Sunday, January 4, 2026

ಸತ್ಯ | ನ್ಯಾಯ |ಧರ್ಮ

ಉಡುಪಿ ಪರ್ಯಾಯ : ಆರ್ ಎಸ್ಎಸ್ ಬುದ್ದಿ ಬಿಡಲ್ಲ, ಮುಸ್ಲೀಮರು ಬುದ್ದಿ ಕಲಿಯಲ್ಲ

“ಹಿಂದುತ್ವ ಅಜೆಂಡಾಗಳ ತಾಳಕ್ಕೆ ಬೇಕಾದಂತೆ ಕುಣಿಯುವುದನ್ನೇ ಸೌಹಾರ್ದತೆ ಎಂದು ಕರಾವಳಿಯ ಕೆಲ ಮುಸ್ಲೀಮರು ಭಾವಿಸಿದಂತಿದೆ. ಹಾಗಾಗಿಯೇ ಅವಮಾನಿತ ಸಮುದಾಯವೊಂದು ಪದೇ ಪದೇ ಅವಮಾನಕ್ಕೆ ಒಳಗಾಗುತ್ತಿದೆ..” ಪತ್ರಕರ್ತ ನವೀನ್ ಸೂರಿಂಜೆಯವರ ಬರಹದಲ್ಲಿ

ಹಿಂದುತ್ವ ಅಜೆಂಡಾಗಳ ತಾಳಕ್ಕೆ ಬೇಕಾದಂತೆ ಕುಣಿಯುವುದನ್ನೇ ಸೌಹಾರ್ದತೆ ಎಂದು ಕರಾವಳಿಯ ಕೆಲ ಮುಸ್ಲೀಮರು ಭಾವಿಸಿದಂತಿದೆ. ಹಾಗಾಗಿಯೇ ಅವಮಾನಿತ ಸಮುದಾಯವೊಂದು ಪದೇ ಪದೇ ಅವಮಾನಕ್ಕೆ ಒಳಗಾಗುತ್ತಿದೆ. ಉಡುಪಿ ಪರ್ಯಾಯದಲ್ಲಿ ವಿನಾಕಾರಣ ‘ಸೌಹಾರ್ದತೆ’ ಪ್ರದರ್ಶಿಸಲು ಹೊರಟ ಮುಸ್ಲೀಮರಿಗೂ ಅದೇ ಗತಿಯಾಗಿದೆ‌.

ಶೀರೂರು ಪರ್ಯಾಯ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಮುಸ್ಲಿಂ ಸೌಹಾರ್ದ ಸಮಿತಿಯು ಉಡುಪಿ ಮಠದ ಪರ್ಯಾಯ ಉತ್ಸವ ಸಮಿತಿಗೆ ಹಸಿರು ಹೊರೆ ಕಾಣಿಕೆಯನ್ನು ಅರ್ಪಿಸಲಿದೆ ಮತ್ತು  ಸ್ವಾಮೀಜಿಗಳ ಪುರಪ್ರವೇಶ ಹಾಗೂ ಪರ್ಯಾಯ ಸಂದರ್ಭದಲ್ಲಿ ತಂಪುಪಾನೀಯವನ್ನು ವಿತರಿಸಲಾಗುವುದು ಎಂದು ಜಿಲ್ಲಾ ಮುಸ್ಲಿಂ ಪರ್ಯಾಯ ಸಮಿತಿ ಘೋಷಿಸಿತ್ತು. ಮುಸ್ಲಿಂ ಸಮಿತಿಯ ಪ್ರಕಾರ ಇದೊಂದು ‘ಸೌಹಾರ್ದತೆಯ ನಡೆ’ ಆಗಿತ್ತು. ಆದರೆ ಉಡುಪಿ ಮಠದ ಪರ್ಯಾಯ ಸಮಿತಿಯ ಅಧ್ಯಕ್ಷರಾಗಿರುವ ಉಗ್ರ ಹಿಂದುತ್ವವಾದಿ ಶಾಸಕ ಯಶ್ಪಾಲ್ ಸುವರ್ಣ ಅವರು ‘ಪರ್ಯಾಯಕ್ಕೆ ಹೊರೆಕಾಣಿಕೆ ಅಥವಾ ಸೇವೆ ಸಲ್ಲಿಸಲು ಮುಸ್ಲಿಂ ಸಮಿತಿಗೆ ನಾವು ಅನುಮತಿ ನೀಡಿಲ್ಲ. ಅನ್ಯಥ ಗೊಂದಲ ಸೃಷ್ಟಿಸಬೇಡಿ’ ಎಂದು ಎಚ್ಚರಿಕೆ ನೀಡಿದ್ದಾರೆ.

ಶಾಸಕ ಯಶಪಾಲ್ ಸುವರ್ಣ ಅವರು ಆದಿ ಉಡುಪಿ ಬೆತ್ತಲೆ ಪ್ರಕರಣದ ಆರೋಪಿಯಾಗಿದ್ದರು. ಮುಸ್ಲಿಂ ಸಮುದಾಯಕ್ಕೆ ಸೇರಿದ ತಂದೆ ಮಗನನ್ನು ಬೆತ್ತಲಾಗಿಸಿ ರಸ್ತೆಯಲ್ಲಿ ಕುಳ್ಳಿರಿಸಿದ್ದರು. ಆಗ ಶಾಸಕರಾಗಿದ್ದ ಶ್ರೀರಾಮ ರೆಡ್ಡಿಯವರು ಈ ವಿಷಯವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದರಿಂದ ಯಶ್ಪಾಲ್ ಸುವರ್ಣ ವಿರುದ್ದ ಪ್ರಕರಣ ದಾಖಲಾಗಿತ್ತು.‌ ಅಂತಹ ಯಶಪಾಲ್ ಸುವರ್ಣ ಈಗ ಶಾಸಕರಾಗಿದ್ದು, ಉಡುಪಿ ಪರ್ಯಾಯ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಉಡುಪಿಯ ಪೇಜಾವರ ಸ್ವಾಮೀಜಿ ತೀವ್ರಗಾಮಿ ಹಿಂದುತ್ವವಾದಿಯಾಗಿದ್ದಾರೆ. ಪೇಜಾವರ ಹಿರಿಯ ಸ್ವಾಮೀಜಿಯಾಗಿದ್ದ ದಿವಂಗತ ವಿಶ್ವೇಶತೀರ್ಥರಷ್ಟೂ ಸಹಿಷ್ಣುತಾಭಾವ ಹೊಂದಿರದ ಈಗಿನ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮಿಯು ಮುಸ್ಲಿಂ ವಿರೋಧಿಯಾಗಿದ್ದಾರೆ. ಹಾಗಾಗಿ ಇಂತಹ ಉಗ್ರ ಹಿಂದುತ್ವವಾದಕ್ಕೆ ಸಂವಿಧಾನ, ಕಾನೂನು ಮತ್ತು ಹಿಂದುತ್ವದ ಹೊರತಾದ ಒಳಗೊಳ್ಳುವಿಕೆ ಉತ್ತರವೇ ಹೊರತು ಉಗ್ರ ಹಿಂದುತ್ವವಾದಿಗಳ ಜೊತೆ ಸೇರುವುದು ಉತ್ತರವಲ್ಲ.

ಕರಾವಳಿಯ ಶ್ರೀಮಂತ ಮುಸ್ಲಿಂ ಉದ್ಯಮಿಗಳಿಗೊಂದು ‘ಹುಸಿ ಸೌಹಾರ್ದತೆಯ ಚಟ’ವಿದೆ. ಶ್ರೀಮಂತ ಹಿಂದುತ್ವವಾದಿ ಉದ್ಯಮಿಗಳು, ಕೆಲ ಹಿಂದುತ್ವವಾದಿ ಮಠಗಳ ಜೊತೆ ಸೇರಿ ಕಾರ್ಯಕ್ರಮ ಮಾಡುವುದು, ಅವರೊಂದಿಗೆ ಇಫ್ತಾರ್ ಕೂಟ ಆಯೋಜಿಸುವುದು, ಹಿಂದೂ ಸಮಾಜೋತ್ಸವಕ್ಕೆ ತಂಪು ಪಾನೀಯ ವಿತರಿಸುವುದು ಇವಿತ್ಯಾದಿಗಳು ಸೌಹಾರ್ಧತೆಯ ಸಂಕೇತಗಳು ಎಂದುಕೊಂಡಿದ್ದಾರೆ. ವಾಸ್ತವವಾಗಿ ಇವೆಲ್ಲವೂ ಬಡ ಮುಸ್ಲೀಮರನ್ನು ಗುರಿಯಾಗಿಸುವ ಹಿಂದುತ್ವವಾದವನ್ನು ಪೋಷಿಸುವ ಕೆಲಸವೇ ಆಗಿರುತ್ತದೆ. ಶ್ರೀಮಂತ ಮುಸ್ಲಿಂ ಉದ್ಯಮಿಗಳು ಮತ್ತು ಕೆಲ ಸಮಿತಿಗಳು ಈ ಮೂಲಕ ಕೋಮುವಾದಿ ಮಠಗಳು, ಸಂಸ್ಥೆಗಳಿಗೆ ಸಮಾಜದಲ್ಲಿ ಅಥವಾ ಆಡಳಿತದಲ್ಲಿ ವಿಶ್ವಾಸಾರ್ಹತೆಯನ್ನು ಒದಗಿಸುತ್ತದೆ. ಹಾಗೆ ಪಡೆದುಕೊಂಡ ವಿಶ್ವಾಸಾರ್ಹತೆಯ ಪ್ರಭಾವವನ್ನು ‘ಬಡ ಮುಸ್ಲೀಮರು, ಮುಸ್ಲಿಂ ಪರ ಹೋರಾಟಗಾರರ ವಿರುದ್ದ’ ಬಳಸಲಾಗುತ್ತದೆ.

01 ಜನವರಿ 2026 ರಂದು ದಿವಂಗತರಾದ ನಿಟ್ಟೆ ವಿನಯ ಹೆಗ್ಡೆಯವರ ಜೊತೆ ಕರಾವಳಿಯ ಶ್ರಿಮಂತ ಮುಸ್ಲೀಮರು ಎಲ್ಲಾ ಕಾರ್ಯಕ್ರಮಗಳಲ್ಲೂ ಜತೆಯಾಗಿದ್ದರು. ವಿನಯ ಹೆಗ್ಡೆಯವರು ಹೀಗೆ ಪಡೆದುಕೊಂಡ ವಿಶ್ವಾಸಾರ್ಹತೆಯ ಕಾರಣದಿಂದಲೇ ಸರ್ಕಾರ, ಇಲಾಖೆ, ಸಮಾಜದಲ್ಲಿ ಒಂದು ಪ್ರಭಾವಲಯವನ್ನು ಸೃಷ್ಟಿಸಿಕೊಂಡಿದ್ದರು. ಅಪಾರ ಶ್ರೀಮಂತರಾಗಿದ್ದ ವಿನಯ ಹೆಗ್ಡೆಯವರು ಈ ಪ್ರಭಾವಲಯವನ್ನು ಸೌಹಾರ್ದತೆಗಾಗಿ ಬಳಸದೇ ಆರ್ ಎಸ್ ಎಸ್ ನ ದ್ವೇಷ ರಾಜಕಾರಣಕ್ಕಾಗಿ ಬಳಸಿದರು. ಆ ಕಾರಣದಿಂದಲೇ ಆರ್ ಎಸ್ ಎಸ್ ಸರಸಂಘ ಕಾರ್ಯವಾಹ ದತ್ತಾತ್ರೆಯ ಹೊಸಬಾಳೆಯವರು ನಿಟ್ಟೆ ವಿನಯ ಹೆಗ್ಡೆಯವರಿಗೆ ಅಧಿಕೃತವಾಗಿ ಶೃದ್ದಾಂಜಲಿ ಪ್ರಕಟಿಸಿ ಎಲ್ಲಾ ಆರ್ ಎಸ್ ಎಸ್ ಶಾಖೆಗಳಿಗೆ ಕಳುಹಿಸಿದರು. ಆರ್ ಎಸ್ ಎಸ್ ಕೇಂದ್ರ ಸಮಿತಿಯು ಹೀಗೆ ಅಧಿಕೃತವಾಗಿ ಶೃದ್ದಾಂಜಲಿ ಅರ್ಪಿಸುವುದು ಅಪರೂಪ. ಹಾಗಿದ್ದರೆ ನಿಟ್ಟೆ ವಿನಯ ಹೆಗ್ಡೆಯವರು ಹೇಗೆ ಆರ್ ಎಸ್ ಎಸ್ ಬೆಳವಣಿಗೆಗೆ ತಮ್ಮನ್ನು ತಾವು ಸಮರ್ಪಿಸಿರಬಹುದು ಯೋಚಿಸಿ.

ಸೌಹಾರ್ದತೆ ಎನ್ನುವುದು ಸಮಾನತೆಯಿಂದ ಎದ್ದು ನಿಲ್ಲಬೇಕು. ಒಂದು ಸಮುದಾಯ ಮತ್ತೊಂದು ಸಮುದಾಯದ ರಾಜಕೀಯ, ಧಾರ್ಮಿಕ, ಆರ್ಥಿಕ ಶಕ್ತಿಗೆ ತಲೆಬಾಗಿಕೊಂಡು ತಾನು “ಒಪ್ಪಿಕೊಂಡಿದ್ದೇನೆ” ಎಂದು ತೋರಿಸುವುದು ಸೌಹಾರ್ದತೆ ಅಲ್ಲ; ಅದು ತನಗಾಗುತ್ತಿರುವ ಅವಮಾನವನ್ನು ಮರೆಮಾಚುವ ತಂತ್ರ ಮಾತ್ರ. ಕರಾವಳಿಯಲ್ಲಿ ನಡೆಯುತ್ತಿರುವ ಬಹುತೇಕ ಸೌಹಾರ್ದತೆಯ ಪ್ರದರ್ಶನಗಳು ಈ ಅಸಮಾನತೆಯ ಮೇಲೆಯೇ ನಿಂತಿವೆ.

ಉಡುಪಿ ಪೇಜಾವರ ಮಠದಲ್ಲಿ ನಡೆದ ಇಫ್ತಾರ್, ಆಳ್ವಾಸ್ ಇಫ್ತಾರ್, ಹಿಂದೂ ಸಮಾಜೋತ್ಸವಕ್ಕೆ ತಂಪು ಪಾನೀಯ ವಿತರಣೆಗಳು ಇಂತಹ ಅಮಾನತೆಯ ಮೇಲೆಯೇ ನಿಂತಿದೆ.‌ ಇದು ಕರಾವಳಿಯ ಕೋಮುವಾದವನ್ನು ಸ್ವಲ್ಪವೂ ತಗ್ಗಿಸಿಲ್ಲ. ನಮ್ಮ ಇಫ್ತಾರ್ ಗೆ ಬಂದ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಬೇಡಿ ಎಂದು ಯಾವ ಆಳ್ವನೂ, ಸ್ವಾಮೀಜಿಯೂ ಕೋಮುಗಲಭೆಯ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡಲಿಲ್ಲ, ಮಾಡುವುದಿಲ್ಲ. ‘ನಾವು ಜೊತೆಗಿದ್ದೇವೆ’ ಎಂದು ಘೋಷಿಸಿ ಜೊತೆಗಿದ್ದವರ ಮೇಲೆ ನಮ್ಮವರಿಂದ ದೌರ್ಜನ್ಯವಾದಾಗ ಮೌನ ವಹಿಸುವುದು ಅದ್ಯಾವ ಸೀಮೆಯ ಸೌಹಾರ್ದತೆ ? ಉಡುಪಿ ಸ್ವಾಮೀ, ಆಳ್ವರ ಸೌಹಾರ್ದತೆಯ ಮಾದರಿಯಿದು.

ಆರ್‌ಎಸ್‌ಎಸ್ ಅಥವಾ ಅದರ ಸಿದ್ಧಾಂತ ಆಧಾರಿತ ಅಂಗ ಸಂಸ್ಥೆಗಳು ತಮ್ಮ ದ್ವೇಷ ರಾಜಕಾರಣವನ್ನು ತ್ಯಜಿಸುವುದು ಸೌಹಾರ್ದತೆಯ ಪ್ರದರ್ಶನಗಳಿಂದಲ್ಲ. ಅವರ ರಾಜಕೀಯ ಜೀವಾಳವೇ “ಶತ್ರು ಸಮುದಾಯ” ಎಂಬ ಕಲ್ಪನೆ. ಆ ಕಾರಣಕ್ಕಾಗಿಯೇ ಮುಸ್ಲಿಂ ಉದ್ಯಮಿಗಳು, ಸಮಿತಿಗಳು ಎಷ್ಟೇ ಸೇವೆ ಸಲ್ಲಿಸಿದರೂ, ಇಫ್ತಾರ್ ಕೂಟಗಳಲ್ಲಿ ಭಾಗವಹಿಸಿದರೂ, ತಂಪುಪಾನೀಯ ವಿತರಿಸಿದರೂ ಅಂತಿಮವಾಗಿ ಅವರೆಲ್ಲರೂ “ಅನ್ಯರು” ಎಂಬ ವರ್ಗದಲ್ಲೇ ಉಳಿಯುತ್ತಾರೆ.

ಹಾಗಿದ್ದರೆ ಶ್ರೀಮಂತ ಮುಸ್ಲಿಂ ಉದ್ಯಮಿಗಳು, ಮುಸ್ಲಿಂ ಸಮಿತಿಗಳು ಸೌಹಾರ್ದತೆಗಾಗಿ ಹೇಗೆ ಕೆಲಸ ಮಾಡಬೇಕು ? ತುಂಬಾ ಸುಲಭ ಮತ್ತು ನೈತಿಕವಾದ ಮಾರ್ಗಗಳಿವೆ. ಹಿಂದುಳಿದ ದಲಿತ ಸಮುದಾಯದ ಜೊತೆ ಮುಸ್ಲಿಂ ಸಮುದಾಯ ಬೆರೆಯಬೇಕು. ಆಯೋಜಿಸುವುದಾದರೆ, ಅವರ ಜತೆಗೆ ಇಫ್ತಾರ್, ದೀಪಾವಳಿಗಳನ್ನು ಆಯೋಜಿಸಬೇಕು. ಕೋಮುವಾದಿ ಮೇಲ್ವರ್ಗಗಳ ಜೊತೆ ಅಂತರ ಕಾಯ್ದುಕೊಂಡು ಬಹುಸಂಖ್ಯಾತ ಹಿಂದುಳಿದ, ದಲಿತರ ಚಳವಳಿಗಳಿಗೆ ಹಣಕಾಸಿನ ಸಹಾಯ, ಶ್ರಮದಾನ ಮಾಡಬಹುದು.  ಕೋಮುವಾದದ ವಿರುದ್ದ ಹೋರಾಡುವ ಸಂಘಟನೆಗಳು, ವ್ಯಕ್ತಿಗಳ ಜೊತೆ ಕೈ ಜೋಡಿಸಬೇಕು. ಒಟ್ಟಾರೆ ಸಮಾಜದಲ್ಲಿ ಸಂವಿಧಾನದ ಜಾರಿಗಾಗಿ, ಸಮಾನತೆಯ ಹಾದಿಗಾಗಿ ಶ್ರಮಿಸಬೇಕು. ಇಂತದ್ದನ್ನು ಮಾಡದೇ ಆರ್ ಎಸ್ ಎಸ್ ಅಜೆಂಡಾಗಳಿಗೆ ಪೂರಕವಾಗಿ, ಕೋಮುವಾದಿಗಳ ಜೊತೆ ಸೇರುವುದನ್ನೇ ಸೌಹಾರ್ದತೆ ಎಂದು ಮುಸ್ಲಿಂ ಸಮುದಾಯ ಅಂದುಕೊಂಡರೆ ಅದು ಬಡ ಮುಸ್ಲೀಮರ ವಿರುದ್ದದ ಕೋಮುವಾದಿಗಳ ಕೊಂಬುಗಳನ್ನು ಬಲಿಷ್ಠಗೊಳಿಸಿದಂತಾಗುತ್ತದೆ.

ಕರಾವಳಿಯ ಶ್ರೀಮಂತ ಮುಸ್ಲಿಂ ಉದ್ಯಮಿಗಳು ತಮ್ಮ ಆರ್ಥಿಕ ಶಕ್ತಿಯನ್ನು ಪ್ರಗತಿಪರವಾದ ಸಂವಿಧಾನಿಕ ಹೋರಾಟಗಳಿಗೆ ಬಳಸುವ ಬದಲು, ಹಿಂದುತ್ವದ ಶಕ್ತಿಕೇಂದ್ರಗಳಿಗೆ ಹತ್ತಿರವಾಗಲು ಬಳಸುತ್ತಿರುವುದು ಅಪಾಯಕರ ಬೆಳವಣಿಗೆ. ಇದು  ಹಿಂದುತ್ವವಾದಿ ಮಠಗಳು, ಸಂಸ್ಥೆಗಳಿಗೆ ‘ಸರ್ವಸ್ವೀಕಾರ’ದ ಮುಖವಾಡ ಒದಗಿಸುತ್ತದೆ.  ಆ ಮುಖವಾಡದ ಹಿಂದೆ ನಿಂತು ಅವರು ಬಡ ಮುಸ್ಲೀಮರು, ಹೋರಾಟಗಾರರು, ನ್ಯಾಯ ಕೇಳುವ ಧ್ವನಿಗಳನ್ನು ಇನ್ನಷ್ಟು ದಮನಿಸುತ್ತಾರೆ. ಹಾಗಾಗಿ ಇವೆಲ್ಲವೂ ದೀರ್ಘಾವಧಿಯಲ್ಲಿ ಮುಸ್ಲಿಂ ಸಮುದಾಯವನ್ನೇ ದುರ್ಬಲಗೊಳಿಸುತ್ತವೆ.

ಹಾಗಾಗಿ, ಉಡುಪಿ ಮಠದ ಪರ್ಯಾಯ ಸಮಿತಿಯಲ್ಲಿ ಕೋಮುವಾದಿಯೊಬ್ಬ ಅಧ್ಯಕ್ಷನಾಗಿರುವವರೆಗೆ, ಉಡುಪಿ ಮಠದ ಸ್ವಾಮಿಗಳು ಕೋಮುವಾದದಲ್ಲೇ ಇರುವವರೆಗೆ ಕರಾವಳಿಯ ಮುಸ್ಲಿಮರು ಸೌಹಾರ್ದತೆಯ ಹೆಸರಲ್ಲಿ ಅವರೊಂದಿಗೆ ಸಖ್ಯ ಬೆಳೆಸುವುದು ಹುಸಿ ಸೌಹಾರ್ದತೆ ಎಂದು ಕರೆಯಲ್ಪಡುತ್ತದೆ. ಈ ಹುಸಿ ಸೌಹಾರ್ದತೆಯಿಂದ ಮುಸ್ಲೀಮರು ಹೊರಬಂದು, ಸಂವಿಧಾನಿಕ ನಿಲುವಿಗೆ ಮರಳಿದ ದಿನವೇ ಕರಾವಳಿಯಲ್ಲಿ ನಿಜವಾದ ಸೌಹಾರ್ದತೆ ಆರಂಭವಾಗುತ್ತದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page