ಬೆಂಗಳೂರು: ಹಗಲಿನ ಹೊತ್ತು ಬೀಗ ಹಾಕಿರುವ ಮನೆಗಳನ್ನು ಗುರುತಿಸಿ, ರಾತ್ರಿ ದರೋಡೆ ಮಾಡುತ್ತಿದ್ದ ಮೂವರು ಕುಖ್ಯಾತ ಕಳ್ಳರನ್ನು ಉತ್ತರ ವಿಭಾಗದ ಪೊಲೀಸರು ಬೇಟೆಯಾಡಿ ಬಂಧಿಸಿದ್ದಾರೆ. 1.9 ಕೋಟಿ ಮೌಲ್ಯದ ವಜ್ರ, ಚಿನ್ನ,ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಿದ್ದಾರೆ.
ಸನ್ಯಾಸಿ ಮತ ನಂದೀಶ್(25), ನಂದೀಶ್(25) ಹಾಗೂ ಪ್ರತಾಪ್ ಕುಮಾರ್ (25) ಬಂಧಿತ ಕನ್ನಗಳ್ಳರಾಗಿದ್ದು,ಮೂವರಿಂದ 1 ಕೋಟಿ 9 ಲಕ್ಷ 20 ಸಾವಿರ ಮೌಲ್ಯದ 1 ಕೆಜಿ 802 ಗ್ರಾಂ ಚಿನ್ನಾಭರಣಗಳು, ವಜ್ರದ ಆಭರಣಗಳು, 110 ಗ್ರಾಂ ತೂಕದ ಬೆಳ್ಳಿ ಚೈನುಗಳು, 8 ವಾಚುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಕಬ್ಬಿಣದ ರಾಡು, ಒಂದು ಹೆಲ್ಮೆಟ್‍ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸುಬ್ರಮಣ್ಯನಗರ ಮಾರುತಿ ಎಕ್ಸ್ ಟೆಕ್ಷನ್‍ನ 3ನೇ ಮುಖ್ಯರಸ್ತೆಯ ಮನೆಯವರು ಬೀಗ ಹಾಕಿಕೊಂಡು ಕಳೆದ ಸೆ.21 ರಂದು ರಾತ್ರಿ ಕುಟುಂಬ ಸಮೇತ ಮಂತ್ರಾಲಯಕ್ಕೆ ಹೋಗಿದ್ದರು. ಮರುದಿನ ರಾತ್ರಿ ವಾಪಾಸು ಬರುವಷ್ಟರಲ್ಲಿ ಮನೆಯ 1ನೇ ಮಹಡಿಯ ಕಿಟಕಿಯ ಕಬ್ಬಿಣದ ಗ್ರಿಲ್‍ಗಳನ್ನು ಕತ್ತರಿಸಿ ಒಳನುಗ್ಗಿ ಕೊಠಡಿಯಲ್ಲಿದ್ದ ಕಬೋರ್ಡ್ ಬಾಗಿಲು ಮುರಿದು ವಜ್ರದ ಆಭರಣಗಳು, ಚಿನ್ನಾಭರಣಗಳು, ಬೆಳ್ಳಿಯ ವಸ್ತುಗಳು ಮತ್ತು ನಗದು ದರೋಡೆ ಮಾಡಿದ್ದರು.
ಮನೆಯವರು ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿದ ಸುಬ್ರಮಣ್ಯನಗರ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಒಬ್ಬನನ್ನು ಕುಟುಂಬ ಸಮೇತ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಮಣ್ಯಕ್ಕೆ ಹೋಗಿ ವಾಪಸ್ ಬರುತ್ತಿರುವಾಗ ತುಮಕೂರು ಜಲ್ಲೆ, ಸಿರಾ ತಾಲ್ಲೂಕು, ಹುಳಿಯಾರು ಗ್ರಾಮದ ಬಳಿ ಬಂಧಿಸಿದ್ದಾರೆ. ಆತನನ್ನು ತೀವ್ರ ವಿಚಾರಣೆ ನಡೆಸಿದಾಗ ಇತರ ಆರೋಪಿಗಳ ಬಗ್ಗೆ ಬಾಯ್ಬಿಟ್ಟಿದ್ದಾನೆ. ಆ ಆಧಾರದ ಮೇಲೆ ವಿಜಯನಗರ ಜಿಲ್ಲೆಯ
ಹಗರಿಬೊಮ್ಮನಹಳ್ಳಿ ತಾಲ್ಲೂಕು, ಉಲುವತ್ತಿ ಗ್ರಾಮದ ಮನೆಯಲ್ಲಿದ್ದ ಇನ್ನಿಬ್ಬರನ್ನೂ ಬಂಧಿಸಿ ಓರ್ವ ಆರೋಪಿತನ ಮನೆಯಿಂದ 18 ಸಾವಿರ ನಗದನ್ನು ಜಪ್ತಿ ಮಾಡಲಾಗಿದೆ. ಮೂವರು ಬಂಧಿತರ ಪೈಕಿ ಧರ್ಮಸ್ಥಳದಿಂದ ವಾಪಸಾಗುತ್ತಿದ್ದ ಆರೋಪಿಯ ಮನೆಯಿಂದ ಕಳವು ಮಾಡಿದ್ದ 1 ಕೆ.ಜಿ 802 ಗ್ರಾಂ ತೂಕದ ಚಿನ್ನಾಭರಣಗಳು, ವಜ್ರದ ಆಭರಣಗಳು, 110 ಗ್ರಾಂ ತೂಕದ ಬೆಳ್ಳಿ ಚೈನುಗಳು, 8-ವಾಚುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಕಬ್ಬಿಣದ ರಾಡು, ಒಂದು ಹೆಲ್ಮೆಟ್‍ನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯು ತಲೆ ಮರೆಸಿಕೊಂಡಿದ್ದು, ಆತನ ಪತ್ತೆ ಕಾರ್ಯ ಪ್ರಗತಿಯಲ್ಲಿದೆ. ಈ ಕಾರ್ಯಾಚರಣೆಯನ್ನು ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಸೈದುಲು ಅಡಾವತ್ ಮಾರ್ಗದರ್ಶನದಲ್ಲಿ ಸುಬ್ರಮಣ್ಯನಗರ ಪೊಲೀಸ್ ಇನ್ಸ್‍ಪೆಕ್ಟರ್ ಸುರೇಶ ಹೆಚ್.ವಿ. ಮತ್ತವರ ಅಧಿಕಾರಿಗಳ ತಂಡ ಯಶಸ್ವಿಯಾಗಿ ನಡೆಸಿದೆ.