Saturday, August 31, 2024

ಸತ್ಯ | ನ್ಯಾಯ |ಧರ್ಮ

ಅನಕ್ಷರಸ್ಥ ಪಂಚಾಯತಿ ಚುನಾಯಿತ ಪ್ರತಿನಿಧಿಗಳನ್ನು ಅಕ್ಷರಸ್ಥನ್ನಾಗಿಸಲು ʼಸಾಕ್ಷರ ಸನ್ಮಾನʼ ಕಾರ್ಯಕ್ರಮ: ಪ್ರಿಯಾಂಕ್‌ ಖರ್ಗೆ

ಬೆಂಗಳೂರು: ಗ್ರಾಮ ಪಂಚಾಯತಿ ಅನಕ್ಷರಸ್ಥ ಚುನಾಯಿತ ಪ್ರತಿನಿಧಿಗಳನ್ನು ಅಕ್ಷರಸ್ಥನ್ನಾಗಿಸುವ ʼಸಾಕ್ಷರ ಸನ್ಮಾನʼ ಕಾರ್ಯಕ್ರಮ ಸೆಪ್ಟೆಂಬರ್‌ 1ರಿಂದ ರಾಜ್ಯಾದ್ಯಂತ ಆರಂಭವಾಗಲಿದ್ದು 6,346 ಮಂದಿ ಅನಕ್ಷರಸ್ಥ ಚುನಾಯಿತ ಪ್ರತಿನಿಧಿಗಳು ಅಕ್ಷರ ಕಲಿಯುವ ಕಾರ್ಯಕ್ರಮದಲ್ಲಿ ತೊಡಗಿಕೊಳ್ಳಲಿದ್ದಾರೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ 94,775 ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳಿದ್ದು, ಇವರಲ್ಲಿ ಸುಮಾರು 10% ರಷ್ಟು ಅನಕ್ಷರಸ್ಥರಿದ್ದಾರೆ. ರಾಜ್ಯದಲ್ಲಿ 9,357 ಅನಕ್ಷರಸ್ಥ ಗ್ರಾಮ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳಿದ್ದು, ಇವರಲ್ಲಿ 7,277 ಮಂದಿ ಮಹಿಳೆಯಾರಿದ್ದಾರೆ. ಕಳೆದ ವರ್ಷ 2,403 ಮಹಿಳೆಯರು ಸೇರಿದಂತೆ 3,011 ಮಂದಿಯನ್ನು ಸಾಕ್ಷರರನ್ನಾಗಿಸುವ ಕಾರ್ಯಕ್ರಮ ಆರಂಭವಾಗಿದೆ. ಇದೆ ಸೋಮವಾರದಿಂದ ಆರಂಭವಾಗಲಿರುವ ʼಸಾಕ್ಷರ ಸನ್ಮಾನʼ ಕಾರ್ಯಕ್ರಮದಲ್ಲಿ 5,234 ಮಂದಿ ಮಹಿಳೆಯರು ಮತ್ತು 1,112 ಪುರುಷ ಅಕ್ಷರ ಕಲಿಯಲಿದ್ದಾರೆ.

ಅನಕ್ಷರಸ್ಥ ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳನ್ನು ಓದು, ಬರಹ ಕಲಿಸಿ, ಲೆಕ್ಕಾಚಾರದಲ್ಲಿ ಸ್ವಾವಲಂಬಿಗಳಾಗುವಂತೆ ಮಾಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಗ್ರಾಮ ಪಂಚಾಯತಿ ಸಭಾ ನೋಟಿಸ್, ನಡಾವಳಿ, ಮಾರ್ಗಸೂಚಿಗಳನ್ನು ಸ್ವತಃ ಓದಿ ಅರ್ಥಮಾಡಿಕೊಳ್ಳುವಂತೆ ಸಜ್ಜುಗೊಳಿಸುವುದು, ಸ್ಥಳೀಯ ಆಡಳಿತದ ನೀತಿ ನಿರೂಪಣಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಹಾಯ ಮಾಡುವುದು ಹಾಗೂ ಗ್ರಾಮ ಪಂಚಾಯತಿ ಸಭೆಗಳು, ಗ್ರಾಮಸಭೆ/ವಾರ್ಡ್‌ಸಭೆಗಳಲ್ಲಿ ಸಕ್ರಿಯ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಈ ಮಹತ್ವಾಕಾಂಕ್ಷಿ ಕಾರ್ಯಕ್ರಮದ ಆಶಯವಾಗಿರುತ್ತದೆ.

1 ಸೆಪ್ಟೆಂಬರ್‌ 2024ರಿಂದ ಅಕ್ಟೋಬರ್‌ 20ರವರೆಗೆ ರಾಜ್ಯದ 21 ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳ್ಳಲಿದ್ದು, ಪ್ರತಿದಿನ ಎರಡು ಗಂಟೆಗಳಂತೆ 50 ದಿನಗಳಲ್ಲಿ 100 ಗಂಟೆಗಳ ಕಲಿಕೆಯನ್ನು ಪೂರ್ಣಗೊಳಿಸಲಾಗುವುದು. ಕಲಿಯುವವರಿಗೆ ಲೇಖನ ಸಾಮಗ್ರಿ ಹಾಗೂ ಓದುವ ಪುಸ್ತಕಗಳನ್ನು ಒಳಗೊಂಡ ಕಿಟ್ ನೀಡಲಾಗುತ್ತದೆ. ಬೋಧಕರಿಗೆ ಗೌರವಧನ ಹಾಗೂ ಶಿಕ್ಷಣಾರ್ಥಿಗಳಿಗೆ ಗೌರವಧನದೊಂದಿಗೆ ಪ್ರಮಾಣಪತ್ರ ನೀಡಲಾಗುವುದು ಸಚಿವರು ತಿಳಿಸಿದ್ದಾರೆ.

ಪಂಚಾಯತಿಗಳ ಚುನಾಯಿತ ಸದಸ್ಯರನ್ನು ಸಾಕ್ಷರರನ್ನಾಗಿ ಮಾಡುವ ಮೂಲಕ ಸ್ಥಳೀಯ ಆಡಳಿತವನ್ನು ಸಡೃಡಗೊಳಿಸುವುದು ನಮ್ಮ ಸರ್ಕಾರದ ಸಂಕಲ್ಪವಾಗಿದೆ ಎಂದು ಅವರು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page