಣ): ಮಾಜಿ ಸಚಿವ ಎಚ್.ಎಂ. ರೇವಣ್ಣ ಅವರ ಪುತ್ರ ಶಶಾಂಕ್ ಅವರ ಒಡೆಯತನದ ಕಾರು ಡಿಕ್ಕಿಯಾಗಿ 27 ವರ್ಷದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಾಗಡಿ ತಾಲೂಕಿನ ಗುಡಿಮರನಹಳ್ಳಿ ಗ್ರಾಮದ ಬಳಿ ನಡೆದಿದೆ.
ಅಪಘಾತ ಇಂದು ಬೆಳಗ್ಗೆ ತಾನೇ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಗಡಿ ತಾಲೂಕಿನ ಬೆಳಗುಂಬ ಗ್ರಾಮದ ನಿವಾಸಿ ರಾಜೇಶ್ (27) ಮೃತ ಯುವಕ. KA–51–MQ–0555 ನಂಬರ್‌ನ ಕಾರು ಶಶಾಂಕ್ ಅವರ ಹೆಸರಿಗೆ ನೋಂದಾಯಿತವಾಗಿದ್ದು, ಘಟನೆ ನಡೆದ ವೇಳೆಯಲ್ಲಿ ಕಾರನ್ನು ಚಾಲನೆ ಮಾಡುತ್ತಿದ್ದವರು ಶಶಾಂಕ್ ಎಂಬ ಪ್ರಾಥಮಿಕ ಮಾಹಿತಿ ಹೊರಬಿದ್ದಿದೆ.
ಕಾರು ಮಾಗಡಿಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ವೇಳೆ, ಓವರ್‌ಟೇಕ್ ಮಾಡಲು ಪ್ರಯತ್ನಿಸುವಾಗ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ರಾಜೇಶ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಘಟನೆಯ ಕುರಿತು ಕುದುರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ನಂತರ ಮಾಜಿ ಸಚಿವ ಎಚ್.ಎಂ. ರೇವಣ್ಣ ಮಾಧ್ಯಮಗಳೊಂದಿಗೆ ಮಾತನಾಡಿ ಪ್ರತಿಕ್ರಿಯೆ ನೀಡಿದ್ದು,
“ನನ್ನ ಮಗನ ಕಾರು ಅಪಘಾತಕ್ಕೊಳಗಾಗಿರುವುದು ನಿಜ. ಆದರೆ ಕಾರು ಓಡಿಸುತ್ತಿದ್ದದ್ದು ನನ್ನ ಮಗನಲ್ಲ, ಡ್ರೈವರ್. ಕುಟುಂಬದವರ ಜೊತೆ ಮಾತನಾಡುತ್ತಿದ್ದೇನೆ. ಓವರ್‌ಟೇಕ್ ಮಾಡುವಾಗ ಅಪಘಾತ ಸಂಭವಿಸಿದೆ. ಮೃತ ಯುವಕನ ಕುಟುಂಬವನ್ನು ನಾನು ಪರಿಚಯವಿದೆ,” ಎಂದು ಸ್ಪಷ್ಟನೆ ನೀಡಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
