Sunday, June 23, 2024

ಸತ್ಯ | ನ್ಯಾಯ |ಧರ್ಮ

ಸಹಿಷ್ಣು ಭಾರತವನ್ನು ನಾವು ಕಟ್ಟಬೇಕು: ಜಸ್ಟೀಸ್‌ ನಾಗಮೋಹನ್‌ ದಾಸ್‌

ಮಂಗಳೂರು: ಇದು ಸಹಿಷ್ಣು ಭಾರತ. ಹಿರಿಯರು ಕಟ್ಟಿಕೊಟ್ಟ ಸಹಿಷ್ಣುತೆಯ ಪರಂಪರೆ ನಮ್ಮದು. ಪ್ರೀತಿ, ಸುಖ ಸಮೃದ್ಧಿ ಭಾವೈಕ್ಯತೆ ಇರುವ ಸಮಾಜವನ್ನು ನಾವು ನಿರ್ಮಾಣ ಮಾಡಬೇಕಿದೆ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಹೇಳಿದರು. ಸಂತ ಮದರ್‌ ಮದರ್‌ ತೆರೆಸಾ ವಿಚಾರ ವೇದಿಕೆಯು ನಗರದ ಕುದ್ಮುಲ್‌ ರಂಗರಾವ್‌ ವೇದಿಕೆಯಲ್ಲಿ ಹಮ್ಮಿಕೊಂಡ ಮದರ್‌ ತೆರೇಸಾ ೨೫ನೇ ಸಂಸ್ಮರಣೆ ದಿನದ ವಿಚಾರ ಗೋಷ್ಟಿಯನ್ನು ಉದ್ಘಾಟಿಸಿ ಅವರು ಮಾತಾಡುತ್ತಿದ್ದರು.

ಧರ್ಮ ಜನಿಸಿದ್ದು ಜನರ ಕಣ್ಣೀರನ್ನು ಒರೆಸುವುದಕ್ಕೆ, ಅವರ ದು:ಖ ದುಮ್ಮಾನಗಳನ್ನು ದೂರ ಮಾಡುವುದಕ್ಕೆ. ಅದರೆ, ಧರ್ಮವನ್ನು ಅಪ್ರಜಾಸತ್ತಾತ್ಮಕ ಗೊಳಿಸಿದಾಗ ಅದು ಮೂಲಭೂತವಾಗುತ್ತದೆ. ಹಾಗಾಗಿ ಈ ಪ್ರಕ್ರಿಯೆಯನ್ನು ವಿರೋಧಿಸಬೇಕು. ಧರ್ಮದೊಂದಿಗೆ ರಾಜಕಾರಣ ಬೆರೆತಾಗ ಕೋಮುವಾದ ಬೆಳೆಯುತ್ತದೆ. ನಾವು ಧರ್ಮವನ್ನು ವಿರೋಧಿಸುವ ಬದಲು ಧರ್ಮವನ್ನು ರಾಜಕಾರಣದೊಂದಿಗೆ ಬೆರೆಸುವುದನ್ನು ವಿರೋಧಿಸಬೇಕು. ಇದನ್ನು ಅರ್ಥಮಾಡಿಕೊಂಡಾಗ ಮಾತ್ರ ಸಂವಿಧಾನದ ಜಾತ್ಯತೀತ ಪದ ಅರ್ಥ ಆಗಲು ಸಾಧ್ಯ ಎಂದು ನ್ಯಾ. ನಾಗಮೋಹನ್‌ ದಾಸ್‌ ಅಭಿಪ್ರಾಯ ವ್ಯಕ್ತ ಪಡಿಸಿದರು.

ಇಂದು ಭಾವನಾತ್ಮಕ ವಿಚಾರಗಳು ಹೆಚ್ಚು ಚರ್ಚಿತವಾಗುತ್ತಿವೆ. ಬದುಕಿಗೆ ಸಂಬಂಧಿಸಿದ ವಿಷಯಗಳು ಮರೆಗೆ ಸರಿಯುತ್ತಿವೆ. ಸಂವಿಧಾನದ ಆಶಯಗಳು ಮೌಲ್ಯ ಕಳೆದುಕೊಳ್ಳುತ್ತಿವೆ. ಸಮಾಜದಲ್ಲಿ ನೈತಿಕ ಮೌಲ್ಯಗಳು ಕುಸಿದಿವೆ. ಅಸಹಿಷ್ಣುತೆ ದೇಶದಾದ್ಯಂತ ಹಬ್ಬಿದೆ ಎಂದು ಅವರು ವಿಷಾದಿಸಿದರು.

ಎಲ್ಲರೂ ತೆರೆಸಾ ಆಗುವುದು ಸಾಧ್ಯವಿಲ್ಲದಿದ್ದರೂ ತೆರೇಸಾರವರ ಹಾದಿಯಲ್ಲಿ ನಡೆಯುವುದು ಸಾಧ್ಯವಿದೆ. ಭಾರತದಲ್ಲಿ ಪ್ರೀತಿಯನ್ನು ಹುಡುಕುವ ಕೆಲಸವನ್ನು ಮಾಡೋಣ, ಪ್ರೀತಿಯ ಜಗತ್ತನ್ನು ನಮ್ಮದಾಗಿಸಿಕೊಳ್ಳೋಣ ಎಂದು ಆಶಯ ವ್ಯಕ್ತಪಡಿಸಿದರು.

ಬಹುತ್ವ ಭಾರತದಲ್ಲಿ ಕುಸಿಯುತ್ತಿರುವ ಮಾನವೀಯ ಮೌಲ್ಯಗಳ ಬಗ್ಗೆ ಪಲ್ಲವಿ ಇಡೂರು ಮಾತಾಡಿದರು. ಪ್ರೀತಿಯ ಅತ್ಯಂತ ಶ್ರೇಷ್ಟ ರೂಪ ಅಂದರೆ ಅದು ದಾನ. ಮಾನವೀಯತೆ ಒಂದು ಆಶಾವಾದ ಮತ್ತು ಒಂದು ಬದುಕು. ಇವೆರಡನ್ನೂ ಜತೆಗಿರಿಸಿಕೊಂಡೇ ಬದುಕ ಬೇಕಾಗುತ್ತದೆ. ಆದರೆ, ೨೦೧೪ ರ ಬಳಿಕ ಪರಿಸ್ಥಿತಿ ಬದಲಾಗಿದೆ.

ಸೇವೆ ಮಾಡುತ್ತಾ ಮಾನವೀಯತೆ ಮೆರೆಯುವವರ ಮೇಲೆ ಬಳಿಕ ಪ್ರಹಾರ ನಡೆಯುತ್ತಿರುವುದು ಆತಂಕ ಹುಟ್ಟಿಸುತ್ತಿದೆ. ಕೋಮುವಾದವನ್ನು ಬಹಳ ಮುತುವರ್ಜಿಯಿಂದ ಬೆಳೆಸುತ್ತಾ ಇದ್ದೇವೆ. ಮನುಷ್ಯ ಮನುಷ್ಯರ ನಡುವೆ ಕಂದಕಗಳು ಏರ್ಪಟ್ಟಿವೆ. ಬದುಕಲು ಯೋಗ್ಯವಾದ ಸಮಾಜವನ್ನು ಕಟ್ಟುವುದು ಮಾನವೀಯತೆಯ ಕೆಲಸವಾಗಿರುವುದರಿಂದ ಈ ಕಂದಕಗಳು ಏರ್ಪಡದಂತೆ ಮೊದಲಿಗೆ ನಮ್ಮ ಮನೆಯವರನ್ನು, ಬಳಿಕ ಸುತ್ತ ಮುತ್ತಲಿನವರೊಂದಿಗೆ ಸಂವಹನ ನಡೆಸುವ ಜವಾಬ್ದಾರಿ ನಮ್ಮೆಲ್ಲರದು ಎಂದರು.ಫಾ. ಜೆ ಬಿ ಸಲ್ದಾನ ಮತ್ತು ಮುನೀರ್‌ ಕಾಟಿಪಳ್ಳ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಮದರ್‌ ತೆರೆಸಾ ವಿಚಾರ ವೇದಿಕೆಯ ರೋಯ್‌ ಕ್ಯಾಸ್ಟಲಿನೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಜೋಸೆಫ ಕ್ರಾಸ್ತಾ, ಎಂ. ದೇವದಾಸ್‌, ಸ್ಟಾನಿ ಲೋಬೋ, ಸುಶೀಲ್‌ ನೊರೋನ್ನಾ, ಎಂಜಿ ಹೆಗ್ಡೆ, ಆಶ್ರಫ್‌ ಕೆ. ಯಶವಂತ ಮರೋಳಿ, ಡಾ. ರೀಟಾ ನೊರೋನ್ನಾ, ಫ್ಲೇವಿ ಡಿಸೋಜಾ ಸುಮತಿ ಎಸ್‌ ಹೆಗ್ಡೆ ಮತ್ತು ಸಿಸ್ಟರ್‌ ಲೊರೆನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಫಾ. ರೂಪೇಶ್‌ ಮಾಡ್ತಾ ಸ್ವಾಗತಿಸಿ ಡಾ. ಕೃಷ್ಣಪ್ಪ ಕೊಂಚಾಡಿ ವಂದಿಸಿದರು. ಸುನಿಲ್‌ ಕುಮಾರ್‌ ಬಜಾಲ್‌ ಕಾರ್ಯಕ್ರಮ ನಿರೂಪಿಸಿದರು.

Related Articles

ಇತ್ತೀಚಿನ ಸುದ್ದಿಗಳು