Wednesday, June 26, 2024

ಸತ್ಯ | ನ್ಯಾಯ |ಧರ್ಮ

ಸಮರ್ಥ ನಾಯಕರಿಲ್ಲದೆ ದಿಕ್ಕೆಟ್ಟ ಮುಸ್ಲಿಮರು

ಕೋಮುವಾದಿಗಳು ಸೃಷ್ಟಿಸಿರುವ ಆತಂಕ, ಅನಕ್ಷರತೆ, ಬಡತನದೊಂದಿಗೆ ಅತಂತ್ರವಾಗಿರುವ ಮುಸ್ಲಿಂ ಸಮುದಾಯವನ್ನು ಆರೋಗ್ಯಕರ ಆಲೋಚನೆಗಳೊಂದಿಗೆ ಮುನ್ನಡೆಸುವ ಯಾವುದೇ ಸಮರ್ಥ ನಾಯಕ ಈ ಸಮುದಾಯದಲ್ಲಿ ಕಾಣುತ್ತಿಲ್ಲ. ಬಹುತೇಕ ಮುಸ್ಲಿಮರಿಗೆ ಸದ್ಯದ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ‌ ಮಾರ್ಗವೂ ಕಾಣುತ್ತಿಲ್ಲ.

ನಮ್ಮ ಸಾಮಾಜಿಕ ವ್ಯವಸ್ಥೆಯೇ ಎಷ್ಟೊಂದು ಕಲುಷಿತವಾಗಿದೆ ಎಂದರೆ ದಲಿತ ಪ್ರಧಾನಿ, ದಲಿತ ಮುಖ್ಯಮಂತ್ರಿಯ ಕೂಗು ಆಗೊಮ್ಮೆ ಈಗೊಮ್ಮೆ ಎನ್ನುವಂತೆ ಕೇಳಿಬರುತ್ತಿದೆಯಾದರೂ ಮುಸ್ಲಿಂ‌ ಮುಖ್ಯಮಂತ್ರಿ ಅಥವಾ ಮುಸ್ಲಿಂ ಪ್ರಧಾನಿಯ ಪಿಸುಗುಟ್ಟುವಿಕೆಯೂ ಇಲ್ಲ. ಕೆಲವು ತಿಂಗಳಿಂದ ಈ ಬಗ್ಗೆಯೇ ಯೋಚಿಸುತ್ತಿದ್ದೆ. ಮೊನ್ನೆಮೊನ್ನೆಯಷ್ಟೇ ಬಿ.ಜಡ್.ಜಮೀರ್ ಅಹ್ಮದ್ ಖಾನ್ ಎಂಬ ಚಾಮರಾಜಪೇಟೆ ಶಾಸಕ, ಮುಸ್ಲಿಮರ ಸಂಖ್ಯೆ ಒಕ್ಕಲಿಗರ ಸಂಖ್ಯೆಗಿಂತ ಹೆಚ್ಚಿದೆ, ನಾನು ಕೂಡ ಮುಖ್ಯಮಂತ್ರಿ ಸ್ಥಾನದ‌ ಆಕಾಂಕ್ಷಿ ಎಂದು ಹೇಳಿದಾಗ ನಾನು ಆರಂಭಿಸಿ ನಿಂತಿದ್ದ ಲೇಖನಕ್ಕೆ ಮತ್ತೆ ಜೀವ‌ ಬಂತು.

ನಾನೇ ಬಲ್ಲಂತೆ ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದಾಗ ಅವರ ಪದಚ್ಯುತಿಗೆ ಲಿಂಗಾಯತರಾದ ರಾಜಶೇಖರಮೂರ್ತಿ ಮತ್ತು ಒಕ್ಕಲಿಗರಾದ ಎಸ್.ಎಂ.ಕೃಷ್ಣ ಕೈಜೋಡಿಸಿದರಾದರೂ ಅವರಿಬ್ಬರೂ ತಾವೇ ಮುಖ್ಯಮಂತ್ರಿಯಾಗುವ ಪ್ರಯತ್ನ ನಡೆಸಿದ್ದರು. ಆಗ ಏನಾದರೂ ರಾಜಿ ಅಭ್ಯರ್ಥಿಯಾಗಿ ಜಾಫರ್ ಷರೀಫ್ ಹೆಸರು ಹೊರಹೊಮ್ಮಿದರೆ ಎಂಬ ಆತಂಕ, ಮುಸ್ಲಿಂ‌ ಸಮುದಾಯದ ಬಗೆಗಿನ ಅಸಹನೆಯಿಂದಾಗಿ, ಲಿಂಗಾಯತ ಜಾತಿ‌ಪ್ರೇಮದ ಪತ್ರಕರ್ತರೊಬ್ಬರು ಪ್ರತಿ ವಾರ ಜಾಫರ್ ಷರೀಫ್ ಹೆಸರಿಗೆ ಕಳಂಕ ತರುವಂಥ ಜಮೀನು ಹಗರಣ ಸೇರಿದಂತೆ ಯಾವ್ಯಾವುದೋ ವರದಿಗಳನ್ನು ಅತ್ಯುತ್ಸಾಹದಿಂದ ಬರೆದಿದ್ದನ್ನು ನಾನೇ ನೋಡಿದ್ದೇನೆ. ಆದರೆ ಆ ವರದಿಗಳಿಗೆ ಯಾವುದೇ ಆಧಾರ ಇದ್ದಂತಿರಲಿಲ್ಲ. ಆಗ ಕಂದಾಯ ಸಚಿವರಾಗಿದ್ದ ರಾಜಶೇಖರ ಮೂರ್ತಿ ಅವರ ಸಹಕಾರದಿಂದ ಜಾಫರ್ ಷರೀಫ್ ವಿರುದ್ಧ ದೂರು ಪಡೆದಿದ್ದ (ನೀಡಿದ್ದ ಅಲ್ಲ) ಪತ್ರಗಳೇ ಈ ವರದಿಗೆ ಆಧಾರವಾಗಿದ್ದವು. ಟಿ.ಎ.ಪೈ ಎಂಬ ಮೆರಿಟ್ ಇದ್ದವರೊಬ್ಬರು ರೈಲ್ವೇ ಸಚಿವರಾಗಿ ಸಂಪೂರ್ಣ ವಿಫಲರಾಗಿದ್ದರೂ ಒಂದು ಸಮುದಾಯ ಬಿಂಬಿಸುವ‌ ಯಾವುದೇ ಮೆರಿಟ್ ಇಲ್ಲದ ಜಾಫರ್ ಷರೀಫ್ ರೈಲ್ವೇ ಸಚಿವರಾಗಿ ಯಶಸ್ವಿಯಾಗಿದ್ದವರು. ಅಪ್ಪಟ ದೇಶಭಕ್ತ, ಪ್ರಶ್ನಾತೀತ ಜಾತ್ಯತೀತ ನಾಯಕ ಷರೀಫ್ ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆಗಳಿದ್ದರೂ ಭಾರತೀಯ ಸಾಮಾಜಿಕ ವ್ಯವಸ್ಥೆಯ ಸಂಚಿನಿಂದ ಅವಕಾಶ ವಂಚಿತರಾದವರು.

ಕಾರ್ಯಕರ್ತನ ಹಂತದಿಂದ ನಾಯಕನಾಗಿ ಬೆಳೆದ ಜಾಫರ್ ಷರೀಫ್ ಒಂದು ಕಾಲಘಟ್ಟದಲ್ಲಿ ಮಾಜಿ‌ ಮುಖ್ಯಮಂತ್ರಿ ನಿಜಲಿಂಗಪ್ಪ ಅವರ‌ ಕಾರು ಚಾಲಕರಾಗಿಯೂ ಕಾರ್ಯ ನಿರ್ವಹಿಸಿದ್ದರಂತೆ. ಅವರು ಅಂದಿರಿಕಿ ಮಂಚಿವಾಳ್ಳು ಅನ್ನುವಂತಿರಲಿಲ್ಲ. ಆದರೆ ಯಾರದೇ ದ್ವೇಷ ಕಟ್ಟಿಕೊಳ್ಳಲಿಲ್ಲ. ಆರೆಸ್ಸೆಸ್ ನ‌ ಕೆಲವು ಪ್ರಮುಖರೂ ಜಾಫರ್ ಷರೀಫ್ ಜತೆ ಉತ್ತಮ‌ ಬಾಂಧವ್ಯ ಹೊಂದಿದ್ದರು. ಮುಸ್ಲಿಂ ಸಮುದಾಯದ ದುರದೃಷ್ಟ ಎಂದರೆ ಜಾಫರ್ ಷರೀಫರಂಥ ನಾಯಕ ಮತ್ತೊಬ್ಬ ರೂಪುಗೊಳ್ಳಲಿಲ್ಲ.

ರಹಮಾನ್ ಖಾನ್ ಗೆ ಸಮೂಹ ನಾಯಕತ್ವದ ಲಕ್ಷಣಗಳೇ ಇರಲಿಲ್ಲ. ಅವರಾಯಿತು ಅಮಾನತ್ ಬ್ಯಾಂಕ್ ಆಯಿತು ಎನ್ನುವಂತಿದ್ದವರು. ಅವರದೇನಿದ್ದರೂ ರಾಜ್ಯಸಭೆಯ ಕೃಪಾಪೋಷಿತ ರಾಜಕಾರಣ! ಇನ್ನೊಬ್ಬ ನಾಯಕನಾಗಿ ಬೆಳೆಯಬಹುದಾಗಿದ್ದ ಸಿ.ಎಂ.ಇಬ್ರಾಹಿಂ ವಿದೂಷಕನ ಮಟ್ಟದಲ್ಲೇ ಉಳಿದುಬಿಟ್ಟರು. ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದಾಗ ರೋಲೆಕ್ಸ್ ವಾಚ್ ಹಗರಣ ಸೇರಿದಂತೆ ಅನೇಕ ವಿವಾದಗಳಿಂದ ಇಬ್ರಾಹಿಂ ಸುದ್ದಿಯಲ್ಲಿದ್ದರು. ದೇವೇಗೌಡರು ಪ್ರಧಾನಿಯಾಗಿದ್ದಾಗ ಒಕ್ಕೂಟ ಸರ್ಕಾರದಲ್ಲಿ ಸಚಿವರಾಗಿದ್ದರು. ಹುಬ್ಬಳ್ಳಿಯ ಈದ್ಗಾ ವಿವಾದ ಒಂದು ಮಟ್ಟದಲ್ಲಿ ಬಗೆ ಹರಿಯುವುದಕ್ಕೆ ಕಾರಣರಾಗಿದ್ದರು. ಕ್ರಮೇಣ ದೇವೇಗೌಡರೊಂದಿಗೆ ಮುನಿಸಿಕೊಂಡು ಸಿದ್ದರಾಮಯ್ಯ ಜತೆ ಕಾಂಗ್ರೆಸ್ ಗೆ ವಾಪಸಾದರು. ಯಾವಾಗಲೋ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಕಾರಣದಿಂದ ಅವರ ಕಾಂಗ್ರೆಸ್ ವಾಪಸಾತಿಗೆ, ವಿಧಾನಪರಿಷತ್ ಸದಸ್ಯರಾಗುವುದಕ್ಕೆ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರಾಗುವುದಕ್ಕೆ ಸಾಕಷ್ಟು ಅಡೆತಡೆಗಳಿದ್ದವು. ಆದರೆ ಸಿದ್ದರಾಮಯ್ಯ ಕಾರಣದಿಂದ ಅಷ್ಟಾದರೂ ಅವಕಾಶಗಳನ್ನು ಪಡೆಯುವುದು ಸಾಧ್ಯವಾಗಿತ್ತು. ಆದರೆ ಸಿದ್ದರಾಮಯ್ಯ ತಮ್ಮನ್ನು ಮಂತ್ರಿ ಮಾಡಲಿಲ್ಲ ಎಂಬ ಬೇಸರ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕನಾಗಿ ಮಾಡಲಿಲ್ಲ ಎಂಬ ಸಿಟ್ಟು ಅವರನ್ನು ಮತ್ತೆ ಕಾಂಗ್ರೆಸ್‌ ತೊರೆಯುವಂತೆ ಮಾಡಿ ಜೆಡಿಎಸ್ ನಲ್ಲಿ‌ ದೇವೇಗೌಡರ ಪದತಲಕ್ಕೆ ಮತ್ತೆ ಬೀಳುವಂತಾಯಿತು.

ಕೆಲವು‌ ವರ್ಷಗಳ ಹಿಂದೆ ಉತ್ತರ‌ಪ್ರದೇಶದಲ್ಲಿ ಅಖಿಲ ಭಾರತ ಮುಸ್ಲಿಂ ಮಂಚ್ ಎಂಬ ರಾಜಕೀಯ ಪಕ್ಷವನ್ನು ಹುಟ್ಟು ಹಾಕಿದರಾದರೂ ಅದೇನಾಯಿತೋ ಯಾರಿಗೂ ಗೊತ್ತಿಲ್ಲ.‌ ಅವರೂ ಉದ್ದೇಶಪೂರ್ವಕವಾಗಿ ಮರೆತುಬಿಟ್ಟರು. ಚಂದದ ಭಾಷಣ ಮಾಡುತ್ತಾರೆ, ವಚನಗಳನ್ನು ಉದ್ಧರಿಸುತ್ತಾರೆ. ಆದರೆ ಅವರು ಆಸ್ಥಾನ ವಿದೂಷಕ ಮಟ್ಟ‌ ಮೀರಿ ಕತ್ತಲಲ್ಲಿರುವ ಮುಸ್ಲಿಂ ಸಮುದಾಯಕ್ಕೆ ನಾಯಕನಾಗುವುದು ಹೋಗಲಿ ಮಿಣುಕು ಹುಳವಾದರೂ ಆಗುವ ಒಂದೇ ಒಂದು ಲಕ್ಷಣ ತೋರಲಿಲ್ಲ.

ರೋಷನ್ ಬೇಗ್ ಎಡಬಿಡಂಗಿಯಾಗಿ ಹಿಂದೂಗಳನ್ನು ಓಲೈಸುತ್ತಾ ಕಾಲಹರಣ ಮಾಡಿದರಷ್ಟೇ ಅಲ್ಲದೇ ಹಗರಣಗಳ ಬಲೆಯಲ್ಲಿ ಸಿಕ್ಕಿ ಬಿದ್ದರು. ಬಿಜೆಪಿ ಬಾಗಿಲು ಬಡಿದು ನಿರಾಶರಾಗಿ ವಾಪಸಾದರು. ಮುಸ್ಲಿಮರ ವಿಚಾರಗಳಿಗೆ ಸಂಬಂಧಿಸಿದಂತೆ ಜಮೀರ್ ಅಹ್ಮದ್ ಸದಾ ಸುದ್ದಿಯಲ್ಲಿರುತ್ತಾರಾದರೂ ಘನತೆ ಇಲ್ಲದ ಅವರ ನಾಯಕತ್ವ ಚಾಮರಾಜಪೇಟೆಯನ್ನು ಮೀರಿ ಬೆಳೆದಂತಿಲ್ಲ. ತನ್ವೀರ್ ಸೇಠ್ ಓರ್ವ ಪ್ರಾಮಾಣಿಕ ವ್ಯಕ್ತಿಯಾಗಿ ಗುರುತಿಸಿಕೊಂಡು ತಮ್ಮ ತಂದೆಯ ನವಾಬ್ ಶೈಲಿಯ ಬದುಕಿನಿಂದ ಹೊರಬಂದಿದ್ದರೂ ಗಟ್ಟಿ ನಾಯಕನಾಗಲಿಲ್ಲ. ಚಿಕ್ಕಮಗಳೂರು ಜಿಲ್ಲೆಯ ಸಗೀರ್ ಅಹ್ಮದ್ ತುಂಬ ಸಭ್ಯರಾಗಿದ್ದರೂ ದಿಟ್ಟತನ ಕಾಣಿಸಲಿಲ್ಲ.

ದಕ್ಷಿಣ ಕನ್ನಡದ ಯು.ಟಿ.ಖಾದರ್ ತಮ್ಮ ಸರಳ, ಸಜ್ಜನಿಕೆಯ ವ್ಯಕ್ತಿತ್ವದ ಜತೆ ಮಂತ್ರಿಯಾಗಿದ್ದಾಗ ಸದಾ ಸುದ್ದಿಯಲ್ಲಿದ್ದವರು. ಸ್ವಲ್ಪಮಟ್ಟಿಗಿನ ವೈಚಾರಿಕ ಪ್ರಜ್ಞೆಯೂ ಇರುವವರು. ಆದರೆ ಕನ್ನಡ ನಾಡಿನ ಮುಸ್ಲಿಮರನ್ನು ಒಗ್ಗೂಡಿಸಿ ಮುನ್ನಡೆಸುವ ಅಯಸ್ಕಾಂತೀಯ ಗುಣಗಳಿಲ್ಲ. ಬಿ.ಎ.ಮೊಯ್ದೀನ್ ರಂಥವರು ಸಜ್ಜನಿಕೆಯನ್ನು ಮೀರಿದ ರಾಜಕಾರಣ ಮಾಡಲಾಗದೇ ಮೌನದಲ್ಲೇ ಮರೆಗೆ ಸರಿದು ಬಿಟ್ಟರು. ಕೆಲವು ದಶಕಗಳ ಹಿಂದೆ ಓರ್ವ ಅಪರೂಪದ ನಾಯಕನಾಗುವ‌ ಲಕ್ಷಣಗಳನ್ನು ತೋರಿದ್ದ ಬಿ.ಎ.ಉಮರಬ್ಬ ಅಪಘಾತದಲ್ಲಿ ದುರ್ಮರಣ ಹೊಂದಿ ನೋವುಂಟು ಮಾಡಿದ್ದರು. ಕಮರುಲ್ ಇಸ್ಲಾಂ ಗುಲ್ಬರ್ಗಕ್ಕೇ ಸೀಮಿತರಾಗಿ, ಮಂತ್ರಿಯಾಗಿ ತಮ್ಮ ಸಮುದಾಯದ ನಾಯಕನಾಗುವ‌ ಯಾವುದೇ ಲಕ್ಷಣ ತೋರಲಿಲ್ಲ. ಬಿ.ಎ.ಹಸನಬ್ಬ ಎಂ.ಎಲ್.ಸಿ.‌ಆಗುವುದಷ್ಟಕ್ಕೇ‌ ಸೀಮಿತರಾಗಿ ಮರೆತೇ ಹೋಗಿಬಿಟ್ಟರು.

ಜಾಫರ್ ಷರೀಫರಿಗಿದ್ದ ದಿಟ್ಟತನ, ಸರಳತನ, ದಕ್ಷತೆ, ದೂರದೃಷ್ಟಿ ಈ ಯಾವುದೇ ಲಕ್ಷಣಗಳು ಈಗಿನ ಮುಸ್ಲಿಂ ಜನ ಪ್ರತಿನಿಧಿಗಳಲ್ಲಿ ಕಾಣುತ್ತಿಲ್ಲ. ಒಟ್ಟಿನಲ್ಲಿ ಕರ್ನಾಟಕದ ಮುಸ್ಲಿಂ ಸಮುದಾಯ ನಾಯಕರಿಲ್ಲದೇ ಸೊರಗುತ್ತಿದೆ. ಮುಸ್ಲಿಮರದೇ ಆದ ಹೊಸ ರಾಜಕೀಯ ಪಕ್ಷಗಳು ಹುಟ್ಟಿಕೊಂಡಿದ್ದರೂ ಆಶಾಭಾವನೆ ಹುಟ್ಟಿಸುವ ರೀತಿಯಲ್ಲಿ ಅವುಗಳ ಚಟುವಟಿಕೆ ಕಾಣುತ್ತಿಲ್ಲ. ಅಂಧರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ ಎಂಬಂತೆ ಸದ್ದು ಮಾಡುತ್ತಿರುವುದು, ಸುದ್ದಿಯಲ್ಲಿರುವುದು ಜಮೀರ್ ಖಾನ್. ಬೇಜವಾಬ್ದಾರಿ ಹೇಳಿಕೆಗಳಿಂದಲೇ ಸುದ್ದಿಯಾಗುವ ಜಮೀರ್ ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿಯಾದಾಗ ತಮಗೆ ಇನೋವಾ ಕಾರ್ ನೀಡಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ತಾವು ಬಾಲ್ಯದಿಂದಲೂ ಐಷಾರಾಮಿ ಕಾರ್ ಗಳಲ್ಲಿ ಓಡಾಡುತ್ತಿದ್ದವನು, ಈಗ‌ ನೀಡಿರುವುದು ಕೆಟ್ಟ ಕಾರಾಗಿದ್ದು ಟೊಯೋಟೋ ಫಾರ್ಚುನರ್ ಕಾರ್ ಗೆ ಬೇಡಿಕೆ ಇಟ್ಟಿದ್ದರು. ಬಸವಕಲ್ಯಾಣ ವಿಧಾನಸಭಾ‌ಕ್ಷೇತ್ರದ ಉಪಚುನಾವಣೆಯ ಸಭೆಯೊಂದರಲ್ಲಿ ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಮತ್ತು ತಮ್ಮ ಒಂದು ಕಾಲದ ಗೆಳೆಯ ಎಚ್.ಡಿ.ಕುಮಾರಸ್ವಾಮಿ ಬಗ್ಗೆ ‘ಕಾಲಾ ಕುಮಾರಸ್ವಾಮಿ’ ಎಂದು ಅವರ ಕಪ್ಪು ಬಣ್ಣದ ಬಗ್ಗೆ ಗೇಲಿ ಮಾಡಿದ್ದಲ್ಲದೇ ಕಪ್ಪಿರುವವರನ್ನು ಕಪ್ಪು ಎನ್ನದೇ ಬಿಳಿ ಎನ್ನಲಾಗುತ್ತದೆಯೇ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು.

ಹಿಜಾಬ್ ವಿವಾದದ ಸಂದರ್ಭದಲ್ಲಿ ಅವರು ಭಾರತದಲ್ಲಿ ಮಹಿಳೆಯರು ಹಿಜಾಬ್ ಧರಿಸದಿರುವುದರಿಂದಲೇ ಅತ್ಯಾಚಾರ ಪ್ರಕರಣಗಳು ಹೆಚ್ಚು ಎಂಬ ತಮ್ಮ ಅಪರೂಪದ ಸಂಶೋಧನೆಯನ್ನು ಮುಂದಿಟ್ಟು ಉಗಿಸಿಕೊಂಡಿದ್ದರು.
ಇತ್ತೀಚೆಗೆ ಅವರು ನೀಡಿರುವ ಹೇಳಿಕೆ ಸಂಖ್ಯಾಬಲ ಇರುವ ಯಾರು ಬೇಕಾದರೂ ಮುಖ್ಯಮಂತ್ರಿಯಾಗಬಹುದು, ತಾವು ಕೂಡ ಆಕಾಂಕ್ಷಿ ಎಂದು ಹೇಳಿಕೊಂಡಿದ್ದರು.

ಸಂಖ್ಯಾಬಲ ಇರುವ‌ ಸಮುದಾಯಗಳಿಂದ ಕೆಂಗಲ್‌ಹನುಮಂತಯ್ಯ, ಎಚ್.ಡಿ.ದೇವೇಗೌಡ, ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಮೊದಲಾದವರು ಮುಖ್ಯಮಂತ್ರಿಗಳಾಗಿದ್ದಾರೆ. ಹಾಗೆಯೇ ಸಂಖ್ಯಾಬಲವೇ ಇಲ್ಲದ ದೇವರಾಜ‌ ಅರಸು, ಎಸ್.ಬಂಗಾರಪ್ಪ, .ವೀರಪ್ಪ ಮೊಯ್ಲಿ, ಧರಂಸಿಂಗ್ ಕೂಡ‌ ಮುಖ್ಯಮಂತ್ರಿಗಳಾಗಿದ್ದಾರೆ. ಜನಸಂಖ್ಯೆಯ ಆಧಾರದಲ್ಲೇ ಹೇಳುವುದಾದರೆ ರಾಜ್ಯದ ಜನಸಂಖ್ಯೆಯಲ್ಲಿ ಸುಮಾರು ಶೇ.20 ರಷ್ಟಿರುವ ದಲಿತರ ಪ್ರಮಾಣ ಇತರ ಎಲ್ಲ ಜಾತಿಗಳಿಗಿಂತ ಹೆಚ್ಚು. ಆನಂತರ ಶೇ.16 ರಷ್ಟಿರುವ‌ ಮುಸ್ಲಿಮರು. ಲಿಂಗಾಯತರು ಶೇ.14, ಒಕ್ಕಲಿಗರು ಶೇ.11. ಮುಖ್ಯವಾಗಿ ಅನ್ಯಾಯವಾಗಿರುವುದು ದಲಿತರಿಗೆ. ಆದರೆ ಜನಸಂಖ್ಯೆಯ ಆಧರ ಇರಿಸಿಕೊಂಡೇ ಯೋಗ್ಯರಿಗೆ ಮಾತ್ರ ಮಣೆ ಹಾಕಬೇಕಾಗುತ್ತದೆ. ಮುಸ್ಲಿಮರಲ್ಲಿ ಜಾಫರ್‌ಷರೀಫ್ ಅವರ‌ ಮಟ್ಟದ ಅಥವಾ ಅವರ ಹತ್ತಿರಕ್ಕಾದರೂ ಕಾಣುವ ಒಬ್ಬನೇ ಒಬ್ಬ ನಾಯಕ‌ ಮುಸ್ಲಿಂ‌ ಸಮುದಾಯದಲ್ಲಿಲ್ಲ.

ವಿವಾದಗಳ ಧಾರಾವಾಹಿಯ ನಾಯಕನಂತಿರುವ ಜಮೀರ್‌ಖಾನ್ ಇನ್ನೂ ಆ‌ ಮಟ್ಟಕ್ಕೇರುವ ಲಕ್ಷಣಗಳಂತೂ ಗೋಚರಿಸುತ್ತಿಲ್ಲ. ವಾಸ್ತವದಲ್ಲಿ ಜಮೀರ್ ತಾವೇ ಮುಂದಿನ‌ ಮುಖ್ಯಮಂತ್ರಿಯಾಗುವುದಕ್ಕಾಗಿ ಹಾಗೆ ಹೇಳಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಭೆಯೊಂದರಲ್ಲಿ ಎಸ್.ಎಂ.ಕೃಷ್ಣ ನಂತರ ಒಕ್ಕಲಿಗರಿಗೆ ಮುಖ್ಯಮಂತ್ರಿಯಾಗುವ‌ ಅವಕಾಶ ಇದ್ದು ಅದಕ್ಕೆ ಪೂರಕವಾಗಿ ಸಿದ್ಧರಾಗುವಂತೆ ಕರೆ ನೀಡಿದ್ದಕ್ಕೆ ಪರೋಕ್ಷ ಆಕ್ಷೇಪ ಮತ್ತು ಮುಂದಿನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರನ್ನು ಬಿಂಬಿಸುತ್ತಿರುವ‌ ಒಂದು ಗುಂಪಿಗೆ ಬೆಂಬಲ ನೀಡುವುದು ಜಮೀರ್ ಉದ್ದೇಶವಾಗಿತ್ತು.

ದುರಂತ ಎಂದರೆ ಕೋಮುವಾದಿಗಳು ಸೃಷ್ಟಿಸಿರುವ ಆತಂಕ, ಅನಕ್ಷರತೆ, ಬಡತನದೊಂದಿಗೆ ಅತಂತ್ರವಾಗಿರುವ ಮುಸ್ಲಿಂ ಸಮುದಾಯವನ್ನು ಆರೋಗ್ಯಕರ ಆಲೋಚನೆಗಳೊಂದಿಗೆ ಮುನ್ನಡೆಸುವ ಯಾವುದೇ ಸಮರ್ಥ ನಾಯಕ ಈ ಸಮುದಾಯದಲ್ಲಿ ಕಾಣುತ್ತಿಲ್ಲ. ಬಹುತೇಕ ಮುಸ್ಲಿಮರಿಗೆ ಸದ್ಯದ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ‌ ಮಾರ್ಗವೂ ಕಾಣುತ್ತಿಲ್ಲ. ಇದರ ಫಲವಾಗಿ ಮೂರೂ ಹೊತ್ತು ಸಂಘ ಪರಿವಾರ, ಬಿಜೆಪಿ ಆಡಳಿತ, ನರೇಂದ್ರ ಮೋದಿ, ಅಮಿತ್ ಶಾ ರನ್ನೇ ಟೀಕಿಸುವ ಯಾವುದೇ ವೈಚಾರಿಕ ತಿಳಿವಳಿಕೆಯ ಅಡಿಪಾಯ ಇಲ್ಲದ ಯುಟ್ಯೂಬ್ ಭಾಷಣಕೋರರು ಮುಸ್ಲಿಮರ ನಾಯಕರಾಗುತ್ತಿದ್ದಾರೆ.

ಇಂಥ ಬಹುತೇಕರು ತಮ್ಮನ್ನು‌ ಪ್ರಗತಿಪರರೆಂದು ಭಾವಿಸಿರುವ ಹಿಂದೂ ಯುವಕರು. ಇಂಥವರಿಂದ ಮುಸ್ಲಿಂ‌ ಸಮುದಾಯಕ್ಕೆ ಅಪಾಯವೇ ಹೆಚ್ಚು. ಪ್ರಗತಿ ಎನ್ನುವುದು‌ ಮುನ್ನಡೆಯುವುದೇ ಹೊರತು ಶಿಲಾಯುಗದತ್ತ ಹಿನ್ನಡೆಯಲ್ಲ. ಸದ್ಯ ಬೇಕಿರುವುದು ಸಾಮರಸ್ಯವೇ ಹೊರತು ಸಾಮಾಜಿಕ ಅಶಾಂತಿಯಲ್ಲ. ಸಮುದ್ರ ಮಂಥನದಿಂದ ಅಮೃತ ಸಿಕ್ಕಿರಬಹುದು. ಆದರೆ ವರ್ತಮಾನದ ಬೆಳವಣಿಗೆಗಳು ಉರಿವ‌ ಬೆಂಕಿಗೆ ತುಪ್ಪ‌ ಹಾಕುವಂತಿರಬಾರದು. ನಿಜಕ್ಕೂ‌ ಪ್ರಗತಿಪರರಾಗಿರುವ‌ ಹಿಂದೂಗಳು ಮುಸ್ಲಿಂ ಸಮುದಾಯದ ಜತೆಗಾರರಾಗಿ‌ ಮುನ್ನಡೆಯಬೇಕೇ ಹೊರತು ಹಾದಿ ತಪ್ಪಿಸುವ‌ ನಾಯಕರಾಗಬಾರದು. ಜಾಫರ್ ಷರೀಫ್ ಇದ್ದಿದ್ದರೆ ಮುಸ್ಲಿಮರು ಈಗ ಎದುರಿಸುತ್ತಿರುವ‌ ಗೊಂದಲಗಳು ಖಂಡಿತ ಇರುತ್ತಿರಲಿಲ್ಲ. ಯಾಕೆಂದರೆ ಅವರೋರ್ವ ಅಸಾಮಾನ್ಯ ನಾಯಕ. ಈಗ‌ ಅಂಥವರಿಲ್ಲ.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

-ಟಿ.ಕೆ ತ್ಯಾಗರಾಜ್
ಹಿರಿಯ ಪತ್ರಕರ್ತರು ಹಾಗು ಹವ್ಯಾಸಿ ಬರಹಗಾರಗು.
(ಸೌಜನ್ಯ: ಹಿಮಾಗ್ನಿ ವಾರಪತ್ರಿಕೆ)

Related Articles

ಇತ್ತೀಚಿನ ಸುದ್ದಿಗಳು