Thursday, November 6, 2025

ಸತ್ಯ | ನ್ಯಾಯ |ಧರ್ಮ

ಹೆಚ್ಚುತ್ತಿರುವ ನೇರ ನಗದು ವರ್ಗಾವಣೆ: ರಾಜ್ಯಗಳ ಬೊಕ್ಕಸದ ಮೇಲೆ ಭಾರ

ದೇಶದ ಅನೇಕ ರಾಜ್ಯಗಳು ಕಲ್ಯಾಣ ಯೋಜನೆಗಳ ಅನುಷ್ಠಾನಕ್ಕಾಗಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ನೇರ ನಗದು ವರ್ಗಾವಣೆಗಳನ್ನು (Direct Cash Transfers – DCTs) ಆಶ್ರಯಿಸುತ್ತಿವೆ. 2022-23 ರಲ್ಲಿ ಕೇವಲ ಎರಡು ರಾಜ್ಯಗಳು ಮಾತ್ರ ಈ ಯೋಜನೆಗಳನ್ನು ಜಾರಿಗೊಳಿಸಿದ್ದವು, ಈಗ ಅವುಗಳ ಸಂಖ್ಯೆ 12ಕ್ಕೆ ತಲುಪಿದೆ.

ಈ ವರ್ಷ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ರೂ. 1,68,050 ಕೋಟಿ ಜಮಾ ಮಾಡಲು ಆಯಾ ರಾಜ್ಯಗಳು ಯೋಜಿಸುತ್ತಿವೆ. ಇದು ದೇಶದ ಒಟ್ಟು ಆಂತರಿಕ ಉತ್ಪನ್ನದ (GDP) 0.5%ರಷ್ಟು ಎಂದು ಪಿಆರ್‌ಎಸ್ ಲೆಜಿಸ್ಲೇಟಿವ್ ರಿಸರ್ಚ್ ಸಂಸ್ಥೆ ತಿಳಿಸಿದೆ, ಇದು ಎರಡು ವರ್ಷಗಳ ಹಿಂದೆ 0.2% ಕ್ಕಿಂತ ಕಡಿಮೆಯಿತ್ತು.

ಕರ್ನಾಟಕದಲ್ಲಿ ಗೃಹಲಕ್ಷ್ಮಿ, ಮಧ್ಯಪ್ರದೇಶದಲ್ಲಿನ ಲಾಡ್ಲಿ ಬೆಹನಾ, ಮಹಾರಾಷ್ಟ್ರದಲ್ಲಿನ ಲಡ್ಕಿ ಬೆಹಿನ್, ಬಿಹಾರದಲ್ಲಿನ ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆ ಮುಂತಾದ ಹೆಸರುಗಳಿದ್ದರೂ, ಚುನಾವಣೆಗೆ ಮುನ್ನ ಮತದಾರರನ್ನು ಬೇಗನೆ ಸಂತುಷ್ಟಗೊಳಿಸಲು ಮತ್ತು ತಮ್ಮತ್ತ ಸೆಳೆಯಲು ಆಡಳಿತ ಪಕ್ಷಗಳು ನಗದು ವರ್ಗಾವಣೆಯನ್ನು ಅಸ್ತ್ರವಾಗಿ ಬಳಸುತ್ತಿವೆ. ಇದರಿಂದ ರಾಜ್ಯದ ಬೊಕ್ಕಸ ಖಾಲಿಯಾಗುತ್ತಿದ್ದರೂ, ಫಲಾನುಭವಿಗಳು ಮಾತ್ರ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.

ಷರತ್ತುರಹಿತ ನಗದು ವರ್ಗಾವಣೆ (Unconditional Cash Transfer) ಯೋಜನೆಗಳ ಅನುಷ್ಠಾನದಲ್ಲಿ ಜಾರ್ಖಂಡ್ ಮೊದಲ ಸ್ಥಾನದಲ್ಲಿದೆ. ಮುಂದಿನ ವರ್ಷ ಚುನಾವಣೆ ನಡೆಯಲಿರುವ ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಈ ಯೋಜನೆಗಳಿಗೆ ನಿಧಿ ಹಂಚಿಕೆಯನ್ನು ಹೆಚ್ಚಿಸಿವೆ.

ಕಳೆದ ಆರ್ಥಿಕ ವರ್ಷದ ಪರಿಷ್ಕೃತ ಅಂದಾಜುಗಳಿಗೆ ಹೋಲಿಸಿದರೆ, ಅಸ್ಸಾಂ ಸರ್ಕಾರವು ಹಂಚಿಕೆಯನ್ನು 31% ಮತ್ತು ಬಂಗಾಳ ಸರ್ಕಾರವು 15% ಹೆಚ್ಚಿಸಿವೆ. ಜಾರ್ಖಂಡ್‌ನಲ್ಲಿ ಸಿಎಂ ಮಾಯನ್ ಸಮ್ಮಾನ್ ಯೋಜನೆ ಅಡಿಯಲ್ಲಿ ನೀಡಲಾಗುತ್ತಿದ್ದ ಮಾಸಿಕ ಮೊತ್ತವನ್ನು ಒಂದು ಸಾವಿರ ರೂಪಾಯಿಯಿಂದ ಎರಡುವರೆ ಸಾವಿರ ರೂಪಾಯಿಗೆ ಹೆಚ್ಚಿಸಲಾಗಿದೆ.

ಖಜಾನೆ ಖಾಲಿಯಾಗುತ್ತಿರುವ ಕಾರಣ ಕೆಲವು ರಾಜ್ಯಗಳು ನಗದು ವರ್ಗಾವಣೆ ಯೋಜನೆಗಳನ್ನು ನಿಲ್ಲಿಸಿವೆ ಅಥವಾ ಕಡಿತಗೊಳಿಸಿವೆ. ಉದಾಹರಣೆಗೆ, ಮಹಾರಾಷ್ಟ್ರದಲ್ಲಿ ಸಿಎಂ ಲಾಡ್ಲಿ ಬೆಹಿನ್ ಯೋಜನೆ ಅಡಿಯಲ್ಲಿ ಮಾಸಿಕ ನೀಡಲಾಗುತ್ತಿದ್ದ 1,500 ರೂಪಾಯಿಯನ್ನು 500ಕ್ಕೆ ಇಳಿಸಲಾಗಿದೆ.

ಮೊದಲು ಒಡಿಶಾದಲ್ಲಿ ರೈತರಿಗೆ ಜಾರಿಗೊಳಿಸಿದ ನಗದು ವರ್ಗಾವಣೆ ಯೋಜನೆಯು ಈಗ ದೇಶಾದ್ಯಂತ ಕ್ರಮೇಣವಾಗಿ ವಿಸ್ತರಿಸುತ್ತಿದೆ. ಸಬ್ಸಿಡಿಗಳು, ಕೃಷಿ ಸಾಲ ಮನ್ನಾ ಮತ್ತು ನಗದು ವರ್ಗಾವಣೆಗಳ ಬಗ್ಗೆ ಈಗಾಗಲೇ ಎಲ್ಲಾ ರಾಜ್ಯಗಳಿಗೆ ಆರ್‌ಬಿಐ (RBI) ಎಚ್ಚರಿಕೆಗಳನ್ನು ನೀಡಿದೆ.

ನಗದು ವರ್ಗಾವಣೆ ಯೋಜನೆಗಳನ್ನು ಜಾರಿಗೊಳಿಸುತ್ತಿರುವ 12 ರಾಜ್ಯಗಳಲ್ಲಿ ಆರು ರಾಜ್ಯಗಳು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆದಾಯ ಕೊರತೆಯನ್ನು (Revenue Deficit) ಎದುರಿಸುವುದು ಅನಿವಾರ್ಯ ಎಂದು ಅಂದಾಜಿಸಲಾಗಿದೆ.

ವಾಸ್ತವವಾಗಿ ಆದಾಯ ಹೆಚ್ಚಳವನ್ನು ಹೊಂದಿದ್ದ ಕರ್ನಾಟಕ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳು ಸಹ ನಗದು ವರ್ಗಾವಣೆ ಯೋಜನೆಗಳನ್ನು ಜಾರಿಗೊಳಿಸುವುದರಿಂದ ಕೊರತೆಯನ್ನು ಎದುರಿಸುತ್ತಿವೆ, ಇದು ರಾಜ್ಯಗಳ ಆರ್ಥಿಕ ಪರಿಸ್ಥಿತಿಯ ಮೇಲೆ ಹೆಚ್ಚುತ್ತಿರುವ ಒತ್ತಡವನ್ನು ಸೂಚಿಸುತ್ತದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page