Tuesday, October 1, 2024

ಸತ್ಯ | ನ್ಯಾಯ |ಧರ್ಮ

ಮಹಾರಾಷ್ಟ್ರ ಸರ್ಕಾರ: ಮಹಿಳೆಯರಿಗೂ – ದನಕ್ಕೂ 1,500 ರುಪಾಯಿ ಸಬ್ಸಿಡಿ, ದನ ಈಗ ರಾಜ್ಯಮಾತಾ!

ಬೆಂಗಳೂರು: ಮಹಾರಾಷ್ಟ್ರ ಸರ್ಕಾರವು ಸೋಮವಾರ ರಾಜ್ಯದ ಗೋಶಾಲೆಗಳಿಗೆ ಪ್ರತಿ ಹಸುವಿಗೆ ದಿನಕ್ಕೆ 50 ರೂಪಾಯಿಗಳನ್ನು ನೀಡುವ ಸಬ್ಸಿಡಿ ಯೋಜನೆಯನ್ನು ಜಾರಿಗೊಳಿಸಿದೆ ಎಂದು ದಿ ಹಿಂದೂ ವರದಿ ಮಾಡಿದೆ. ಇದರ ಅಡಿಯಲ್ಲಿ ಪ್ರತಿ ಹಸುವಿಗೆ ತಿಂಗಳಿಗೆ 1,500 ರುಪಾಯಿ ಸಿಗುತ್ತಿತ್ತು.

ಇದು ಮಹಾರಾಷ್ಟ್ರ ಸರ್ಕಾರವು ತನ್ನ ಲಡ್ಕಿ ಬಹಿನ್ ಯೋಜನೆ ಅಡಿಯಲ್ಲಿ ಆದಾಯ ವಾರ್ಷಿಕವಾಗಿ 2.5 ಲಕ್ಷ ರುಪಾಯಿ ಇರುವ ಕುಟುಂಬದ 21 ರಿಂದ 65 ವರ್ಷ ವಯಸ್ಸಿನ ಮಹಿಳೆಯರಿಗೆ ಕೊಡುವುದೂ ಇಷ್ಟೇ ಹಣವಾಗಿದೆ.

ಗೋಶಾಲೆಗಳ ಯೋಜನೆಯು ಸ್ಥಳೀಯ ತಳಿಯ ಗೋವುಗಳ ಸಂರಕ್ಷಣೆ ಮಾಡಲು ತರಲಾಗಿದೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದರು.

46,000 ಕೋಟಿ ರೂಪಾಯಿಗಳ ಲಡ್ಕಿ ಬಹಿನ್ ಯೋಜನೆಯಿಂದಾಗಿ ಇತರ ಕ್ಷೇತ್ರಗಳಲ್ಲಿ ಸಬ್ಸಿಡಿ ನೀಡುವುದು ವಿಳಂಬವಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಸಚಿವ ಮತ್ತು ಭಾರತೀಯ ಜನತಾ ಪಕ್ಷದ ನಾಯಕ ನಿತಿನ್ ಗಡ್ಕರಿ ತಿಳಿಸಿದ ಮೇಲೆ, ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ಅವರ ಘೋಷಣೆ ಹೊರಬಿದ್ದಿದೆ.

ಶಿಂಧೆಯವರ ಶಿವಸೇನೆ ಬಣ ಮತ್ತು ಬಿಜೆಪಿ ಮಹಾರಾಷ್ಟ್ರ ಮತ್ತು ರಾಷ್ಟ್ರಮಟ್ಟದಲ್ಲಿ ಮಿತ್ರಪಕ್ಷಗಳಾಗಿವೆ.

ಗೋಶಾಲೆಗಳು “ಕಡಿಮೆ ಆದಾಯ” ಹೊಂದಿರುವುದರಿಂದ ಗೋಶಾಲೆಗಳಿಗೆ ನೀಡುವ ಸಹಾಯಧನವು “ಆರ್ಥಿಕವಾಗಿ ಅವರನ್ನು ಬಲಪಡಿಸುತ್ತದೆ” ಎಂದು ರಾಜ್ಯ ಸರ್ಕಾರ ಹೇಳಿದೆ. ಈ ಯೋಜನೆಯನ್ನು ಮಹಾರಾಷ್ಟ್ರ ಗೋಸೇವಾ ಆಯೋಗವು ಆನ್‌ಲೈನ್‌ನಲ್ಲಿ ಜಾರಿಗೊಳಿಸಲಿದೆ ಎಂದು ಅದು ತಿಳಿಸಿದೆ.

ರಾಜ್ಯದ ಸ್ಥಳೀಯ ತಳಿಯ ಹಸುಗಳಿಗೆ “ರಾಜ್ಯಮಾತಾ-ಗೋಮಾತಾ” ಅಥವಾ ರಾಜ್ಯದ ತಾಯಿಯ ಸ್ಥಾನಮಾನವನ್ನು ನೀಡಿರುವುದಾಗಿ ಸರ್ಕಾರ ಹೇಳಿದೆ. 2019 ರಲ್ಲಿ ನಡೆಸಿದ 20 ನೇ ಪ್ರಾಣಿ ಗಣತಿಯು ಸ್ಥಳೀಯ ಹಸುಗಳ ಸಂಖ್ಯೆಯನ್ನು 46,13,632 ರಷ್ಟಿದೆ ಎಂದು ಅದು ಹೇಳಿದೆ, ಇದು 19 ನೇ ಗಣತಿಗೆ ಹೋಲಿಸಿದರೆ 20% ರಷ್ಟು ಕುಸಿದಿರುವುದನ್ನು ತೋರಿಸುತ್ತದೆ.

ಆದಾಯ ಕೊರತೆ ಮತ್ತು ಹೊಸ ಯೋಜನೆಗಳಿಂದಾಗಿ “ಹಣಕಾಸಿನ ಒತ್ತಡ” ಎದುರಾಗುತ್ತಿದೆ ಎಂದು ರಾಜ್ಯದ ಹಣಕಾಸು ಇಲಾಖೆ ಎಚ್ಚರಿಸಿದೆ ಎಂದು ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರದ ಈ ಪ್ರಕಟಣೆ ಸೋಮವಾರ ಹೊರಬಂದಿದೆ . ಈ ಆರ್ಥಿಕ ಸಂಕಷ್ಟದ ಪರಿಣಾಮವಾಗಿ ಹೆಚ್ಚಿನ ಹೊಣೆಗಾರಿಕೆಗಳನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ ಎಂದು ಹಣಕಾಸು ಇಲಾಖೆ ಹೇಳಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ .

ರಾಜ್ಯದಲ್ಲಿ ಕ್ರೀಡಾ ಸಂಕೀರ್ಣಗಳನ್ನು ನಿರ್ಮಿಸಲು 1,781 ಕೋಟಿ ರೂಪಾಯಿ ವೆಚ್ಚ ಮಾಡಲು ಅನುಮೋದನೆ ಕೋರಿ ಕ್ರೀಡಾ ಇಲಾಖೆಯ ಪ್ರಸ್ತಾವನೆಗೆ ಪ್ರತಿಕ್ರಿಯೆಯಾಗಿ ಈ ಪ್ರತಿಕ್ರಿಯೆ ಬಂದಿದೆ. ಹಣಕಾಸು ಇಲಾಖೆಯ ಅನುಮಾನಗಳ ನಡುವೆಯೂ ರಾಜ್ಯ ಸರ್ಕಾರ ಈ ಅರ್ಜಿಯನ್ನು ಅಂಗೀಕರಿಸಿದೆ.

ಕಳೆದ ತಿಂಗಳು, ಮಹಾರಾಷ್ಟ್ರ ಸರ್ಕಾರವು ಆತ್ಮಹತ್ಯೆಯಿಂದ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ 1 ಲಕ್ಷ ರೂಪಾಯಿಗಳ ಆರ್ಥಿಕ ಸಹಾಯವನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ವಿರೋಧವನ್ನು ಎದುರಿಸಿತ್ತು.

ಗೋಶಾಲೆಗಳಿಗೆ ಸಬ್ಸಿಡಿ ಘೋಷಿಸಿದ ಮೊದಲ ರಾಜ್ಯ ಮಹಾರಾಷ್ಟ್ರವಲ್ಲ: ರಾಜಸ್ಥಾನ, ಹರಿಯಾಣ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಸರ್ಕಾರಗಳು ಈಗಾಗಲೇ ಸಬ್ಸಿಡಿಯನ್ನು ನೀಡುತ್ತಿದ್ದಾವೆ.

ಮಧ್ಯಪ್ರದೇಶದಲ್ಲಿ ಸರ್ಕಾರೇತರ ಸಂಸ್ಥೆಗಳು ನಡೆಸುವ ಗೋಶಾಲೆಗಳಿಗೆ ಪ್ರತಿ ಹಸುವಿಗೆ ದಿನಕ್ಕೆ 20 ರುಪಾಯಿ ನೀಡಲಾಗುತ್ತಿದೆ. ಆಗಸ್ಟ್‌ನಲ್ಲಿ ಹರ್ಯಾಣ ಸರ್ಕಾರವು ಕರುಗಳಿಗೆ ದಿನಕ್ಕೆ 20 ರೂಪಾಯಿ ಮತ್ತು ಹಸುಗಳಿಗೆ ದಿನಕ್ಕೆ 30 ರೂಪಾಯಿಗಳನ್ನು ಗೋಶಾಲೆಗಳಿಗೆ ಅನುದಾನವಾಗಿ ನೀಡುವುದಾಗಿ ಘೋಷಿಸಿತ್ತು.

2023 ರಲ್ಲಿ ಉತ್ತರ ಪ್ರದೇಶ ಸರ್ಕಾರವು ದನಗಳಿಗೆ ಆಶ್ರಯವನ್ನು ನಿರ್ಮಿಸಲು 125 ಕೋಟಿ ರೂಪಾಯಿಗಳ ಹಣವನ್ನು ಬಿಡುಗಡೆ ಮಾಡಿದೆ ಎಂದು ಗಾಂವ್ ಕನೆಕ್ಷನ್ ವರದಿ ಮಾಡಿದೆ . ಪ್ರತಿ ಹಸುವಿಗೆ 50 ರುಪಾಯಿಯಂತೆ ಹಣ ನೀಡಲಾಗುವುದು ಎಂದು ತಿಳಿಸಿತ್ತು. ರಾಜಸ್ಥಾನ ಸರ್ಕಾರವು ಗೋಶಾಲೆಗಳಲ್ಲಿ ವಾಸಿಸುವ ಜಾನುವಾರುಗಳಿಗೆ ಪ್ರತಿ ಪಶುವಿಗೆ 20 ರಿಂದ 40 ರುಪಾಯಿವರೆಗೆ ಆರ್ಥಿಕ ನೆರವು ನೀಡುತ್ತಿದೆ.

ನವೆಂಬರ್ 26 ರಂದು ಮಹಾರಾಷ್ಟ್ರ ವಿಧಾನಸಭೆಯ ಅವಧಿ ಮುಗಿಯಲಿದ್ದು, ಚುನಾವಣಾ ಆಯೋಗ ಇನ್ನೂ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟ ಮಾಡಿಲ್ಲ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page