Home ದೇಶ ರಾಹುಲ್ ಗಾಂಧಿ ನಿವಾಸದ ಹೊರಗೆ ಸಾಧು-ಸಂತರಿಂದ ಹೈಡ್ರಾಮಾ; 8 ಮಂದಿ ಪ್ರತಿಭಟನಾಕಾರರು ವಶಕ್ಕೆ

ರಾಹುಲ್ ಗಾಂಧಿ ನಿವಾಸದ ಹೊರಗೆ ಸಾಧು-ಸಂತರಿಂದ ಹೈಡ್ರಾಮಾ; 8 ಮಂದಿ ಪ್ರತಿಭಟನಾಕಾರರು ವಶಕ್ಕೆ

0

ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನಿವಾಸದ ಹೊರಗೆ ಶುಕ್ರವಾರ ಬೆಳಿಗ್ಗೆ ದಿಢೀರನೆ ಕೆಲವು ವ್ಯಕ್ತಿಗಳು ಸಾಧು-ಸಂತರ ವೇಷದಲ್ಲಿ ಆಗಮಿಸಿ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದ್ದಾರೆ. ಅನುಮತಿಯಿಲ್ಲದೆ ಪ್ರತಿಭಟನೆ ನಡೆಸಿದ ಸಾಧುಗಳು ಸೇರಿದಂತೆ ಕನಿಷ್ಠ ಎಂಟು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶುಕ್ರವಾರ ಸಾಧುಗಳ ಗುಂಪೊಂದು ನಿರ್ಬಂಧಗಳ ಹೊರತಾಗಿಯೂ ರಾಹುಲ್ ಗಾಂಧಿ ಅವರ ನಿವಾಸದ ಬಳಿಯ ಹೈ-ಸೆಕ್ಯೂರಿಟಿ ವಲಯದಲ್ಲಿ ಪ್ರತಿಭಟನೆಗೆ ಯತ್ನಿಸಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ತಕ್ಷಣವೇ ಮಧ್ಯಪ್ರವೇಶಿಸಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡದಂತೆ ತಡೆಯಲು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಸ್ಥಳದಿಂದ ತೆರವುಗೊಳಿಸಿದರು.

ಸಾಧು-ಸಂತರ ವೇಷದಲ್ಲಿದ್ದ ಪ್ರತಿಭಟನಾಕಾರರು ಏಕಾಏಕಿ ಆಗಮಿಸಿದ್ದರಿಂದ ಕೆಲ ಕಾಲ ಆ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ರಾಹುಲ್ ಗಾಂಧಿ ಅವರ ನಿವಾಸದ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಆದರೆ, ಆರಂಭಿಕ ಮಾಹಿತಿಯ ಪ್ರಕಾರ ಪ್ರತಿಭಟನಾಕಾರರು ಯಾವ ವಿಷಯವನ್ನು ಮುಂದಿಟ್ಟುಕೊಂಡು ರಾಹುಲ್ ಗಾಂಧಿ ನಿವಾಸಕ್ಕೆ ಬಂದಿದ್ದರು ಮತ್ತು ಅವರ ಮುಖ್ಯ ಉದ್ದೇಶವೇನಾಗಿತ್ತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪೊಲೀಸರು ಈ ಕುರಿತು ಸಂಪೂರ್ಣ ಮಾಹಿತಿ ಕಲೆಹಾಕುತ್ತಿದ್ದಾರೆ.

ವಶಕ್ಕೆ ಪಡೆಯುವ ಸಂದರ್ಭದಲ್ಲಿ ಪ್ರತಿಭಟನಾಕಾರರಲ್ಲೊಬ್ಬರು ಮಾತನಾಡಿ, “ನಾನು ಕಾಂಗ್ರೆಸ್ ಪಕ್ಷಕ್ಕೆ ಶಾಪ ಹಾಕುತ್ತೇನೆ. ನಾವು 56 ವರ್ಷಗಳ ಕಾಲ ಈ ಪಕ್ಷಕ್ಕಾಗಿ ನಮ್ಮ ರಕ್ತ ಮತ್ತು ಬೆವಕನ್ನು ಹರಿಸಿದ್ದೇವೆ, ಆದರೆ ಈಗ ನಮ್ಮನ್ನು ಹೊರಹಾಕಲಾಗುತ್ತಿದೆ. ರಾಹುಲ್ ಗಾಂಧಿ ಅವರೇ, ನಿಮಗೆ ನಾಚಿಕೆಯಾಗಬೇಕು,” ಎಂದು ಆಕ್ರೋಶ ಹೊರಹಾಕಿದರು.

ಸಾಧುಗಳ ವೇಷ ಧರಿಸಿ ಸಂಸತ್ತಿನಲ್ಲಿ ಪ್ರತಿಭಟಿಸಿದ್ದ ಪಪ್ಪು ಯಾದವ್

ಕೆಲವು ದಿನಗಳ ಹಿಂದೆಯಷ್ಟೇ ಬಿಹಾರದ ಸಂಸದ ಪಪ್ಪು ಯಾದವ್ ಅವರು ಸಾಧು-ಸಂತರ ವೇಷ ಧರಿಸಿ ಸಂಸತ್ ಭವನದ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದರು. ಅಯೋಧ್ಯೆಯ ರಾಮಮಂದಿರದ ದೇಣಿಗೆ ಮತ್ತು ಕಾಣಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ವಿರುದ್ಧ ಅವರು ಪ್ರತಿಭಟನೆ ನಡೆಸಿದ್ದರು. ಆ ಪ್ರತಿಭಟನೆಯಲ್ಲಿ ವಿರೋಧ ಪಕ್ಷದ ಹಲವು ನಾಯಕರು ಭಾಗವಹಿಸಿದ್ದರು ಮತ್ತು ರಾಹುಲ್ ಗಾಂಧಿ ಕೂಡ ಉಪಸ್ಥಿತರಿದ್ದರು.

ಹೀಗಾಗಿ, ಇದೀಗ ರಾಹುಲ್ ಗಾಂಧಿ ಅವರ ನಿವಾಸದ ಹೊರಗೆ ನಡೆದ ಈ ಪ್ರತಿಭಟನೆಯನ್ನು ಅದೇ ಘಟನಾವಳಿಗಳಿಗೆ ಲಿಂಕ್ ಮಾಡಿ ನೋಡಲಾಗುತ್ತಿದೆ. ಆದರೆ, ಈ ಪ್ರತಿಭಟನೆಯ ಹಿಂದಿನ ನೈಜ ಉದ್ದೇಶ ಮತ್ತು ಅವರ ಬೇಡಿಕೆಗಳೇನು ಎಂಬುದರ ಕುರಿತು ಪೊಲೀಸರಾಗಲಿ ಅಥವಾ ಯಾವುದೇ ಅಧಿಕೃತ ಮೂಲಗಳಾಗಲಿ ಯಾವುದೇ ವಿವರವಾದ ಮಾಹಿತಿಯನ್ನು ಇನ್ನೂ ಹಂಚಿಕೊಂಡಿಲ್ಲ.

You cannot copy content of this page

Exit mobile version