Tuesday, June 18, 2024

ಸತ್ಯ | ನ್ಯಾಯ |ಧರ್ಮ

‘ಸಾವರ್ಕರ್ ಅವರು ಸ್ವಾತಂತ್ರ್ಯ ಹೋರಾಟಗಾರ ಅಲ್ಲವಾದರೆ…

‘ಸಾವರ್ಕರ್ ಅವರು ಸ್ವಾತಂತ್ರ್ಯ ಹೋರಾಟಗಾರ ಅಲ್ಲವಾದರೆ ಅವರಿಗೆ ಕರಿ ನೀರಿನ ಶಿಕ್ಷೆ ಆದುದು ಯಾಕೆ?’ ಎಂದು ಸಾವರ್ಕರ್ ಬೆಂಬಲಿಗರು ಪ್ರಶ್ನೆ ಹಾಕುತ್ತಿದ್ದಾರೆ. ಆದರೆ ಅವರು ಮಾಡಿದ ಸ್ವಾತಂತ್ರ್ಯ ಹೋರಾಟದ ವಿವರ ಒದಗಿಸುವುದಿಲ್ಲ. ಅದಿರಲಿ, ಸಾವರ್ಕರ್ ಅಂಡಮಾನ್ ಶಿಕ್ಷೆಗೆ ಒಳಗಾಗಲು ಕಾರಣ ಒಂದು ಹತ್ಯಾ ಪ್ರಕರಣ. ಅದರ ವಿವರ ಇಲ್ಲಿದೆ.

1911 ರ ಪೂರ್ವದಲ್ಲಿ ಲಂಡನ್ನಿನಲ್ಲಿದ್ದಾಗ ಸಾವರ್ಕರ್ ಭಾರತೀಯ ಕ್ರಾಂತಿಕಾರಿಗಳ ನಿಲಯವಾಗಿದ್ದ “ಇಂಡಿಯಾ ಹೌಸ್” ನ ಖಾಯಂ ಸದಸ್ಯರಾಗಿದ್ದರು. ಮುಸ್ಲಿಮರ ಬಗ್ಗೆ ಮೊದಲಿಂದಲೂ ಅಸಹನೆಯನ್ನು ಬೆಳೆಸಿಕೊಂಡಿದ್ದರೂ, ಲಂಡನ್ನಿನಲ್ಲಿದ್ದಾಗ ಹಿಂದೂ-ಮುಸ್ಲಿಮರಿಬ್ಬರೂ ಭಾರತ ಮಾತೆಯ ಎರಡು ಕಣ್ಣುಗಳು ಎಂದು ಬಣ್ಣಿಸಿ 1857 ರ ಬಂಡಾಯದ ಬಗ್ಗೆ “ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ” ಎಂಬ ಪುಸ್ತಕವನ್ನೂ ಬರೆದಿದ್ದರು. ಲಂಡನ್ನಿನಲ್ಲಿದ್ದ ಬಿಸಿರಕ್ತದ ತರುಣರನ್ನು ಬ್ರಿಟಿಷ್ ವಿರೋಧಿ ಕೃತ್ಯಗಳಿಗೆ ಪ್ರಚೋದಿಸುತ್ತಿದ್ದರು. ತಾವು ತೆರೆಮರೆಯಲ್ಲಿದ್ದುಕೊಂಡು ಅಂಥಾ ಕೃತ್ಯಗಳಲ್ಲಿ ತಮ್ಮ ಪಾತ್ರ ಸಾಬೀತಾಗದಂತೆ ಎಚ್ಚರವಹಿಸುತ್ತಿದ್ದರು.

ಲಂಡನ್ನಿನಿಂದಲೇ ಮಹಾರಾಷ್ಟ್ರದಲ್ಲಿದ್ದ ತಮ್ಮ “ಅಭಿನವ ಭಾರತ್” ನ ಕ್ರಾಂತಿಕಾರಿ ಗೆಳೆಯರಿಗೆ ಬ್ರಿಟಿಷ್ ಅಧಿಕಾರಿಗಳನ್ನು ಹತ್ಯೆ ಮಾಡಲು ಬೇಕಾದ ಪಿಸ್ತೂಲನ್ನು ಸರಬರಾಜು ಮಾಡುತ್ತಿದ್ದರು.

ಅಂಥಾ ಒಂದು ಹತ್ಯಾ ಪ್ರಯತ್ನದ ಭಾಗವಾಗಿ ನಾಸಿಕ್ ನ ಬ್ರಿಟಿಷ್ ಮ್ಯಾಜಿಸ್ಟ್ರೇಟ್ ಆಗಿದ್ದ ಎಎಮ್ ಟಿ ಜಾಕ್ಸನ್ (1866-1909) ಅನ್ನು ಕೊಲೆ ಮಾಡಲಾಗುತ್ತದೆ. ಜಾಕ್ಸನ್ ತುಂಬಾ ಓದಿಕೊಂಡ ಓರ್ವ ಇಂಡಾಲಜಿಸ್ಟ್ ಮತ್ತು ಇತಿಹಾಸಕಾರ. ಪಂಡಿತ್ ಜಾಕ್ಸನ್ ಎಂಬ ಹೆಸರನ್ನೂ ಗಳಿಸಿದ್ದ ಈ ಅಧಿಕಾರಿ ಭಾರತ ಇತಿಹಾಸದ ಬಗ್ಗೆ, ಜಾನಪದ ಮತ್ತು ಸಂಸ್ಕೃತಿಯ ಬಗ್ಗೆ ಅನೇಕ ಪ್ರಬಂಧ ಬರೆದ ವಿದ್ವಾಂಸ.

ಜಾಕ್ಸನ್ ನ ಹತ್ಯೆಗೆ ಸಾವರ್ಕರ್ ಅವರು ಬ್ರಿಟನ್ನಿನಿಂದ ಕಳಿಸಿದ ಪಿಸ್ತೂಲನ್ನು ಬಳಸಿದ್ದರೆಂದು ಗೊತ್ತಾಗುತ್ತದೆ. ಹೀಗಾಗಿ ಸಾವರ್ಕರ್ ಅವರನ್ನು ಬಂಧಿಸಿ, ಭಾರತದಲ್ಲಿ ವಿಚಾರಣೆ ನಡೆಸಿ ಜೀವಾವಧಿ ಶಿಕ್ಷೆ ವಿಧಿಸಿ ಅಂಡಮಾನ್ ಜೈಲಿಗೆ ಕಳಿಸುತ್ತಾರೆ.

1909 ರಲ್ಲಿ ಲಂಡನ್ನಿನಲ್ಲಿ ಕರ್ಜನ್ ಅವರನ್ನು ಕೊಂದ ಮದನ್ ಲಾಲ್ ಧಿಂಗ್ರಾ ಕೂಡ ಗಾಂಧಿಯನ್ನು ಕೊಂದ ಗೋಡ್ಸೆಯಂತೆ ಸಾವರ್ಕರ್ ಅವರನ್ನು ತನ್ನ ಗುರು ಎಂದು ಭಾವಿಸಿದ್ದರು. ಆದರೆ ಈ ಎರಡೂ ಪ್ರಕರಣಗಳಲ್ಲಿ ಸಾವರ್ಕರ್ ತನ್ನ ಶಿಷ್ಯರನ್ನು ಮುಂದೆ ಬಿಟ್ಟು ತಾವು ಹಿಂದೆ ಉಳಿದಿದ್ದರು. ಅವರ ಪಾತ್ರ ಸಾಬೀತಾಗಿ ಶಿಕ್ಷೆಯಾಗಿದ್ದು ಜಾಕ್ಸನ್ ಕೊಲೆ ಪ್ರಕರಣದಲ್ಲಿ ಮಾತ್ರ.

ಹೀಗೆ ತಮ್ಮ ರಾಜಕೀಯ ಜೀವನದಲ್ಲಿ ಮೊಟ್ಟಮೊದಲಬಾರಿಗೆ ಜೈಲುಶಿಕ್ಷೆ ಎದುರಿಸಬೇಕಾಗಿ ಬಂದರೂ ಅದನ್ನು ವೀರೋಚಿತವಾಗಿ ಎದುರಿಸದೇ ಅಂಡಮಾನ್ ಗೆ ಹೋದ ಮರುತಿಂಗಳಿಂದಲೇ ಬ್ರಿಟಿಷರಿಗೆ ಶರಣಾಗತಿ ಹಾಗೂ ಕ್ಷಮಾದಾನ ಪತ್ರಗಳನ್ನು ಬರೆಯಲು ಪ್ರಾರಂಭಿಸಿದರು. ಹಾಗೂ ಬ್ರಿಟಿಷರಿಗೆ ಕೊಟ್ಟ ಮಾತಿನಂತೆ ತಾವು ಬಿಡುಗಡೆಯಾದ ನಂತರ ಸದಾ ಬ್ರಿಟಿಷರ ಜೊತೆ ಕೈಗೂಡಿಸಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ದ್ರೋಹ ಬಗೆಯುತ್ತಾ ಹೋದರು.

ಹೀಗೆ ಸಾವರ್ಕರ್ 1911ಕ್ಕೆ ಮುನ್ನ ತೆರೆಮರೆಯ ಕ್ರಾಂತಿಕಾರಿಯಾಗಿದ್ದರೂ 1911ರ ನಂತರ ಬಹಿರಂಗ ದೇಶದ್ರೋಹಿಯಾಗಿದ್ದರು.

ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.

ಶ್ರೀನಿವಾಸ್‌ ಕಾರ್ಕಳ
ಚಿಂತಕರು, ಬರಹಗಾರರು

Related Articles

ಇತ್ತೀಚಿನ ಸುದ್ದಿಗಳು