ಕೋಲ್ಕತ್ತಾ: ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವ ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಪಕ್ಷಗಳು ತಮ್ಮ ಪ್ರಚಾರದ ಶೈಲಿಯನ್ನೇ ಬದಲಿಸಿವೆ. ಗೋಡೆ ಬರಹಗಳು, ಕರಪತ್ರಗಳು ಮತ್ತು ಪತ್ರಿಕಾ ಜಾಹೀರಾತುಗಳಂತಹ ಹಳೆಯ ಪದ್ಧತಿಗಳನ್ನು ಬಿಟ್ಟು ಪ್ರಮುಖ ಪಕ್ಷಗಳೆಲ್ಲವೂ ಈಗ ಸೋಶಿಯಲ್ ಮೀಡಿಯಾ ಹಾದಿ ಹಿಡಿದಿವೆ. ಈ ನಿಟ್ಟಿನಲ್ಲಿ ಆಡಳಿತಾರೂಢ ಟಿಎಂಸಿ ಮತ್ತು ವಿರೋಧ ಪಕ್ಷವಾದ ಬಿಜೆಪಿ ಇನ್‌ಫ್ಲೂಯೆನ್ಸರ್‌ಗಳ (Influencers) ಮೊರೆ ಹೋಗಿವೆ. ಇದರಿಂದಾಗಿ ರಾಜ್ಯದಲ್ಲಿ ಸೋಷಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್‌ಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ.
ತಮ್ಮ ಪಕ್ಷದ ಪರವಾಗಿ ರೀಲ್ಸ್ (ಸಣ್ಣ ವಿಡಿಯೋ) ಮಾಡಲು ಎಲ್ಲಾ ಪಕ್ಷಗಳು ಇವರನ್ನು ಸಂಪರ್ಕಿಸುತ್ತಿವೆ. ಒಂದು ರೀಲ್‌ಗೆ 25,000ದಿಂದ 80,000 ರೂಪಾಯಿವರೆಗೆ ಹಣ ನೀಡುವುದಾಗಿ ಆಫರ್ ನೀಡುತ್ತಿವೆ. ಇದರ ತಯಾರಿ ಆರು ತಿಂಗಳ ಮುಂಚೆಯೇ ಆರಂಭವಾಗಿದ್ದು, ಕಳೆದ ನವೆಂಬರ್‌ನಲ್ಲಿ ಕೋಲ್ಕತ್ತಾದ ಹೋಟೆಲ್ ಒಂದರಲ್ಲಿ ಬಿಜೆಪಿ ನಡೆಸಿದ ‘ಮೀಟ್ ಅಂಡ್ ಗ್ರೀಟ್’ ಕಾರ್ಯಕ್ರಮದಲ್ಲಿ ಸುಮಾರು 60 ಮಂದಿ ಇನ್‌ಫ್ಲೂಯೆನ್ಸರ್‌ಗಳು ಭಾಗವಹಿಸಿದ್ದರು.
ಫಾಲೋವರ್ಸ್ ಸಂಖ್ಯೆಗೆ ತಕ್ಕಂತೆ ಪೇಮೆಂಟ್ ಇನ್‌ಫ್ಲೂಯೆನ್ಸರ್‌ಗಳನ್ನು ನ್ಯಾನೋ, ಮೈಕ್ರೋ ಮತ್ತು ಮೆಗಾ ಎಂಬ ಮೂರು ವರ್ಗಗಳಾಗಿ ವಿಂಗಡಿಸಲಾಗಿದ್ದು, ಅವರ ಫಾಲೋವರ್ಸ್ ಸಂಖ್ಯೆಗೆ ಅನುಗುಣವಾಗಿ ಹಣ ನಿಗದಿಪಡಿಸಲಾಗುತ್ತಿದೆ. 10 ಸಾವಿರದೊಳಗೆ ಫಾಲೋವರ್ಸ್ ಇದ್ದರೆ ನ್ಯಾನೋ, 10 ಸಾವಿರದಿಂದ 1 ಲಕ್ಷದವರೆಗೆ ಇದ್ದರೆ ಮೈಕ್ರೋ ಮತ್ತು 10 ಲಕ್ಷಕ್ಕಿಂತ ಹೆಚ್ಚು ಫಾಲೋವರ್ಸ್ ಇರುವವರನ್ನು ಮೆಗಾ ಇನ್‌ಫ್ಲೂಯೆನ್ಸರ್‌ಗಳು ಎಂದು ಪರಿಗಣಿಸಲಾಗುತ್ತಿದೆ. ಆದರೆ, ಈ ಬಗ್ಗೆ ಬಿಜೆಪಿ ಮತ್ತು ಟಿಎಂಸಿ ಎರಡೂ ಪಕ್ಷಗಳು ಅಧಿಕೃತವಾಗಿ “ನಾವು ಯಾರನ್ನೂ ಸಂಪರ್ಕಿಸಿಲ್ಲ” ಎಂದು ನಿರಾಕರಿಸುತ್ತಿವೆ. ಇನ್ನು ಕಾಂಗ್ರೆಸ್ ಪಕ್ಷವು ಸೋಶಿಯಲ್ ಮೀಡಿಯಾ ಪ್ರಚಾರಕ್ಕೆ ನಮ್ಮ ಬಳಿ ಹಣವೇ ಇಲ್ಲ ಎಂದು ಕೈಚೆಲ್ಲಿದೆ.

ಪಕ್ಷಗಳ ಪರ ಪ್ರಚಾರ ಮಾಡುವ ಬಗ್ಗೆ ಇನ್‌ಫ್ಲೂಯೆನ್ಸರ್‌ಗಳಲ್ಲೂ ಭಿನ್ನಾಭಿಪ್ರಾಯಗಳಿವೆ. ಕೆಲವರು “ಅವಕಾಶ ಸಿಕ್ಕಾಗ ನಾಲ್ಕು ಕಾಸು ಮಾಡಿಕೊಳ್ಳೋಣ” ಎನ್ನುತ್ತಿದ್ದರೆ, ಇನ್ನು ಕೆಲವರು ಇದು “ನೈತಿಕತೆಗೆ ಸಂಬಂಧಿಸಿದ ವಿಷಯ” ಎನ್ನುತ್ತಿದ್ದಾರೆ. “ನಮ್ಮ ಫಾಲೋವರ್ಸ್‌ಗಳಲ್ಲಿ ಎಲ್ಲಾ ಪಕ್ಷದವರೂ ಇರುತ್ತಾರೆ, ಒಂದು ಪಕ್ಷದ ಪರ ಪ್ರಚಾರ ಮಾಡಿದರೆ ಉಳಿದವರು ಕೋಪಗೊಂಡು ಅನ್‌ಸಬ್‌ಸ್ಕ್ರೈಬ್ ಮಾಡುವ ಅಪಾಯವಿರುತ್ತದೆ. ಅಲ್ಪಾವಧಿಯ ಲಾಭಕ್ಕೆ ಹೋಗಿ ದೀರ್ಘಕಾಲದ ನಷ್ಟ ಅನುಭವಿಸುವುದು ಬೇಡ” ಎನ್ನುವುದು ಕೆಲವರ ವಾದ.