Sunday, June 16, 2024

ಸತ್ಯ | ನ್ಯಾಯ |ಧರ್ಮ

ರಸ್ತೆಗುಂಡಿಗಳಿಂದಾದ ಸಾವುಗಳು ಸರ್ಕಾರಿ ಕೊಲೆಗಳು: ಕಾಂಗ್ರೆಸ್‌ ಆರೋಪ

ಬೆಂಗಳೂರು: ಬೆಂಗಳೂರು ನಗರದಲ್ಲಿನ ರಸ್ತೆಗುಂಡಿಗಳಿಂದ ದಿನದಿಂದ ದಿನಕ್ಕೆ ಅಪಘಾತಗಳ ಸರಣಿ ಮುಂದುವರೆಯುತ್ತಿದ್ದು, ಸಾಯುವವರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ, ಈ ಸಾವುಗಳು ಸರ್ಕಾರಿ ಕೊಲೆ ಎಂದು ರಾಜ್ಯ ಕಾಂಗ್ರೆಸ್‌ ಘಟಕ ಆರೋಪಿಸಿದೆ.

ರಾಜ್ಯದ ರಾಜಧಾನಿ ಪ್ರಸ್ತುತವಾಗಿ ರಸ್ತೆಗುಂಡಿಗಳ ಸಾಮ್ರಾಜ್ಯವಾಗಿದ್ದು, ಈ ಗುಂಡಿಗಳಿಂದ ಅಪಘಾತಗಳು ಸಂಭವಿಸಿ ಸಾಕಷ್ಟು ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ರಸ್ತೆ ಗುಂಡಿಗಳನ್ನು ಸರಿಪಡಿಸುವಂತೆ ಕರ್ನಾಟಕ ಹೈಕೋರ್ಟ್‌, ಬಿಬಿಎಂಪಿ ಮತ್ತು ರಾಜ್ಯ ಸರ್ಕಾರಕ್ಕೆ ಆದೇಶ ಹೊರಡಿಸಿದ್ದರು ಕೂಡ, ಈ ವಿಚಾರದಲ್ಲಿ ಬೇಜವಾಬ್ದಾರಿ ತೋರಿರುವುದು ಇದಕ್ಕೆಲ್ಲಾ ಕಾರಣ ಎಂದು ರಾಜ್ಯ ಕಾಂಗ್ರೆಸ್‌ ಘಟಕ ಆಕ್ರೋಶ ವ್ಯಕ್ತಪಡಿಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌ ಘಟಕ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಬಿಜೆಪಿ ಆಡಳಿತದ ಚಿನ್ನದ ರಸ್ತೆಗಳಲ್ಲಿ ಜನ ರಕ್ತ ಸುರಿಸುತ್ತಿದ್ದಾರೆ.  ಚಿನ್ನದ ರಸ್ತೆಗಳಲ್ಲಿ ಆದ ಅಪಘಾತಗಳಿಗೆ ಸರ್ಕಾರವೇ ಸಂಪೂರ್ಣ ಚಿಕಿತ್ಸೆ ವೆಚ್ಚ ಭರಿಸಬೇಕು, ಸಾವುಗಳಿಗೆ 50 ಲಕ್ಷ ಪರಿಹಾರ ಒದಗಿಸಬೇಕು, ಕುಟುಂಬಸ್ಥರಿಗೆ ಸರ್ಕಾರಿ ನೌಕರಿ ನೀಡಬೇಕು. ಏಕೆಂದರೆ ಇವು ಸರ್ಕಾರಿ ಕೊಲೆ ಎಂದು ರಾಜ್ಯ ಕಾಂಗ್ರೆಸ್‌ ಘಟಕ ದೂರಿದೆ.
ರಸ್ತೆ ಗುಂಡಿಗಳು ಜನರ ಜೀವ ಹಿಂಡುತ್ತಿರುವುದು ದಿನನಿತ್ಯದ ಸುದ್ದಿಯಾಗಿದೆ. ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ. ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳಿದೆಯೇ ಅಥವಾ ಗುಂಡಿಯಲ್ಲೇ ರಸ್ತೆ ಇದೆಯೇ ಎಂಬ ಅನುಮಾನ ಮೂಡುತ್ತಿದೆ! ಹೀಗಾಗಿ ರಸ್ತೆ ಗುಂಡಿಯಿಂದಾದ ಸಾವುಗಳನ್ನು “ಸರ್ಕಾರಿ ಕೊಲೆ” ಎಂದೇ ಪರಿಗಣಿಸಬೇಕು ಎಂದು ರಾಜ್ಯ ಕಾಂಗ್ರೆಸ್‌ ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು