Sunday, June 16, 2024

ಸತ್ಯ | ನ್ಯಾಯ |ಧರ್ಮ

ಸಕಲೇಶಪುರ ದಲಿತರ ಮೇಲಿನ ದೌರ್ಜನ್ಯ: ದಿಕ್ಕು ತಪ್ಪಿಸುವ ಯತ್ನದ ಆರೋಪ

ಹಾಸನ: ಸಕಲೇಶಪುರದಲ್ಲಿ ಗೋರಕ್ಷಣೆ ಹೆಸರಿನಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯ ಪ್ರಕರಣವನ್ನು ದಿಕ್ಕು ತಪ್ಪಿಸಲು ಭಜರಂಗದಳದವರು ʼಜಾತಿ ಗುರಾಳಿʼಯನ್ನು ಬಳಸಿ ಇಡೀ ಪ್ರಕರಣವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಗತಿಪರ ಹೋರಾಟಗಾರ ಎ.ಆರ್.ಧರ್ಮೇಶ್‌ ಕಿಡಿಕಾರಿದ್ದಾರೆ.

ಪೀಪಲ್‌ ಮೀಡಿಯಾ ಜೊತೆಗೆ ಮಾತನಾಡಿದ ಅವರು, ಭಜರಂಗದಳದ ಕಾರ್ಯಕರ್ತರು ತಮ್ಮ ಅನೈತಿಕ ಚಟುವಟಿಕೆ ಮತ್ತು ಅಕ್ರಮದಿಂದ ತಪ್ಪಿಸಿಕೊಳ್ಳಲು ಜಾತಿ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ ಇದನ್ನು ನಾವು ಖಂಡಿಸುತ್ತೇವೆ.  ಅವರನ್ನು ಬಂಧಿಸದೇ ಹೋದರೆ ಅಥವಾ  ಗಡಿಪಾರು ಮಾಡಿಲ್ಲವೆಂದರೆ ನಾವು ಅವರ ವಿರುದ್ಧ ಜಿಲ್ಲಾ ಮಟ್ಟದಲ್ಲಿ ದೊಡ್ಡ ಪ್ರಮಾಣದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ದಲಿತ ಚಿಂತಕರಾದ ಹಾ.ರಾ ಮಹೇಶ್‌ ಪೀಪಲ್‌ ಮೀಡಿಯಾಗೆ ಪ್ರತಿಕ್ರಿಯೆ ನೀಡಿದ್ದುಇದು ʼದಲಿತರು ಮತ್ತು ಒಕ್ಕಲಿಗರ ನಡುವೆ ಆದಂತಹ ಹೋರಾಟವಲ್ಲ – ನ್ಯಾಯ ಮತ್ತು ಅನ್ಯಾಯಗಳ ನಡುವಿನ ಹೋರಾಟʼ ಭಜರಂಗದಳದವರು ಪ್ರತಿಭಟನೆಯಲ್ಲಿ ಜಾತಿಯನ್ನು ಮಧ್ಯೆ ತರುತ್ತಿದ್ದಾರೆ, ಮೊನ್ನೆ ನಡೆದ ದಲಿತರ ಪ್ರತಿಭಟನೆಯಲ್ಲಿ ಕೇವಲ ದಲಿತರು ಮಾತ್ರ ಪ್ರತಿಭಟನೆ ಮಾಡಲಿಲ್ಲ, ಒಕ್ಕಲಿಗರು, ಕುವೆಂಪು ಅನುಯಾಯಿಗಳು, ಮಾನವೀಯತೆ ಹೊಂದಿದ ಎಲ್ಲರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಜಾತಿ ಮಧ್ಯ ತರುವ ಮೂಲಕ ಧರ್ಮ ಮತ್ತು ಜಾತಿ ಗಲಭೆಗಳನ್ನ ಎಬ್ಬಿಸುವ ಸಂಚು ಮಾಡುತ್ತಿದ್ದಾರೆ ಎಂದು ಸಂಘಪರಿವಾರದವರ ಸಂಚನ್ನು  ದೂರಿದರು. 

ಸಂಘಪರಿವಾರದವರಿಗೆ ಕರ್ನಾಟಕವನ್ನು  ಶಾಂತಿಯುತ ಮತ್ತು ಸೌಹಾರ್ದಯುತ ರಾಜ್ಯವನ್ನಾಗಿ ರೂಪಿಸಲು ಇಷ್ಟವಿಲ್ಲ, ಅನಗತ್ಯ ಗಲಭೆಗಳನ್ನು ಸೃಷ್ಟಿಮಾಡಿ ಅಶಾಂತಿ ಉಂಟುಮಾಡುತ್ತಿದ್ದಾರೆ ಎಂದರು.

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಮಾತನಾಡಿದ ಅವರು, ಪೊಲೀಸ್‌ ಇಲಾಖೆಯವರು ಕೂಡ ಅಸಹಾಯಕರಾಗಿ ಸಂಘಪರಿವಾರದವರು ಹೇಳಿದ ಹಾಗೆ ಕೇಳುವ ಅನಿವಾರ್ಯತೆ ಸೃಷ್ಟಿಯಾಗಿದೆ . ಪೊಲೀಸ್‌ ಇಲಾಖೆ ಸಂವಿಧಾನದ ಬದ್ದವಾಗಿ ಕೆಲಸ ಮಾಡಬೇಕು, ಯಾಕೆಂದರೆ ಒಟ್ಟು ಪೊಲೀಸ್‌ ಇಲಾಖೆಯ ಕಾರ್ಯ ನಡೆಯುತ್ತಿರುವುದು ಜನರ ತೆರಿಗೆ ಹಣದಿಂದ, ಜನ ಮತ್ತು ಸಂವಿಧಾನದ ಬದ್ದವಾಗಿ ಪೋಲಿಸ್‌ ಇಲಾಖೆ ಕೆಲಸ ಮಾಡಬೇಕೆ ಹೊರತು, ಯಾವುದೋ ಪಕ್ಷದ ಅಥವಾ ಸಂಘಪರಿವಾರದ ಪರ ಕೆಲಸ ಕಾರ್ಯ ನಿರ್ವಹಿಸಬಾರದು ಎಂದು ಹೇಳಿದರು.

ಬೇಸರದ  ಸಂಗತಿ ಎಂದರೆ ಸೌಹಾರ್ದಯುತವಾಗಿ ಎಲ್ಲಾ ಸಮುದಾಯಗಳನ್ನು ಒಟ್ಟಿಗೆ ಕಟ್ಟುವ ಕೆಲಸ ಮಾಡುತ್ತಿರುವಂತಹ ಒಕ್ಕಲಿಗ ಸ್ವಾಮೀಜಿಗಳ ಪೋಟೋ ಹಾಕಿಕೊಂಡು,  ಒಕ್ಕಲಿಗರ ವಿರುದ್ಧವಾಗಿ ದಲಿತರು ಹೋರಾಟ ಮಾಡುತ್ತಿದ್ದಾರೆಂದು ಜಾತಿ ಬಣ್ಣ ಕಟ್ಟುತ್ತಿರುವ ಸಂಘ-ಪರಿವಾರದವರಿಗೆ ಕೊಂಚವಾದರೂ ಮನುಷ್ಯತ್ವ ಇದೆಯಾ? ಎಂದು  ಅವರು ಪ್ರಶ್ನಿಸಿದರು.

ಹಾಸನ ಜಿಲ್ಲೆಯ ದಲಿತ ಮುಖಂಡರಾದಂತಹ ಎಸ್. ಎನ್ ಮಲ್ಲಪ್ಪ ಪೀಪಲ್‌ ಮೀಡಿಯಾ ಜೊತೆ ಮಾತನಾಡಿ, ʼಯಾರು ಅಪರಾಧಿಗಳಿದ್ದಾರೋ ಅಂತವರನ್ನು ವೈಭರಿಕರಿಸುವಂತದ್ದು ಆರ್‌ಎಸ್‌ಎಸ್‌ ಅಜೆಂಡಾʼ ಎಂದರು. ಇದಕ್ಕೆ ಉದಾಹರಣೆ ಬಿಲ್ಕಿಸ್‌ ಬಾನೂ ಪ್ರಕರಣ. ಸಕಲೇಶಪುರದಲ್ಲಿ ನಡೆಯುತ್ತಿರುವುದೂ ಅಂಥದ್ದೇ ಪ್ರಕರಣ ಎಂದರು.

ಗಾಂಧಿ ಕೊಂದಂತಹ ಗೋಡ್ಸೆಯನ್ನು ವೈಭವೀಕರಿಸುವವರದು ಅವರದು ಕೆಟ್ಟ ಸಂಸ್ಕೃತಿ. ಅದನ್ನು ನಾವು ಒಪ್ಪುವುದಿಲ್ಲ. ಮಲೆನಾಡಿನ ಜನರು ಸೌಮ್ಯವಾದಿಗಳು. ಅವರ ನಡುವೆ ವಿಷಬೀಜ ಬಿತ್ತುವಂತಹ ಕೆಲಸವನ್ನು ಭಜರಂಗದಳದ ರಘು ಅಂಥವರು ಮಾಡುತ್ತಿದ್ದಾರೆ, ಇಂಥವರು ಸಮಾಜದ ಸ್ವಾಸ್ಥ್ಯ ಕೆಡಿಸುವಂತಹ ಕೆಲಸ ಮಾಡುತ್ತಿದ್ದಾರೆ  ಎಂದು ಆರೋಪಿಸಿದರು.

ಸಂಘಪರಿವಾರದವರು ಜಾತಿ-ಜಾತಿಗಳ ಮಧ್ಯೆ, ಧರ್ಮ-ಧರ್ಮಗಳ ಮಧ್ಯೆ ಕಂದಕವನ್ನು ಸೃಷ್ಟಿಮಾಡುತ್ತಿರುವಂತ ಸ್ಥಿತಿ ನಿರ್ಮಾಣ ಮಾಡಿದ್ದಾರೆ. ಇದನ್ನು ಎಲ್ಲಾ ಜಾತಿ ಮತ್ತು ಧರ್ಮದವರು ಸೇರಿ ಅಡಗಿಸುತ್ತೇವೆ, ಅದಕ್ಕೆ ಕಾಲ ಸಮೀಪವಿದೆ ಎಂದು ಎಚ್ಚರಿಸಿದರು.

ಪ್ರತಿಭಟನೆಗೆ ಪೊಲೀಸ್‌ ಕುಮ್ಮಕ್ಕು ಇದೆ ಎಂದು ಆರೋಪಿಸಿದ ಅವರು,ʼ ಪೊಲೀಸ್‌ ಇಲಾಖೆ ಯಾರ ಕೈಗೊಂಬೆಯಾಗಿಯೂ ಕಾರ್ಯನಿರ್ವಹಿಸಬಾರದುʼ ಎಂದು ಹೇಳಿದರು.

ಕಳೆದ ಶನಿವಾರ ಸಕಲೇಶಪುರ ತಾಲ್ಲೂಕಿನ ಅರೆಕೆರೆಯಿಂದ ಹಲಸುಲಿಗೆ ಸಾಕಲು ಕರುವೊಂದನ್ನು ತರುತ್ತಿದ್ದ ಗ್ರಾಮ ಪಂಚಾಯ್ತಿ ಸದಸ್ಯ ಮಂಜುನಾಥ್‌ ಮೇಲೆ ಭಜರಂಗದಳದ ದೀಪಕ್‌ ಮತ್ತು ಸಂಗಡಿಗರು ಅಡ್ಡಗಟ್ಟಿ ಜಾತಿನಿಂದನೆ ಮಾಡಿ ಹಲ್ಲೆ ನಡೆಸಿದ್ದರು. ಚಿಕಿತ್ಸೆ ಪಡೆಯಲು ಮಂಜುನಾಥ್‌ ಕ್ರಾಫರ್ಡ್‌ ಆಸ್ಪತ್ರೆಗೆ ತೆರಳಿದಾಗ ಅವರೊಂದಿಗೆ ಇದ್ದ ಸಂಬಂಧಿಗಳ ಮೇಲೆ ಭಜರಂಗದಳದ ಸಂಚಾಲಕ ರಘು ಮತ್ತು ಸಂಗಡಿಗರು ಹಲ್ಲೆ ನಡೆಸಿದ್ದರು. ಈ ಸಂಬಂಧ ಪ್ರಕರಣ ದಾಖಲಾಗುತ್ತಿದ್ದಂತೆ, ಪೊಲೀಸರು ಹಲ್ಲೆಗೊಳಗಾದ ದಲಿತರ ಮೇಲೆ ಕಾನೂನುಬಾಹಿರವಾಗಿ ಪ್ರಕರಣ ದಾಖಲಿಸಿಕೊಂಡಿದ್ದರು.

ಇದನ್ನು ಪ್ರತಿಭಟಿಸಿ ಸೋಮವಾರ ಸಕಲೇಶಪುರಲ್ಲಿ ದಲಿತ ಸಂಘಟನೆಗಳು ದಿಢೀರನೆ ಪ್ರತಿಭಟನೆ ಹಮ್ಮಿಕೊಂಡಿದ್ದವು. ಈ ಪ್ರತಿಭಟನೆಯಲ್ಲಿ ಸಾವಿರಾರು ಮಂದಿ ದಲಿತ ಕಾರ್ಯಕರ್ತರು ಪಾಲ್ಗೊಂಡಿದ್ದರು. ಪ್ರತಿಭಟನೆಯ ನಂತರ ಒಕ್ಕಲಿಗ ಸಂಘದ ಹೆಸರಿನಲ್ಲಿ ಭಜರಂಗದಳ ಮತ್ತು ಸಂಘಪರಿವಾರದ ಕಾರ್ಯಕರ್ತರು ಬುಧವಾರ ಸಕಲೇಶಪುರಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಗೆ ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಯಿಂದ ಭಜರಂಗದಳದ ಕಾರ್ಯಕರ್ತರನ್ನು ಕರೆತರಲಾಗಿತ್ತು.

ವರದಿ: ನಾಗಾರ್ಜುನ ಎಂ.ವಿ

Related Articles

ಇತ್ತೀಚಿನ ಸುದ್ದಿಗಳು