Saturday, June 15, 2024

ಸತ್ಯ | ನ್ಯಾಯ |ಧರ್ಮ

ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ ಸದಾನಂದಗೌಡ

ಹಾಸನ: ಮಾಜಿ ಮುಖ್ಯಮಂತ್ರಿ ಹಾಗೂ ಲೋಕಸಭಾ ಸದಸ್ಯ ಡಿ.ವಿ. ಸದಾನಂದಗೌಡ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.

ಹಾಸನದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ರಾಜಕೀಯದಲ್ಲಿ ಮುಂದುವರಿಯದಿರಲು ನಿರ್ಧರಿಸಿದ್ದೇನೆ. ಪಕ್ಷದಿಂದ ಸಾಕಷ್ಟು ಅವಕಾಶ ಕಲ್ಪಿಸಲಾಗಿದೆ ಎಂದರು. “ನನ್ನ ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ಜೊತೆಗೆ ಬಿ.ಎಸ್. ಯಡಿಯೂರಪ್ಪ, ನಾನು ಪಕ್ಷದ ನಂಬರ್ ಒನ್ ಫಲಾನುಭವಿ” ಎಂದು ಹೇಳಿದರು.

ಕೆಲವು ತಿಂಗಳುಗಳಿಂದ 2024ರ ಚುನಾವಣೆಯಲ್ಲಿ ಸ್ಪರ್ಧಿಸಲು ಗೌಡರಿಗೆ ಬಿಜೆಪಿ ಟಿಕೆಟ್ ಸಿಗದಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿರುವುದರಿಂದ ಅವರನ್ನು ಕಡೆಗಣಿಸಬಹುದು ಎಂಬ ಮಾತು ಬಲವಾಗಿದೆ.

10 ವರ್ಷ ಶಾಸಕ, 20 ವರ್ಷ ಸಂಸದನಾಗಿದ್ದೇನೆ ಎಂದು ಗೌಡರು ಹೇಳಿದರು. ”ನಾನು ಒಂದು ವರ್ಷ ಮುಖ್ಯಮಂತ್ರಿ, ಒಂದೂವರೆ ವರ್ಷ ವಿರೋಧ ಪಕ್ಷದ ನಾಯಕ, ಐದು ವರ್ಷ ವಿರೋಧ ಪಕ್ಷದ ಉಪನಾಯಕ, ನಾಲ್ಕೂವರೆ ವರ್ಷ ಪಕ್ಷದ ರಾಜ್ಯಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ನರೇಂದ್ರ ಮೋದಿ ನೇತೃತ್ವದ ಸಂಪುಟದಲ್ಲಿ ಏಳು ವರ್ಷಗಳ ಕಾಲ ಸಚಿವರಾಗಿ ದೇಶ ಸೇವೆ ಮಾಡುವ ಅವಕಾಶ ಸಿಕ್ಕಿತ್ತು. ಒಬ್ಬ ರಾಜಕಾರಣಿ ಇಷ್ಟೆಲ್ಲ ಅವಕಾಶಗಳಿಂದ ತೃಪ್ತನಾಗದಿದ್ದರೆ ಅವನು ಸ್ವಾರ್ಥಿ” ಎಂದು ಹೇಳಿದರು.

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ತಮ್ಮ ಆಪ್ತ ಯಡಿಯೂರಪ್ಪ ರಾಜೀನಾಮೆ ನೀಡಿದ ನಂತರ ಗೌಡರು ಆಗಸ್ಟ್ 2011ರಿಂದ ಜುಲೈ 2012 ವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. ಅವರ ಸ್ಥಾನಕ್ಕೆ ಜಗದೀಶ್ ಶೆಟ್ಟರ್ ಬಂದರು. ಅವರು ರೈಲ್ವೆ, ರಾಸಾಯನಿಕಗಳು ಮತ್ತು ರಸಗೊಬ್ಬರಗಳು, ಕಾನೂನು ಮತ್ತು ನ್ಯಾಯ ಮತ್ತು ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗೌಡರು, ʼಪ್ರತಿಯೊಂದು ರಾಜಕೀಯ ಪಕ್ಷದಲ್ಲಿ ಕನಿಷ್ಠ ಶೇ.10ರಷ್ಟು ಮಂದಿ ಅಧಿಕಾರಕ್ಕಾಗಿ ಬೇರೆ ಪಕ್ಷಕ್ಕೆ ಜಿಗಿಯಲು ಸಿದ್ಧರಿರುತ್ತಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಬಿಜೆಪಿಗೆ ಜಿಗಿಯುತ್ತಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತ್ತೆ ಕಾಂಗ್ರೆಸ್‌ಗೆ ಜಿಗಿಯುತ್ತಾರೆ. ಅಂತಹವರು ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳಲ್ಲೂ ಇದ್ದಾರೆ’ ಎಂದರು.

Related Articles

ಇತ್ತೀಚಿನ ಸುದ್ದಿಗಳು