Friday, June 14, 2024

ಸತ್ಯ | ನ್ಯಾಯ |ಧರ್ಮ

ವಿಕ್ಟೋರಿಯಾ ಅಮೆಲಿನಾ: “ನಾನು ರಷ್ಯನ್ನರು ಮಾಡಿದ ಅತ್ಯಂತ ಕೆಟ್ಟ ಹೂಡಿಕೆ” (ಭಾಗ 1)

1989ರಲ್ಲಿ ಬರ್ಲಿನ್ ಗೋಡೆಯ ಪತನವಾದ ನಂತರ, ಎಲ್ಲಾ ಗಡಿಗಳು ಕಣ್ಮರೆಯಾಗುತ್ತವೆ ಎಂದು ಹಲವರು ನಂಬಿದ್ದರು. ಸೋವಿಯತ್ ಒಕ್ಕೂಟದ ಪ್ಸ್ಕೋವ್ ಬಳಿಯ 1990 ರ ಅಂತರರಾಷ್ಟ್ರೀಯ ಬೇಸಿಗೆ ಶಿಬಿರದಲ್ಲಿ, ಜರ್ಮನ್ ಬ್ಯಾಂಡ್- ದಿ ಸ್ಕಾರ್ಪಿಯಾನ್ಸ್‌ ಹಾಡಿದ ‘ ವಿಂಡ್ ಆಫ್ ಚೇಂಜ್ (ಬದಲಾವಣೆಯ ಗಾಳಿ) …‘ ನನಗೆ ನೆನಪಿದೆ ಮತ್ತು ಅದರ ಸಾಹಿತ್ಯವು ನಿಜವಾಗಿಯೂ ನನ್ನೊಂದಿಗೆ ಸಂವಾದಿಸುತ್ತಿದೆ ಎಂದು ನಾನು ಭಾವಿಸಿದ್ದೆ: “ಜಗತ್ತು ಹತ್ತಿರವಾಗುತ್ತಿದೆ / ಮತ್ತು ನೀವು ಎಂದಾದರೂ ನಾವು ಸೋದರರಂತೆ ತುಂಬಾ ಹತ್ತಿರವಾಗಬಹುದೆಂದು ಯೋಚಿಸಿದ್ದೀರಾ? ನಾವೆಲ್ಲರೂ ಉತ್ತಮ ಭವಿಷ್ಯವನ್ನು ನಂಬುವ,ಕನಸುವ ನಾಳೆಯ ಮಕ್ಕಳೆ? ನಾವೀಗ ಎಲ್ಲಿ ಬಂದು ನಿಂತಿದ್ದೇವೆ ? “

ಈ ‘ಬದಲಾವಣೆಯ ಗಾಳಿ’ಯು ಭ್ರಮೆಗಿಂತ ಹೆಚ್ಚಿನದಾಗಿ ಉಳಿಯಲಿಲ್ಲ, ಮತ್ತು ಅದರಲ್ಲಿ ನಾನಿರಿಸಿದ್ದ ನಂಬಿಕೆಯು ಸಾಂಸ್ಕೃತಿಕವಾಗಿ ಮತ್ತು ಮಾನಸಿಕವಾಗಿ, ಉಕ್ರೇನ್ ಯಾವಾಗಲೂ ಸ್ವಲ್ಪ ಅನನುಭವಿ ಮುಗ್ಧ ಪಶ್ಚಿಮದ ಭಾಗವಾಗಿದೆ ಎಂದು ತೋರಿಸುತ್ತದೇನೋ. ಅಂತಿಮವಾಗಿ ಸತ್ಯವನ್ನು ಎದುರಿಸುವುದು ಉಕ್ರೇನಿಯನ್ನರ ವಿಧಿಯಾಗಿತ್ತು. ಈ ಹಾಡು ಬಿಡುಗಡೆಯಾಗುವ ಐದು ವರ್ಷಗಳ ಮೊದಲು ರಷ್ಯಾದ ಜೈಲಿನಲ್ಲಿ ಕೊಲ್ಲಲ್ಪಟ್ಟ ಪ್ರಖ್ಯಾತ ಉಕ್ರೇನಿಯನ್ ಭಾಷೆಯ ಕವಿ ವಾಸಿಲ್ ಸ್ಟಸ್ ರಂತಹ ಉದಾಹರಣೆಗಳಿಂದ ಕೆಲವರು ವಿಧಿಯನ್ನು ಅರಿತರು. ಇತರರು, ರಷ್ಯಾ ಮತ್ತು ಉಕ್ರೇನ್ ನಡುವಿನ ಗಡಿಯು ಕೇವಲ ಔಪಚಾರಿಕತೆಯಲ್ಲ, ಅದು ನಮ್ಮ ಉಳಿವಿಗಾಗಿ ಅತ್ಯಗತ್ಯ ಎಂದು ಅರಿತುಕೊಳ್ಳಲು, ನನ್ನಂತೆಯೇ ರಷ್ಯಾದ ಜಗತ್ತನ್ನು ನೇರವಾಗಿ ಅನುಭವಿಸಬೇಕಾಯಿತು .

ನಮ್ಮ ಮನೆ – ಎಂಬ ನಂಬಿಕೆಯ ಸುರಕ್ಷಿತ ಸ್ಥಳ – ಎಲ್ಲಿ ಕೊನೆಗೊಳ್ಳುತ್ತದೆ ಮತ್ತು ಅದರ ಯಾವ ಗಡಿಗಳನ್ನು ವಿಶೇಷವಾಗಿ ಚೆನ್ನಾಗಿ ಕಾಪಾಡಬೇಕು ಎಂದು ನಮಗೆ ತಿಳಿದಿಲ್ಲದಿದ್ದರೆ, ನಾವೆಲ್ಲರೂ ನಮ್ಮ ತಪ್ಪುಗಳನ್ನು ಪುನರಾವರ್ತಿಸುವ ದುರ್ವಿಧಿಗೆ ಬೀಳುತ್ತೇವೆ ಎಂದೆನಿಸುತ್ತಿದೆ .

ನಾನು 1986ರಲ್ಲಿ ಪಶ್ಚಿಮ ಉಕ್ರೇನ್‌ನಲ್ಲಿ ಜನಿಸಿದೆ, ಆ ವರ್ಷ ಚೋರ್ನೋಬಿಲ್ ಪರಮಾಣು ರಿಯಾಕ್ಟರ್ ಸ್ಫೋಟಗೊಂಡಿತು ಮತ್ತು ಸೋವಿಯತ್ ಒಕ್ಕೂಟವು ಕುಸಿಯಲು ಪ್ರಾರಂಭಿಸಿತು. ನನ್ನ ಜನ್ಮಸ್ಥಳ ಮತ್ತು ನನ್ನ ಜನ್ಮ ಸಮಯದ ಹೊರತಾಗಿಯೂ, ನನಗೆ ರಷ್ಯನ್ ಶಿಕ್ಷಣ ನೀಡಲಾಯಿತು. ‘ನನ್ನ ಬ್ರಹ್ಮಾಂಡದ ಕೇಂದ್ರ ಮಾಸ್ಕೋ’-ಕೈವ್ ಅಲ್ಲ – ಎಂದು ನಾನು ನಂಬುವಂತೆ ಮಾಡುವ ಉದ್ದೇಶ ಹೊಂದಿದ ಸಂಪೂರ್ಣ ವ್ಯವಸ್ಥೆಯು ಅಲ್ಲಿತ್ತು. ನಾನು ರಷ್ಯನ್ ಶಾಲೆಯಲ್ಲಿ ಓದಿದೆ, ರಷ್ಯಾದ ಕವಿ ಅಲೆಕ್ಸಾಂಡರ್ ಪುಷ್ಕಿನ್ ಅವರ ಹೆಸರಿನ ಶಾಲಾ ರಂಗಮಂದಿರದಲ್ಲಿ ಪ್ರದರ್ಶನ ನೀಡಿದ್ದೇನೆ ಮತ್ತು ರಷ್ಯನ್ ಆರ್ಥೊಡಾಕ್ಸ್ ಚರ್ಚ್‌ನಲ್ಲಿ ಪ್ರಾರ್ಥಿಸಿದೆ. ರಷ್ಯಾದಲ್ಲಿ ಹದಿಹರೆಯದವರಿಗಾಗಿ ನಡೆಯುವ ಬೇಸಿಗೆ ಶಿಬಿರವನ್ನು ಸಹ ನಾನು ಆನಂದಿಸಿದೆ ಮತ್ತು ಎಲ್ವಿವ್‌ನ ರಷ್ಯಾದ ಸಾಂಸ್ಕೃತಿಕ ಕೇಂದ್ರದಲ್ಲಿ ಯುವ ಕೂಟಗಳಿಗೆ ಹಾಜರಾಗಿದ್ದೇನೆ, ಅಲ್ಲಿ ನಾವು ರಷ್ಯನ್ ರಾಕ್ ಸಂಗೀತವನ್ನು ಹಾಡಿದ್ದೇವೆ, ಈ ಸಂಗೀತವು ಸ್ಕಾರ್ಪಿಯೊನ್ ತಂಡದ ಮುಗ್ಧ ಸಂಯೋಜನೆಗಳಿಗಿಂತ ರಷ್ಯಾದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಹೆಚ್ಚು ಪ್ರಾಮಾಣಿಕವಾಗಿತ್ತು. 

ನಾನು 15 ವರ್ಷದವಳಾಗಿದ್ದಾಗ, ಸ್ಥಳೀಯ ಸ್ಪರ್ಧೆಯೊಂದರಲ್ಲಿ ವಿಜೇತಳಾಗಿ, ಮಾಸ್ಕೋದಲ್ಲಿ ನಡೆದ ಅಂತರರಾಷ್ಟ್ರೀಯ ರಷ್ಯನ್ ಭಾಷೆಯ ಸ್ಪರ್ಧೆಯಲ್ಲಿ, ನನ್ನ ತವರು ಪಟ್ಟಣವಾದ ಎಲ್ವಿವ್ ಅನ್ನು ಪ್ರತಿನಿಧಿಸಲು ಆಯ್ಕೆಯಾದೆ. ನಾನು ರಷ್ಯಾದ ರಾಜಧಾನಿಗೆ ಭೇಟಿ ನೀಡಲು ಉತ್ಸುಕನಾಗಿದ್ದೆ. ಏಕೆಂದರೆ ಮಾಸ್ಕೋ ನಾನು ಮನೆಯೆಂದು ಪರಿಭಾವಿಸಿದ ಪ್ರದೇಶದ ಕೇಂದ್ರವಾಗಿತ್ತು. ನನ್ನ ಗ್ರಂಥಾಲಯವು ರಷ್ಯನ್ ಕ್ಲಾಸಿಕ್‌ಗಳಿಂದ ತುಂಬಿತ್ತು, ಸೋವಿಯತ್ ಒಕ್ಕೂಟವು ಸುಮಾರು ಒಂದು ದಶಕದ ಹಿಂದೆಯೇ ಕುಸಿದಿದ್ದರೂ, ನಾನು ಓದಿದ ರಷ್ಯನ್ ಶಾಲೆಯಲ್ಲಿ ಅಥವಾ ನನ್ನ ಕುಟುಂಬವು ನೋಡುವ ಅಭ್ಯಾಸವನ್ನು ಹೊಂದಿದ್ದ ರಷ್ಯನ್ ಚಾನೆಲ್ ನಲ್ಲಿ ಹೆಚ್ಚೇನೂ ಬದಲಾವಣೆಯಾಗಿರಲಿಲ್ಲ. ಉಕ್ರೇನ್‌ನಲ್ಲಿ ಪ್ರಯಾಣಿಸಲು ನನ್ನ ಬಳಿ ಹಣವಿಲ್ಲದಿದ್ದರೂ, ನನ್ನ ರಷ್ಯನೀಕರಣದಲ್ಲಿ ಹೂಡಿಕೆ ಮಾಡಲು ರಷ್ಯಾ ಕೂಡ ಸಂತೋಷದಿಂದಲೇ ಸಿದ್ಧವಿತ್ತು.

ಮಾಸ್ಕೋದಲ್ಲಿ ನಡೆದ ಸ್ಪರ್ಧೆಯಲ್ಲಿ, ರಷ್ಯಾ ನಂತರದ ಸಮಯದಲ್ಲಿ ಆಕ್ರಮಣ ಮಾಡಲು ಅಥವಾ ಆಪೋಶನ ತೆಗೆದುಕೊಳ್ಳಲು ಉದ್ದೇಶಿಸಿರುವ ಆ ಎಲ್ಲಾ ದೇಶಗಳ ಮಕ್ಕಳನ್ನು ನಾನು ಭೇಟಿಯಾದೆ: ಲಾಟ್ವಿಯಾ, ಲಿಥುವೇನಿಯಾ, ಎಸ್ಟೋನಿಯಾ, ಕಝಾಕಿಸ್ತಾನ್, ಅರ್ಮೇನಿಯಾ, ಅಜೆರ್ಬೈಜಾನ್, ಜಾರ್ಜಿಯಾ ಮತ್ತು ಮೊಲ್ಡೊವಾ. ರಷ್ಯಾದ ಒಕ್ಕೂಟವು ನಮ್ಮಂತಹ “ಮಾಜಿ ಸೋವಿಯತ್ ಗಣರಾಜ್ಯಗಳ” ಮಕ್ಕಳನ್ನು ರಷ್ಯನ್ನರಾಗಿ ಬೆಳೆಸಲು ಬಹಳಷ್ಟು ಹಣವನ್ನು ಹೂಡಿಕೆ ಮಾಡಿದೆ. ಗ್ರಾಮೀಣ ರಶಿಯಾದಲ್ಲಿನ ಮಕ್ಕಳ ಶಿಕ್ಷಣದಲ್ಲಿ ಅವರು ಹೂಡಿಕೆ ಮಾಡಬೇಕಾಗಿದ್ದುದಕ್ಕಿಂತ ಹೆಚ್ಚಾಗಿ ಅವರು ನಮ್ಮಲ್ಲಿ ಹೆಚ್ಚು ಹೂಡಿಕೆ ಮಾಡಿದ್ದಾರೆ: ಈಗಾಗಲೇ ವಶದಲ್ಲಿರುವವರಿಗೆ ಬೇಸಿಗೆ ಶಿಬಿರಗಳು ಮತ್ತು ರೆಡ್ ಸ್ಕ್ವೇರ್ ವಿಹಾರಗಳ ಪ್ರಲೋಭನೆ ನೀಡುವ ಅವಶ್ಯಕತೆಯೇನಿಲ್ಲವಲ್ಲ? ಆದರೆ ಅದೃಷ್ಟವಶಾತ್, ನಾನು ರಷ್ಯನ್ ಒಕ್ಕೂಟವು ಮಾಡಿದ ಅತ್ಯಂತ ಕೆಟ್ಟ ಹೂಡಿಕೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ. 

ಮಾಸ್ಕೋದ ಆ ಭೇಟಿಯಲ್ಲಿ, ರಷ್ಯಾದ ಅಂದಿನ ಪ್ರಸಿದ್ಧ ಟಿವಿ ಚಾನೆಲ್ ORT ಯ ಪ್ರಸಿದ್ಧ ಪತ್ರಕರ್ತರೊಬ್ಬರು ಸಂದರ್ಶನಕ್ಕಾಗಿ ನನ್ನನ್ನು ಸಂಪರ್ಕಿಸಿದರು. ನಾನು ನನ್ನನ್ನೇ ಸ್ಟಾರ್ ಎಂದು ಭಾವಿಸಿ ತೇಲಾಡಿದೆ. ಪತ್ರಕರ್ತರು ನಾನು ಈ ಕಾರ್ಯಕ್ರಮ ಮತ್ತು ರಷ್ಯಾದ ರಾಜಧಾನಿಯಲ್ಲಿ ಸಮಯವನ್ನು ಆನಂದಿಸುತ್ತಿದ್ದೇನೆಯೇ ಎಂಬ ಸಭ್ಯ ಪ್ರಶ್ನೆಯೊಂದಿಗೆ ಪ್ರಾರಂಭಿಸಿದರು, ಆದರೆ ಬೇಗನೇ ತಮ್ಮ ನಿಜ ಅಜೆಂಡಾಕ್ಕೆ ಇಳಿದರು. “ಪಶ್ಚಿಮ ಉಕ್ರೇನ್‌ನಲ್ಲಿ ರಷ್ಯನ್ ಭಾಷಿಕರಾಗಿ ನೀವು ಎಷ್ಟು ತುಳಿತಕ್ಕೊಳಗಾಗಿದ್ದೀರಿ? ಎಲ್ವಿವ್‌ನ ಬೀದಿಗಳಲ್ಲಿ ರಷ್ಯನ್ ಭಾಷೆಯನ್ನು ಮಾತನಾಡುವುದು ಎಷ್ಟು ಅಪಾಯಕಾರಿ?”

ನಾನು ಸ್ಟಾರ್ ಅಲ್ಲ ಎಂದು ಅರ್ಥವಾಗುತ್ತಿದ್ದಂತೆಯೇ ನನಗೆ ಉಸಿರುಗಟ್ಟಿದಂತಾಯಿತು; ಸಂಜೆಯ ಸುದ್ದಿಯ ಲಕ್ಷಾಂತರ ವೀಕ್ಷಕರನ್ನು ನಿರ್ಲಜ್ಜವಾಗಿ ಪ್ರಭಾವಿಸಲು ನನ್ನನ್ನು ಬಳಸಲು ಉದ್ದೇಶಿಸಲಾಗಿತ್ತು. ನನಗಾಗ ಕೇವಲ 15 ವರ್ಷ. ಆದರೆ ಆ ಕ್ಷಣ , ನನ್ನ ಮನೆಯ ಗಡಿಗಳು ಎಲ್ಲಿವೆ ಎಂದು ನಾನು ಲೆಕ್ಕಾಚಾರ ಮಾಡಬೇಕಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ನಾನು ರಷ್ಯನ್ ಆಗಿರಲಿಲ್ಲ , – ನಾನು ರಷ್ಯಾದ ಕೆಲವು ನಿರೂಪಣೆಗಳನ್ನು ಬಲಪಡಿಸಲು ಮಾಸ್ಕೋಗೆ ಕರೆತರಲ್ಪಟ್ಟ ಉಕ್ರೇನಿಯನ್ ಹುಡುಗಿಯಾಗಿದ್ದೆ. 15 ವರ್ಷದ ಅನನುಭವಿ ಯುವತಿಯನ್ನು ತನ್ನ ಪ್ರೊಪೋಗಂಡಕ್ಕಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿರುವ ಚಾನಲ್ ಅನ್ನು ನಿರಂತರವಾಗಿ ಈ ಹಿಂದೆ ನೋಡಿದ್ದರಿಂದ ನಾನು ರಷ್ಯಾವು ಶಾಂತಿಯ ಉದ್ದೇಶ ಹೊಂದಿರುವ ಮಹಾನ್ ದೇಶ ಎಂದು ನಾನು ನಂಬಿದ್ದಿರಬಹುದು.

“ನಮ್ಮ ಇಷ್ಟೆಲ್ಲಾ ಸಂಕೀರ್ಣ ಇತಿಹಾಸದ ನಂತರ, ಉಕ್ರೇನಿಯನ್ನರು ಅಹಿತಕರ ಭಾವನೆಗಳನ್ನು ಹೊಂದಿರುವುದು ಮತ್ತು ಕೆಲವೊಮ್ಮೆ ರಷ್ಯನ್ ಭಾಷೆಗೆ ಪ್ರತಿಕ್ರಿಯಿಸುವುದು ಸಹಜ. ಆದಾಗ್ಯೂ, ನಾನು ಯಾವುದೇ ದಬ್ಬಾಳಿಕೆಯನ್ನು ಅನುಭವಿಸಿಲ್ಲ. ಬಹುಶಃ ನಿಮಗೆ ಸಿಕ್ಕಿರುವ ಮಾಹಿತಿಯು ಹಳೆಯದಿರಬಹುದು, ಯುವ ಪೀಳಿಗೆಯಲ್ಲಿ ಅಂತಹ ಯಾವುದೇ ಸಮಸ್ಯೆ ಇಲ್ಲ.“ ಎಂದು ನಾನು ಉತ್ತರಿಸಿದೆ.

ಪತ್ರಕರ್ತರು ನನ್ನನ್ನು ಮತ್ತೆ ಕೇಳಲು ಪ್ರಯತ್ನಿಸಿದರೂ ನನ್ನ ಪ್ರತಿಕ್ರಿಯೆಯೇನೂ ಬದಲಾಗಲಿಲ್ಲ. ಅವರು ಈ ಸಂದರ್ಶನವನ್ನು ಸಂಜೆಯ ಸುದ್ದಿಯಲ್ಲಿ ಪ್ರಸಾರ ಮಾಡಿದರೇ ಎಂದು ನನಗೆ ಅನುಮಾನವಿದೆ ಅಥವಾ ಬಹುಶಃ ಅವರು ಅದನ್ನು ತಮ್ಮ ಅಜೆಂಡಾಕ್ಕೆ ಸೂಕ್ತವಾದ ರೀತಿಯಲ್ಲಿ ಬಳಸಿರಬಹುದು. ಈಗ, ಉಕ್ರೇನಿಯನ್ ಲೇಖಕಿಯಾಗಿ , ರಷ್ಯಾದ ವಿವಿಧ ಚಾನಲ್‌ಗಳಿಂದ ಸಂದರ್ಶನಗಳಿಗಾಗಿ ಬಂದ ವಿನಂತಿಗಳನ್ನು ನಾನು ನಿರಾಕರಿಸುತ್ತೇನೆ. ನನ್ನ ಮಾಸ್ಕೋ ಅನುಭವವೇ ನನಗೆ ಸಾಕಷ್ಟು ಕಲಿಸಿತ್ತು .

2022 ರಲ್ಲಿ ರಷ್ಯಾವು ಮರಿಯುಪೋಲ್‌ನ ಮೇಲೆ ದಾಳಿ ಮಾಡಿದಾಗ ಅಲ್ಲಿನ ವೃದ್ಧರೊಬ್ಬರ ಸಂದರ್ಶನವನ್ನು ನೋಡಿದಾಗ ಈ ಘಟನೆ ನನಗೆ ಮತ್ತೆ ನೆನಪಾಯಿತು. ತನ್ನ ಪ್ರೀತಿಯ ನಗರದ ಅವಶೇಷಗಳಿಂದ ಸುತ್ತುವರೆದಿದ್ದ ಅವರು ದಿಗ್ಭ್ರಮೆಗೊಂಡಿದ್ದರು ಮತ್ತು ಹತಾಶರಾಗಿ ಪ್ರಾಮಾಣಿಕವಾಗಿ ಹೇಳಿದರು. “ಆದರೆ ನಾನು ಈ ರಷ್ಯನ್ ಪ್ರಪಂಚವನ್ನು ನಂಬಿದ್ದೆ, ನಿಮಗೆ ಗೊತ್ತೇ ? ನನ್ನ ಜೀವನದುದ್ದಕ್ಕೂ ನಾವು ಸಹೋದರರು ಎಂದು ನಾನು ಬದುಕಿನ ಅತ್ಯುತ್ತಮ ವರ್ಷಗಳನ್ನು ಜೀವಿಸಿದ್ದ, ಅವರು ತನ್ನ ಮಾತೃಭೂಮಿ ಎಂದು ಗ್ರಹಿಸಿದ ಸ್ಥಳ, ಮನೆಯ ಕಲ್ಪನೆಯು, ಇನ್ನಷ್ಟು ಕ್ರೂರವಾಗಿ ನಾಶವಾಗಿತ್ತು. ರಷ್ಯಾದ ಬಾಂಬ್‌ಗಳು ಬಿದ್ದ ನಂತರವಷ್ಟೇ ರಷ್ಯನ್ ಪ್ರೊಪೋಗಂಡಾ ಅವನ ಮೇಲೆ ಕೆಲಸ ಮಾಡುವುದನ್ನು ನಿಲ್ಲಿಸಿತು. ಉಕ್ರೇನ್‌ನಲ್ಲಿರುವ ನನ್ನ ತವರು ಪಟ್ಟಣದ ಬಗ್ಗೆ ಸುಳ್ಳು ಹೇಳಲು, ಆ ಮೂಲಕ ರಷ್ಯಾದ ವೀಕ್ಷಕರು ಅದನ್ನು ಇನ್ನಷ್ಟು ದ್ವೇಷಿಸುವಂತೆ ಮಾಡಲು ಮಾತ್ರ ನನ್ನನ್ನು ಸಂಭ್ರಮದ ಮಾಸ್ಕೋಗೆ ಕರೆತರಲಾಗಿದೆ ಎಂದು ನಾನು ಅರಿತುಕೊಂಡಾಗ ನನ್ನ ಮನಸ್ಸಿನಲ್ಲಿ ಗಡಿಯೊಂದು ಹುಟ್ಟಿದಂತೆ, ಸ್ವತಂತ್ರ ಉಕ್ರೇನ್ ಮತ್ತು ರಷ್ಯನ್ ಒಕ್ಕೂಟದ ನಡುವಿನ ಗಡಿಯು ನಿರ್ಣಾಯಕ ತಡೆಗೋಡೆಯಾಗಿ ಅಂದು ಅವರ ಮನಸ್ಸಿನಲ್ಲಿ ಹುಟ್ಟಿಕೊಂಡಿರಬಹುದು. ‌

ಪ್ರತಿಯೊಬ್ಬ ನೆರೆಹೊರೆಯವರು ಸ್ನೇಹಿತರಾಗಿರುವ ಜಗತ್ತು ಹಾಡಲು ಒಂದು ಉತ್ತಮವಾದ ಕಲ್ಪನೆ, ಆದರೆ ದುರದೃಷ್ಟವಶಾತ್ ರಷ್ಯಾಕ್ಕೆ ಸಂಬಂಧಿಸಿದಂತೆ ಇದು ವಾಸ್ತವಿಕವಾಗಿಲ್ಲ. 

ಉಕ್ರೇನಿನ ನಿಜ ಇತಿಹಾಸವು ನೋವಿನಿಂದ ಕೂಡಿದ್ದು, ಸಂಕೀರ್ಣ ಹಾಗೂ ನಾಟಕೀಯವಾಗಿದೆ. ದೀರ್ಘಕಾಲದವರೆಗೆ, ನನ್ನ ಕುಟುಂಬದ ಅನುಭವಗಳನ್ನು ಪ್ರತಿಬಿಂಬಿಸುವ ಅಥವಾ ನನ್ನ ಅಜ್ಜ ಅಜ್ಜಿಯರಿಂದ ಉಕ್ರೇನಿಯನ್ ಭಾಷೆಯನ್ನು ನಾನು ಏಕೆ ಆನುವಂಶಿಕವಾಗಿ ಪಡೆಯಲಿಲ್ಲ ಎಂಬುದನ್ನು ವಿವರಿಸುವ ಯಾವುದೇ ಪುಸ್ತಕವು ಹೊರಬರಲಿಲ್ಲ . ತಮ್ಮ ಮಕ್ಕಳನ್ನು ರಷ್ಯನ್ ಭಾಷಿಕರಾಗಿ ಬೆಳೆಸುವ ಮೂಲಕ ಅವರನ್ನು ರಕ್ಷಿಸುವ ನನ್ನ ಪೋಷಕರ ನಿರ್ಧಾರವು ಬಾಲ್ಯದಲ್ಲಿ ನನಗೆ ಅರ್ಥವಾಗಲಿಲ್ಲ. ರಷ್ಯನ್ ಭಾಷಿಕಳಾಗಿ ಬೆಳೆದ ನಾನು ಆ ಸ್ಥಳದವಳಲ್ಲವೇನೋ ಎಂದು ನನಗೆ ಅನಿಸುತ್ತಿತ್ತು . ಆದ್ದರಿಂದ ಅಂತಿಮವಾಗಿ, ನನ್ನಂತಹ ಕುಟುಂಬಗಳ ಬಗ್ಗೆ ನಾನು ಕಾದಂಬರಿಯನ್ನು ಬರೆಯಬೇಕಾಯಿತು. ಇತಿಹಾಸಕಾರ ಟಿಮೋತಿ ಸ್ನೈಡರ್ ಬಾಲ್ಟಿಕ್‌ನಿಂದ ಕಪ್ಪು ಸಮುದ್ರದವರೆಗಿನ ಭೂಮಿಯನ್ನು “ಬ್ಲಡ್‌ಲ್ಯಾಂಡ್ಸ್” ಎಂದು ಕರೆದರು,ನನ್ನ ತವರು ಎಲ್ವಿವ್ ಈ ಪ್ರದೇಶದ ಹೃದಯಭಾಗದಲ್ಲಿತ್ತು. ಎರಡನೆಯ ಮಹಾಯುದ್ಧದ ಆರಂಭದಲ್ಲಿ ಸೋವಿಯತ್ ಸೈನ್ಯವು ಸಾವಿರಾರು ಉಕ್ರೇನಿಯನ್ನರನ್ನು ಕೊಂದಿದೆ ಮತ್ತು ಅದೇ ಅವಧಿಯಲ್ಲಿ ಎಲ್ವಿವ್‌ನ ಸುಮಾರು 100,000 ಯಹೂದಿ ನಾಗರಿಕರು ನಾಶವಾದರು ಎಂದು ನಾನು ಕಂಡುಹಿಡಿಯಬೇಕಾಯಿತು .

ನನ್ನ ಕುಟುಂಬವು 1932-33ರಲ್ಲಿ ಸಂಭವಿಸಿದ ಮಹಾ ಕ್ಷಾಮ ಎಂದೂ ಕರೆಯಲ್ಪಡುವ ಹೊಲೊಡೋಮರ್‌ನ ಆಘಾತವನ್ನು ಅನುಭವಿಸಿ ಬದುಕಿದೆ, ಆದರೆ ನನ್ನ ಅಜ್ಜ- ಅಜ್ಜಿಯರು ಅದರ ಬಗ್ಗೆ ವಿವರವಾಗಿ ಮಾತನಾಡಲಿಲ್ಲ. ಮೌನವು ಅದೆಷ್ಟು ಆಳವಾದ ಬಿರುಕುಗಳನ್ನು ಸೃಷ್ಟಿಸುತ್ತದೆಂದರೆ, ಅದು ಮನೆಯ ಭಾವನೆಯನ್ನು ಅನುಭವಿಸಲು ಕಷ್ಟವಾಗುವ ಪರಿಸ್ಥಿತಿ ನಿರ್ಮಿಸುತ್ತದೆ. ಹತ್ಯಾಕಾಂಡ ಅಥವಾ ಹೋಲೋಡೋಮರ್ ಕುರಿತಾದ ಕಥೆಗಳು – ಮಾಹಿತಿಗಳು ಸಂಪೂರ್ಣವಾಗಿ ಬಹಿರಂಗವಾಗದಿದ್ದಾಗ, ನಾವು ಒಬ್ಬರನ್ನೊಬ್ಬರು ಸಂಶಯಿಸುವುದು ಸಹಜವಿರಬಹುದು. 1933ರಲ್ಲಿ ನೀವು ಯಾರಾಗಿದ್ದಿರಿ? ಹಸಿದವನೋ ಅಥವಾ ಎಲ್ಲ ಆಹಾರವನ್ನು ಕಸಿದುಕೊಂಡವನೋ ? 1941ರಲ್ಲಿ ಉಕ್ರೇನಿಯನ್ ಕಾರ್ಯಕರ್ತರನ್ನು ಗುಂಡಿಕ್ಕಿ ಕೊಂದವರಾಗಿದ್ದಿರೆ ಅಥವಾ ಕೊಳೆತ ದೇಹಗಳ ನಡುವೆ ತಮ್ಮ ಪ್ರೀತಿಪಾತ್ರರನ್ನು ಹುಡುಕುವವರಾಗಿದ್ದಿರಾ? ಯಹೂದಿಗಳನ್ನು ಕರೆದೊಯ್ಯುವಾಗ ಭಯದಿಂದ ಕಿಟಕಿಯಿಂದ ಇಣುಕಿದವನೋ ಅಥವಾ ಅವರನ್ನು ಸೆಳೆದೊಯ್ದವನೋ? ನಿಮ್ಮ ನೆರೆಹೊರೆಯವರ ಬಗ್ಗೆ ಕೆಜಿಬಿಗೆ ಬರೆದು ತಿಳಿಸಿದವರೇ ಅಥವಾ ಉಕ್ರೇನಿಯನ್ ಭಿನ್ನಮತೀಯರಿಗೆ ಸಹಾಯ ಮಾಡಿದವರೇ? ಅಲ್ಲಿ ತೀರಾ ಅಗತ್ಯವಾದ ಕಥೆಗಳ ಬದಲಿಗೆ ಮೌನಗಳಿದ್ದವು ಮತ್ತು ನಿಜವಾದ ಕಥೆಗಳ ಕೊರತೆ ಇರುವಲ್ಲಿ, ನಂಬಿಕೆಯ ಕೊರತೆ ಇರುತ್ತದೆ. ಪರಿಸ್ಥಿತಿ ಹೀಗಿದ್ದಾಗ ನಾವು ಪ್ರೊಪೋಗಂಡಾ/ಪ್ರಚಾರವನ್ನು ನಂಬುತ್ತೇವೆ ಮತ್ತು ಎಂದಿಗೂ ಮನೆಯ ಭಾವವನ್ನು ಸಂಪೂರ್ಣವಾಗಿ ಭಾವಿಸದೆ ಎಲ್ಲಾ ತಪ್ಪು ಗಡಿಗಳನ್ನು ಮತ್ತೆ ಮತ್ತೆ ಬರೆಯುತ್ತಿರುತ್ತೇವೆ.

(ಸಾಫ್ಟ್ವೇರ್ ಉದ್ಯೋಗಿಯಾಗಿದ್ದ ವಿಕ್ಟೋರಿಯಾ ಯೂರಿವ್ನಾ ಅಮೆಲಿನಾ ಕವಯಿತ್ರಿಯಾಗಿ, ಲೇಖಕಿಯಾಗಿ ಪ್ರಸಿದ್ಧರಾದ ನಂತರ ಪೂರ್ಣ ಪ್ರಮಾಣದಲ್ಲಿ ಬರವಣಿಗೆಯಲ್ಲಿ ತೊಡಗಿಸಿಕೊಂಡರು. ಪೆನ್ ಇಂಟರ್ನಾಷನಲ್ ನ ಸದಸ್ಯರಾಗಿದ್ದ ಲೇಖಕಿ ಭಾರತದಲ್ಲಿ 2018ರಲ್ಲಿ ನಡೆದ 84 ನೇ ವಿಶ್ವ PEN ಕಾಂಗ್ರೆಸ್‌ನಲ್ಲಿ ಉಕ್ರೇನ್ ಪ್ರತಿನಿಧಿಯಾಗಿ ರಷ್ಯಾದಲ್ಲಿ ರಾಜಕೀಯ ಕೈದಿಯಾಗಿದ್ದ ಉಕ್ರೇನಿಯನ್ ಚಲನಚಿತ್ರ ನಿರ್ಮಾಪಕ ಒಲೆಗ್ ಸೆಂಟ್ಸೊವ್ ಕುರಿತು ಭಾಷಣ ಮಾಡಿದರು. 2022ರಲ್ಲಿ ರಷ್ಯಾ ಉಕ್ರೇನ್ ಮೇಲೆ ಯುದ್ಧ ಆರಂಭಿಸಿದ ನಂತರ ತನ್ನ ಮಗನನ್ನು ಬೇರೆ ದೇಶಕ್ಕೆ ಕಳಿಸಿ ಯುದ್ಧ ಸಂಬಂಧೀ ಮಾಹಿತಿ ದಾಖಲಾತಿ ತಂಡದಲ್ಲಿ ಭಾಗವಹಿಸುತ್ತಾ ಉಕ್ರೇನ್ ನಲ್ಲಿಯೇ ಉಳಿದ ಯುವ ಲೇಖಕಿ ತಮ್ಮ ಮಿತ್ರರೊಂದಿಗೆ ರಷ್ಯನ್ ಕ್ಷಿಪಣಿ ದಾಳಿಯಲ್ಲಿ ಗಾಯಗೊಂಡು ಕಳೆದ ತಿಂಗಳು ಆಸ್ಪತ್ರೆಯಲ್ಲಿ ಮರಣಿಸಿದರು. 

ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಿಸಿ 500 ದಿನಗಳು ಕಳೆದಿವೆ. ಇದು Expanding the Boundaries Of Home: a Story for Us All ಎಂಬ ಅವರ ಸುಧೀರ್ಘ ಲೇಖನದ ಅನುವಾದದ ಮೊದಲ ಭಾಗ )

ಅನುವಾದ: ರಂಜಿತಾ ಜಿ ಎಚ್

Related Articles

ಇತ್ತೀಚಿನ ಸುದ್ದಿಗಳು