ರಾಜ್ಯದ ಹಲವು ಜಿಲ್ಲೆಗಳಲ್ಲಿ ತಾಪಮಾನ ಏರಿಕೆ – ಮಳೆಗಾಲದಲ್ಲೂ ಬೇಸಿಗೆ

ಬೆಂಗಳೂರು: ಸೆಪ್ಟೆಂಬರ್ ತಿಂಗಳಲ್ಲಿ ಸಾಮಾನ್ಯವಾಗಿ ಮಳೆಯ (Monsoon) ವಾತಾವರಣ ಮುಂದುವರಿದು, ಅಕ್ಟೋಬರ್ ವೇಳೆಗೆ ಚಳಿಗಾಲದ ಮುನ್ಸೂಚನೆ ಕಾಣಿಸಿಕೊಳ್ಳುತ್ತದೆ ಎಂಬ ನಿರೀಕ್ಷೆ ಇರುತ್ತದೆ. ಆದರೆ ಈ ಬಾರಿ ಕರ್ನಾಟಕದ (Karnataka) ಹಲವು ಜಿಲ್ಲೆಗಳಲ್ಲಿ ಪರಿಸ್ಥಿತಿ ಅದಕ್ಕೆ ವಿರುದ್ಧವಾಗಿದ್ದು, ಸೆಪ್ಟೆಂಬರ್‌ನಲ್ಲೇ ಬಿಸಿಲಿನ ತೀವ್ರತೆ ಬೆಸೆಗೆಯಷ್ಟೇ (Summer) ಹೆಚ್ಚಾಗಿದೆ. ಬೆಂಗಳೂರಿನಲ್ಲೂ 75 ವರ್ಷಗಳ ಬಳಿಕ ಸೆಪ್ಟೆಂಬರ್ ಅವಧಿಯಲ್ಲಿ ದಾಖಲೆ ಮಟ್ಟದ ಉಷ್ಣಾಂಶ ವರದಿಯಾಗಿರುವ ಬೆನ್ನಲ್ಲೇ ಉತ್ತರ ಮತ್ತು ಮಧ್ಯ ಕರ್ನಾಟಕದ ಹಲವು ಭಾಗಗಳಲ್ಲೂ ಗರಿಷ್ಠ ತಾಪಮಾನ ಏರಿಕೆಯಾಗಿದೆ. ಕಳೆದ 24 ಗಂಟೆಗಳ ಅವಧಿಯ ತಾಪಮಾನ ಅಂಕಿ-ಅಂಶಗಳನ್ನು ಗಮನಿಸಿದರೆ ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳು ಅತ್ಯಧಿಕ ಉಷ್ಣಾಂಶ ದಾಖಲಿಸಿರುವ ಪ್ರದೇಶಗಳಾಗಿವೆ. ರಾಯಚೂರಿನಲ್ಲಿ ಗರಿಷ್ಠ 37.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದರೆ, ಕಲಬುರಗಿಯಲ್ಲಿ 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡುಬಂದಿದೆ.

ಇನ್ನು ಯಾದಗಿರಿಯಲ್ಲಿ 36.7 ಡಿಗ್ರಿ, ಬಳ್ಳಾರಿಯಲ್ಲಿ 36.6 ಡಿಗ್ರಿ, ಕೊಪ್ಪಳದಲ್ಲಿ 36.3 ಡಿಗ್ರಿ ಹಾಗೂ ವಿಜಯಪುರದಲ್ಲಿ 36.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಬಾಗಲಕೋಟೆಯಲ್ಲೂ ಗರಿಷ್ಠ ಉಷ್ಣಾಂಶ 36 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಇದೇ ಅವಧಿಯಲ್ಲಿ ತುಮಕೂರು ಮತ್ತು ಬೀದರ್ ಜಿಲ್ಲೆಗಳಲ್ಲಿ ತಲಾ 35.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಗದಗದಲ್ಲಿ 35.6 ಡಿಗ್ರಿ ಹಾಗೂ ಮಂಡ್ಯದಲ್ಲಿ 35.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಚಿಕ್ಕಬಳ್ಳಾಪುರದಲ್ಲಿ 35.4 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡುಬಂದಿದೆ. ಚಿತ್ರದುರ್ಗದಲ್ಲಿ 35.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದರೆ, ದಾವಣಗೆರೆ ಮತ್ತು ಹಾವೇರಿಯಲ್ಲಿ ತಲಾ 35.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ವಿಜಯನಗರ ಜಿಲ್ಲೆಯಲ್ಲಿ 35.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲೂ ತಾಪಮಾನ ಗಮನಾರ್ಹ ಮಟ್ಟದಲ್ಲಿದೆ. ಬೆಂಗಳೂರು ದಕ್ಷಿಣದಲ್ಲಿ 34.6 ಡಿಗ್ರಿ, ದಕ್ಷಿಣ ಕನ್ನಡದಲ್ಲಿ 34.4 ಡಿಗ್ರಿ, ಬೆಂಗಳೂರು ನಗರ ಮತ್ತು ಹಾಸನದಲ್ಲಿ ತಲಾ 34 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಬೆಳಗಾವಿ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ 34.3 ಡಿಗ್ರಿ ಸೆಲ್ಸಿಯಸ್ ತಾಪಮಾನ ಕಂಡುಬಂದಿದೆ.

ಶಿವಮೊಗ್ಗದಲ್ಲಿ 33.2 ಡಿಗ್ರಿ ಸೆಲ್ಸಿಯಸ್, ಉಡುಪಿಯಲ್ಲಿ 33.9 ಡಿಗ್ರಿ ಹಾಗೂ ಉತ್ತರ ಕನ್ನಡದಲ್ಲಿ 33.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕೋಲಾರದಲ್ಲಿ 34.2 ಡಿಗ್ರಿ ಮತ್ತು ಮೈಸೂರಿನಲ್ಲಿ 34.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.ಮಲೆನಾಡು ಭಾಗದಲ್ಲಿಯೂ ತಾಪಮಾನ 32 ಡಿಗ್ರಿ ಸೆಲ್ಸಿಯಸ್‌ಗಿಂತ ಮೇಲೆಯೇ ಇದೆ. ಕೊಡಗಿನಲ್ಲಿ 32.3 ಡಿಗ್ರಿ ಹಾಗೂ ಚಿಕ್ಕಮಗಳೂರಿನಲ್ಲಿ 32.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಒಟ್ಟಾರೆ, ಸೆಪ್ಟೆಂಬರ್‌ನಲ್ಲಿ ಮಳೆಯ ನಿರೀಕ್ಷೆಯ ನಡುವೆಯೇ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಾಗಿದ್ದು, ವಿಶೇಷವಾಗಿ ಉತ್ತರ ಮತ್ತು ಮಧ್ಯ ಕರ್ನಾಟಕದ ಪ್ರದೇಶಗಳಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಸಿಯಸ್‌ಗೂ ಮೀರಿದೆ.

Related Articles

ಇತ್ತೀಚಿನ ಸುದ್ದಿಗಳು