Friday, June 14, 2024

ಸತ್ಯ | ನ್ಯಾಯ |ಧರ್ಮ

ಸಹಾರಾ ಗ್ರೂಪ್ ಸಂಸ್ಥಾಪಕ ಸುಬ್ರತಾ ರಾಯ್ ನಿಧನ

ದೀರ್ಘ ಕಾಲದ ಅನಾರೋಗ್ಯದ ಹಿನ್ನೆಲೆಯಲ್ಲಿ ಸಹಾರಾ ಸಮೂಹದ ( Sahara Group ) ಸಂಸ್ಥಾಪಕ ಸುಬ್ರತಾ ರಾಯ್ ( Subrata Roy ) ಮುಂಬೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು.

ಹಲವು ದಿನಗಳಿಂದ ಸುಬ್ರತಾ ರಾಯ್ ಅನಾರೋಗ್ಯದಿಂದ ಬಳಲುತ್ತಿದ್ದರು. ಇತ್ತೀಚೆಗೆ ಆರೋಗ್ಯದಲ್ಲಿ ತೀವ್ರ ಏರಿಳಿತ ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಭಾನುವಾರ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಸಂಸ್ಥೆಗೆ (ಕೆಡಿಎಎಚ್) ದಾಖಲಿಸಲಾಗಿತ್ತು. ಆದರೇ ಚಿಕಿತ್ಸೆ ಫಲಿಸದೇ ಅವರು ನಿಧನರಾಗಿರೋದಾಗಿ ಸಹರಾ ಸಂಸ್ಥೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

“ನಮ್ಮ ಗೌರವಾನ್ವಿತ ‘ಸಹರಾಶ್ರೀ’ ಸುಬ್ರತಾ ರಾಯ್ ಸಹಾರಾ ಅವರ ನಿಧನದ ಬಗ್ಗೆ ಸಹಾರಾ ಇಂಡಿಯಾ ಪರಿವಾರ್ ತೀವ್ರ ದುಃಖದಿಂದ ತಿಳಿಸುತ್ತಿದೆ. ಸ್ಪೂರ್ತಿದಾಯಕ ನಾಯಕ ಮತ್ತು ದೂರದೃಷ್ಟಿಯ ಸಹರಾಶ್ರೀ ಜಿ ಅವರು ಮೆಟಾಸ್ಟಾಟಿಕ್ ಕ್ಯಾನ್ಸರ್, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದ ಉಂಟಾಗುವ ತೊಡಕುಗಳೊಂದಿಗೆ ದೀರ್ಘಕಾಲದ ಹೋರಾಟದ ನಂತರ ಹೃದಯ ಸ್ತಂಭನದಿಂದಾಗಿ 2023 ರ ನವೆಂಬರ್ 14 ರಂದು ರಾತ್ರಿ 10.30 ಕ್ಕೆ ನಿಧನರಾದರು” ಎಂದು ತಿಳಿಸಿದೆ.

ಜೂನ್ 10, 1948 ರಂದು ಬಿಹಾರದ ಅರಾರಿಯಾದಲ್ಲಿ ಜನಿಸಿದ ಸುಬ್ರತಾ ರಾಯ್ ಹಣಕಾಸು, ರಿಯಲ್ ಎಸ್ಟೇಟ್, ಮಾಧ್ಯಮ ಮತ್ತು ಆತಿಥ್ಯ ಸೇರಿದಂತೆ ವಿವಿಧ ಕ್ಷೇತ್ರಗಳನ್ನು ವ್ಯಾಪಿಸಿದ ವಿಶಾಲ ಸಾಮ್ರಾಜ್ಯವನ್ನು ಸ್ಥಾಪಿಸಿದರು.

ಸುಬ್ರತಾ ರಾಯ್ ಗೋರಖ್ಪುರದ ಸರ್ಕಾರಿ ತಾಂತ್ರಿಕ ಸಂಸ್ಥೆಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಪದವಿ ಪಡೆದರು. ನಂತರ ಅವರು 1976ರಲ್ಲಿ ಸಹಾರಾ ಫೈನಾನ್ಸ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಮೊದಲು ಗೋರಖ್ಪುರದಲ್ಲಿ ವ್ಯವಹಾರಕ್ಕೆ ಕಾಲಿಟ್ಟರು. 1978 ರ ಹೊತ್ತಿಗೆ, ಅವರು ಅದನ್ನು ಸಹಾರಾ ಇಂಡಿಯಾ ಪರಿವಾರ್ ಆಗಿ ಪರಿವರ್ತಿಸಿದರು. ಇದು ಭಾರತದ ಅತಿದೊಡ್ಡ ಕಂಪನಿಗಳಲ್ಲಿ ಒಂದಾಗಿದೆ.

Related Articles

ಇತ್ತೀಚಿನ ಸುದ್ದಿಗಳು