ದೆಹಲಿ, ಜೂನ್ 25: ಮತದಾರರ ಪಟ್ಟಿಯಲ್ಲಿ ಅರ್ಹ ಭಾರತೀಯ ನಾಗರಿಕರು ಮಾತ್ರ ಸೇರಿರುವುದನ್ನು ಖಚಿತಪಡಿಸಿಕೊಳ್ಳಲು ದೇಶಾದ್ಯಂತ ಮತದಾರರ ಪಟ್ಟಿಗಳ ಸಮಗ್ರ ಪರಿಶೀಲನೆ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ.
ಈ ಉದ್ದೇಶಕ್ಕಾಗಿ ‘ಸ್ಪೆಷಲ್ ಇಂಟೆನ್ಸಿವ್ ರಿವಿಜನ್’ (SIR) ಕೈಗೊಳ್ಳುತ್ತಿರುವುದಾಗಿ ಚುನಾವಣಾ ಆಯೋಗ ಬುಧವಾರ ಘೋಷಿಸಿದೆ. SIR ಪ್ರಕ್ರಿಯೆಯ ಸಮಯದಲ್ಲಿ, ಬೂತ್ ಮಟ್ಟದ ಅಧಿಕಾರಿಗಳು ಮನೆ-ಮನೆ ಸಮೀಕ್ಷೆ ನಡೆಸಿ ಮತದಾರರ ಜನ್ಮ ಸ್ಥಳವನ್ನು ಪರಿಶೀಲಿಸುತ್ತಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
2003 ಲ್ಲಿ EC ನಡೆಸಿದ ಕೊನೆಯ SIRನಲ್ಲಿ ಇಲ್ಲದವರು, ವಿಶೇಷವಾಗಿ ಜುಲೈ 1, 1987ರ ಮೊದಲು ಜನಿಸಿದವರು, ಜನ್ಮ ಸ್ಥಳ ಮತ್ತು ಜನ್ಮ ದಿನಾಂಕದ ಪುರಾವೆಗಳನ್ನು ಸಲ್ಲಿಸಬೇಕಾಗುತ್ತದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಈ ವರ್ಷ ವಿಧಾನಸಭಾ ಚುನಾವಣೆಗಳು ನಡೆಯಲಿರುವ ಬಿಹಾರದಿಂದ SIR ಪ್ರಾರಂಭವಾಗಲಿದೆ ಮತ್ತು ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ನಡೆಸಲಾಗುವುದು ಎಂದು ಚುನಾವಣಾ ಆಯೋಗ ಘೋಷಿಸಿದೆ.
ಅದಾದ ನಂತರ ಇತರ ರಾಜ್ಯಗಳಲ್ಲಿಯೂ ನಡೆಸಲಾಗುವುದು ಎಂದು ಹೇಳಲಾಗಿದೆ. ಕಳೆದ ಕೆಲವು ವರ್ಷಗಳಿಂದ ಮತದಾರರ ಪಟ್ಟಿಯ ನಿಖರತೆಯ ಬಗ್ಗೆ ಅನುಮಾನಗಳು ಮತ್ತು ಕಳವಳಗಳಿವೆ. ಅದರಲ್ಲಿ ಅಕ್ರಮ ವಲಸಿಗರನ್ನು ಸೇರಿಸಲಾಗಿದೆ ಎಂಬ ಆರೋಪಗಳಿವೆ. ಈ ಸಂದರ್ಭದಲ್ಲಿ ‘SIR’ ನಡೆಸಲಾಗುವುದು ಎಂದು EC ತಿಳಿಸಿದೆ.