Sunday, June 16, 2024

ಸತ್ಯ | ನ್ಯಾಯ |ಧರ್ಮ

ಸಕಲೇಶಪುರ : ಕಾಡಾನೆ ದಾಳಿಗೆ ಮತ್ತೊಂದು ಬಲಿ ; ಈವರೆಗೆ ಸತ್ತವರ ಸಂಖ್ಯೆ ಎಷ್ಟು ಗೊತ್ತಾ?

ಸಕಲೇಶಪುರದಲ್ಲಿ ಮತ್ತೆ ಕಾಡಾನೆ ದಾಳಿ ಮುಂದುವರಿದಿದೆ. ಕಾಫಿ ತೋಟಕ್ಕೆಂದು ಹೋಗಿದ್ದ ಮಹಿಳೆ ಮೇಲೆ ಕಾಡಾನೆ ತೀವ್ರವಾಗಿ ದಾಳಿ ನಡೆಸಿದ್ದು, ಗಾಯಗೊಂಡ ಮಹಿಳೆಗೆ ಚಿಕಿತ್ಸೆ ಫಲಿಸದೇ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆ ಮೂಲಕ ಸಕಲೇಶಪುರದಲ್ಲಿ ಕಾಡಾನೆ ದಾಳಿಗೆ ಇದು 78 ನೇ ಬಲಿಯಾಗಿದೆ.

ಶುಕ್ರವಾರ ಬೆಳಿಗ್ಗೆ ಮುಂಚೆಯೇ ಕಾಫಿ ತೋಟಕ್ಕೆ ತೆರಳಿದ್ದ ಮಹಿಳೆ ಮೇಲೆ ಕಾಡಾನೆ ದಾಳಿ ನಡೆಸಿದೆ. ಸಕಲೇಶಪುರ ತಾಲ್ಲೂಕಿನ, ವಡೂರು ಗ್ರಾಮದಲ್ಲಿ ಈ ದುರಂತ ನಡೆದಿದೆ. ತಕ್ಷಣವೇ ಸ್ಥಳೀಯರ ಸಹಕಾರದಿಂದ ಜಿಲ್ಲಾಸ್ಪತ್ರೆ ದಾಖಲಾದ ಕೆಲವೇ ನಿಮಿಷಗಳಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕವಿತಾ ಸಾವನ್ನಪ್ಪಿದ್ದಾರೆ.

ಕವಿತಾ ಅವರನ್ನು ಹತ್ತಿರದ ನಾರ್ವೆ ಗ್ರಾಮಕ್ಕೆ ಮದುವೆ ಮಾಡಿಕೊಡಲಾಗಿತ್ತು. ಇತ್ತೀಚೆಗೆ ಪತಿಯನ್ನು ಕಳೆದುಕೊಂಡಿದ್ದ ಕವಿತಾ ತವರು ಮನೆಗೆ ಬಂದಿದ್ದರು. ಇಂದು ಬೆಳಿಗ್ಗೆ ಮನೆಯ ಹಿಂಭಾಗದ ಕಾಫಿ ತೋಟಕ್ಕೆ ಕವಿತಾ ತೆರಳಿದ್ದ ವೇಳೆ ಏಕಾಏಕಿ ಕಾಡಾನೆ ದಾಳಿ ಮಾಡಿ ಸೊಂಡಲಿನಿದ್ದ ಎತ್ತಿ ಬಿಸಾಡಿ ತುಳಿದು ಗಾಯಗೊಳಿಸಿದೆ. ತೀವ್ರವಾಗಿ ಗಾಯಗೊಂಡು ಪ್ರಜ್ಞಾಹೀನವಾಗಿ ಬಿದ್ದಿದ್ದ ಮಹಿಳೆಯನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು.

ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸಕಲೇಶಪುರ ಭಾಗದಲ್ಲಿ ನಿರಂತರ ನಡೆಯುತ್ತಿರುವ ಈ ಕಾಡಾನೆ ದಾಳಿಗೆ ಸ್ಥಳೀಯರು ತತ್ತರಿಸಿ ಹೋಗಿದ್ದಾರೆ. ಮೃತಪಟ್ಟ ಕವಿತಾ ಸೇರಿದಂತೆ ಈವರೆಗೆ ಬರೋಬ್ಬರಿ 78 ಮಂದಿ ಕಾಡಾನೆ ದಾಳಿಗೆ ಮೃತಪಟ್ಟರೂ ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಸ್ಥಳೀಯ ಮಟ್ಟದಲ್ಲಿ ಆತಂಕ ಸೃಷ್ಟಿಸಿದೆ.

Related Articles

ಇತ್ತೀಚಿನ ಸುದ್ದಿಗಳು