ಪೂರ್ವ ಉಕ್ರೇನ್‌ನಲ್ಲಿ ರಷ್ಯಾ ನಡೆಸಿದ ಡ್ರೋನ್ ದಾಳಿಯಲ್ಲಿ ಕನಿಷ್ಠ 15 ಗಣಿ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ಹಾಗೂ ದೇಶದ ಅತಿದೊಡ್ಡ ಖಾಸಗಿ ಇಂಧನ ಕಂಪನಿ ಡಿಟಿಇಕೆ (DTEK) ಮಾಹಿತಿ ನೀಡಿವೆ.
ಭಾನುವಾರ ಡಿನಿಪ್ರೊಪೆಟ್ರೋವ್ಸ್ಕ್ ಪ್ರದೇಶದಲ್ಲಿ ಗಣಿ ಕಾರ್ಮಿಕರನ್ನು ಮನೆಗೆ ಕರೆದೊಯ್ಯುತ್ತಿದ್ದ ಬಸ್‌ಗೆ ಡ್ರೋನ್ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ ಎಂದು ಡಿಟಿಇಕೆ ತಿಳಿಸಿದೆ. ಉಕ್ರೇನ್‌ನ ರಾಜ್ಯ ತುರ್ತು ಸೇವೆಯ ಪ್ರಕಾರ, ಈ ಘಟನೆಯಲ್ಲಿ ಕನಿಷ್ಠ 15 ಮಂದಿ ಗಾಯಗೊಂಡಿದ್ದಾರೆ.
ಇದರೊಂದಿಗೆ, ಉಕ್ರೇನ್‌ನ ವಿವಿಧ ಭಾಗಗಳಲ್ಲಿ ರಾತ್ರಿಯಿಡೀ ಹಾಗೂ ಭಾನುವಾರ ನಡೆದ ಪ್ರತ್ಯೇಕ ದಾಳಿಗಳಲ್ಲಿ ಕನಿಷ್ಠ ಇಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಝಪೊರಿಝಿಯಾ ನಗರದಲ್ಲಿರುವ ಹೆರಿಗೆ ಆಸ್ಪತ್ರೆಗೆ ಡ್ರೋನ್ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಗಾಯಗೊಂಡಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೆಯಾಗಿರುವ ಅಧಿಕೃತ ವಾಟರ್‌ಮಾರ್ಕ್‌ಗಳಿರುವ ವೀಡಿಯೊಗಳಲ್ಲಿ, ಆಸ್ಪತ್ರೆಯ ಕೊಠಡಿಗಳು ಹಾನಿಗೊಂಡಿರುವುದು, ಮುರಿದ ಕಿಟಕಿಗಳು ಹಾಗೂ ರೋಗಿಗಳ ವಾರ್ಡ್‌ಗಳು ಮತ್ತು ಕಚೇರಿಗಳಲ್ಲಿ ಚದುರಿದ ಅವಶೇಷಗಳು ಕಾಣಿಸುತ್ತಿವೆ.
