Friday, June 14, 2024

ಸತ್ಯ | ನ್ಯಾಯ |ಧರ್ಮ

ಸರ್ಕಾರಿ ಶಾಲೆಗಳಿಗೆ ಕೇಸರಿ ಬಣ್ಣ ; ನಟ ಕಿಶೋರ್ ಕುಮಾರ್ ಆಕ್ಷೇಪ

ಇತ್ತೀಚಿನ ದಿನಗಳಲ್ಲಿ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಆಡಳಿತ ಪಕ್ಷಗಳು ಎಸಗುವ ತಪ್ಪು ನಿರ್ಧಾರಗಳನ್ನು ಟೀಕಿಸುವವರಲ್ಲಿ ನಟ ಕಿಶೋರ್ ಕುಮಾರ್ ಗಮನಾರ್ಹರು. ಸಧ್ಯ ರಾಜ್ಯ ಸರ್ಕಾರದ ಸರ್ಕಾರಿ ಶಾಲೆಗಳಿಗೆ ಕೇಸರಿ ಬಣ್ಣ ಹೊಡೆಯುವ ನಿರ್ಧಾರದ ಬಗ್ಗೆಯೂ ಕಿಶೋರ್ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸೇರಿ ಸರ್ಕಾರಿ ಶಾಲೆಗಳಿಗೆ ಕೇಸರಿ ಬಣ್ಣ ಹೊಡೆಯುವ ನಿರ್ಧಾರವನ್ನು ಪ್ರಸ್ತಾಪಿಸಿದ್ದರು. ಸ್ವಾಮಿ ವಿವೇಕಾನಂದರ ಹೆಸರು ಮುಂದಿಟ್ಟುಕೊಂಡು ರೂಪಿಸಲಾದ ಇಂತಹ ರಾಜಕೀಯ ಪ್ರೇರಿತ ನಿರ್ಧಾರಕ್ಕೆ ಎಲ್ಲಾ ಕಡೆಗಳಿಂದ ವಿರೋಧ ವ್ಯಕ್ತವಾಗಿತ್ತು.

ಆದರೆ ಬಿಜೆಪಿ ಪಕ್ಷದ ಪ್ರಮುಖರು ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು. ‘ಕೇಸರಿ ಕಂಡರೆ ಯಾಕೆ ಇವರಿಗೆ ವಿರೋಧ, ರಾಷ್ಟ್ರಧ್ವಜದಲ್ಲೂ ಕೇಸರಿ ಇಲ್ಲವೇ..’ ಎಂಬ ರೀತಿಯಾಗಿ ತಮ್ಮ ವಾದ ಮಂಡಿಸಿದ್ದರು. ಹೀಗೆ ಸರ್ಕಾರದ ಇಂತಹ ರಾಜಕೀಯ ಪ್ರೇರಿತ  ನಿರ್ಧಾರಕ್ಕೆ ಎಲ್ಲೆಡೆ ಪರ ವಿರೋಧಗಳು ವ್ಯಕ್ತವಾಗಿದ್ದವು.

ಸಧ್ಯ ಸರ್ಕಾರದ ಈ ನಿಲುವಿನ ಬಗ್ಗೆ ನಟ ಕಿಶೋರ್ ಕೂಡ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಸರ್ಕಾರದ ಇಂತಹ ನಿರ್ಧಾರದ ಬಗ್ಗೆ ನಟ ಕಿಶೋರ್ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.
“ಜ್ಞಾನದ ದೇಗುಲ, ಶಾಲೆಗಳನ್ನೂ ಬಿಡದ ಹೊಲಸು ರಾಜಕೀಯ. ಧರ್ಮದ ಹೆಸರಿನಲ್ಲಿ ವಿವೇಕಾನಂದರ ಉದಾತ್ತ ಚಿಂತನೆಗಳ ಅವಹೇಳನ, ಅವಿವೇಕತನ.
ಕೇವಲ ಯಾರದ್ದೊ ಓಟು, ಅಧಿಕಾರದ ದಾಹಕ್ಕಾಗಿ ನಮ್ಮ ಮಕ್ಕಳೂ, ಅವರ ಭವಿಷ್ಯವೂ, ದೇಶವೂ ಬಲಿಯಾಗಬೇಕಾದೀತು. ಏಳಿ ಎದ್ದೇಳಿ ಪ್ರತಿಭಟಿಸಿ.” ಎನ್ನುತ್ತಾ ಜನರನ್ನು ಎಚ್ಚರಿಸುವ ರೀತಿಯಲ್ಲಿ ಪ್ರತಿಭಟಿಸಿದ್ದಾರೆ.

ಸಧ್ಯ ಸರ್ಕಾರದ ಈ ನಿರ್ಧಾರದ ಬಗ್ಗೆ ಎಲ್ಲೆಡೆ ವಿರೋಧ ವ್ಯಕ್ತವಾಗಿದ್ದು, ಮೊದಲು ಶಾಲೆಗಳ ಮೂಲಭೂತ ವ್ಯವಸ್ಥೆ ಕಲ್ಪಿಸಿ ನಂತರ ಬಣ್ಣದ ಬಗ್ಗೆ ಯೋಚಿಸಿ ಎಂಬ ಮಾತುಗಳು ಕೇಳಿ ಬರುತ್ತಿವೆ. ಇತ್ತ ಸರ್ಕಾರ ತನ್ನ ಮೊಂಡು ಹಠ ಬಿಡದೇ ಬಣ್ಣ ಹೊಡೆದೇ ತೀರುವ ನಿರ್ಧಾರಕ್ಕೆ ಬಂದಂತಿದೆ.

Related Articles

ಇತ್ತೀಚಿನ ಸುದ್ದಿಗಳು