Thursday, October 23, 2025

ಸತ್ಯ | ನ್ಯಾಯ |ಧರ್ಮ

‘ಪೂರ್ವಾಗ್ರಹ ಪೀಡಿತರ ಕುರಿತು ಆರ್‌ಎಸ್‌ಎಸ್ ತಲೆಕೆಡಿಸಿಕೊಳ್ಳುವುದಿಲ್ಲ’ – ಸಿ.ಟಿ.ರವಿ

ದಾವಣಗೆರೆ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ರಾಷ್ಟ್ರೀಯ ಭಾವನೆಯನ್ನು ಬಲಪಡಿಸುವ ಕೆಲಸ ಮಾಡುತ್ತಿದೆ. ಕೆಲವರಲ್ಲಿ ಈ ಕುರಿತು ತಪ್ಪು ಅಭಿಪ್ರಾಯಗಳಿದ್ದು, ಅದನ್ನು ಮನವರಿಕೆ ಮಾಡುವ ಪ್ರಯತ್ನವನ್ನು ಸಂಘ ಮಾಡುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು.

ಗುರುವಾರ (ಅ.23) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಆರ್‌ಎಸ್‌ಎಸ್ ಬಗ್ಗೆ ಪೂರ್ವಾಗ್ರಹ ಪೀಡಿತರ ಮನಸ್ಥಿತಿಯನ್ನು ಬದಲಾಯಿಸಲು ಸಾಧ್ಯವಿಲ್ಲ. ಹಾಗಾಗಿ, ಅಂತಹವರ ಬಗ್ಗೆ ಸಂಘವು ತಲೆಕೆಡಿಸಿಕೊಳ್ಳದೆ ತನ್ನ ಕೆಲಸವನ್ನು ಮುಂದುವರಿಸುತ್ತದೆ” ಎಂದರು.

ಕಾಂಗ್ರೆಸ್ ಕುರಿತು ಟೀಕೆ:

“ಕಾಂಗ್ರೆಸ್‌ನವರು ಪ್ರಜಾಪ್ರಭುತ್ವವನ್ನೇ ಜೈಲಿಗೆ ಹಾಕಿದವರು. ತುರ್ತು ಪರಿಸ್ಥಿತಿ ಹೇರಿ ಸಂವಿಧಾನವನ್ನು ಐಸಿಯುನಲ್ಲಿ ಇಟ್ಟವರು. ಆದ್ದರಿಂದ ಕಾಂಗ್ರೆಸ್‌ನ ಹಳೆಯ ಚಾಳಿ ಆಗಾಗ ಮರುಕಳಿಸುತ್ತಿದೆ. ಶಾಶ್ವತವಾಗಿ ಆರ್‌ಎಸ್‌ಎಸ್‌ ಅನ್ನು ನಿಷೇಧಿಸಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ” ಎಂದು ಅವರು ಹೇಳಿದರು.

ರಾಜಕೀಯ ಉತ್ತರಾಧಿಕಾರಿ ಕುರಿತು:

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ನಮ್ಮ ಮಾಲೀಕರು. ಉತ್ತರಾಧಿಕಾರಿಗಳು ಯಾರಾಗಬೇಕು ಎಂಬುದನ್ನು ಜನರೇ ನಿರ್ಧರಿಸಬೇಕು. ಜನರು ಆಶೀರ್ವದಿಸಿದವರಿಗೆ ಮಾತ್ರ ವಾರಸುದಾರಿಕೆ ಸಿಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

“ನಮ್ಮ ತಂದೆಯ ಆಸ್ತಿಯನ್ನು ಪಾಲು ಮಾಡಿದಾಗ ವಾರಸುದಾರಿಕೆ ಬರುತ್ತದೆ. ಆದರೆ, ರಾಜಕೀಯದಲ್ಲಿ ಉತ್ತರಾಧಿಕಾರಿಯನ್ನು ಹೇಗೆ ನೇಮಕ ಮಾಡುತ್ತೀರಿ? ಸಿದ್ದರಾಮಯ್ಯನವರ ಆಸ್ತಿಗೆ ಯತೀಂದ್ರ ಸಿದ್ದರಾಮಯ್ಯ ಉತ್ತರಾಧಿಕಾರಿ ಆಗಬಹುದು. ಆದರೆ ರಾಜಕೀಯ ವಾರಸುದಾರಿಕೆಯನ್ನು ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ನೀಡಬೇಕು” ಎಂದು ಸ್ಪಷ್ಟಪಡಿಸಿದರು.

ಯತ್ನಾಳ್ ಮರುಸೇರ್ಪಡೆ ಬಗ್ಗೆ:

ಸಂಸದ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಮತ್ತೆ ಪಕ್ಷಕ್ಕೆ ಕರೆತರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಿ.ಟಿ.ರವಿ, “ಕೆಲವು ವಿಚಾರಗಳನ್ನು ಕಾಲವೇ ನಿರ್ಣಯ ಮಾಡುತ್ತದೆ. ಕಾಲ ಬರುವವರೆಗೂ ಕಾಯಬೇಕಿದೆ. ಇದು ಯಾವುದನ್ನೂ ಹೇಳುವ ಕಾಲವಲ್ಲ” ಎಂದು ತಿಳಿಸಿ ಮಾತು ಮುಗಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page