ಯುದ್ಧ ನಿಂತರೂ ರುಪಾಯಿ ಕುಸಿತ ನಿಲ್ಲಲ್ಲ: MUFG ವರದಿ

“ಭಾರತೀಯ ರೂಪಾಯಿ ದುರ್ಬಲವಾಗುವುದನ್ನು ನಾವು ನೋಡುತ್ತಿದ್ದೇವೆ. ಇರಾನ್ ಮತ್ತು ಮಧ್ಯಪ್ರಾಚ್ಯದ ಸಂಘರ್ಷ ಮುಂದುವರಿದರೆ ಮತ್ತು ಹಾರ್ಮುಜ್ ಜಲಸಂಧಿ ಮುಚ್ಚಲ್ಪಟ್ಟರೆ, USD/INR 95 ಮಟ್ಟವನ್ನು ಮೀರಿ ಏರಬಹುದು” ಎಂದು MUFG ಹೇಳಿದೆ

ಭಾರತೀಯ ರೂಪಾಯಿಗೆ ಈ ದುಃಸ್ಥಿತಿ ಬರಲು ಕಾರಣವೇನು? ಮಾರ್ಚ್ 27 ರಂದು‌ ರುಪಾಯಿ ಅಮೇರಿಕನ್ ಡಾಲರ್‌ಗೆ 94.85 ಕ್ಕೆ “ಐತಿಹಾಸಿಕ ಕುಸಿತವನ್ನು” ಕಂಡಾಗ ಇದು ಕೇವಲ ದೇಶದ ಪ್ರಶ್ನೆಯಾಗದೆ, ಅಂತರಾಷ್ಟ್ರೀಯ ಪ್ರಶ್ನೆಯಾಗಿ ಚರ್ಚೆಯಾಗಿತ್ತು. ರೂಪಾಯಿ ಡಾಲರ್‌ ಎದುರು ಮಾತ್ರ ಕುಸಿಯುತ್ತಿದೆ, ಇತರ ದೇಶಗಳ ಕರೆನ್ಸಿಗಳ ಮುಂದೆ ಅಲ್ಲ ಎಂಬ ಸರ್ಕಾರದ ಹೇಳಿಕೆಗೆ ಯಾವುದೇ ತಿರುಳು ಇಲ್ಲದಿರುವಂತೆ ಕಾಣುತ್ತದೆ.

ರೂಪಾಯಿಯನ್ನು ಏಷ್ಯಾದ “ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿರುವ ಕರೆನ್ಸಿ” ಎಂದು ಕರೆಯಲಾಗುತ್ತದೆ , ಇದು ಯುವಾನ್, ರುಪೈ ಮತ್ತು ಇತರ ಸಮಾನ ಕರೆನ್ಸಿಗಳಿಗಿಂತಲೂ ಗಮನಾರ್ಹವಾಗಿ ಕೆಟ್ಟದಾಗಿದೆ.

ಕಳೆದ ವರ್ಷದಲ್ಲಿ (2025) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಲವು ಬಾರಿ ಅಮೆರಿಕದ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯದ ತ್ವರಿತ ಕುಸಿತವನ್ನು ವಿವರಿಸಲು ಪ್ರಯತ್ನಿಸಿದ್ದರು. ಎಲ್ಲಿಯವರೆಗೆ ಎಂದರೆ, ಜಾಗತಿಕ ಅನಿಶ್ಚಿತೆಯ ಕಾರಣವನ್ನು ನೀಡುವುದರಿಂದ ಹಿಡಿದು “ರೂಪಾಯಿ ತನ್ನದೇ ಆದ ಮಟ್ಟವನ್ನು ಕಂಡುಕೊಳ್ಳುತ್ತಿದೆ ” ಎಂಬಂತಹ ಹೇಳಿಕೆಗಳನ್ನು ನೀಡುವವರೆಗೆ. ಈ ವರ್ಷದ ಆರ್ಥಿಕ ಸಮೀಕ್ಷೆಯು ರೂಪಾಯಿ “ತನ್ನ ತೂಕಕ್ಕಿಂತ ಕೆಳಗೆ ಜಾರಿ ಬೀಳುತ್ತಿದೆ” ಆದರೆ, ಇದು ಭಾರತೀಯ ಆರ್ಥಿಕತೆಯ ಪರಿಸ್ಥಿತಿ ಅಥವಾ “ಭಾರತದ ಅದ್ಭುತ ಆರ್ಥಿಕ ಮೂಲಭೂತ ಅಂಶಗಳನ್ನು” ಪ್ರತಿಬಿಂಬಿಸುವುದಿಲ್ಲ ಎಂದು ಅದು ಹೇಳಿದೆ. 

ಹಾಗಿದ್ದೂ, ಜಪಾನಿನ ದೊಡ್ಡ ಬ್ಯಾಂಕ್ MUFG ಯ ಹೊಸ ವರದಿಯ ಪ್ರಕಾರ, ರೂಪಾಯಿ ಕುಸಿತವು ಭಾರತ ಹೇಳುವುದಕ್ಕಿಂತ ಹೆಚ್ಚು ಆತಂಕಕಾರಿ ಸಂಗತಿಯನ್ನು ತೋರಿಸುತ್ತದೆ. ಜಗತ್ತಿನಲ್ಲಿ ಈಗ ಎದುರಾಗುತ್ತಿರುವ ದೊಡ್ಡ ಸಮಸ್ಯೆಯಾದ ತೈಲದ ಬೆಲೆ ಸ್ಥಿರವಾದರೂ (ಯುದ್ಧಕ್ಕಿಂತ ಮುಂಚಿನ ಬೆಲೆಗೆ ಬಂದರೂ), ರೂಪಾಯಿ ಡಾಲರ್‌ ಡಾಲರ್‌ ಮುಂದೆ ತುಂಬಾ ಕಡಿಮೆ ಬೆಲೆಯಲ್ಲೇ ಉಳಿಯುತ್ತದೆ.

“ಭಾರತೀಯ ರೂಪಾಯಿ ದುರ್ಬಲವಾಗಿದೆ ಎಂದು ನಾವು ನೋಡುತ್ತಿದ್ದೇವೆ. ಇರಾನ್ ಮತ್ತು ಮಧ್ಯಪ್ರಾಚ್ಯದ ಸಂಘರ್ಷ ಮುಂದುವರಿದರೆ ಮತ್ತು ಹಾರ್ಮುಜ್ ಜಲಸಂಧಿ ಮುಚ್ಚಲ್ಪಟ್ಟರೆ, USD/INR 95 ಮಟ್ಟವನ್ನು ಮೀರಿ ಏರಬಹುದು” ಎಂದು ವರದಿ ಹೇಳಿದೆ.

ಅವರು ಹೇಳಿರುವ ಅತ್ಯುತ್ತಮ ಸನ್ನಿವೇಶದಲ್ಲಿ, ಅಮೆರಿಕಾ-ಇಸ್ರೇಲ್ ಇರಾನ್ ಯುದ್ಧ ಮಾರ್ಚ್ ನಂತರ ಮುಗಿದು, ತೈಲದ ಬೆಲೆ ಯುದ್ಧಕ್ಕಿಂತ ಮುಂಚಿನ ಸುಮಾರು 80 ಡಾಲರ್ ಪ್ರತಿ ಬ್ಯಾರೆಲ್‌ಗೆ ಇಳಿದರೆ, ಭಾರತೀಯ ರೂಪಾಯಿ ಮಾರ್ಚ್ 2026ರಲ್ಲಿ ಡಾಲರ್‌ಗೆ 92ರಿಂದ ಡಿಸೆಂಬರ್ 2026ರಲ್ಲಿ 93.5ಕ್ಕೆ ಏರಬಹುದು. ತೈಲದ ಬೆಲೆ ಈಗಿರುವಂತೆಯೇ ಸುಮಾರು 100 ಡಾಲರ್ ಪ್ರತಿ ಬ್ಯಾರೆಲ್‌ನಲ್ಲಿ ಉಳಿದರೆ, ರೂಪಾಯಿ ಈ ವರ್ಷಾಂತ್ಯದಲ್ಲಿ ಡಾಲರ್‌ಗೆ 95.5ಕ್ಕೆ ತಲುಪುವ ಸಾಧ್ಯತೆ ಇದೆ.

ಸಂಘರ್ಷ ತೀವ್ರಗೊಂಡು, ತೈಲದ ಬೆಲೆ ಸುಮಾರು 120 ಡಾಲರ್ ಪ್ರತಿ ಬ್ಯಾರೆಲ್‌ಗೆ ಏರಿ ಅಲ್ಲೇ ಉಳಿದರೆ, ಡಿಸೆಂಬರ್‌ಗೆ ರೂಪಾಯಿ ಡಾಲರ್‌ಗೆ 97.5ಕ್ಕೆ ತಲುಪುತ್ತದೆ.

MUFG ವರದಿಯು ಯುದ್ಧದಲ್ಲಿ ತೀವ್ರತೆ ಕಡಿಮೆಯಾಗುತ್ತದೋ ಅಥವಾ ಇಲ್ಲವೋ ಎಂಬುದರ ಮೇಲೆ ವಿವಿಧ ಸನ್ನಿವೇಶಗಳನ್ನು ತೋರಿಸಿದೆ. ಆದರೆ ಒಂದು ವಿಷಯ ಸ್ಪಷ್ಟವಾಗಿದೆ – ಈ ವರ್ಷ ರೂಪಾಯಿಯ ಬೆಲೆ ಏನೇ ಆಗಲಿ ಇಳಿಯುತ್ತದೆ. ಕೇವಲ ಎಷ್ಟು ಇಳಿಯುತ್ತದೆ ಎಂಬುದು ಮಾತ್ರ ಬದಲಾಗುತ್ತದೆ.

ಭಾರತದ ಅನೇಕ ತಜ್ಞರು ಕೂಡ ಇದೇ ಅಭಿಪ್ರಾಯವನ್ನು ಹೇಳುತ್ತಿದ್ದಾರೆ. ರೂಪಾಯಿಯ ಬೆಲೆ ಇಳಿಯುತ್ತಿರುವುದು ಕೇವಲ ತಾತ್ಕಾಲಿಕ ಸಮಸ್ಯೆಯಲ್ಲ, ಇದು ದೇಶದ ಆರ್ಥಿಕತೆಯಲ್ಲಿ ಇರುವ ಮೂಲ ಸಮಸ್ಯೆಗಳನ್ನು (structural issues) ತೋರಿಸುತ್ತಿದೆ ಎಂದು ಅವರು ಹೇಳುತ್ತಾರೆ.

ಇತ್ತೀಚೆಗೆ ಪ್ರಖ್ಯಾತ ಆರ್ಥಿಕಶಾಸ್ತ್ರಜ್ಞ ಪ್ರಭಾತ್ ಪಟ್ನಾಯಕ್ ಬರೆದಂತೆ, ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ರೂಪಾಯಿಯ ಬೆಲೆ ಇಳಿಯುವುದನ್ನು ತಡೆಯಲು ಬಹಳ ಪ್ರಯತ್ನ ಮಾಡುತ್ತಿದ್ದರೂ, specculation ಮತ್ತು ಮಾರುಕಟ್ಟೆ ವಿಶ್ಲೇಷಕರ ಊಹಾಪೋಹಗಳು ಮುಂದುವರೆದಿವೆ. ರೂಪಾಯಿಯ ಬೆಲೆ ಇನ್ನೂ ಇಳಿಯುತ್ತಲೇ ಇದೆ ಎಂದು ಅವರು ಹೇಳಿದ್ದಾರೆ.

ಹಾರ್ಮುಜ್ ಜಲಸಂಧಿ ಮುಚ್ಚಲ್ಪಟ್ಟರೆ, ಭಾರತ ಮತ್ತು ಏಷ್ಯಾ ದೇಶಗಳಿಗೆ ಇದು ಬಹಳ ತೀವ್ರವಾಗಿ ಪರಿಣಾಮ ಬೀರುತ್ತದೆ ಎಂದು ವರದಿ ಹೇಳಿದೆ.

“ಭಾರತಕ್ಕೆ ವಿಶೇಷವಾಗಿ ತೊಂದರೆಯಾಗುವುದು ಎಲ್‌ಪಿಜಿ ಆಮದಿನಿಂದ. ಭಾರತದ ಎಲ್ಲಾ ಎಲ್‌ಪಿಜಿ ಮತ್ತು ನ್ಯಾಚುರಲ್ ಗ್ಯಾಸ್ ಲಿಕ್ವಿಡ್ಸ್ ಬಹುತೇಕ ಮಧ್ಯಪ್ರಾಚ್ಯದಿಂದ ಬರುತ್ತದೆ. ಇದರ ಜೊತೆಗೆ, ಭಾರತದ ನ್ಯಾಚುರಲ್ ಗ್ಯಾಸ್ ಆಮದಿನಲ್ಲಿ 60% ಮಧ್ಯಪ್ರಾಚ್ಯದಿಂದ, ವಿಶೇಷವಾಗಿ ಖತಾರ್‌ನಿಂದ ಬರುತ್ತದೆ” ಎಂದು ವರದಿ ತಿಳಿಸಿದೆ.

ಯುದ್ಧ ಪ್ರಾರಂಭವಾದ ನಂತರ ಭಾರತಕ್ಕೆ ತೈಲ ಹೊತ್ತು ಬರುತ್ತಿರುವ ಕೆಲವು ಹಡಗುಗಳು ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಿವೆ. ಆದರೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಸ್ಪಷ್ಟಪಡಿಸಿದ್ದಾರೆ – ಭಾರತೀಯ ಹಡಗುಗಳಿಗೆ ಯಾವುದೇ “ಬ್ಲ್ಯಾಂಕೆಟ್ ಡೀಲ್” (ಸಾಮಾನ್ಯ ಒಪ್ಪಂದ) ಇಲ್ಲ ಎಂದು.

MUFG ವರದಿಯು ಇನ್ನೊಂದು ದೊಡ್ಡ ಚಿಂತೆಯನ್ನು ಎತ್ತಿ ತೋರಿಸಿದೆ. ಭಾರತದ ಆರ್ಥಿಕತೆಗೆ ನೇರ ಪರಿಣಾಮದ ಜೊತೆಗೆ ಮತ್ತಷ್ಟು ಪರೋಕ್ಷ ಪರಿಣಾಮಗಳು (second-order consequences) ಉಂಟಾಗಬಹುದು ಎಂದು ಹೇಳಿದೆ.

ಇವುಗಳಲ್ಲಿ ಮುಖ್ಯವಾದವು:

  • ಗೊಬ್ಬರದ ಬೆಲೆ ಏರಿಕೆ
  • ಆಹಾರದ ಬೆಲೆ ಏರಿಕೆ
  • ಮಧ್ಯಪ್ರಾಚ್ಯದಿಂದ ಬರುವ ಹಣ (remittances) ಕಡಿಮೆಯಾಗುವುದು

ವರದಿಯಲ್ಲಿ ಹೇಳಿರುವಂತೆ: “ಭಾರತಕ್ಕೆ ನೇರ ಪರಿಣಾಮದ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಪರೋಕ್ಷ ಪರಿಣಾಮಗಳು ಬಹಳ ಮುಖ್ಯವಾಗುತ್ತವೆ. ಇದು ಅಂತಿಮವಾಗಿ ಹೆಚ್ಚಿನ ಹಣದುಬ್ಬರ (inflation), ನಿಧಾನವಾದ ಆರ್ಥಿಕ ಬೆಳವಣಿಗೆ ಮತ್ತು ದುರ್ಬಲ ರೂಪಾಯಿ ಎಂಬ ಸ್ಥಿತಿಯನ್ನು ಉಂಟುಮಾಡಬಹುದು. ಇದನ್ನು ಸ್ಟಾಗ್‌ಫ್ಲೇಷನ್ ಎಂದು ಕರೆಯುತ್ತಾರೆ.”

ಹಾರ್ಮುಜ್ ಜಲಸಂಧಿ ದೀರ್ಘಕಾಲ ಮುಚ್ಚಲ್ಪಟ್ಟರೆ, ತಯಾರಿಕೆ, ಸಾರಿಗೆ, ಪ್ರಯಾಣ ಮತ್ತು ಆಹಾರ ಉತ್ಪಾದನೆಯಂತಹ ಶಕ್ತಿ ಬಳಸುವ ಕ್ಷೇತ್ರಗಳಲ್ಲಿ ಉತ್ಪಾದನೆ ಮತ್ತು ಸರಬರಾಜು ಸರಪಳಿ ತೊಂದರೆಗಳು ಉಂಟಾಗುತ್ತವೆ. ಇದು ಕೋವಿಡ್ ಲಾಕ್‌ಡೌನ್‌ನಂತಹ ಸ್ಥಿತಿಯನ್ನು ಸೃಷ್ಟಿಸಬಹುದು. ಆದರೆ ಈ ಬಾರಿ ಬೆಲೆಗಳ ಏರಿಕೆ ಕೆಲವು ನಿರ್ದಿಷ್ಟ ಕ್ಷೇತ್ರಗಳಲ್ಲಿ ಹೆಚ್ಚು ಕೇಂದ್ರೀಕೃತವಾಗಿರುತ್ತದೆ.

ಸರಳವಾಗಿ ಹೇಳುವುದಾದರೆ, ರೂಪಾಯಿ ದುರ್ಬಲವಾಗುವುದರ ಜೊತೆಗೆ, ಆಹಾರ ಮತ್ತು ಗೊಬ್ಬರದ ಬೆಲೆ ಏರುತ್ತದೆ, ಜನರ ಖರ್ಚು ಹೆಚ್ಚಾಗುತ್ತದೆ ಮತ್ತು ದೇಶದ ಆರ್ಥಿಕ ಬೆಳವಣಿಗೆ ನಿಧಾನಗೊಳ್ಳುತ್ತದೆ.

ತೈಲದ ಬೆಲೆ ಏರಿದರೆ ಭಾರತದ ವಿದೇಶಿ ವಿನಿಮಯ ಭಂಡಾರ (foreign exchange reserves) ಮೇಲೆಯೂ ಒತ್ತಡ ಬೀಳುತ್ತದೆ ಎಂದು MUFG ವರದಿ ಹೇಳಿದೆ.

MUFG ಅಂದಾಜು ಮಾಡಿರುವಂತೆ: ಪ್ರತಿ 10 ಡಾಲರ್ (US$10/bbl) ತೈಲ ಬೆಲೆ ಏರಿದರೆ, ಭಾರತದ ಪ್ರಸ್ತುತ ಖಾತೆಯ ಕೊರತೆ (Current Account Deficit) GDPಯ 0.4% ರಿಂದ 0.5% ರಷ್ಟು ಹೆಚ್ಚಾಗುತ್ತದೆ.

ಒಟ್ಟಾರೆಯಾಗಿ, ತೈಲ ಬೆಲೆ ಏರಿಕೆಯು ಭಾರತದ ಆರ್ಥಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ವರದಿಯಲ್ಲಿ ಹೇಳಿರುವಂತೆ: “ಪ್ರತಿ 10 ಡಾಲರ್ ತೈಲ ಬೆಲೆ ಏರಿಕೆಯು ಭಾರತದ GDP ಬೆಳವಣಿಗೆಯನ್ನು ಸುಮಾರು 0.1% ರಿಂದ 0.2% ರಷ್ಟು ಕಡಿಮೆ ಮಾಡುತ್ತದೆ ಮತ್ತು ಹಣದುಬ್ಬರವನ್ನು (inflation) ಸುಮಾರು 0.2% ರಷ್ಟು ಹೆಚ್ಚಿಸುತ್ತದೆ.”

ಸರಳವಾಗಿ ಹೇಳುವುದಾದರೆ: ತೈಲ ಬೆಲೆ ಪ್ರತಿ 10 ಡಾಲರ್ ಏರಿದರೆ –

  • ಭಾರತದ ಆರ್ಥಿಕ ಬೆಳವಣಿಗೆ ಸ್ವಲ್ಪ ನಿಧಾನಗೊಳ್ಳುತ್ತದೆ
  • ಹಣದುಬ್ಬರ (ಬೆಲೆಗಳ ಏರಿಕೆ) ಸ್ವಲ್ಪ ಹೆಚ್ಚಾಗುತ್ತದೆ
  • ದೇಶದ ಖಾತೆಯ ಕೊರತೆಯೂ ಹೆಚ್ಚಾಗುತ್ತದೆ

“ಭಾರತದ ಪ್ರಸ್ತುತ ಆರ್ಥಿಕ ಬೆಳವಣಿಗೆಯ ಮುನ್ಸೂಚನೆ (GDP forecast) FY2026/27ರಲ್ಲಿ 7% ಆಗಿದೆ. ಆದರೆ ತೈಲದ ಬೆಲೆ ನಮ್ಮ ಅಂದಾಜಿನ 70 ಡಾಲರ್ನಿಂದ ಸುಮಾರು 100 ಡಾಲರ್ಗೆ ಏರಿ ಅಲ್ಲೇ ಉಳಿದರೆ, ಆರ್ಥಿಕ ಬೆಳವಣಿಗೆ 6.5% ಕ್ಕಿಂತ ಕಡಿಮೆಯಾಗುವ ಸಾಧ್ಯತೆ ಇದೆ” ಎಂದು ವರದಿ ಹೇಳಿದೆ.

Related Articles

ಇತ್ತೀಚಿನ ಸುದ್ದಿಗಳು