Monday, October 13, 2025

ಸತ್ಯ | ನ್ಯಾಯ |ಧರ್ಮ

ವಾಸ್ತು ಹೌಸಿಂಗ್ ಫೈನಾನ್ಸ್ ಕಿರುಕುಳಕ್ಕೆ ಸಕಲೇಶಪುರದ ಮಹಿಳೆ ಬಲಿ

ಸಕಲೇಶಪುರ: ಸಾಲದ ಕಂತು ಪಾವತಿಸಲು ಒತ್ತಡ ಹೇರಿದ ಖಾಸಗಿ ಫೈನಾನ್ಸ್ ಸಂಸ್ಥೆಯ ಕಿರುಕುಳದಿಂದ ಬೇಸತ್ತು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಕಲೇಶಪುರ ತಾಲೂಕಿನ ಬೆಳಗೋಡು ಹೋಬಳಿಯ ಸಿಡಗಳಲೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಗ್ರಾಮದ ಮಲ್ಲೇಶ್ ಅವರ ಪತ್ನಿ ಪುಟ್ಟಲಕ್ಷ್ಮೀ (45). ಹಾಸನದ ಖಾಸಗಿ ವಾಸ್ತು ಹೌಸಿಂಗ್ ಫೈನಾನ್ಸ್ ಸಂಸ್ಥೆಯಿಂದ ಮನೆ ಕಟ್ಟಲು ಸಾಲ ಪಡೆದಿದ್ದ ಅವರು ಕಳೆದ ಒಂದು ವರ್ಷದಿಂದ ಯಾವುದೇ ಬಾಕಿ ಉಳಿಸದೇ ಪ್ರತಿ ತಿಂಗಳು ಕಂತು ಪಾವತಿಸುತ್ತಿದ್ದರು. ಆದರೆ ಅನಾರೋಗ್ಯದ ಹಿನ್ನೆಲೆ ಇತ್ತೀಚೆಗೆ ಒಂದು ತಿಂಗಳ ₹15,100 ಕಂತು ಪಾವತಿಸಲು ಕಾಲಾವಕಾಶ ಕೋರಿದ್ದರೂ, ಕಂಪನಿ ಅಧಿಕಾರಿಗಳು ಅದಕ್ಕೆ ಅವಕಾಶ ನೀಡದೆ ನಿರಂತರವಾಗಿ ಮನೆಗೆ ಬಂದು ಒತ್ತಡ ಹೇರುತ್ತಿದ್ದರೆಂದು ಕುಟುಂಬದವರು ದೂರಿದ್ದಾರೆ.

ಈ ಕಿರುಕುಳದಿಂದ ನೊಂದ ಪುಟ್ಟಲಕ್ಷ್ಮೀ ಅಕ್ಟೋಬರ್ 1ರಂದು ವಿಷ ಸೇವಿಸಿ ಆತ್ಮಹತ್ಯೆ ಯತ್ನ ಮಾಡಿದ್ದರು. ತಕ್ಷಣ ಪತಿ ಮಲ್ಲೇಶ್ ಅವರನ್ನು ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ಕರೆದೊಯ್ದು ಬಳಿಕ ಹಾಸನದ ಹಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಮೃತೆ ಪತಿ ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ. ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿತು. ಈ ಸಂಬಂಧ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪತಿ ಮಲ್ಲೇಶ್ ನೀಡಿದ ದೂರಿನ ಮೇರೆಗೆ ವಾಸ್ತು ಹೌಸಿಂಗ್ ಫೈನಾನ್ಸ್ ವ್ಯವಸ್ಥಾಪಕ ಹಾಗೂ ಇಬ್ಬರು ಸಿಬ್ಬಂದಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಘಟನೆ ಹಿನ್ನೆಲೆ ವಿವಿಧ ಪ್ರಗತಿಪರ ಸಂಘಟನೆಗಳು ಕಿರುಕುಳದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಾಲದ ಒತ್ತಡದಿಂದ ಜನರ ಜೀವ ಹಾಳಾಗುತ್ತಿರುವುದು ಖಂಡನೀಯ ಎಂದು ಸರ್ಕಾರದಿಂದ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page