Saturday, August 30, 2025

ಸತ್ಯ | ನ್ಯಾಯ |ಧರ್ಮ

ಕಲ್ಬುರ್ಗಿ ಕೇಂದ್ರೀಯ ವಿವಿಯಲ್ಲಿ RSS ಸಭೆ: ಸಾಹಿತಿಗಳಿಂದ ವಿರೋಧ

ಕಲ್ಬುರ್ಗಿ: ಇಲ್ಲಿನ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಆರ್‌ಎಸ್‌ಎಸ್‌ ಸಭೆ ನಡೆಸಿರುವುದನ್ನು ‘ಜಾಗೃತ ನಾಗರಿಕರು ಕರ್ನಾಟಕ’ ಸಂಘಟನೆ ತೀವ್ರವಾಗಿ ಖಂಡಿಸಿದ್ದು, ಇದು ಶೈಕ್ಷಣಿಕ ವಲಯದ ಮಹಾ ದುರಂತ ಎಂದು ಆರೋಪಿಸಿದೆ.

ಕೇಂದ್ರೀಯ ವಿಶ್ವ ವಿದ್ಯಾಲಯವನ್ನು ಕೋಮುವಾದದ ಆಡುಂಬೊಲ ಮಾಡಲು ಹೊರಟಿರುವ ಅಲ್ಲಿನ ಆಡಳಿತ ಮಂಡಳಿಯ ಈ ಕುಕೃತ್ಯ ಶೈಕ್ಷಣಿಕ ವಲಯದ ಮಹಾ ದುರಂತವಾಗಿದೆ. ವಿವಿಯಲ್ಲಿ ಸಂಘಿಗಳ ಸಭೆ, ಚಟುವಟಿಕೆ ನಡೆಸುವುದು, ಸಂಘದ ಗೀತೆಯಾಗಿರುವ ನಮಸ್ತೇ ಸದಾ ವತ್ಸಲೇ ಹಾಡಿಸುವುದು ದೇಶದ ಸಂವಿಧಾನಕ್ಕೆ ಮಾಡುತ್ತಿರುವ ಅಪಚಾರ ಎಂದು ಸಂಘಟನೆಯ ಹಿರಿಯರಾದ ಕೆ. ಮರುಳಸಿದ್ದಪ್ಪ, ಜಿ.ರಾಮಕೃಷ್ಣ, ಎಸ್‌.ಜಿ ಸಿದ್ದರಾಮಯ್ಯ, ವಿಜಯಾ, ಬಿ.ಶ್ರೀಪಾದ ಭಟ್, ಕೆ.ಎಸ್‌. ವಿಮಲಾ, ಟಿ ಸುರೇಂದ್ರ ರಾವ್, ಮೀನಾಕ್ಷಿ ಬಾಳಿ, ಬಿ.ಎನ್‌ ಯೋಗಾನಂದ, ಎನ್‌.ಗಾಯತ್ರಿ ಮುಂತಾದವರು ಆರೋಪಿಸಿದ್ದಾರೆ.

ವಿವಿಯಲ್ಲಿ ಉನ್ನತ ಮಟ್ಟದ ಶೈಕ್ಷಣಿಕ ಚಟುವಟಿಕೆಗಳು, ಜನೋಪಯೋಗಿ ಸಂಶೋಧನೆಗಳು, ವರ್ತಮಾನದ ತಲ್ಲಣಗಳ ಕುರಿತು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ, ಚಿಂತನ-ಮಂಥನಗಳನ್ನು ನಡೆಸುವುದು ಮುಖ್ಯವಾಗಿರುತ್ತದೆ. ಇದರಿಂದ ವಿದ್ಯಾರ್ಥಿಗಳ ಬೆಳವಣಿಗೆಯಾಗುತ್ತದೆ. ಆದರೆ, ಇಲ್ಲಿ ಸಂಕುಚಿತ ಮನಸ್ಥಿತಿಯನ್ನು ಮೂಡಿಸುವ ಒಂದು ಗುಂಪು ಧರ್ಮದ್ವೇಷ, ಹಗೆತನ, ದೇಶದ ಸಂವಿಧಾನ ಎಂದಿಗೂ ಒಪ್ಪಲಾರದ ಕೋಮುದ್ವೇಷಗಳನ್ನು ತುಂಬುವ ಆರ್‌ಎಸ್‌ಎಸ್‌ ಪ್ರತಿಪಾದಿಸುವ ದೇಶ ವಿಭಜಕ ವಿಧ್ವಂಸಕ ಕೃತ್ಯಗಳು ನಡೆಯುತ್ತಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ದೂರಿದ್ದಾರೆ.

ಈ ಮೊದಲೇ ಇಂಥಹ ಚಟುವಟಿಕೆಗಳು ನಡೆದಾಗ ಸ್ಥಳೀಯ ಸಂವಿಧಾನ ಪರ, ಪ್ರಗತಿಶೀಲರು ಬೃಹತ್ ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡಿದ್ದರು. ಸ್ವಲ್ಪ ದಿನ ಸಮ್ಮನಿದ್ದಂತೆ ನಟಿಸಿ, ಮತ್ತೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದಿದೆ ಎಂಬ ಕಾರಣಕ್ಕೆ ತಮ್ಮ ಚಟುವಟಿಕೆಗಳನ್ನು ಶುರು ಮಾಡಿರುವುದು ಖಂಡನೀಯ. ಕೇಂದ್ರೀಯ ವಿಶ್ವ ವಿದ್ಯಾಲಯ ದೇಶದ ಆಸ್ಥಿಯೇ ಹೊರತು, ಯಾವುದೇ ಒಂದು ಪಕ್ಷದ ಅಥವಾ ಕೋಮುವಾದಿ ಸಿದ್ದಾಂತವನ್ನು ಪ್ರತಿಪಾದಿಸುವ ಸಂಘಟನೆಯ ಆಸ್ತಿಯಲ್ಲ. ವಿವಿ 140 ಕೋಟಿ ಜನರ ಪ್ರಾತಿನಿಧಿಕ ಸಂಸ್ಥೆಯಾಗಿ ದೇಶದ ಸಂವಿಧಾನದ ಅಡಿಯಲ್ಲಿ ಕೆಲಸ ನಿರ್ವಹಿಸಬೇಕೇ ಹೊರತು, ಕೇಶವ ಕೃಪಾ ಅಥವಾ ನಾಗಪುರದ ಕಛೇರಿಯಾಗಿ ಅಲ್ಲ ದೂರಿದ್ದಾರೆ.

ಕಲಬುರಗಿಯ ಪ್ರಜ್ಞಾವಂತ ಜನರು ಈ ಕೋಮುವಾದಿ ಸಂಘಿಗಳ ಹುನ್ನಾರದ ವಿರುದ್ಧ ನಡೆಸುವ ಎಲ್ಲಾ ಸಂವಿಧಾನ ಪರ, ನಿಜ ಭಾರತದ ಉಳಿವಿನ ಪರವಾದ ಕೆಲಸಗಳು, ಮತ್ತು ಪ್ರತಿಭಟನೆಗೆ ಬೆಂಬಲ ಸೂಚಿಸುತ್ತೇವೆ. ನಾವು ನಿಮ್ಮೊಂದಿಗೆ ಇರುತ್ತೆವೆ ಎಂಬ ಭರವಸೆಯನ್ನು I ಸಂಘಟನೆಯ ಹಿರಿಯ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page