Tuesday, July 16, 2024

ಸತ್ಯ | ನ್ಯಾಯ |ಧರ್ಮ

ರಂಗಕರ್ಮಿ ಸದಾನಂದ ಸುವರ್ಣ ನಿಧನ

ರಂಗನಟ, ನಿರ್ದೇಶಕ, ರಂಗಸಂಯೋಜಕ, ಸಾಕ್ಷ್ಯಚಿತ್ರ ಮತ್ತು ಚಲನಚಿತ್ರಗಳ ನಿರ್ಮಾಪಕ ಸದಾನಂದ ಸುವರ್ಣರವರು ಇಂದು ಮಂಗಳೂರಿನಲ್ಲಿ ನಿಧನ ಹೊಂದಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ತೊಂಬತ್ತಮೂರು ವರ್ಷ ಪ್ರಾಯದ ಸುವರ್ಣರವರು ನಾಟಕ, ಕಥೆ, ಕಾದಂಬರಿಗಳ ಲೇಖಕ, ಪ್ರಕಾಶಕ, ಕೆಲವಾರು ಪ್ರತಿಷ್ಠಾನಗಳಿಗೆ ಪ್ರಾಯೋಜಕ, ನಾಟಕರಂಗಕಲೆಯ ತರಬೇತಿಗಾರನಾಗಿ ದಣಿವರಿಯದೆ ಸೇವೆ ಸಲ್ಲಿಸಿದವರು.
ದಕ್ಷಿಣ ಕನ್ನಡಜಿಲ್ಲೆಯ ಮುಲ್ಕಿಯಲ್ಲಿ, 24-12-1931ರಂದು ಜನಿಸಿದ ಇವರ ತಾಯಿ ಪೂವಮ್ಮ, ತಂದೆ ರುಕ್ಕ ಕೋಟ್ಯಾನ್. ಅವರ ಪ್ರಾಥಮಿಕಶಿಕ್ಷಣ ತಾಯಿಯ ತವರಿನಲ್ಲಿ ಅಜ್ಜಿಯ ಆಶ್ರಯದಲ್ಲಿ ‘ಮುಲ್ಕಿಯ ಬೋರ್ಡ್ ಹೈಸ್ಕೂಲ್’ ನಲ್ಲಿ ಐದನೆಯ ಇಯತ್ತೆವರೆಗೆ ನಡೆಯಿತು. ತಮ್ಮ ಚಿಕ್ಕವಯಸ್ಸಿನಲ್ಲೇ ಬೊಂಬಾಯಿಗೆ ಬಂದ ಸುವರ್ಣರವರ ತಂದೆ ‘ಬ್ಯಾಂಕ್ ಆಫ್ ಬರೋಡ’ದಲ್ಲಿ ಕೆಲಸಮಾಡುತ್ತಿದ್ದರು.
ಉದಯ ಕಲಾ ನಿಕೇತನ ಎಂಬ ಸಂಸ್ಥೆಯ ಮೂಲಕ 70 ರ ದಶಕದಲ್ಲಿ ಹಲವಾರು ಉದಯನ್ಮುಖಿ ರಂಗಕರ್ಮಿಗಳಿಗೆ ಕಲಾಕಾರರಿಗೆ ಪ್ರೋತ್ಸಾಹನೀಡಿ ಅವರು ತಮ್ಮ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಲು ಸಹಾಯಮಾಡಿದರು. ಈ ಸಂಸ್ಥೆಯ ವತಿಯಿಂದ ತಾವೇ ಬರೆದ ಕೆಲವಾರು ನಾಟಕಗಳನ್ನು ಪ್ರದರ್ಶಿಸಿ ಅದರಲ್ಲಿ ಯಶಸ್ಸನ್ನು ಹಾಸಲುಮಾಡಿದರು. ಕಾಲೇಜಿನ ವಾರ್ಷಿಕೋತ್ಸವಗಳಿಗಾಗಿಯೇ ವಿಶೇಷವಾಗಿ ರಚಿಸಿದ ನಾಟಕಗಳನ್ನು ತಾವೇ ನಿರ್ದೇಶಿಸಿ, ಅಭಿನಯಿಸಿ ಯಶಸ್ಸನ್ನು ಕಂಡರು. ಥಿಯೇಟರ್ ಟ್ರೇನಿಂಗ್ ಡಿಪ್ಲೊಮ ಕೋರ್ಸ್ ಗೆ ಸೇರಿ ಅಲ್ಲಿ ರಂಗ ತಜ್ಞರ ಜೊತೆಯಲ್ಲಿ ವಿಚಾರ-ವಿನಿಮಯ, ವಿಮರ್ಶೆ, ರಸಆಸ್ವಾನ, ಜಿಜ್ಞಾಸೆ ನಡೆಸಿ, ಆಳವಾದ ಜ್ಞಾನವನ್ನು ಸಂಪಾದಿಸಿದರು. ಸಾಮೂಹಿಕ ಮಾಧ್ಯಮಗಳಲ್ಲಿ ಭಾಗವಹಿಸಿ, ಮುಂಬಯಿನ ಐ. ಎ. ಸೊಸೈಟಿಯ ಫೋಟೋಗ್ರಫಿಯ ವಿಶೇಷ ತರಪೇತಿ ಪಡೆದು, ಅನೇಕ ನಾಟಕಗಳನ್ನು ದಿಗ್ದರ್ಶಿಸಿದ್ದಾರೆ.
ಇವರ ಪ್ರಮುಖ ನಾಟಕಗಳು: ಈಡಿಪಸ್, ಕದಡಿದ ನೀರು, ಪ್ರಜಾಪ್ರಭುತ್ವ-ಲೊಳಲೊಟ್ಟೆ, ಧರ್ಮ ಚಕ್ತ್ರ, ಸತ್ಯಂ ವದ-ಧರ್ಮಂ ಚರ, ಯಾರು ನನ್ನವರು ?
ಸುವರ್ಣರ ಚಲನಚಿತ್ರ ಬದುಕು:
ಇವರ ನಿರ್ಮಾಣದ ಘಟಶ್ರಾದ್ಧ ಚಲನಚಿತ್ರ ಭಾರತದಲ್ಲಿ ಕಳೆದ ಶನಮಾನದಲ್ಲಿ ತಯಾರಾದ ಉತ್ಕೃಷ್ತ 100 ಚಲನಚಿತ್ರಗಳಲ್ಲಿ ಒಂದಾದ ಹೆಗ್ಗಳಿಕೆಯನ್ನು ಪಡೆಯಿತು. 15 ಪ್ರಶಸ್ತಿಗಳನ್ನು ಹೆಗಲಿಗೇರಿಸಿದ ಈ ಚಿತ್ರ, ಅನೇಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆಯಿತು. ಇದಲ್ಲದೆ ಅವರು ತಯಾರಿಸಿದ ಬೇರೆ ಚಿತ್ರಗಳು ಕುಬಿ, ಇಯಾಲ.
ತುಳು ಭಾಷೆಯಲ್ಲಿ ಬರೆದ ನಾಟಕ, ’ಗುಡ್ಡದ ಭೂತ,’ ಅವರ ಸೃಜನ ಶೀಲ ಸಾಹಿತ್ಯಕ್ಕೆ ಉದಾಹರಣೆಯಾಗಿದೆ. ಯಶಸ್ಸಿನ ಶಿಖರದ ಮೇಲಿದ್ದ ಈ ಪ್ರಯೋಗಕ್ಕೆ ಮತ್ತೊಂದು ಗರಿಮೂಡಿದ್ದು ಅದನ್ನು ಧಾರಾವಾಹಿಯಾಗಿ ದೂರದರ್ಶನದಲ್ಲಿ ಪ್ರದರ್ಶಿಸಿದ ನಂತರ.

Related Articles

ಇತ್ತೀಚಿನ ಸುದ್ದಿಗಳು