Friday, June 14, 2024

ಸತ್ಯ | ನ್ಯಾಯ |ಧರ್ಮ

ಪ್ರೊ. ರೀಫಾತ್ ಅಲಾರೀರ್: ಪ್ಯಾಲೇಸ್ತೀನಿನ ಸಾಹಿತ್ಯ ಸಂಗ್ರಾಮಿಯೊಬ್ಬನ ಬಲಿದಾನ

ದಾಳಿಗೊಳಗಾದ ದೇಶವನ್ನು ಅಕ್ಷರದ ಬಂಕರ್‌ಗಳಲ್ಲಿ ಕಾಪಿಟ್ಟುಕೊಳ್ಳುವ ದಾರಿ ತೋರಿದ ಅಕ್ಷರಯೋಧ - ಶಿವಸುಂದರ್, ಚಿಂತಕರು

ಇದೆ ಡಿಸೇಬರ್ ೭ ರಂದು ಪ್ಯಾಲೇಸ್ತೀನಿನ ಪ್ರಖ್ಯಾತ ಕವಿ , ಮೇಧಾವಿ ಪ್ರೊ. ರೀಫಾಟ್ ಅಲಿರಾರ್ ಇಸ್ರೇಲಿನ ಬಾಂಬುಗಲಿಗೆ ಬಲಿಯಾಗಿದ್ದಾರೆ.

ಒಂದು ದೇಶ ಅಥವಾ ಸಮುದಾಯದ ಮೇಲೆ ದಾಳಿ ನಡೆಯುತ್ತಿರುವಾಗ ಆ ದೇಶದ ಸಾಹಿತಿ – ಕಲಾವಿದರು ಹೇಗೆಲ್ಲಾ ಪ್ರತಿಭಟಿಸಬಹುದು ಮತ್ತು ದೇಶದ ಅಸ್ಮಿತೆಯನ್ನು ರಕ್ಷಿಸಿಕೊಳ್ಳಬಹುದು ಎನ್ನುವುದಕ್ಕೆ ಉತ್ತರ ಪ್ರೊ. ರೀಫಾತ್ ಅಲಾರೀರ್.

ಒಬ್ಬ ಸಾಹಿತಿ- ಕಲಾವಿದ ಸೃಜನಶೀಲ ವಾಗಿ ಬದುಕುವ ಮೂಲಕ ತಾನಾಗಲೀ,ತನ್ನ ದೇಶವಾಗಲೀ ಸಾಯುವುದಿಲ್ಲ ಎಂದು ತೋರಿಸಬಹುದು. ಧ್ವನಿಯನ್ನು ಹತ್ತಿಕ್ಕಿದರೂ ಇತರ ಪ್ರಾಕಾರಗಳ ಮೂಲಕ ಜಗತ್ತಿಗೆ ತಮ್ಮ ಇರುವನ್ನು, ಪರಿಸ್ಥಿತಿಯನ್ನು ಸಾರಿ ಹೇಳಬಹುದು. ಭೌತಿಕವಾಗಿ ಒಂದು ನೆಲವನ್ನು ಆಕ್ರಮಿಸಿದರೂ ಎದೆಯಲ್ಲಿರುವ ನೆಲೆಯನ್ನು ಆಕ್ರಮಿಸಲಾಗದು ಎಂದು ದಾಖಲಿಸಬಹುದು. ಆ ಮೂಲಕ ವಿನಾಶ- ವಿಧ್ವಂಸಗಳ ನಡುವೆಯೂ ಹೊಸ ಚಿಗುರಿನ ಎಲೆಯನ್ನು ಭವಿಷ್ಯಕ್ಕಾಗಿ ಕಾಪಾಡಿಕೊಳ್ಳಬಹುದು.

ಗಾಜಾದ ಪ್ಯಾಲೆಸ್ತೀನ್ ಪ್ರೊಫೆಸರ್ ರೀಫಾತ್ ಅಲಾರೀರ್ ಅಂಥ ಸಾಂಸ್ಕೃತಿಕ ಯೋಧರ ಪರಂಪರೆಗೆ ಸೇರಿದವರು. ಸತ್ತರೂ ಹುಟ್ಟಿ ಬೆಳೆದ ಗಾಜಾ ತೊರೆಯೇ ಎಂದು ಬಾಂಬುಗಳ ನಡುವೆಯೇ ಬದುಕುತ್ತಾ ಬಲಿಯಾದ ಗಾಜಾದ ಕಥೆಗಾರ ಆಲಾರೇರ್. ಪ್ಯಾಲೇಸ್ಟಿನಿಯರ ಕಥೆಗಳನ್ನೇ ಕಥನಕಣವನ್ನಾಗಿ ರೂಪಿಸಿದವರು.

1979ರಲ್ಲಿ ಆಕ್ರಮಿತ ಗಾಜಾದಲ್ಲಿ ಇಸ್ರೇಲ್ ದೌರ್ಜನ್ಯಗಳನ್ನೇ ಕಂಡುಂಡು ಬೆಳದ ಅಲಾರೇರ್ ನಂತರ ಲಂಡನ್ನಿನಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮಲೇಷಿಯಾ ವಿಶ್ವವಿದ್ಯಾಲಯದಿಂದ ಡಾಕ್ಟೊರೇಟ್ ಪದವಿಯನ್ನು ಪಡೆದವರು. ಗಾಜಾದ ವಿಶ್ವವಿಧಾಯಲಯದಲ್ಲಿ ಸಾಹಿತ್ಯ ಮತ್ತು ಸೃಜನಶೀಲ ಬರವಣಿಗೆಯ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.

ಪ್ರೊ. ರೀಫಾತ್ ಅಲಾರೀರ್ ಅವರು ಇಸ್ರೇಲ್ ಆಕ್ರಮಣದಿಂದ ಪ್ಯಾಲೆಸ್ತೀನ್ ಅಸ್ಮಿತೆಯನ್ನು ಕಾಪಾಡಿಕೊಳ್ಳಲು ಕಥನ ಮಾರ್ಗ ಹಿಡಿದಿದ್ದರು. ಅವರ ಪ್ರಕಾರ ಪ್ಯಾಲೇಸ್ಟಿನಿಯರ ಹಿರಿಯರು ಹೇಳುತ್ತಾ ಬಂದ ಕಥೆಗಳನ್ನೂ ಮುಂದಿನ ಪೀಳಿಗೆಗೆ ದಾಟಿಸುವುದು ಕೂಡ ಪ್ಯಾಲೆಸ್ತೀನ್ ಅನ್ನು ಉಳಿಸಿಕೊಳ್ಳುವ ಒಂದು ಪರಿ.

ಇತಿಹಾಸದಲ್ಲಿ ಮತ್ತು ನಿತ್ಯ ಜೀವನದಲ್ಲಿ ಬೇರುಬಿಟ್ಟ ಪ್ಯಾಲೇಸ್ಟಿನಿಯರ ಕಥೆಗಳನ್ನು ಕಾಪಾದುತ್ತ, ಅವನ್ನು ಎಳೆಯ ಪೀಳಿಗೆಗೆ ಹರಡುತ್ತಾ, ಹೊಸ ಪೀಳಿಗೆಯ ಹೊಸ ಕಥೆಗಳನ್ನು ದಾಖಲಿಸುತ್ತಾ… ಇಸ್ರೇಲಿನ ಬಾಂಬು ದಾಳಿಯಿಂದ ಪ್ಯಾಲೇಸ್ತೀನನ್ನು ಅಕ್ಷರಗಳ ಬ್ಯಾರಕ್ಕಿನಲ್ಲಿ ಕಾಪಾಡಬಹುದು ಎಂದು ಭಾವಿಸಿದ್ದ ರೀಫಾತ್ ಅದನ್ನು ಸಾಧಿಸಲು ಅಕ್ಷರ ಕಮಾಂಡರ್ ಆಗಿಯೇ ಸೆಣೆಸಿದರು.

ಅದಕ್ಕಾಗಿಯೇ ಇಸ್ರೇಲ್ ಆಕ್ರಮಣದ ವಿರುದ್ಧ ” We Are Not Numbers” ಎಂಬ ಬರಹ ಯೋಧರ ಸಂಘಟನೆಯನ್ನೂ ಹುಟ್ಟುಹಾಕಿದರು.

ಗಾಜಾದ ತರುಣ ತರುಣಿಯರಿಗೆ ತಮ್ಮ ಕಥೆಗಳನ್ನೂ ಬರೆಯಲು ತಾವು ಬೋಧಿಸುತ್ತಿದ್ದ ಗಾಜಾ ವಿಶ್ವವಿದ್ಯಾಲಯದಲ್ಲಿ ಪ್ರೋತ್ಸಾಹಿಸಿದರು. ಅದನ್ನು ” Gaja Writes Back” ಎಂದು ಸಂಕಲಿಸಿದರು.
ಮತ್ತು ಅದನ್ನು ಜಗತ್ತಿನ ಗಮನಕ್ಕೆ ತಂದು ಪ್ಯಾಲೇಸ್ತೀನನ್ನ ಅಳಿಸಿಹಾಕಿಬಿಡಬೇಕೆಂಬ ಇಸ್ರೇಲ್ ವ್ಯೂಹತಂತ್ರಕ್ಕೆ ಸಾಂಸ್ಕೃತಿಕ ಸವಾಲು ಎಸೆದರು.

” Gaja Unsilenced” ಎಂಬ ಮತ್ತೊಂದು ಸಂಕಲನವನ್ನು ತಂದು ಪ್ಯಾಲೇಸ್ತೀನನ್ನು ಅಕ್ಷರ ಲೋಕದಲ್ಲಿ ಬದುಕಿಸಿಕೊಳ್ಳುವ ಕಾಯಕ ಮುಂದುವರೆಸಿದರು..

ಪರಕೀಯರ ನೆಲವನ್ನು ತನ್ನದೆನ್ನುವ ಆಕ್ರಮಣಕಾರರಿಗೆ , ಹಾಗಿದ್ದರೆ ಈ ನೆಲದ ಕಥೆ ಹೇಳಿ ಎಂದು ಸವಾಲು ಹಾಕಿ ಹಿಮ್ಮೆಟ್ಟಿಸಿದರು. ಪ್ಯಾಲೆಸ್ತೀನ್ ಅನ್ನು ಭೌತಿಕವಾಗಿ ಆಕ್ರಮಿಸಿರುವ ಇಸ್ರೇಲಿ ಆಕ್ರಮಣಕಾರರ ಭಾವಲೋಕದಲ್ಲಿ ಪ್ಯಾಲೆಸ್ತೀನ್ ಇಲ್ಲವೇ ಇಲ್ಲ ಎಂದು ಅವರ ಬರಡುತನವನ್ನು ಬಯಲಿಗೆಳೆದರು.

ಇಂಥಾ ಪ್ರೊ. ರೀಫಾತ್ ಅಲಾರೀರ್ ಗಾಜಾದ ಮೇಲೆ ಇಸ್ರೇಲ್ ಅತ್ಯಂತ ಘನಘೋರ ಹಾಗೂ ಅನ್ಯಾಯಯುತ ಯುದ್ಧ ಪ್ರಾರಂಭಿಸಿದ ಮೇಲೂ ತನ್ನ ಮನೆ ಮತ್ತು ನೆಲೆಯಾದ ಗಾಜಾ ವನ್ನು ಯಾವ ಕಾರಣಕ್ಕೂ ತೊರೆಯಲಾರೆ ಎಂದು ಉತ್ತರ ಗಾಜಾದಲ್ಲೇ ಉಳಿದುಕೊಂಡಿದ್ದರು.

ಇದನ್ನು ಅರಿತುಕೊಂಡ ಇಸ್ರೇಲಿ ಆಕ್ರಮಕಾರಿ ಪಡೆಗಳು ಅವರ ಮನೆಯ ಮೇಲೆ ಗುರಿಯಿಟ್ಟು ದಾಳಿ ಮಾಡಿ ಡಿಸೇಂಬರ್ 7 ರಂದು ಪ್ಯಾಲೆಸ್ತೀನ್ ಜನರ ಈ ಬೌದ್ಧಿಕ ಹಾಗೂ ಸಾಂಸ್ಕೃತಿಕ ಯೋಧನನ್ನು, ಪ್ಯಾಲೆಸ್ತೀನ್ ಕಥನವೀರನನ್ನು ಕೊಂದು ಹಾಕಿದರು.

ಬಲಿಯಾಗುತ್ತೇನೆಂದು ಗೊತ್ತಿದ್ದೇ ಬರೆದಂತಿರುವ ಪ್ರೊ. ರೀಫಾತ್ ಅವರ ಕೊನೆಯ ಪದ್ಯದ ಒಂದು ಸಾಲು:

ನಾನು ಸಾಯುವುದು ಕಡ್ಡಾಯವಾದರೆ
ನೀನು ಬದುಕಬೇಕು ..
ನನ್ನ ಕಥೆಯನ್ನು ಹೇಳಲು
ನನ್ನ ಸರಕನ್ನು ಮಾರಲು
……
ನಾವು ಸಾಯುವುದು ಕಡ್ಡಾಯವಾದರೆ
ಅದು ಬರವಸೆಗಳನ್ನು ಹುಟ್ಟಿಸಲಿ
ಕೇಳುವ ಕಥೆಯಾಗಲಿ…

ಸಾಹಿತಿ ಕಲಾವಿದರು ಹೀಗೂ ತಮ್ಮ ಸಮುದಾಯಗಳನ್ನು ದೇಶವನ್ನು ಬದುಕಿಸಿಕೊಳ್ಳಬಹುದು. ಕಥನ ರಂಗದಲ್ಲಿ ಶತ್ರುಗಳನ್ನು ಸೋಲಿಸಬಹುದು.ಆದರೆ ಸಾಯುವುದಕ್ಕೆ ಸಿದ್ಧವಾದ ಸಾಹಿತಿ ಕಲೆಗಾರ ಮಾತ್ರ ಬದುಕುವ ಸಾಲನ್ನು ಬರೆಯಬಹುದು . ಅಲ್ಲವೇ?

ಶಿವಸುಂದರ್, ಚಿಂತಕರು

Related Articles

ಇತ್ತೀಚಿನ ಸುದ್ದಿಗಳು