Friday, June 14, 2024

ಸತ್ಯ | ನ್ಯಾಯ |ಧರ್ಮ

ರಾಹುಲ್‌ ಗಾಂಧಿಯನ್ನು ಪಪ್ಪು ಎಂದು ಬಿಂಬಿಸಲು ಕೋಟಿಗಟ್ಟಲೆ ಖರ್ಚು | ಬಿಜೆಪಿ ಐಟಿ ಸೆಲ್‌ ನ ಗುಟ್ಟು ಬಹಿರಂಗ

ಬಿ‌ಜೆ‌ಪಿ ಐ‌ಟಿ ಸೆಲ್  ರಾಹುಲ್‌ ಗಾಂಧಿಯನ್ನು ಪಪ್ಪು ಎಂದು ಬಿಂಬಿಸಲು ಈ ಒಂಭತ್ತು ವರ್ಷಗಳಲ್ಲಿ ಕೋಟಿ‌ಗಟ್ಟಲೆ ರುಪಾಯಿ ಖರ್ಚುಮಾಡಿರುವ ಆಘಾತಕಾರಿ ಗುಟ್ಟನ್ನು ಸ್ವತ: ಬಿಜೆಪಿ ಐಟಿ ಸೆಲ್‌ ಗೆ ಕೆಲಸ ಮಾಡಿದವರೊಬ್ಬರು ರಟ್ಟು ಮಾಡಿರುವುದನ್ನು ಹಿರಿಯ ಲೇಖಕರಾದ ಪ್ರವೀಣ್‌ ಎಸ್‌ ಶೆಟ್ಟಿಯವರು ಕುತೂಹಲಕಾರಿಯಾಗಿ ಬರೆದಿದ್ದಾರೆ.

ನಿನ್ನೆ ಒಂದು ಸಮಾರಂಭದಲ್ಲಿ ನಾನು ನನ್ನ ಒಬ್ಬ ಮಿತ್ರರನ್ನು ನಾಲ್ಕು ವರ್ಷಗಳ ನಂತರ ಭೇಟಿಯಾಗಿದ್ದೆ.  ಅವರು 2014 ರಿಂದಲೂ ಬಿ‌ಜೆ‌ಪಿ ಐ‌ಟಿ ಸೆಲ್ ಗಾಗಿ ಕೆಲಸ ಮಾಡುತ್ತಿದ್ದದ್ದು ನನಗೆ ಗೊತ್ತಿತ್ತು. ಸುಳ್ಳು ಸುದ್ದಿಗಳ ಮುಖಾಂತರ ಜನರ ಅಭಿಪ್ರಾಯಗಳನ್ನು ರೂಪಿಸುವಲ್ಲಿ ವೃತ್ತಿಪರ ನಿಪುಣತೆ ಹೊಂದಿರುವ ಅಮೆರಿಕಾದ ಕೇಂಬ್ರಿಡ್ಜ್ ಅನಾಲಿಟಿಕಾ ಮತ್ತು ಇಸ್ರೇಲಿನ ಟಾನ್ ಹನ್ನನ್ ಈ ಸಂಸ್ಥೆಗಳ ಸಹಾಯದಿಂದ ಬಿ‌ಜೆ‌ಪಿ ಐ‌ಟಿ ಸೆಲ್ ನೈಜ ವಿಷಯಗಳನ್ನು ತಿರುಚಿ ಮತದಾರರ ತಲೆಯಲ್ಲಿ ತುಂಬುವುದರಲ್ಲಿ ಸಾಕಷ್ಟು ನಿಪುಣತೆ ಹೊಂದಿದೆ ಎಂದು ಅವರೇ ನನಗೆ ಹಿಂದೊಮ್ಮೆ ಹೇಳಿದ್ದರು.

ಮೊದಲೆಲ್ಲಾ ಅವರು ಸಿಕ್ಕಾಗ ಮೋದಿಯನ್ನು ಭಯಂಕರ ಹೊಗಳುತ್ತಿದ್ದರು. 2019 ರ ಲೋಕಸಭಾ ಚುನಾವಣೆಗೆ ಸ್ವಲ್ಪ ಮುಂಚೆ ಅವರು ಭೇಟಿಯಾಗಿದ್ದಾಗ ನನ್ನಲ್ಲಿ ಇಂಗ್ಲೀಷ್ ಜೋಕ್ ಪುಸ್ತಕಗಳು ಇದ್ದರೆ ಕೊಡಲು ಹೇಳಿದ್ದರು, ಹಾಗೂ ಬೇರೆ ಒಳ್ಳೆಯ ಜೋಕುಗಳು ನನಗೆ ಗೊತ್ತಿದ್ದರೆ ಅದನ್ನು ಬರೆದು ಅವರಿಗೆ ಕಳುಹಿಸಿದರೆ ಬಿ‌ಜೆ‌ಪಿ ಐ‌ಟಿ ಸೆಲ್ಲಿನಿಂದ ಪ್ರತಿ ಜೋಕಿಗೆ ರೂ.100 ರೂಪಾಯಿ ಸಂಭಾವನೆ ಕೊಡಿಸುವುದಾಗಿ ಆಗ ವಾಗ್ದಾನ ಮಾಡಿದ್ದರು. (ಹಾಗಾಗಿ ಅವರಿಗೆ ನಾನು “ಜೋಕೇಶ್” ಎಂಬ ಅಡ್ಡ ಹೆಸರು ಇಟ್ಟಿದ್ದೆ).

ಈ ಜೋಕುಗಳನ್ನು ತಿರುಚಿ ಅದಕ್ಕೆ ರಾಹುಲ್ ಗಾಂಧಿಯ ಹೆಸರು ಜೋಡಿಸಿ ಅದನ್ನು ಬಿ‌ಜೆ‌ಪಿ ಐ‌ಟಿ ಸೆಲ್ ಗೆ ಕೊಟ್ಟರೆ ಅವರು ಅದನ್ನು ಪ್ರಸಾರ ಮಾಡುತ್ತಾರಂತೆ. ಬಿ‌ಜೆ‌ಪಿ ಐ‌ಟಿ ಸೆಲ್ ನಿಂದ ಬರುವ ಟೂಲ್ ಕಿಟ್ ಪ್ರಕಾರವೇ ತಿರುಚಿದ ಸುದ್ದಿಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರ ಮಾಡುವುದು ಜೋಕೇಶರ ಮೂಲ ಕೆಲಸವಾಗಿತ್ತು.  ಟ್ವಿಟ್ಟರ್, ಯುಟ್ಯೂಬ್ ಮತ್ತು ಫೇಸ್‌ ಬುಕ್ ನಲ್ಲಿ ಕಾಮೆಂಟ್ ಸೆಕ್ಷನ್ ನಲ್ಲಿ ಮೋದಿ ಮತ್ತು ಬಿ‌ಜೆ‌ಪಿ ಕುರಿತು ಕೆಟ್ಟ ಕಾಮೆಂಟ್ ಹಾಕಿದವರ ವಿರುದ್ಧ ಅಶ್ಲೀಲ ಬೈಗಳು ಸುರಿಸುವುದಕ್ಕೂ ಅವರಿಗೆ ಬಿ‌ಜೆ‌ಪಿಯಿಂದ ಹಣ ಸಿಗುತ್ತದೆಯಂತೆ! ವಿರುದ್ಧ ಗುಂಪಿನ ಗಂಡಸರು ಹಾಕಿದ ಕಾಮೆಂಟಿಗೆ ಬಿ‌ಜೆ‌ಪಿ ಟ್ರೋಲ್ ಗಳು ಕೊಡುವ ಇಂತಹ ಕೊಳಕು ಬೈಗುಳಗಳಿಗೆ ಗಂಡಸರು ಕೇರ್ ಮಾಡುವುದಿಲ್ಲ, ಆದರೆ ಯಾರಾದರೂ ಮಹಿಳೆ ಮೋದಿ ಮತ್ತು ಬಿ‌ಜೆ‌ಪಿ ವಿರುದ್ಧ ಕಾಮೆಂಟ್ ಹಾಕಿದ್ದರೆ ಆ ಕಾಮೆಂಟ್ ಹಾಕಿದ ಮಹಿಳೆಗೆ ಅತ್ಯಂತ ಅಶ್ಲೀಲವಾಗಿ ಬೈದು ಟ್ರೋಲ್ ಮಾಡಿದರೆ ಆ ಮಹಿಳೆ ಜೀವನದಲ್ಲಿ ಇನ್ನೆಂದೂ ಮೋದಿ & ಬಿ‌ಜೆ‌ಪಿಗರ ವಿರುದ್ಧ ಯಾವುದೇ ಕಾಮೆಂಟ್ ಹಾಕುವ ಗೋಜಿಗೆ ಹೋಗುವುದಿಲ್ಲ ಎಂಬ ಮಹಿಳೆಯರ ಮೂಲ ಮನಸ್ಥಿತಿಯನ್ನು ನನ್ನ ಮಿತ್ರರು ಬಿಡಿಸಿ ಹೇಳಿದ್ದರು. ಕೊಳಕು ಬೈಗಳುಗಳಿಗೂ ಎರಡು ರೂಪಾಯಿ ಸಂಭಾವನೆ ಕೊಡುವ ಜಗತ್ತಿನ ಏಕೈಕ ಸಂಸ್ಥೆ ಅಂದರೆ ಅದು ಬಿ‌ಜೆ‌ಪಿ ಐ‌ಟಿ ಸೆಲ್ಲಂತೆ!

ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಚೇಲಾಗಳು ವಿರೋಧಿಗಳಿಗೆ ಕೊಡುವ ಬೈಗುಳಗಳನ್ನು ಓದುವುದೆಂದರೆ ಬಿ‌ಜೆ‌ಪಿಯಲ್ಲಿ ಅತ್ಯುನ್ನತ ಸ್ಥಾನದಲ್ಲಿರುವ ಇಳಿ ವಯಸ್ಸಿನ ಗುಜರಾತಿಗಳಿಗೆ ಒಂದು ರೀತಿಯ ವಿಕೃತ (Sadistic) ಆನಂದ ಕೊಡುತ್ತದೆಯಂತೆ. ಈ ಗುಜರಾತಿಗಳು ಸೋಷಿಯಲ್ ಮೀಡಿಯಾ ಜಾಲಾಡುತ್ತಾ ತಮ್ಮನ್ನು ಯಾರು ಎಷ್ಟು ಹೊಗಳಿದ್ದಾರೆ ಮತ್ತು ವಿರೋಧ ಪಕ್ಷದವರನ್ನು ಎಷ್ಟು ತೆಗಳಿದ್ದಾರೆ ಎಂದು ಓದಿ ವಿಕೃತ ಆನಂದ ಪಡೆಯುವುದರಲ್ಲಿಯೇ ಇಡೀ ದಿನ ನಿರತರಾಗಿರುವುದರಿಂದ, ಅದನ್ನೇ ಅವರ ಭಕ್ತರು ತಮ್ಮ ಅತ್ಯುಚ್ಚ ನೇತಾರ ದಿನಕ್ಕೆ 18 ಗಂಟೆ ಕೆಲಸ ಮಾಡುತ್ತಾರೆ ಎಂದು ಬಡಾಯಿ ಕೊಚ್ಚುತ್ತಿರುವುದಂತೆ.

ಹಿಂದೆಲ್ಲಾ ರಾಹುಲ್ ಗಾಂಧಿಯನ್ನು ಲೇವಡಿ ಮಾಡುತ್ತಿದ್ದ ಈ ಜೋಕೇಶ್ ಮಿತ್ರರು ನಿನ್ನೆ ಸಿಕ್ಕಾಗ ತುಂಬಾ ಬದಲಾಗಿದ್ದಾರೆಂದು  ಅನಿಸಿತು. ಈ ಕುರಿತು ಕೇಳಿದಾಗ ಅವರು ಹೇಳಿದ್ದು – ಹೌದು, ವಿವೇಚನಾ ಶಕ್ತಿ ಮತ್ತು ಆತ್ಮಸಾಕ್ಷಿ ಇರುವವರೆಲ್ಲಾ ಈಗ ಬಿ‌ಜೆ‌ಪಿ ಐ‌ಟಿ ಸೆಲ್ ತೊರೆಯುತ್ತಿದ್ದಾರೆ. ಯಾಕೆಂದರೆ ಸಂಭಾವಿತರಿಗೆ ಹೃದಯವಂತರಿಗೆ ಮತ್ತು ದೇಶಕ್ಕಾಗಿ ಜೀವ ತೇದು ಸ್ವರ್ಗ ಸೇರಿರುವ ಮಹಾನ್ ಜೀವಿಗಳಿಗೂ ಬೈದು-ಬೈದು ಸುಳ್ಳು ಸುದ್ದಿಗಳನ್ನು ಹಲವಾರು ವರ್ಷಗಳಿಂದ ಹರಡಿ ಹರಡಿ ನಮ್ಮಲ್ಲಿ ಈಗ ವಿಪರೀತ ಪಾಪಪ್ರಜ್ಞೆ ಕಾಡುತ್ತಿದೆ. ನಮ್ಮವರೇ ನಿಜವಾದ ನೀಚರು ಎಂದು ಈಗ ಅರ್ಥವಾಗಿದೆ. ಕೋಮು ಗಲಭೆ ಹುಟ್ಟು ಹಾಕುವವರು ಮತ್ತು ಹೆಣ ಉರುಳಿಸಿ ಆ ಶವದ ಮೇಲೆ ರಾಜಕೀಯ ಬೇಳೆ ಬೇಯಿಸಿ ಕೊಳ್ಳುವವರೂ ನಮ್ಮವರೇ! ಇವನ್ನೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಸಮರ್ಥಿಸಲು ಹಣ ಪಡೆಯುವ ನಾವೂ ನೀಚರು ಎಂದು ಅನಿಸಿತು. ಹಾಗಾಗಿ ಈಗ ನಮಗೆ ನಮ್ಮ ಮೇಲೆಯೇ ತಿರಸ್ಕಾರ ಮೂಡಿದೆ ಎಂದು ಜೋಕೇಶರು ಪಶ್ಚಾತ್ತಾಪ ಪಟ್ಟರು.

ರಾಹುಲ್ ಗಾಂಧಿ ಮೋದಿಗಿಂತ ಹೆಚ್ಚು ವಿದ್ಯಾವಂತ, ಬುದ್ಧಿವಂತ ಮತ್ತು ಸಂಭಾವಿತ ಎಂಬುದು ನಿಜ. ಆದರೆ ಸತತ ಲೇವಡಿ ಅಪಹಾಸ್ಯಗಳ ಮೂಲಕ ರಾಹುಲ್ ಒಬ್ಬ ಪೆದ್ದ, ಮಂದ ಬುದ್ಧಿಯವನು ಎಂದು ಮಾಧ್ಯಮಗಳಲ್ಲಿ ‘ನರೇಟಿವ್’ ಸೃಷ್ಟಿಸುತ್ತಲೇ ಇರಬೇಕು, ಇದರಿಂದ ಹೊಸ ಪೀಳಿಗೆಯ ಯುವ ಮತದಾರರು (ಕಾಲೇಜು ವಿದ್ಯಾರ್ಥಿಗಳಾಗಿರುವ First Time Voters) ರಾಹುಲರನ್ನು ಹಗುರವಾಗಿ ಪರಿಗಣಿಸುತ್ತಾರೆ ಹಾಗೂ ಅವರ ಮಾತಿಗೆ ಹೆಚ್ಚು ಮಹತ್ವ, ಗೌರವ ಕೊಡುವುದಿಲ್ಲ. ಕೊನೆಗೆ ಇದು ಕಾಂಗ್ರೆಸ್ಸಿಗೆ ನೆಗೆಟಿವ್ ವೋಟ್ ಆಗಿ ಪರಿಣಮಿಸುತ್ತದೆ ಎಂಬುದು ನಮ್ಮ ಬಿ‌ಜೆ‌ಪಿ ರಣತಂತ್ರಗಾರರ ಮನೋವೈಜ್ಞಾನಿಕ ವಿಶ್ಲೇಷಣೆಯಾಗಿತ್ತು ಮತ್ತು ಅದನ್ನೇ ನಾವೂ ಅನುಸರಿಸಬೇಕು ಎಂದು ನಮಗೆ ಟೂಲ್ ಕಿಟ್ ನೀಡಲಾಗಿತ್ತು. ಆದರೆ ರಾಹುಲರ ಇತ್ತೀಚಿನ ಕೇಂಬ್ರಿಡ್ಜ್ ಯಾತ್ರೆಯಿಂದ ಈಗ ಆ ನರೇಟಿವ್ ಉಲ್ಟಾ ಹೊಡೆಯುತ್ತಿದೆ ಎಂದು ಒಪ್ಪಿದರು ಜೋಕೇಶರು.

ಇತ್ತೀಚೆಗೆ ರಾಹುಲ್ ಗಾಂಧಿ ಭಾರತ್ ಜೋಡೋ ಪಾದಯಾತ್ರೆ ಮಾಡಿ ಸಾವಿರಾರು ಕಿ.ಮಿ ನಡೆದು ಲಕ್ಷಾಂತರ ಸಾಮಾನ್ಯ ಜನರನ್ನು ಸಂಪರ್ಕಿಸಿ, ಪ್ರೀತಿ ವಿಶ್ವಾಸ ಗೌರವ ಗಳಿಸಿದ ಮೇಲೆ ನಮಗೆ ರಾಹುಲರ ಹೃದಯವಂತಿಕೆ ಗೊತ್ತಾಗಿದ್ದು. ಅವರು ಕಳೆದ ತಿಂಗಳು ಕ್ಯಾಂಬ್ರಿಡ್ಜ್ ನಲ್ಲಿ ಮಾಡಿದ ಭಾಷಣ ಮತ್ತು ಉನ್ನತ ವಿದ್ಯಾವಂತ ಸಭಿಕರೊಟ್ಟಿಗೆ ನಡೆಸಿದ ಸಂವಹನ ನೋಡಿದ ಮೇಲೆ ಅವರಿಗೆ ಆರ್ಥಿಕ ವಿಷಯಗಳ ಮೇಲೆ ಇರುವ ಹಿಡಿತ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳ ಮೇಲೆ ಇರುವ ಪ್ರಭುತ್ವ ಹಾಗೂ ಅವರ ವಿದ್ವತ್ತು ನಮಗೆ ಅರ್ಥವಾಯಿತು. ಕ್ಯಾಂಬ್ರೀಜ್ ನಲ್ಲಿ ಕಲಿಸಿದ ಶಿಸ್ತನ್ನು ಈಗಲೂ ರಾಹುಲ್ ತಮ್ಮ ಜೀವನದಲ್ಲಿ ಪಾಲಿಸುತ್ತಿದ್ದಾರೆ.  ಬಿ‌ಜೆ‌ಪಿ ಐಟಿ ಸೆಲ್ ಕೊಡುತ್ತಿದ್ದ ಪುಡಿ ಕಾಸಿನ ಆಸೆಗಾಗಿ ನಾನು ಅವರನ್ನು ಲೇವಡಿ ಮಾಡಿದ್ದಕ್ಕಾಗಿ ನನಗೆ ಈಗ ಪಾಪಪ್ರಜ್ಞೆ ಕಾಡುತ್ತಿದೆ, ಬಹಳ ಪಶ್ಚಾತಾಪ ಆಗುತ್ತಿದೆ, ಎಂದರು ನನ್ನ ಮಿತ್ರರು.

ಕೊರೊನಾದ ಮುನ್ನೆಚ್ಚರಿಕೆ, ಮುನ್ನಾಲೋಚನೆ ಇಲ್ಲದ ಲಾಕ್ ಡೌನ್, ನೋಟು ರದ್ದತಿ, ಅವೈಜ್ಞಾನಿಕ ಜಿ‌ಎಸ್‌ಟಿ, ದಿಲ್ಲಿ ಗಡಿಯಲ್ಲಿ ರೈತರ ಪ್ರತಿಭಟನೆ, ಚೀನಾದ ಗಡಿ ತಂಟೆ, ಅದಾನಿಯ ಷೇರು ಭಾನಗಡಿ, ಈ ಎಲ್ಲಾ ರಾಷ್ಟ್ರೀಯ ಮಹತ್ವದ ವಿಷಯದಲ್ಲಿ ರಾಹುಲರು ಹೇಳಿದ ಭವಿಷ್ಯ ತದನಂತರ ಪೂರ್ಣ ಸತ್ಯವಾಗಿವೆ. ಕಾರಣ ರಾಹುಲ್ ಕೇಂಬ್ರಿಜ್ ನಲ್ಲಿ “ಡೆವೆಲಪ್‌ಮೆಂಟಲ್ ಎಕನಾಮಿಕ್ಸ್” ಎಂಬ ವಿಷಯದಲ್ಲಿ ಸ್ನಾತಕೋತ್ತರ ಪದವಿ ಎಂ.ಫಿಲ್ ಪಡೆದಿದ್ದಾರೆ ಹಾಗೂ 8 ವರ್ಷ ಲಂಡನ್ ನಲ್ಲಿಯ ಒಂದು ಟೆಕ್ ಕಂಪನಿಯಲ್ಲಿ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ಮೇಲಾಗಿ ಜಗತ್ ವಿಖ್ಯಾತ ಅರ್ಥಶಾಸ್ತ್ರಿ ಮತ್ತು ನಮ್ಮ ಹಿಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ರವರ ಮಾರ್ಗದರ್ಶನದಲ್ಲಿ ರಾಹುಲರು ಅರ್ಥಶಾಸ್ತ್ರದ ಸೂಕ್ಷ್ಮಗಳನ್ನು ಅರಿತುಕೊಂಡಿದ್ದಾರೆ.

ಇದಕ್ಕೆ ಹೋಲಿಸಿದರೆ ಅರೆಸಾಕ್ಷರ ಮೋದಿಯೆಂದರೆ ಕೇವಲ ಗೋದಿ ಮೀಡಿಯಾ ಮತ್ತು ಸೋಷಿಯಲ್ ಮೀಡಿಯಾ ಮುಖಾಂತರ ಗಾಳಿ ಊದಿ ಊದಿ ಉಬ್ಬಿಸಿದ ಒಂದು ಬಲೂನ್ ಅಷ್ಟೇ. ಒಂದು ವೇಳೆ ಗೋದಿ ಮೀಡಿಯಾ ಮತ್ತು ಸೋಷಿಯಲ್ ಮೀಡಿಯಾ ಇಲ್ಲವಾದರೆ ಒಡೆದ ಬಲೂನಿನಂತೆ ಮೋದಿ ತಕ್ಷಣ ಚಪ್ಪಟೆಯಾಗುತ್ತಾರೆ ಎಂದು ಆ ಮಿತ್ರರು ಒಪ್ಪಿಕೊಂಡರು. ರಾಹುಲ್ ಗಾಂಧಿಯನ್ನು ಪಪ್ಪು ಎಂದು ಬ್ರಾಂಡ್ ಮಾಡಲು ಹಿಂದಿನ 9 ವರ್ಷದಲ್ಲಿ ಬಿ‌ಜೆ‌ಪಿ ಐ‌ಟಿ ಸೆಲ್ ಕೋಟಿಗಟ್ಟಲೆ (ರೂ.1200 ಕೋಟಿ ಎಂದು ಅವರು ಹೇಳಿದರು.ಕೆಲ ಸಮಯದ ಹಿಂದೆ ಅಮರ್‌ ಉಜಾಲಾ ಎಂಬ ಹಿಂದಿ ಪತ್ರಿಕೆಯೂ ಇದನ್ನು ಬರೆದಿರುವುದನ್ನು ನಾನು ಓದಿರುವೆ) ಖರ್ಚು ಮಾಡಿದೆಯೆಂಬ ಆಘಾತಕಾರಿ ಗುಟ್ಟು ಬಿಟ್ಟುಕೊಟ್ಟರು ಆ ಮಿತ್ರರು.

ಈ ರೀತಿಯ ಬಿ‌ಜೆ‌ಪಿಯ ಅಂಧಭಕ್ತರಲ್ಲಿ ಉಂಟಾಗುತ್ತಿರುವ ಹೃದಯಾಳದ ಪ್ರಾಮಾಣಿಕ ಬದಲಾವಣೆ ಪ್ರಜಾಪ್ರಭುತ್ವದ ದೃಷ್ಟಿಯಿಂದ ಒಳ್ಳೆಯ ಸೂಚನೆ !!.

ಪ್ರವೀಣ್ ಎಸ್ ಶೆಟ್ಟಿ

ಹಿರಿಯ ಲೇಖಕರು

Related Articles

ಇತ್ತೀಚಿನ ಸುದ್ದಿಗಳು