ಕೊಳವೆ ಬಾವಿಗಳಲ್ಲಿ ಮಕ್ಕಳು ಅಪಘಾತಕ್ಕೀಡಾಗುವುದನ್ನು ತಪ್ಪಿಸುವ ಸಲುವಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ಮುಂಬರುವ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ತಿದ್ದುಪಡಿ ವಿಧೇಯಕ ಮಂಡಿಸಲು ಇಂದು ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು ನಿರ್ಧರಿಸಿದೆ.
ಕೊಳವೆ ಬಾವಿ ದುರಂತ ಸಂಭವಿಸಿದಲ್ಲಿ ಅದರ ಮಾಲೀಕರಿಗೆ ಅಥವಾ ತಪ್ಪಿತಸ್ಥರಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು ₹10 ಸಾವಿರ ದಂಡ ವಿಧಿಸಲಾಗುವುದು.
ಈ ನಿಟ್ಟಿನಲ್ಲಿ ಕರ್ನಾಟಕ ಅಂತರ್ಜಲ (ನಿಯಮಾವಳಿ ಮತ್ತು ಅಭಿವೃದ್ಧಿ ಮತ್ತು ನಿರ್ವಹಣಾ ನಿಯಂತ್ರಣ) (ತಿದ್ದುಪಡಿ) ವಿಧೇಯಕ-2024ಕ್ಕೆ ಅನುಮೋದನೆ ನೀಡಲಾಗಿದೆ
ಕೊಳವೆ ಬಾವಿಗಳನ್ನು ಕೊರೆದು ವಿಫಲವಾದಲ್ಲಿ ಕೊಳವೆಬಾವಿಗಳನ್ನು ಮುಚ್ಚದೇ ಬಿಡುವುದನ್ನು ತಪ್ಪಿಸಲು ಈ ವಿಧೇಯಕವನ್ನು ತಿದ್ದುಪಡಿ ಮಾಡಲಾಗಿದೆ. ಒಂದು ವರ್ಷ ಶಿಕ್ಷೆ ಮತ್ತು 10 ಸಾವಿರ ದಂಡ ವಿಧಿಸಲು ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ವಿಫಲರಾಗುವ ಅಧಿಸೂಚಿಯಲ್ಲದ ಪ್ರದೇಶಗಳಲ್ಲಿ ಅಂತರ್ಜಲ ಉಪಯೋಗಿಸಿ ನಿಯಮ ಉಲ್ಲಂಘಿಸುವ ವ್ಯಕ್ತಿಗಳಿಗೆ 5000 ರೂ.ಗಳ ದಂಡ ಹಾಗೂ ಮೂರು ತಿಂಗಳ ಕಾರಾಗ್ರಹ ಶಿಕ್ಷೆ ವಿಧಿಸಲು ವಿಧೇಯಕದಲ್ಲಿ ಅವಕಾಶ ಮಾಡಿಕೊಡಲಾಗಿದೆ.