Wednesday, July 31, 2024

ಸತ್ಯ | ನ್ಯಾಯ |ಧರ್ಮ

ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಜೆಡಿಎಸ್ ವಿರುದ್ಧ ಕಂದಾಯ ಸಚಿವ ಕೃಷ್ಣಭೈರೇಗೌಡ ವಾಗ್ದಾಳಿ

ಹಾಸನ : ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ದೊಡ್ಡತಪ್ಲುವಿನಲ್ಲಿ ಕಂದಾಯ ಸಚಿವ ಕೃಷ್ಣಭೈರೇಗೌಡ ಬಿಜೆಪಿ ಜೆಡಿಎಸ್‌ ವಿರುದ್ಧ ವಾಗ್ದಾಳಿ ನಡೆಸಿದರು. ಮಾತನಾಡುತ್ತಾ “ಗೌರ್ನರ್‌ಗೆ ಅರ್ಜಿಗಳನ್ನು ಕೊಟ್ಟು ರಾಜ್ಯಪಾಲರಿಂದ ಸರ್ಕಾರಕ್ಕೆ ಪತ್ರಗಳನ್ನು ಬರೆಸಿ ಏನಾದರೂ ಮಾಡಿ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಯತ್ನಿಸುತ್ತಿದ್ದಾರೆ.ಜನಪ್ರಿಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರನ್ನು ಸಿಲುಕಿಸಿ ಸರ್ಕಾರ ಬುಡಮೇಲು ಮಾಡಲು ಹೊರಟಿದ್ದಾರೆ.

ನಮಗೂ ಸಂವಿಧಾನ ಇದೆ. ಈ ದೇಶದಲ್ಲಿ ಜನ ಸಂವಿಧಾನದ‌ ಪರವಾಗಿ ಮತ ಕೊಟ್ಟಿದ್ದಾರೆ. ಸಂವಿಧಾನದ ರಕ್ಷಣೆ ನಮಗೆ ಇದೆ.ರಾಜ್ಯಪಾಲರ ಕಚೇರಿಯನ್ನು ದುರುಪಯೋಗಪಡಿಸಿಕೊಂಡು ನಮ್ಮ ಸರ್ಕಾರವನ್ನು ಬುಡಮೇಲು ಮಾಡಲು ಹೋದರೆ ನಾವು ಕೋರ್ಟ್‌ಗೆ ಹೋಗಿ ಹೋರಾಟ ಮಾಡುತ್ತೇವೆ. ಹಲವು ರಾಜ್ಯಗಳಲ್ಲಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಗೌರ್ನರ್ ಕಚೇರಿ ದುರುಪಯೋಗ ಮಾಡಿ ನಮ್ಮ ಸರ್ಕಾರದ ಮೇಲೆ ಪಿತೂರಿ ಮಾಡಿದರೆ ನಾವು ಸುಪ್ರೀಂಕೋರ್ಟ್ ಮೆಟ್ಟಲಿಗೆ ಹೋಗ್ತೇವೆ” ಎಂದರು.ಅಷ್ಟೇ ಅಲ್ಲದೇ “ಪ್ರಜಾಪ್ರಭುತ್ವ ಉಳಿಸಲು ಬೀದಿಗಿಳಿದು ಹೋರಾಟ ಮಾಡುತ್ತೇವೆ” ಎಂದು ಎಚ್ಚರಿಕೆಯನ್ನು ನೀಡಿದರು.

ಹಾಗೆಯೇ “ಬಿಜೆಪಿಯವರು ಇವತ್ತು ಹತಾಶರಾಗಿದ್ದಾರೆ, ಜೆಡಿಎಸ್‌ನವರು ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ. ಜೆಡಿಎಸ್‌‌ನ ಒಬ್ಬರು, ಬಿಜೆಪಿಯ ಒಬ್ಬರು ದೆಹಲಿಯಲ್ಲಿ ಕುಳಿತುಕೊಂಡು ಕರ್ನಾಟಕಕ್ಕೆ ನ್ಯಾಯ ಕೊಡಿಸುವುದನ್ನು ಬಿಟ್ಟು ನಮ್ಮ ಸರ್ಕಾರ ಬೀಳಿಸಲು ಹೊಂಚು ಹಾಕುತ್ತಿದ್ದಾರೆ.ಕೇಂದ್ರದಲ್ಲಿ ಮಂತ್ರಿಯಾಗಿರುವವರು ಮೇಕೆದಾಟು, ಕಳಸಾಬಂಡೂರಿ ಯೋಜನೆಗೆ ದುಡ್ಡು ಕೊಡಿಸುವುದು ಬಿಟ್ಟು ಅಲ್ಲಿ ಕುಳಿತುಕೊಂಡು ನಮ್ಮ ಸರ್ಕಾರ ಬೀಳಿಸುವುದು ಹೇಗೆಂದು ಸ್ಕೆಚ್ ಹಾಕುತ್ತಿದ್ದಾರೆ. ನಾವು ಕೈಕಟ್ಟಿ ಕುಳಿತು ಕೊಳ್ಳುವುದಿಲ್ಲ, ಕಾನೂನಾತ್ಮಕ ಹೋರಾಟ ಮಾಡುತ್ತೇವೆ” ಎಂದು ಹೇಳಿದರು

ಎಲ್ಲಾ ಸವಾಲುಗಳನ್ನು ಎದುರಿಸಲು ಸಿದ್ಧರಿದ್ದೇವೆ ಎನ್ನುತ್ತಾ “ಅವರು ಏನು ಮಾಡ್ತಾರೆ ಮಾಡಲಿ ಈಗ ಅವರವರಲ್ಲೇ ಜಗಳ ಶುರುವಾಗಿದೆ.ಪ್ರಜಾಪ್ರಭುತ್ವ ಉಳಿಯಬೇಕು ಅದಕ್ಕಾಗಿ ಬೀದಿ ಹೋರಾಟ ಹಾಗೂ ಕಾನೂನಾತ್ಮಕ ಹೋರಾಟ ಮಾಡುತ್ತೇವೆ.ಈ ಸರ್ಕಾರ ಅಲ್ಲಾಡಿಸಬೇಕು ಎಂದು ಹಗಲುಗನಸು ಕಾಣುತ್ತಿದ್ದಾರೆ” ಎಂದು ಬಿಜೆಪಿ ಜೆಡಿಎಸ್‌ ನಾಯಕರನ್ನು ಕಿಚಾಯಿಸಿದರು.

ಮುಡಾ ವಿಚಾರವಾಗಿ ಮಾತನಾಡುತ್ತಾ “ಇ ಡಿ ಆಯ್ತು ಈಗ ರಾಜ್ಯಪಾಲರ ಕಚೇರಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಮುಡಾ ಹಗರಣದ ವಿರುದ್ಧ ಪಾದಯಾತ್ರೆ ವಿಚಾರಜನಗಳ ದೃಷ್ಟಿಯಲ್ಲಿ ಒಂದು ಕಲ್ಪನೆ ಕ್ರಿಯೇಟ್ ಮಾಡಲು ಎಲ್ಲಾ ಪಿತೂರಿ ಮಾಡುತ್ತಿದ್ದಾರೆ. ನಾವು ಆಯೋಗ ರಚನೆ ಮಾಡಿದ್ದೇವೆ ತನಿಖೆ ಮಾಡಲಿ. ಮೈಸೂರು ಮುಡಾದಲ್ಲಿ ಹೆಚ್ಚು ಸೈಟ್‌ಗಳನ್ನು ತೆಗೆದುಕೊಂಡಿರುವುದು ಬಿಜೆಪಿ, ಜೆಡಿಎಸ್‌ನವರು. ಸಾವಿರಾರು ಸೈಟ್‌ಗಳು, ಸಾವಿರಾರು ಬದಲಿ ಜಮೀನುಗಳನ್ನು ತೆಗೆದುಕೊಂಡಿದ್ದಾರೆ
ಅವರೇನೆ ಮಾಡಬಾರದ್ದು ಮಾಡಿ ನಮ್ಮ ಕಡೆಗೆ ಬೆರಳು ತೋರಿಸುತ್ತಿದ್ದಾರೆ. ಅವರ ಉದ್ದೇಶ ಯಾವ ಹಗರಣವೂ ಅಲ್ಲ, ತಪ್ಪಿತಸ್ಥರಿಗೆ ಶಿಕ್ಷೆ ಕೊಡುವುದು ಅಲ್ಲ, ಅವರಿಗೆ ಅಧಿಕಾರದ ದಾಹ” ಎಂದು ತಿರುಗೇಟು ನೀಡಿದರು.

“ಬಡವರ ಪರವಾಗಿ ಇರುವ ಕಾಂಗ್ರೆಸ್ ಸರ್ಕಾರವನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಏನಾದರೂ ಮಾಡಿ ಬಡವರ ಪರ ಇರುವ ಸರ್ಕಾರವನ್ನು ಬುಡಮೇಲು ಮಾಡಲು ಯತ್ನ ಮಾಡುತ್ತಿದ್ದಾರೆ ಇದು ಪಿತೂರಿಯ ಒಂದು ಭಾಗ ಅಷ್ಟೇ. ಎಂದರು.

“ವಾಲ್ಮೀಕಿ ಹಗರಣ ಮುಚ್ಚಿ ಹಾಕಿದರು ಎಂದು ಯತ್ನಾಳ್ ಅವರು ಹೇಳಿದ್ದಾರೆ. ಇನ್ನೊಂದು ಕಡೆ ಪಾದಯಾತ್ರೆ ಬೇಕಾಗಿಲ್ಲ ಎಂದು ಜೆಡಿಎಸ್‌ನವರು ಹೇಳುತ್ತಿದ್ದಾರೆ. ಏಕೆಂದರೆ ಅವರೇ ಹೆಚ್ಚು ಫಲಾನುಭವಿಗಳು, ತನಿಖೆ ಮಾಡಿದರೆ ಹೆಚ್ಚು ಹೊರಗೆ ಬರುವುದು ಅವರದ್ದೇ ತಪ್ಪಿತಸ್ಥರಿಗೆ ಶಿಕ್ಷೆ ಕೊಡಲು ನಮ್ಮ ಸರ್ಕಾರ ದೃಢವಾಗಿದೆ. ಆ ದಿಕ್ಕಿನಲ್ಲಿ ನಾವು ಕೆಲಸವನ್ನು ಮಾಡ್ತೇವೆ ಎಂದರು.

Related Articles

ಇತ್ತೀಚಿನ ಸುದ್ದಿಗಳು