Friday, June 14, 2024

ಸತ್ಯ | ನ್ಯಾಯ |ಧರ್ಮ

ಅಕ್ಕಿ ನಿರಾಕರಣೆ | ಒಕ್ಕೂಟ ಸರಕಾರದ ಕುತಂತ್ರ

ರಾಜ್ಯಗಳು ಅನ್ನಭಾಗ್ಯದಂತಹ ಕಾರ್ಯಕ್ರಮಗಳನ್ನು ನಡೆಸುವಾಗ ಟೆಂಡರ್ ಇಲ್ಲದೆ ಅವುಗಳಿಗೆ ಆಹಾರ ಧಾನ್ಯವನ್ನು ಎಫ್ ಸಿ ಐ ಮಾರಾಟ ಮಾಡುತ್ತದೆ. ಈ ವಿಷಯದಲ್ಲಿ ಇದುವರೆಗೆ ಯಾವ ಸಮಸ್ಯೆಯಾಗಲೀ, ಸಂಘರ್ಷವಾಗಲೀ ಇರಲಿಲ್ಲ. ಆದರೆ ಈಗ ಈ ಎಫ್ ಸಿ ಐ ಸುದ್ದಿಗೆ ಕಾರಣವಾಗಿದ್ದು ‘ಅನ್ನಭಾಗ್ಯ’ ಯೋಜನೆಯನ್ನು ವಿಫಲಗೊಳಿಸಲು ಒಕ್ಕೂಟ ಸರಕಾರವು ಎಫ್ ಸಿ ಐ ಯನ್ನು ಬಳಸಿಕೊಂಡಾಗ- ಶ್ರೀನಿವಾಸ ಕಾರ್ಕಳ

ಎಫ್ ಸಿ ಐ (ಫುಡ್ ಕಾರ್ಪೋರೇಶನ್ ಆಫ್ ಇಂಡಿಯಾ) – ಇದು ಶಾಸನದ ಮೂಲಕ ರಚಿತವಾದ ಒಂದು ಸಂಸ್ಥೆ. ಭಾರತ ಸರಕಾರದ  ‘ಗ್ರಾಹಕ ವ್ಯವಹಾರ ಮತ್ತು ಆಹಾರ ಹಾಗೂ ಸಾರ್ವಜನಿಕ ವಿತರಣೆ’ ಸಚಿವಾಲಯದ ಅಡಿ ಬರುವ ಇದನ್ನು 1965 ರಲ್ಲಿ ಸ್ಥಾಪಿಸಲಾಗಿತ್ತು. ದೇಶದಲ್ಲಿ ಐದು ವಿಭಾಗೀಯ (ಝೋನಲ್) ಕಚೇರಿಗಳನ್ನು ಹೊಂದಿರುವ ಇದರ ಮುಖ್ಯ ಕೆಲಸ, ದೇಶದ ಆಹಾರ ಭದ್ರತೆ ಖಾತರಿಪಡಿಸುವುದು.

ಎಫ್ ಸಿ ಐ ದೇಶದ ರೈತರಿಂದ ಭತ್ತ ಮತ್ತು ಗೋಧಿಯನ್ನು ಖರೀದಿಸಿ ತನ್ನ ಡಿಪೋಗಳಲ್ಲಿ ಸಂಗ್ರಹಿಸಿಡುತ್ತದೆ. ಬರ, ನೈಸರ್ಗಿಕ ಆಪತ್ತುಗಳ ಸಂದರ್ಭದಲ್ಲಿ ದೇಶದ ಜನರು ಉಪವಾಸ ಬೀಳದಂತೆ ನೋಡಿಕೊಳ್ಳಲು ಬಫರ್ ದಾಸ್ತಾನು ಇರಿಸಿಕೊಂಡಿರುವ ಇದು, ಸರಕಾರದ ಯೋಜನೆಗಳಿಗೆ ಆಹಾರ ಧಾನ್ಯಗಳನ್ನು ಒದಗಿಸಿ, ಉಳಿದ ಭಾಗವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ.

ದೇಶದಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಆಡಳಿತ ಇದ್ದ 2013 ರಲ್ಲಿ ಆಹಾರ ಭದ್ರತಾ ಕಾಯಿದೆಯನ್ನು (NFS) ಜಾರಿಗೊಳಿಸಲಾಯಿತು. ಇದರ ಪ್ರಕಾರ ದೇಶದ ಬಿಪಿಎಲ್ ಕುಟುಂಬಗಳ ಪ್ರತೀ ಸದಸ್ಯರಿಗೆ ತಿಂಗಳಿಗೆ ಐದು ಕಿಲೋ ಅಕ್ಕಿ/ ಗೋಧಿಯನ್ನು ಉಚಿತವಾಗಿ ನೀಡಲಾಗುತ್ತಿದ್ದು, ಇದಕ್ಕೆ ಅಗತ್ಯವಿರುವ ಧಾನ್ಯವನ್ನು ಇದೇ ಎಫ್ ಸಿ ಐ ಒದಗಿಸುತ್ತದೆ. ಇದು ರಾಜ್ಯಗಳು ಅನ್ನಭಾಗ್ಯದಂತಹ ಕಾರ್ಯಕ್ರಮಗಳನ್ನು ನಡೆಸುವಾಗ ಟೆಂಡರ್ ಇಲ್ಲದೆ ಅವುಗಳಿಗೆ ಆಹಾರ ಧಾನ್ಯವನ್ನು ಮಾರಾಟ ಮಾಡುತ್ತದೆ. ಈ ವಿಷಯದಲ್ಲಿ ಇದುವರೆಗೆ ಯಾವ ಸಮಸ್ಯೆಯಾಗಲೀ, ಸಂಘರ್ಷವಾಗಲೀ ಇರಲಿಲ್ಲ. ಆದರೆ ಇತ್ತೀಚೆಗೆ ಈ ಎಫ್ ಸಿ ಐ ಸುದ್ದಿಗೆ ಕಾರಣವಾಗಿದ್ದು ಈಗಿನ ಕರ್ನಾಟಕ ಕಾಂಗ್ರೆಸ್ ಸರಕಾರದ ‘ಅನ್ನಭಾಗ್ಯ’ ಯೋಜನೆಯನ್ನು ವಿಫಲಗೊಳಿಸಲು ಒಕ್ಕೂಟ ಸರಕಾರವು ಎಫ್ ಸಿ ಐ ಯನ್ನು ಬಳಸಿಕೊಂಡಾಗ.

ಅನ್ನಭಾಗ್ಯ

2013 ರಿಂದ 2018 ರ ವರೆಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಇದ್ದಾಗ ‘ಅನ್ನಭಾಗ್ಯ’ ಯೋಜನೆಯಡಿಯಲ್ಲಿ ಬಡತನ ರೇಖೆಯ ಕುಟುಂಬಗಳಿಗೆ ತಲಾ ಏಳು ಕೆಜಿ ಅಕ್ಕಿ ಕೊಡಲಾಗುತ್ತಿತ್ತು. ನಾಲ್ಕು ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರ ಅದನ್ನು ನಾಲ್ಕು ಕೆಜಿಗಳಿಗೆ ಇಳಿಸಿತು. ಇತ್ತೀಚಿನ ವಿಧಾನಸಭಾ ಚುನಾವಣಾ ಸಮಯದಲ್ಲಿ ಬಿಜೆಪಿಯು ಕೋಮು ವಿಷಯಗಳ ಮೇಲೆಯೇ ಚುನಾವಣೆ ಸ್ಪರ್ಧಿಸಿದರೆ, ಕಾಂಗ್ರೆಸ್ ಜನರ ನಿಜ ಕಷ್ಟಗಳನ್ನು ಅರಿತುಕೊಂಡು ಐದು ಗ್ಯಾರಂಟಿಗಳ (ಭಾಗ್ಯಗಳ) ಭರವಸೆ ನೀಡಿತು. ಕಾಂಗ್ರೆಸ್ ಗೆಲುವಿಗೆ ಈ ಗ್ಯಾರಂಟಿಗಳು ಕಾರಣವಾದಂತೆ, ಬಿಜೆಪಿಯ ಸೋಲಿಗೂ ಇದೇ ಅನ್ನಭಾಗ್ಯದ ಅಕ್ಕಿಯ ಕಡಿತ ಕಾರಣವಾಯಿತು ಎನ್ನಲಾಗುತ್ತಿದೆ.

ಒಕ್ಕೂಟ ಸರಕಾರದ ಕುತಂತ್ರ

ಅಧಿಕಾರಕ್ಕೆ ಬಂದ ತಕ್ಷಣ ತನ್ನ ಭರವಸೆಗಳನ್ನು ಜ್ಯಾರಿಗೊಳಿಸಲು ಹೊರಟ ಸಿದ್ದರಾಮಯ್ಯ ಸರಕಾರ ಜುಲೈ ಒಂದರಿಂದ ಅನ್ನಭಾಗ್ಯ ಕಾರ್ಯಗತ ಗೊಳಿಸಲು ನಿರ್ಧರಿಸಿತು. ಇದಕ್ಕಾಗಿ ಜೂನ್ 9, 2023 ರಂದು ಎಫ್ ಸಿ ಐಯನ್ನು ಸಂಪರ್ಕಿಸಿ 2.08 ಲಕ್ಷ ಟನ್ ಅಕ್ಕಿಗೆ ಆರ್ಡರ್ ನೀಡಿತು. ಜೂನ್ 12 ರಂದು ಎಫ್ ಸಿ ಐ ಅದಕ್ಕೆ ಒಪ್ಪಿಕೊಂಡಿತು ಕೂಡಾ. ಆದರೆ ಜೂನ್ 13 ರಂದು ಕೊಟ್ಟ ಮಾತಿನಿಂದ ಹಿಂದೆ ಸರಿದ ಎಫ್ ಸಿ ಐ ಇಡೀ ದೇಶದಲ್ಲಿ OMSS (ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ) ಮೂಲಕ ರಾಜ್ಯ ಸರಕಾರಗಳಿಗೆ ಅಕ್ಕಿ ಮಾರುವ ತನ್ನ ನಿಯಮವನ್ನೇ ರದ್ದುಪಡಿಸಿತು. ಇದರಿಂದ ಕರ್ನಾಟಕ ಸರಕಾರ ಇಕ್ಕಟ್ಟಿಗೆ ಸಿಲುಕುವಂತಾಯಿತು.

ಹಾಗೆ ನೋಡಿದರೆ, ಕರ್ನಾಟಕ ಸರಕಾರವು ನಿಯಮ ಪ್ರಕಾರವೇ ಎಫ್ ಸಿ ಐ ಯ ಮುಂದೆ ತನ್ನ ಬೇಡಿಕೆ ಇಟ್ಟಿತ್ತು. ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯದ ಜನವರಿ 26, 2023  ಆದೇಶ “sale of foodgrains to state govts under OMSS (D), states may be allowed to purchase rice (including fortified rice) from FCI for their own schemes at the rate of 34,000 per quintol” ಎನ್ನುತ್ತದೆ. ಅಂದ ಮೇಲೆ ಈಗ ಏಕಾಏಕಿ ಅಕ್ಕಿ ಒದಗಿಸಲು ನಿರಾಕರಿಸಿದ್ದು ಏಕೆ?

ಇದಕ್ಕೆ ಅನೇಕ ಕಾರಣಗಳನ್ನು ಹೇಳಲಾಗುತ್ತಿದೆ. ಅವುಗಳೆಂದರೆ ಕರ್ನಾಟಕ ಸರಕಾರವು ಮೊದಲೇ ತನ್ನ ಅನ್ನಭಾಗ್ಯ ಕಾರ್ಯಕ್ರಮದ ಬಗ್ಗೆ ಹೇಳಿರಲಿಲ್ಲ, ಎಫ್ ಸಿ ಐ ಬಳಿ ಸಾಕಷ್ಟು ದಾಸ್ತಾನು ಇಲ್ಲ, ಬೆಲೆಯನ್ನು ನಿಯಂತ್ರಿಸಲು ಅಕ್ಕಿ ದಾಸ್ತಾನು ಬೇಕಾಗುತ್ತದೆ ಹೀಗೆ. ಆದರೆ ಎಫ್ ಸಿ ಐಯ ಆದೇಶಗಳು ಮತ್ತು ಅದರ ವೆಬ್ ಸೈಟಿನಲ್ಲಿರುವ ಅಂಕಿ ಅಂಶಗಳನ್ನು ಪರಿಶೀಲಿಸಿದರೆ ಇವೆಲ್ಲವೂ ಅಪ್ಪಟ ಸುಳ್ಳು ಎಂಬುದು ಸ್ಪಷ್ಟವಾಗುತ್ತದೆ.

ಎಫ್ ಸಿ ಐ ಯ ಸುಳ್ಳುಗಳು

ಒಂದನೆಯದಾಗಿ ಎಫ್ ಸಿ ಐ ಯ ನಿಯಮ ಪ್ರಕಾರವೇ ಕರ್ನಾಟಕ ಸರಕಾರ ಅಕ್ಕಿಗೆ ಬೇಡಿಕೆ ಮಂಡಿಸಿದೆ. ಅನ್ನಭಾಗ್ಯ ಯೋಜನೆ ಆರಂಭಿಸುವ ಮುನ್ನ ಎಫ್ ಸಿ ಐ ಗೆ ತಿಳಿಸುವುದಾಗಲೀ, ಅವರ ಅನುಮತಿ ಪಡೆಯುವುದಾಗಲೀ ಅಗತ್ಯವಿಲ್ಲ.

ಎರಡನೆಯದಾಗಿ, ಎಫ್ ಸಿ ಐ ಬಳಿ ಧಾರಾಳ ದಾಸ್ತಾನು ಇದೆ. ಎಪ್ರಿಲ್ 1, 2023 ರಂದು ಅದೇ ಘೋಷಿಸಿರುವ ಹಾಗೆ, ಅದರ ಬಳಿ 237 ಲಕ್ಷ ಮೆಟ್ರಿಕ್ ಟನ್ ಅಕ್ಕಿ ದಾಸ್ತಾನು ಇತ್ತು. ಬಫರ್ ಸಂಗ್ರಹಕ್ಕೆ  (ಆಪತ್ತಿನ ಕಾಲಕ್ಕೆ) ಬೇಕಾಗುವುದು 136 ಲಕ್ಷ ಟನ್. ಅಂದರೆ ಹೆಚ್ಚುವರಿಯಾಗಿ  100 ಲಕ್ಷ ಟನ್ ಅಕ್ಕಿ ಸಂಗ್ರಹ ಇದೆ.

ಮೂರನೆಯದಾಗಿ, ಧಾರಾಳ ಬಫರ್ ಸಂಗ್ರಹ ಇರುವುದರಿಂದ ಬೆಲೆ ನಿಯಂತ್ರಣದ ಚಿಂತೆ ಇಲ್ಲ. ಇದಕ್ಕೆ ಹಿಂದಿನ ವರ್ಷಗಳಲ್ಲಿ ಇದಕ್ಕಿಂತ ಕಡಿಮೆ  ಸಂಗ್ರಹ ಇದ್ದಾಗಲೂ, ಇಂದಿಗಿಂತ ಕಷ್ಟದ ದಿನಗಳಲ್ಲಿಯೂ ಅದು ಅಕ್ಕಿಯನ್ನು ರಾಜ್ಯ ಸರಕಾರಗಳಿಗೆ ಮಾರಿದೆ. ಇನ್ನು ರಾಜ್ಯ ಸರಕಾರಕ್ಕೆ ಮಾರುವುದಿಲ್ಲ ಎನ್ನುವ ಎಫ್ ಸಿ ಐ ಅದನ್ನು ಖಾಸಗಿಯವರಿಗೆ ಮಾರಲು ಸಿದ್ಧವಿದೆ ಎನ್ನುವುದರಲ್ಲಿ ಯಾವ ತರ್ಕ ಇದೆ?!

ಜನವಿರೋಧಿ ನೀತಿ ತಿರುಗುಬಾಣವಾಗಲಿದೆ

ಇದನ್ನೆಲ್ಲ ನೋಡುವಾಗ, ಮೋದಿ ಸರಕಾರ ನಿಯಂತ್ರಿತ ಎಫ್ ಸಿ ಐ ನಿರ್ಧಾರದಲ್ಲಿ ಇರುವುದು ಒಳ್ಳೆಯ ಉದ್ದೇಶವಂತೂ ಅಲ್ಲ. ಇರುವುದು ಕೇವಲ ದುರುದ್ದೇಶ. ಕರ್ನಾಟಕದಲ್ಲಿ ಕಾಂಗ್ರೆಸ್ ದೊಡ್ಡ ಪ್ರಮಾಣದ ಜಯ ಸಾಧಿಸಲು ಕಾರಣ ಈಗಾಗಲೇ ಬಡತನ, ನಿರುದ್ಯೋಗ, ಬೆಲೆ ಏರಿಕೆಯಿಂದ ತತ್ತರಿಸುವ ಜನರಿಗೆ ನೆರವಾಗುವ ಗ್ಯಾರಂಟಿ ಯೋಜನೆಗಳು. ದೇಶದ ಇತರ ರಾಜ್ಯಗಳೂ ಈಗ ಇದೇ ಮಾದರಿಯನ್ನು ಅನುಸರಿಸುತ್ತಿದ್ದು, ಕೋಮು ಅಸ್ತ್ರ ಮಾತ್ರ ಹೊಂದಿರುವ ಬಿಜೆಪಿಗೆ ಅಲ್ಲೆಲ್ಲ ಇದೇ ಕಾರಣಕ್ಕೆ ಸೋಲಾಗುವ ಸಾಧ‍್ಯತೆ ಇದೆ. ಹಾಗಾಗಿ, ಹೇಗಾದರೂ ಮಾಡಿ ಬಿಜೆಪಿಯೇತರ ಸರಕಾರಗಳ ಗ್ಯಾರಂಟಿ ಯೋಜನೆಗಳನ್ನು ವಿಫಲಗೊಳಿಸಬೇಕು ಎನ್ನುವುದು ಅದರ ನಿಲುವು. ಅದಕ್ಕಾಗಿ ಸಾಧ‍್ಯವಿರುವ ಎಲ್ಲ ಕುಟಿಲ ತಂತ್ರಗಳನ್ನೂ ಅದು ಅನುಸರಿಸುತ್ತಿದೆ.

ಆದರೆ, ಬಡವರ ತಟ್ಟೆಯಿಂದ ಅನ್ನ ಕಸಿಯುವ ಈ ಕೆಲಸ ಯಾವತ್ತೂ ಅತ್ಯಂತ ನೀಚ ಮತ್ತು ದುಷ್ಟತನದ್ದು. ಈಗಾಗಲೇ ಬಡತನದಿಂದ ಹೈರಾಣಾಗಿರುವ ಬಡವರು ಬದುಕುಳಿಯಲು ಚಾತಕಪಕ್ಷಿಗಳಂತೆ ಸರಕಾರದ ನೆರವನ್ನು ಎದುರು ನೋಡುತ್ತಿದ್ದಾರೆ. ಈಗ ಕಾಂಗ್ರೆಸ್ ಸರಕಾರ ಯಾವ ಗ್ಯಾರಂಟಿಗಳನ್ನು ಕೊಡ ಹೊರಟಿದೆಯೋ ಅವು ಜನರದೇ ಹಣದಿಂದ ಬರುವಂಥವು. ಜನರ ಮತದಿಂದ ಆರಿಸಿ ಬಂದ ಸರಕಾರ ಜನರನ್ನು ಉಳಿಸುವ ಕೆಲಸ ಮಾಡಬೇಕಾದುದು ಅದರ ಆದ್ಯ ಕರ್ತವ್ಯ. ಸಿದ್ದರಾಮಯ್ಯ ಸರಕಾರ ಆ ಕರ್ತವ್ಯವನ್ನಷ್ಟೇ ಮಾಡುತ್ತಿದೆ. ಈ ಗ್ಯಾರಂಟಿಗಳು ಜನರ ಹಕ್ಕೇ ಹೊರತು ‘ಬಿಟ್ಟಿ ಭಾಗ್ಯ’ವಲ್ಲ. ಈ ನೆಲವಾಸ್ತವವನ್ನು ನಿರ್ಲಕ್ಷಿಸಿ ಕುಟಿಲ ರಾಜಕಾರಣವನ್ನೇ ಅಸ್ತ್ರವನ್ನಾಗಿ ಮಾಡಿಕೊಂಡು ಜನವಿರೋಧಿಯಾಗಿ ನಡೆದುಕೊಂಡರೆ ಬಿಜೆಪಿಗೆ ಮುಂದೆ ಇನ್ನಷ್ಟು ದೊಡ್ಡ ಆಘಾತಗಳು ಎದುರಾಗುವುದು ಖಂಡಿತ.

ಶ್ರೀನಿವಾಸ ಕಾರ್ಕಳ

ಚಿಂತಕರು, ಸಾಮಾಜಿಕ ಕಾರ್ಯಕರ್ತರೂ ಆಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.

ಓದಿ- ಬಡ ಜನರಿಗೆ ಅಕ್ಕಿ ನಿರಾಕರಿಸುವುದು ಬಡವರ ತಟ್ಟೆಯಿಂದ ಅನ್ನ ಕಸಿಯುವ ಕ್ರಮ

Related Articles

ಇತ್ತೀಚಿನ ಸುದ್ದಿಗಳು